ಜಲಂಧರನ ಹುಟ್ಟು
ಹಿಂದೆ ದೇವೇಂದ್ರನು ಇನ್ನಷ್ಟು ಶಕ್ತಿಯನ್ನು ಪಡೆಯಲು ಶಿವನನ್ನು ಕುರಿತು ತಪಸ್ಸು ಮಾಡಲು ನಿಶ್ಚಯಿಸುತ್ತಾನೆ.ಇದಕ್ಕಾಗಿ ಆತ ಭೂಲೋಕಕ್ಕೆ ಬರುತ್ತಾನೆ.ಆದರೆ ಸುರಲೋಕದಿಂದ ಭೂಲೋಕಕ್ಕೆ ಬಂದ ಕೂಡಲೇ ಆತನಿಗೆ ಹಸಿವು-ನೀರದಿಕೆಗಳು ಕಾಡಲಾರಂಭಿಸುತ್ತವೆ.ಬಾಯಾರಿಕೆಯಿಂದ ತತ್ತರಿಸಿದ ದೇವೇಂದ್ರ ನೀರಿಗಾಗಿ ಅಲೆಯುತ್ತಿದ್ದ.ಆಗ ಅದೇ ಪ್ರದೇಶದಲ್ಲಿ ಕುಂಭ-ನಿಕುಂಭ ರೆಂಬ ರಾಕ್ಷಸರು ಮಾರುವೇಷದಲ್ಲಿ ದೇವತೆಗಳ ಭಯದಿಂದ ಜೀವಿಸುತ್ತಿರುತ್ತಾರೆ.ಅವರು ದೇವತೆಗಳ ಅಧಿಪತಿಯಾದ ಇಂದ್ರನು ನೀರಿಗಾಗಿ ಅಲೆಯುತ್ತಿರುವುದನ್ನು ಕಾಣುತ್ತಾರೆ.
ಆಗ ಅವರಿಗೆ ಒಂದು ದುಷ್ಟ ಯೋಚನೆ ಬರುತ್ತದೆ.ಹೇಗಿದ್ದರೂ ಇಂದ್ರ ಶಿವನನ್ನು ಕಾಣಲು ಹೋಗುತ್ತಿದ್ದಾನೆ.ಈ ಸಮಯದಲ್ಲಿ ಅವನಿಗೆ ಮದಿರೆಯನ್ನು ನೀರೆಂದು ಕುಡಿಸಿ ಆತನ ದೇಹವನ್ನು ತಾವು ಪ್ರವೇಶಿಸಿ ಇಂದ್ರ ಶಿವನಿಗೆ ಸಿಟ್ಟು ಬರುವಂತೆ ನಡೆದುಕೊಂಡರೆ ಆಗ ಇಂದ್ರನ ನಾಶವಾಗುತ್ತದೆ.ತಮ್ಮ ಕುಲಬಾಂಧವರು ನೆಮ್ಮದಿಯಿಂದ ಜೀವಿಸಬಹುದು ಎಂದು ಯೋಚಿಸುತ್ತಾರೆ.
ಅಂತೆಯೇ ಅವರು ಮೋಸದಿಂದ ಇಂದ್ರನಿಗೆ ಮದಿರೆಯನ್ನು ಕುಡಿಸಿ ಆತನ ದೇಹವನ್ನು ಪ್ರವೇಶಿಸುತ್ತಾರೆ.ಇದಾವುದರ ಅರಿವಿಲ್ಲದ ಇಂದ್ರ ನಂತರ ಶಿವನನ್ನು ಕಾಣಲು ತೂರಾಡಿಕೊಂಡು ಹೋಗುತ್ತಾನೆ.ಶಿವನು ಧ್ಯಾನದಲ್ಲಿ ಇರುತ್ತಾನೆ.ಆಗ ಇಂದ್ರ ನಶೆಯಲ್ಲಿ ಶಿವನನ್ನು ಎಬ್ಬಿಸಲು ಆತನಿಗೆ ವಜ್ರಾಯುಧದಿಂದ ಹಣೆಗೆ ಹೊಡೆಯುತ್ತಾನೆ.ಇದರಿಂದ ಶಿವನಿಗೆ ಎಚ್ಚರವಾಗುತ್ತದೆ ಮತ್ತು ಇಂದ್ರನ ಮೇಲೆ ಸಿಟ್ಟು ಬಂದು ಶಿವನು ತನ್ನ ಮೂರನೇ ಕಣ್ಣನ್ನು ತೆರೆಯುತ್ತಾನೆ.
ಆಗ ಹೆದರಿದ ಇಂದ್ರ ಅಲ್ಲಿಂದ ಪಲಾಯನ ಮಾಡುತ್ತಾನೆ.ಆದರೆ ಶಿವನ ಕಣ್ಣಿಂದ ಹುಟ್ಟಿದ ಬೆಂಕಿಯುಂಡೆ ಇಂದ್ರನನ್ನು ಅಟ್ಟಿಸಿಕೊಂಡು ಬರುತ್ತದೆ,ಕೊನೆಗೆ ಇಂದ್ರನು ಬ್ರಹ್ಮ ದೇವರ ಮೊರೆ ಹೊಕ್ಕಾಗ ಅವರು ಶಿವನಿಗೆ ನಡೆದದ್ದನ್ನು ವಿವರಿಸಿ ಶಾಂತವಾಗುವಂತೆ ಕೇಳಿಕೊಳ್ಳುತ್ತಾರೆ.ಆದರೆ ಶಿವನ ಕಣ್ಣಿಂದ ಬಂದ ಬೆಂಕಿಯುಂಡೆ ಹಾಗೆಯೇ ಉಳಿಯುತ್ತದೆ.ಕಡೆಗೆ ಬ್ರಹ್ಮನು ಅದನ್ನು ಸಮುದ್ರದಲ್ಲಿ ಮುಳುಗಿಸಿದಾಗ ಅದು ಒಂದು ಶಿಶುವಿನ ರೂಪ ತಾಳುತ್ತದೆ.ಬ್ರಹ್ಮನು ಪ್ರೀತಿಯಿಂದ ಶಿಶುವನ್ನು ನೇವರಿಸುತ್ತಿದ್ದಾಗ ಅದು ಬ್ರಹ್ಮನ ಗಡ್ದವನ್ನೇಹಿಡಿದು ಎಳೆಯುತ್ತದೆ.ಆಗ ಬ್ರಹ್ಮನು ನೋವಿನಿಂದ ಎರಡು ಹನಿ ಕಣ್ಣೀರು ಸುರಿಸುತ್ತಾನೆ.ಮತ್ತು ಅದು ಆ ಮಗುವಿನ ತಲೆಯ ಮೇಲೆ ಬೀಳುತ್ತದೆ. ಇದರಿಂದಾಗಿ ಆ ಮಗುವಿಗೆ ಜಲಂಧರ ಎನ್ನುವ ಹೆಸರಾಯಿತು.,
No comments:
Post a Comment