ಕಾಕಾಸುರ ವಧೆ
ಬಹಳ ಹಿಂದೆ ಇಂದ್ರನ ಮಗ ಜಯಂತ ತನ್ನ ಸ್ನೇಹಿತರಾದ ಅಪ್ಸರೆಯರು ಮತ್ತು ಗಂಧರ್ವ ರೊಡನೆ ಭೂಲೋಕಕ್ಕೆ ಬಂದಿಳಿದ.ಆತನಿಗೆ ಮನರಂಜನೆಯೇ ಮುಖ್ಯ ಉದ್ದೇಶವಾಗಿತ್ತು.ಹೀಗಿರಲು ಅವರು ಒಂದು ಕಡೆ ತುಂಬು ನೀರಿನ ಸರೋವರವನ್ನು ಕಂಡು ಅಲ್ಲಿ ಜಲಕ್ರೀದೆಯಾಡಲು ಬಂದು ಇಳಿಯುತ್ತಾರೆ.
ಆದರೆ ಅದು ಓರ್ವ ಮುನಿಯ ಅಶ್ರಮವಾಗಿರುತ್ತದೆ.ಇದರ ಅರಿವು ಇಲ್ಲದ ಜಯಂತ ಮತ್ತು ಆತನ ಸ್ನೇಹಿತರು ಅಲ್ಲಿಯ ಮರ-ಗಿಡಗಳನ್ನು ವಿರೂಪಗೊಳಿಸುತ್ತಾರೆ ಮತ್ತು ಅಲ್ಲಿಯ ಶಾಂತ ವಾತಾವರಣಕ್ಕೆ ಧಕ್ಕೆ ತರುತ್ತಾರೆ.ಇದು ಸಹಜವಾಗಿ ತಪೋನಿರತ ಮುನಿಯ ತಪೋಭಂಗಕ್ಕೆ ಕಾರಣವಾಗುತ್ತದೆ.
ಆತ ಸಿಟ್ಟಿನಿಂದ ಇದಕ್ಕೆಲ್ಲ ಕಾರಣನಾದ ಜಯಂತನು ಕಾಗೆಯಾಗಲಿ ಎಂದು ಶಪಿಸುತ್ತಾನೆ.ಕೂಡಲೇ ಜಯಂತನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಮುನಿಯ ಕಾಲಿಗೆ ಬಿದ್ದು ಶರಣಾಗುತ್ತಾನೆ.ಆಗ ಮುನಿಯು ಶ್ರೀರಾಮನ ಪಾದಸ್ಪರ್ಶದಿಂದ ಶಾಪದಿಂದ ಮುಕ್ತಿಯಾಗುವುದು ಎಂದು ಹರಸುತ್ತಾನೆ.
ಜಯಂತನ ಸ್ನೇಹಿತರು ನೋಡುತ್ತಿರುವಂತೆಯೇ ಅವನಿಗೆ ಕಾಗೆಯ ರೂಪ ಬರುತ್ತದೆ ಮತ್ತು ಆತ ಅಲ್ಲಿಂದ ಹಾರಿಹೋಗುತ್ತಾನೆ.ಇದು ಒಬ್ಬ ರಾಕ್ಷಸನ ಕಿವಿಗೆ ಬೀಳುತ್ತದೆ ಮತ್ತು ಆತ ಜಯಂತನ ದೇಹದಲ್ಲಿ ಸೇರಿಕೊಂಡು ಆತನಿಂದ ಪಾಪಕೃತ್ಯಗಳನ್ನು ಮಾಡಿಸುತ್ತಾನೆ.ಹೀಗಾಗಿ ಆ ಕಾಗೆಗೆ ಕಾಕಾಸುರ ಎನ್ನುವ ಹೆಸರು ಬಂತು.
ಅದು ರಾಮಾವತಾರದ ಕಾಲ.ರಾಮ ಮತ್ತು ಸೀತೆಯರು ವನವಿಹಾರಕ್ಕೆಂದು ಕಾಡಿಗೆ ಬರುತ್ತಾರೆ.ಆಗ ಕಾಕಾಸುರ ಅಲ್ಲಿ ಮಲಗಿದ್ದ ಸೀತೆಯ ಎದೆಯನ್ನು ಕುಕ್ಕುತ್ತಾನೆ.ಇದರಿಂದ ಸೀತೆ ಭೀತಗೊಳ್ಳುತ್ತಾಳೆ.ಆಗ ಶ್ರೀರಾಮ ಕೈಗೆ ಸಿಕ್ಕಿದ ಒಂದು ಧರ್ಬೆಯನ್ನು ಮಂತ್ರಿಸಿ ಆ ಕಾಕಾಸುರನ ಮೇಲೆ ಪ್ರಯೋಗಿಸುತ್ತಾನೆ.ಅದರ ಹೊಡೆತ ತಾಳಲಾರದೆ ಕಾಕಾಸುರ ಶ್ರೀರಾಮನ ಕಾಲಿಗೆ ಬೀಳುತ್ತಾನೆ.ಆಗ ಜಯಂತನಿಗೆ ಶಾಪ ವಿಮೋಚನೆಯಾಗುತ್ತದೆ.
ಆದರೆ ಇದನ್ನೆಲ್ಲಾ ಮಾಡಿದ್ದು ಕಾಗೆಯ ದೇಹದೊಳಗಿದ್ದ ರಾಕ್ಷಸ.ಆತನೂ ರಾಮನಿಗೆ ಶರಣು ಬಂದಾಗ ರಾಮನು ಇನ್ನು ಮುಂದೆ ಕಾಗೆಗಳಿಗೆ ಒಂದೇ ಕಣ್ಣಿನಿಂದ ನೋಡುವಂತೆ ಆಗಲಿ ಎಂದು ಹರಸುತ್ತಾನೆ.ಆದ್ದರಿಂದ ಕಾಗೆಗಳು ಒಂದು ವಸ್ತುವನ್ನು ಎರಡೂ ಕಣ್ಣುಗಳಿಂದ ನೋಡಲಾರವು.
No comments:
Post a Comment