Saturday, January 22, 2011

ಮಾದಾಸುರನ ಹುಟ್ಟು

                                      ಮಾದಾಸುರನ ಹುಟ್ಟು
ಹಿಂದೆ ದೇವತೆಗಳ ವೈದ್ಯರಾದ ಅಶ್ವಿನೀ ದೇವತೆಗಳು ಇತರ ದೇವತೆಗಳಂತೆ ಯಾಗದಲ್ಲಿ ಹವಿಸ್ಸನ್ನು ಪಡೆಯುವಂತೆ ಇರಲಿಲ್ಲ.ಏಕೆಂದರೆ ಅವರಿಗೆ ಅಮರತ್ವವನ್ನು ಪಡೆಯಲು ಆಗಿರಲಿಲ್ಲ.ಇದರಿಂದಾಗಿ ಅವರು ಉಳಿದ ದೇವತೆಗಳ ಜೊತೆ ತಮ್ಮನ್ನು ಗುರುತಿಸಿಕೊಳ್ಳಲು ಆಗುತ್ತಿರಲಿಲ್ಲ.ಇದರಿಂದ ನೊಂದ ಅಸ್ವಿನೀ ದೇವತೆಗಳು ಇಂದ್ರನ ಬಳಿ ಬಂದು ತಮಗೂ ಅಮರತ್ವವನ್ನು ಪಡೆಯಲು ಅಮೃತವನ್ನು ನೀಡಲು ಕೇಳಿಕೊಂಡರು.
ಆದರೆ ಇಂದ್ರ ಅದಕ್ಕೊಪ್ಪದೆ ಕೇಳಿದವರಿಗೆಲ್ಲ ಅಮೃತವನ್ನು ನೀಡಲು ಸಾಧ್ಯವಿಲ್ಲವೆಂದು ಅವರನ್ನು ಅವಮಾನಿತರಾಗಿ ಮಾಡಿದ.ಆಗ ಅಶ್ವಿನೀ ದೇವತೆಗಳು ಚ್ಯವನ ಮುನಿ ಯ ಬಳಿ ತಮಗೆ ಸಹಾಯ ಮಾಡಲು ಕೇಳಿಕೊಂಡರು.ಇದಕ್ಕೆ ಒಪ್ಪಿದ ಮುನಿ ಅವರಿಗೆ ಅಮರತ್ವವು ಪ್ರಾಪ್ತಿಯಾಗುವಂತೆ ಮಾಡಲು ಯಾಗ ಮಾಡಲು ನಿರ್ಧರಿಸಿದ.ಇದು ಇಂದ್ರನ ಕಿವಿಗೆ ಬಿತ್ತು.ಆತ ಯಾಗವನ್ನು ವಿಫಲಗೊಳಿಸಲು ನಾನಾ ಉಪಾಯಗಳನ್ನು ಮಾಡುತ್ತಾನೆ.
ಇದರಿಂದ ಕೋಪಗೊಂಡ ಚ್ಯವನ ಮುನಿ ಮಾದಾಸುರ ಎನ್ನುವ ಅಸುರನನ್ನು ಸೃಷ್ಟಿಸುತ್ತಾರೆ.ಆತನ ಘೋರ ರೂಪ ಹೇಗಿರುತ್ತದೆ ಎಂದರೆ ಆತ ಒಂದೇ ಗುಟುಕಿಗೆ ಸಮಸ್ತ ಬ್ರಹ್ಮಾಂಡವನ್ನೇ ಆಪೋಶನ ತೆಗೆದು ಕೊಳ್ಳಬಲ್ಲವನಾಗಿದ್ದ.ಆತನ ಮೇಲ್ಭಾಗದ ದವಡೆಯಲ್ಲಿ ಸಮಸ್ತ ಸ್ವರ್ಗವೂ ಮತ್ತು ದವಡೆಯ ಕೆಳಭಾಗದಲ್ಲಿ ಸಮಸ್ತ ಭೂಮಿಯೂ ಆವರಿಸಲ್ಪಡುತ್ತದೆ.
ತನ್ನ ಗೆಳೆಯರೆಲ್ಲರೂ ಮಾದಾಸುರನ ಮುಷ್ಟಿಯಲ್ಲಿ ಇರುವುದನ್ನು ಗಮನಿಸಿದ ಇಂದ್ರ,ಮುನಿಗೆ ಶರಣು ಬರುತ್ತಾನೆ.ಆಗ ಚ್ಯವನ ಮುನಿಯು ಇಂದ್ರನಿಗೆ ಅಭಯವನ್ನಿತ್ತು ಮಾದಾಸುರನು ತನ್ನ ಉಗ್ರ ರೂಪವನ್ನು ಬಿಟ್ಟು ಬಿಡಲು ಸೂಚಿಸುತ್ತಾರೆ.ಬದಲಿಗೆ ಇಂದ್ರ ಅಶ್ವಿನೀ ದೇವತೆಗಳನ್ನು ದೇವತೆಗಳೆಂದು ಗೌರವಿಸಲು ಮತ್ತು ಯಾಗದಲ್ಲಿ ಅವರಿಗೂ ಹವಿಸ್ಸಾನ್ನು ನೀಡಲು ಒಪ್ಪಿಕೊಳ್ಳುತ್ತಾನೆ.

No comments:

Post a Comment