Friday, December 31, 2010

ಜಲಂಧರನ ಹುಟ್ಟು

                                 ಜಲಂಧರನ ಹುಟ್ಟು
ಹಿಂದೆ ದೇವೇಂದ್ರನು ಇನ್ನಷ್ಟು ಶಕ್ತಿಯನ್ನು ಪಡೆಯಲು ಶಿವನನ್ನು ಕುರಿತು ತಪಸ್ಸು ಮಾಡಲು ನಿಶ್ಚಯಿಸುತ್ತಾನೆ.ಇದಕ್ಕಾಗಿ ಆತ ಭೂಲೋಕಕ್ಕೆ ಬರುತ್ತಾನೆ.ಆದರೆ ಸುರಲೋಕದಿಂದ ಭೂಲೋಕಕ್ಕೆ ಬಂದ ಕೂಡಲೇ ಆತನಿಗೆ ಹಸಿವು-ನೀರದಿಕೆಗಳು ಕಾಡಲಾರಂಭಿಸುತ್ತವೆ.ಬಾಯಾರಿಕೆಯಿಂದ ತತ್ತರಿಸಿದ ದೇವೇಂದ್ರ ನೀರಿಗಾಗಿ ಅಲೆಯುತ್ತಿದ್ದ.ಆಗ ಅದೇ ಪ್ರದೇಶದಲ್ಲಿ ಕುಂಭ-ನಿಕುಂಭ ರೆಂಬ ರಾಕ್ಷಸರು ಮಾರುವೇಷದಲ್ಲಿ ದೇವತೆಗಳ ಭಯದಿಂದ ಜೀವಿಸುತ್ತಿರುತ್ತಾರೆ.ಅವರು ದೇವತೆಗಳ ಅಧಿಪತಿಯಾದ ಇಂದ್ರನು ನೀರಿಗಾಗಿ ಅಲೆಯುತ್ತಿರುವುದನ್ನು ಕಾಣುತ್ತಾರೆ.
ಆಗ ಅವರಿಗೆ ಒಂದು ದುಷ್ಟ ಯೋಚನೆ ಬರುತ್ತದೆ.ಹೇಗಿದ್ದರೂ ಇಂದ್ರ ಶಿವನನ್ನು ಕಾಣಲು ಹೋಗುತ್ತಿದ್ದಾನೆ.ಈ ಸಮಯದಲ್ಲಿ ಅವನಿಗೆ ಮದಿರೆಯನ್ನು ನೀರೆಂದು ಕುಡಿಸಿ ಆತನ ದೇಹವನ್ನು ತಾವು ಪ್ರವೇಶಿಸಿ ಇಂದ್ರ ಶಿವನಿಗೆ ಸಿಟ್ಟು ಬರುವಂತೆ ನಡೆದುಕೊಂಡರೆ ಆಗ ಇಂದ್ರನ ನಾಶವಾಗುತ್ತದೆ.ತಮ್ಮ ಕುಲಬಾಂಧವರು ನೆಮ್ಮದಿಯಿಂದ ಜೀವಿಸಬಹುದು ಎಂದು ಯೋಚಿಸುತ್ತಾರೆ.
ಅಂತೆಯೇ ಅವರು ಮೋಸದಿಂದ ಇಂದ್ರನಿಗೆ ಮದಿರೆಯನ್ನು ಕುಡಿಸಿ ಆತನ ದೇಹವನ್ನು ಪ್ರವೇಶಿಸುತ್ತಾರೆ.ಇದಾವುದರ ಅರಿವಿಲ್ಲದ ಇಂದ್ರ ನಂತರ ಶಿವನನ್ನು ಕಾಣಲು ತೂರಾಡಿಕೊಂಡು ಹೋಗುತ್ತಾನೆ.ಶಿವನು ಧ್ಯಾನದಲ್ಲಿ ಇರುತ್ತಾನೆ.ಆಗ ಇಂದ್ರ ನಶೆಯಲ್ಲಿ ಶಿವನನ್ನು ಎಬ್ಬಿಸಲು ಆತನಿಗೆ ವಜ್ರಾಯುಧದಿಂದ ಹಣೆಗೆ ಹೊಡೆಯುತ್ತಾನೆ.ಇದರಿಂದ ಶಿವನಿಗೆ ಎಚ್ಚರವಾಗುತ್ತದೆ ಮತ್ತು ಇಂದ್ರನ ಮೇಲೆ ಸಿಟ್ಟು ಬಂದು ಶಿವನು ತನ್ನ ಮೂರನೇ ಕಣ್ಣನ್ನು ತೆರೆಯುತ್ತಾನೆ.
ಆಗ ಹೆದರಿದ ಇಂದ್ರ ಅಲ್ಲಿಂದ ಪಲಾಯನ ಮಾಡುತ್ತಾನೆ.ಆದರೆ ಶಿವನ ಕಣ್ಣಿಂದ ಹುಟ್ಟಿದ ಬೆಂಕಿಯುಂಡೆ ಇಂದ್ರನನ್ನು ಅಟ್ಟಿಸಿಕೊಂಡು ಬರುತ್ತದೆ,ಕೊನೆಗೆ ಇಂದ್ರನು ಬ್ರಹ್ಮ ದೇವರ ಮೊರೆ ಹೊಕ್ಕಾಗ ಅವರು  ಶಿವನಿಗೆ ನಡೆದದ್ದನ್ನು ವಿವರಿಸಿ ಶಾಂತವಾಗುವಂತೆ ಕೇಳಿಕೊಳ್ಳುತ್ತಾರೆ.ಆದರೆ ಶಿವನ ಕಣ್ಣಿಂದ ಬಂದ ಬೆಂಕಿಯುಂಡೆ ಹಾಗೆಯೇ ಉಳಿಯುತ್ತದೆ.ಕಡೆಗೆ ಬ್ರಹ್ಮನು ಅದನ್ನು ಸಮುದ್ರದಲ್ಲಿ ಮುಳುಗಿಸಿದಾಗ ಅದು ಒಂದು ಶಿಶುವಿನ ರೂಪ ತಾಳುತ್ತದೆ.ಬ್ರಹ್ಮನು ಪ್ರೀತಿಯಿಂದ ಶಿಶುವನ್ನು ನೇವರಿಸುತ್ತಿದ್ದಾಗ ಅದು ಬ್ರಹ್ಮನ ಗಡ್ದವನ್ನೇಹಿಡಿದು ಎಳೆಯುತ್ತದೆ.ಆಗ ಬ್ರಹ್ಮನು ನೋವಿನಿಂದ ಎರಡು ಹನಿ ಕಣ್ಣೀರು ಸುರಿಸುತ್ತಾನೆ.ಮತ್ತು ಅದು ಆ ಮಗುವಿನ ತಲೆಯ ಮೇಲೆ ಬೀಳುತ್ತದೆ. ಇದರಿಂದಾಗಿ ಆ ಮಗುವಿಗೆ ಜಲಂಧರ ಎನ್ನುವ ಹೆಸರಾಯಿತು.,

