ಕೋಪದ ಕೈಗೆ ಬುದ್ಧಿ ಕೊಡಬಾರದು
ಹಿಂದೆ ನದಿಗಳನ್ನು ದಾಟಲು ಈಗಿನಂತೆ ಸಿಮೆಂಟಿನ ಸೇತುವೆಗಳಿರಲಿಲ್ಲ.ಮರದ ಇಕ್ಕಟ್ಟಾದ ಸೇತುವೆಗಳಿದ್ದವು.ಅದರಲ್ಲಿ ಒಮ್ಮೆಗೆ ಒಬ್ಬರು ಮಾತ್ರ ಹೋಗಬಹುದಿತ್ತು.ಹೀಗಿರುವಾಗ ಶಕ್ತಿ ಎನ್ನುವ ಮುನಿಕುಮಾರನಿದ್ದನು.ಆತ ದೊಡ್ಡ ತಪಸ್ವಿ.ಆತ ತಪಸ್ಸು ಮಾಡಿ ತುಂಬಾ ಶಕ್ತಿಯನ್ನು ಪಡೆದುಕೊಂಡಿದ್ದನು.
ಹೀಗಿರುವಾಗ ಒಮ್ಮೆ ಆ ದೇಶದ ರಾಜ ಬೇಟೆಯಾಡುತ್ತಾ ಶಕ್ತಿಯ ಆಶ್ರಮದ ಬಳಿ ಬಂದನು.ಆದರೆ ರಾಜನಿಗೆ ಇದರ ಅರಿವಿರಲಿಲ್ಲ.ಅದೇ ಸಮಯಕ್ಕೆ ಶಕ್ತಿಯು ಯಾಗ ಮಾಡಲು ಸೌದೆ ಒಟ್ಟು ಮಾಡುತ್ತಿದ್ದನು.ಆತನ ಕೆಲಸ ಪೂರ್ತಿಯಾಯಿತು.ಆತ ಹೊರಡಲು ಅನುವಾದನು.ಆತ ಇದ್ದ ಸ್ಥಳ ಮತ್ತು ಆಶ್ರಮ ದ ನಡುವೆ ಒಂದು ಮರದ ಸೇತುವೆಯಿತ್ತು.ಶಕ್ತಿಯು ಸೇತುವೆ ದಾಟಲು ಹೊರಟನು.ಆದರೆ ಅದೇ ಸಮಯಕ್ಕೆ ಸರಿಯಾಗಿ ರಾಜನು ಸೇತುವೆ ದಾಟಲು ಬರುತ್ತಿದ್ದನು.ಮೊದಲೇ ಹೇಳಿದಂತೆ ಸೇತುವೆಯಲ್ಲಿ ಒಮ್ಮೆಗೆ ಒಬ್ಬರು ಮಾತ್ರ ದಾಟಬಹುದು.ರಾಜ ಮತ್ತು ಶಕ್ತಿಯ ಮುಖಾಮುಖಿಯಾಯಿತು.
ರಾಜನಿಗೆ ತಾನು ಈ ದೇಶದ ರಾಜ.ಪ್ರಜೆಗಳು ತನಗೆ ಗೌರವ ಕೊಡಬೇಕೆಂಬ ಭಾವನೆ ಇತ್ತು.ಶಕ್ತಿಗೆ ತಾನು ಮುನಿ.ತಪಶ್ಶಕ್ತಿಯಿಂದ ಏನು ಬೇಕಾದರೂ ಮಾಡಬಲ್ಲೆ ಎಂಬ ಅಹಂ ಇತ್ತು.ಹೀಗಿರಲು ಸೇತುವೆ ದಾಟುವ ವಿಚಾರದಲ್ಲಿ ಶಕ್ತಿಗೂ ಮತ್ತು ರಾಜನಿಗೂ ವಾಗ್ವಾದ ಉಂಟಾಯಿತು.ಅದು ವಿಕೋಪಕ್ಕೆ ತಿರುಗಿತು.ಇಬ್ಬರೂ ತಮ್ಮ ತಮ್ಮ ಅಹಂ ಬಿಡಲೊಲ್ಲರು.
ಹೀಗಿರುವಾಗ ಶಕ್ತಿಗೆ ತನ್ನ ಜೊತೆ ಜಗಳವಾಡುತ್ತಿರುವ ರಾಜನ ಮೇಲೆ ತುಂಬಾ ಸಿಟ್ಟು ಬಂತು.ಆತ ರಾಜನಿಗೆ ನೀನು ಬ್ರಹ್ಮರಾಕ್ಷಸನಾಗು ಎಂದು ಶಪಿಸಿಯೇ ಬಿಟ್ಟನು.
ರಾಜನು ಕೂಡಲೇ ಬ್ರಹ್ಮರಾಕ್ಷಸನಾಗಿ ಬದಲಾದನು.ಆಗ ಆತ ಮಾಡಿದ ಮೊದಲ ಕೆಲಸವೇನೆಂದರೆ ಹಸಿವಿನಿಂದ ಶಕ್ತಿಯನ್ನೇ ಆತ ಕೊಂದು ತಿಂದನು.ಪಾಪ ಶಕ್ತಿ ತಾನು ಕೊಟ್ಟ ಶಾಪ ತನಗೆ ಮುಳುವಾಗಬಹುದು ಎಂದು ಎಣಿಸಿಯೇ ಇರಲಿಲ್ಲ.ಅನ್ಯಾಯವಾಗಿ ಕೋಪದ ಭರದಲ್ಲಿ ಆತ ತನ್ನ ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು.
ನೀತಿ:ಕೋಪದ ಭರದಲ್ಲಿ ಯಾವ ಕೆಲಸವನ್ನೂ ಮಾಡಬಾರದು.
No comments:
Post a Comment