ವೈಭವದ ಪರ್ಯಾಯ ಮೆರವಣಿಗೆ
ಜನವರಿ ೧೮ , ಕಾಣಿಯೂರು ಮಠದ ಪರ್ಯಾಯ ದಿನಾಂಕ . ಅಂದು ಬೆಳಗ್ಗೆ ೩. ೩೦ ಕ್ಕೆ ಉಡುಪಿಯ ಜೋಡುಕಟ್ಟೆ ಯಿಂದ ಪರ್ಯಾಯ ಮೆರವಣಿಗೆ ಹೊರಟಿತು .
ಆ ಮೆರವಣಿಗೆಯನ್ನು ನಮ್ಮ ಕೇಬಲ್ ಆಪರೇಟರ್ ಲೈವ್ ಆಗಿ ಟಿ .ವಿ . ಯಲ್ಲಿ ತೋರಿಸಿದ ಕಾರಣ ಮನೆಯಲ್ಲಿಯೇ ಕೂತು ನಾನು ಮೆರವಣಿಗೆಯನ್ನು ವೀಕ್ಷಿಸಿದೆ .
ಮೊದಲು ಕೇರಳದ ಚಂಡೆ ವಾದನದ ಸದ್ದು . ಆ ಗುಂಪಿನವರು ಕೇವಲ ಚಂಡೆ ಬಾರಿಸುವುದು ಮಾತ್ರವಲ್ಲ, ಅದಕ್ಕೆ ತಕ್ಕಂತೆ ನರ್ತಿಸುತ್ತಾರೆ !
ವಿಧ - ವಿಧವಾದ ಕಸರತ್ತುಗಳು ಬೆಂಕಿಯ ಉರಿಯುವ ಕೋಲನ್ನು ಹಿಡಿದು ಅದರ ಜೊತೆಗೆ ಆಟ , ಮಲ್ಲ ಕಂಬ ಕಸರತ್ತು , ಪಾದಕ್ಕೆ ಮರದ ಉದ್ದನೆಯ ಕೋಲನ್ನು ಕಟ್ಟಿ ನಡೆಯುವುದು ( ಮರ ಕಾಲು ನಡಿಗೆ ), ಕೀಲು ಕುದರೆಗಳು , ಮಯೂರ ನೃತ್ಯ , ಮಹಿಳೆಯರ ಚಂಡೆ ವಾದನ , ತಟ್ಟಿರಾಯ , ಹಾಸ್ಯ ಗೊಂಬೆಗಳು ಮತ್ತು ಸ್ತಬ್ಧ ಚಿತ್ರಗಳು ಕಣ್ಣು ಎವೆ ಇಕ್ಕದಂತೆ ಮಾಡಿ ಮನ ಸೂರೆಗೊಂಡವು .
ಕಾಣಿಯೂರು ಮಠದ ಪಟ್ಟದ ದೇವರು " ಉಗ್ರ ನರಸಿಂಹ ". ಆದ ಕಾರಣ ನರಸಿಂಹ ಅವತಾರವನ್ನು ತೋರಿಸುವ ಸಣ್ಣ ನಾಟಕ , ವಾಲಿ - ದುಂದುಭಿ ಕಾಳಗ , ಹನುಮಂತ ಸಂಜೀವಿನಿ ಪರ್ವತವನ್ನು ಹೊತ್ತು ತರುತ್ತಿರುವುದು , ಹನುಮಂತನ ಹೆಗಲ ಮೇಲೆ ವಿರಾಜಮಾನರಾದ ರಾಮ - ಲಕ್ಷ್ಮಣರು , ಮಧ್ವಾಚಾರ್ಯರಿಗೆ ಕೃಷ್ಣನ ವಿಗ್ರಹ ದೊರೆತಿದ್ದು ಹೀಗೆ ವಿಧ ವಿಧವಾದ ಟ್ಯಾಬ್ಲೋಗಳು ಇದ್ದವು.
ಕರಾವಳಿಯ ಹುಲಿ ವೇಷ ಪ್ರದರ್ಶನ ವೂ ಮೆರವಣಿಗೆಯಲ್ಲಿ ಸೇರಿತ್ತು .
ಇವರೆಲ್ಲರ ಪ್ರದರ್ಶನದ ನಂತರ ೬ ಸ್ವಾಮಿಗಳು ಜೋಡುಕಟ್ಟೆ ಗೆ ಆಗಮಿಸಿದರು . ಪರ್ಯಾಯ ಶ್ರೀಗಳಾದ ಕಾಣಿಯೂರು ಮಠದ " ವಿದ್ಯಾ ವಲ್ಲಭ " ಶ್ರೀಗಳು ಜೋಡುಕಟ್ಟೆ ಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮೇನೆಯಲ್ಲಿ ಕುಳಿತು ಎಲ್ಲ ಶ್ರೀಗಳು ಉಡುಪಿ ಕೃಷ್ಣ ಮಠಕ್ಕೆ ಬರಲು ಸನ್ನದ್ಧ ರಾದರು .
ಈ ಬಾರಿ ಮೇನೆಗಳನ್ನು ವಾಹನದ ಮೇಲೆ ಇಟ್ಟು , ನಂತರ ಸ್ವಾಮಿಗಳು ಅದರಲ್ಲಿ ಕೂತು ಪ್ರಯಾಣಿಸಿದರು . ಪರ್ಯಾಯ ಶ್ರೀಗಳು ಚಂದ್ರ ಮೌಳೀಶ್ವರ , ಅನಂತೇಶ್ವರ ದೇವಸ್ಥಾನ ಗಳನ್ನೂ ಸಂದರ್ಶಿಸಿದ ನಂತರ ಕನಕನ ಕಿಂಡಿಯಲ್ಲಿ ಶ್ರೀ ಕೃಷ್ಣ ದರ್ಶನಗೈದು ನಂತರ ಕೃಷ್ಣ ಮಠದ ಒಳಗೆ ಬಂದು ಅಕ್ಷಯ ಪಾತ್ರೆ ಯನ್ನು ಪಡೆದರು . ಸರ್ವಜ್ಞ ಪೀಠ ಎರಿದರು. .
ಇಲ್ಲಿಗೆ ನಾನು ನನ್ನ ಟಿ .ವಿ . ವೀಕ್ಷಣೆ ನಿಲ್ಲಿಸಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ಪರ್ಯಾಯ ದಿವಸದ ನಂತರ ವೂ ಇದ್ದವು. ಕದ್ರಿ ಗೋಪಾಲನಾಥರ ಸಾಕ್ಸೋಫೋನ್ ವಾದನ , ಚಿತ್ರ ನಟಿ ಶೋಭನಾ ರಿಂದ ಭರತನಾಟ್ಯ , ಮಿಮಿಕ್ರಿ , ನೃತ್ಯ ರೂಪಕಗಳು , ಯಕ್ಷಗಾನ ಈ ಎಲ್ಲಾ ಕಾರ್ಯಕ್ರಮಗಳು ಇದ್ದವು .