Wednesday, December 29, 2010

ಸತ್ಯ ಎಲ್ಲಿದೆ?

                                                   ಸತ್ಯ ಎಲ್ಲಿದೆ?
ಹಿಂದೆ ಬಿಂದುಸಾರ ಎನ್ನುವ ರಾಜನು ಭಾರತ ದೇಶವನ್ನು ಆಳುತ್ತಿದ್ದ.ಆತ ಒಳ್ಳೆಯ ಆಡಳಿತಗಾರನಾಗಿದ್ದ.ಅವನ ರಾಜ್ಯದಲ್ಲಿ ಎಲ್ಲೆಲ್ಲೂ ಶಾಂತಿ ನೆಲೆಸಿತ್ತು.ಆದರೂ ಬಿಂದುಸಾರನಿಗೆ ತಾನು ಇನ್ನೂ ಉತ್ತಮ ಆಡಳಿತ ನೀಡಬೇಕೆಂದು ಅನಿಸುತ್ತಿತ್ತು.ಹೀಗಿರಲು ಒಮ್ಮೆ ಭಗವಾನ್ ಮಹಾವೀರರು ಆತನ ರಾಜ್ಯಕ್ಕೆ ಬಂದರು.ಅವರ ಉಪದೇಶವನ್ನು ಕೇಳಲು ಜನರು ಅವರ ಬಳಿ ಬರುತ್ತಿದ್ದರು.ಇದು ರಾಜನಿಗೆ ಸೋಜಿಗವನ್ನು ಉಂಟುಮಾಡಿತು.
ಅವನು ತನ್ನ ಮಂತ್ರಿಯ ಬಳಿ ಇದರ ಕಾರಣವನ್ನು ಕೇಳಿದಾಗ ಮಂತ್ರಿಯು ಮಹಾವೀರ ರಿಗೆ ಸತ್ಯದ ದರ್ಶನವಾಗಿದೆ.ಅದನ್ನೇ ಅವರು ತಮ್ಮ ಉಪದೇಶಗಳ ಮೂಲಕ ಜನರಿಗೆ ತಿಳಿಸುತ್ತಿದ್ದಾರೆ ಎಂದನು.ಇದನ್ನು ಕೇಳಿದ ಬಿಂದುಸಾರನಿಗೆ ತನಗೂ ಸತ್ಯದ ದರ್ಶನ ಮಾಡಬೇಕೆಂಬ ಆಸೆ ಉಂಟಾಯಿತು.ಅದರಂತೆ ಆತ ತನ್ನ ದೂತರೊಡನೆ ಒಂದು ಗಾಡಿ ಭರ್ತಿ ಚಿನ್ನದ ನಾಣ್ಯಗಳನ್ನು ಮಹಾವೀರರಿಗೆ ಕಳುಹಿಸಿ ತನಗೂ ಸತ್ಯದ ದರ್ಶನ ಮಾಡಿಸಬೇಕೆಂದು ಕೇಳಿಕೊಂಡ.
ಆದರೆ ಮಹಾವೀರರು ಅದನ್ನೆಲ್ಲ ಹಿಂದಕ್ಕೆ ಕಳುಹಿಸಿದರು.ಇದರಿಂದ ಅಪಮಾನಿತನಾದ ಬಿಂದುಸಾರ ಇನ್ನೂ ಹೆಚ್ಚಿನ ಸಂಪತ್ತನ್ನು ತಾನು ನೀಡಲು ಸಿದ್ಧನೆಂದೂ ತಿಳಿಸಿದ.ಆದರೆ ಇದಕ್ಕೆ ಮಹಾವೀರರ ಮುಗುಳುನಗುವೆ ಉತ್ತರವಾಯಿತು.ಕೊನೆಗೆ ಬಿಂದುಸಾರನೆ ಅವರ ಬಳಿ ಬಂದು ತನಗೂ ಸತ್ಯದ ದರ್ಶನ ಮಾಡಿಸಬೇಕೆಂದು ಕೇಳಿಕೊಂಡ.