ಶ್ರೀಕೃಷ್ಣ ತುಲಾಭಾರ
ಒಮ್ಮೆ ಶ್ರೀಕೃಷ್ಣನ ಹೆಂಡತಿಯಾದ ಸತ್ಯಭಾಮೆಗೆ ತಾನು ಶ್ರೀಕೃಷ್ಣನ ತುಲಾಭಾರ ಮಾಡಿಸಬೇಕೆಂದೂ ,ಆ ಮೂಲಕ ತಾನು ಕೃಷ್ಣನ ಮೇಲೆ ಎಷ್ಟು ಪ್ರೀತಿ ಹಾಗೂ ಭಕ್ತಿಯನ್ನು ಇಟ್ಟಿದ್ದೇನೆ ಎಂದು ಜಗತ್ತಿಗೆ ತೋರಿಸುವ ಹಂಬಲ ಉಂಟಾಯಿತು.
ಆಕೆ ತನ್ನ ಆಶೆಯನ್ನು ಕೃಷ್ಣನ ಬಳಿ ಹೇಳಿದಾಗ ಆತ ನಗುಮೊಗದಿಂದ ಒಪ್ಪಿಗೆ ಸೂಚಿಸಿದ.ಸರಿ,ತುಲಾಭಾರಕ್ಕೆ ಎಲ್ಲ ಸಿದ್ಧತೆ ನಡೆದವು.ಕೃಷ್ಣ ಬಂದು ತಕ್ಕಡಿಯ ಒಂದು ತಟ್ಟೆಯಲ್ಲಿ ಬಂದು ಕುಳಿತುಕೊಂಡ.ಸತ್ಯಭಾಮೆ ಇನ್ನೊಂದು ತಟ್ಟೆಯಲ್ಲಿ ತನ್ನ ಒಡವೆಗಳನ್ನು ಹಾಕುತ್ತ ಹೋದಳು.
ಆದರೆ ಎಷ್ಟು ಒಡವೆ ಹಾಕಿದರೂ ಕೃಷ್ಣ ನಿರುವ ತಟ್ಟೆ ಮೇಲೆ ಏಳುತ್ತಲೇ ಇಲ್ಲ.ಇದರಿಂದ ಅವಮಾನಿತಳಾದ ಭಾಮೆ ತನ್ನೆಲ್ಲ ಐಶ್ವರ್ಯ ಮತ್ತು ತನಗೆ ಸೇರಿದ ಜಾನುವಾರುಗಳನ್ನೂ ಸೇರಿಸಿ ಹಾಕಿದರೂ ಕೃಷ್ಣ ನಿರುವ ತಟ್ಟೆ ಮಾತ್ರ ಮೇಲೆ ಏಳುತ್ತಲೇ ಇಲ್ಲ
ಕೊನೆಗೆ ಈ ಸುದ್ದಿಯನ್ನು ತಿಳಿದ ಕೃಷ್ಣನ ಪಟ್ಟ ಮಹಿಷಿಯಾದ ರುಕ್ಮಿಣಿಯು ಅಲ್ಲಿಗೆ ಬಂದಳು.ಇದನ್ನೆಲ್ಲಾ ನೋಡಿದ ಅವಳಿಗೆ ಶ್ರೀಕೃಷ್ಣನ ಲೀಲೆ ಅರ್ಥವಾಯಿತು.ಕೂಡಲೇ ಒಂದು ತುಳಸಿ ದಳ ದಲ್ಲಿ ಶ್ರೀಕೃಷ್ಣನ ನಾಮವನ್ನು ಬರೆದು ಅಲ್ಲಿಗೆ ತಂದಳು.ಆಗ ಸತ್ಯಭಾಮೆ ಅವಹೇಳನದಿಂದ ನಕ್ಕು ಇಷ್ಟು ಐಶ್ವರ್ಯ ನೀಡಿದರೂ ಮೇಲೆ ಏಳದ ತಟ್ಟೆ ಒಂದು ತುಳಸಿ ದಳಕ್ಕೆ ಏಳುವುದೇ? ಎಂದು ಅಪಹಾಸ್ಯ ಮಾಡಿದಳು.
ಆದರೂ ರುಕ್ಮಿಣಿ ಕೃಷ್ಣನನ್ನೇ ಸ್ಮರಿಸುತ್ತಾ ಆ ಐಶ್ವರ್ಯ ದ ಬದಲು ತಟ್ಟೆಗೆ ತುಳಸಿ ದಳ ಹಾಕಿದಳು.ಆಗ ಕೃಷ್ಣ ನಿರುವ ತಟ್ಟೆ ಮೇಲಕ್ಕೆ ಬಂತು ಮತ್ತು ತುಳಸಿ ದಳ ದ ತಟ್ಟೆಯ ಜೊತೆ ಸಮನಾಗಿ ತೂಗಾಡಿತು.ಆಗ ಸತ್ಯಭಾಮೆಗೆ ಭಕ್ತಿ ಮುಖ್ಯವೇ ಹೊರತು ಐಶ್ವರ್ಯವಲ್ಲ ಎನ್ನುವುದರ ಅರಿವಾಗಿ ನಾಚಿಕೆಯಿಂದ ತಲೆ ತಗ್ಗಿಸಿದಳು.
No comments:
Post a Comment