ಆಗ ಮಹಾವೀರರು ನಿನ್ನ ರಾಜ್ಯದಲ್ಲಿರುವ ಓರ್ವ ಜಾದಮಾಲಿಯೂ(ರಸ್ತೆಯ ಕಸ ಗುಡಿಸುವವನು)ಇದಕ್ಕೆ ಉತ್ತರ ಹೇಳಬಲ್ಲ ಎಂದರು.ಬಿಂದುಸಾರನು ಆಶ್ಚರ್ಯದಿಂದ ಆ ಜಾಡಮಾಲಿಯ ವಿಳಾಸ ಕೇಳಲು ಮಹಾವೀರರು ವಿಳಾಸ ನೀಡಿದರು.
ಕೂಡಲೇ ಬಿಂದುಸಾರ ಜಾಡಮಾಲಿಯ ಬಳಿ ತೆರಳಿ ತನಗೆ ಸತ್ಯದ ದರ್ಶನ ಮಾಡಿಸಬೇಕೆಂದು ಬೇಡಿಕೊಂಡ.ಆಗ ಜಾಡಮಾಲಿ ಅಯ್ಯಾ!ನನಗೆ ಕೆಲಸವೇ ದೇವರು.ನಾನು ನನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿದ್ದೇನೆ.ಅದುವೇ ಸತ್ಯ.ನೀವೂ ನಿಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಆಗ ನಿಮಗೆ ಸತ್ಯದ ದರ್ಶನ ತನ್ನಿಂದ ತಾನೇ ಆಗುತ್ತದೆ ಎಂದ.
ಇದನ್ನು ಕೇಳಿದ ಬಿಂದುಸಾರನಿಗೆ ಜ್ಞಾನೋದಯವಾಗಿ ತಾನು ಸತ್ಯದ ಅನ್ವೇಷಣೆ ಮಾಡುವುದನ್ನು ಬಿಟ್ಟು ನನ್ನ ಕೆಲಸವನ್ನೇ ಪ್ರಾಮಾಣಿಕತೆಯಿಂದ ಮಾಡಬೇಕು ಎಂಬುದರ ಅರಿವಾಯಿತು.

Monday, December 27, 2010

ಚಂದ್ರನು ಸುಧಾಕರನಾದದ್ದು

                                   ಚಂದ್ರನು ಸುಧಾಕರನಾದದ್ದು
ಹಿಂದೆ ಚಂದ್ರನ ಜನನ ಸಮಯದಲ್ಲಿ ಆತನ ತೇಜಸ್ಸನ್ನು ತಾಳಲಾರದೆ ಆತನ ತಾಯಿ ತನ್ನ ಗರ್ಭಸ್ಥ  ಪಿಂಡವನ್ನು ಮೊದಲು ಗಂಗೆಯಲ್ಲಿ ವಿಸರ್ಜಿಸಿದಳು.ಆದರೆ ಗಂಗೆ ಅದರ ತಾಪವನ್ನು ಸಹಿಸಲಾಗದೆ ವಿಷ್ಣುವಿನ ಬಳಿ ಕಾಪಾಡಲು ಮೊರೆಯಿತ್ತಾಗ ಆತ ಅದನ್ನು ಪರ್ವತ ದ ಬಳಿ ಕೊಂಡೊಯ್ಯುತ್ತಾನೆ.ಹೀಗೆ ಕೊಂಡೊಯ್ಯುತ್ತಿರುವಾಗ ಆ ಪಿಂಡದ ತೇಜಸ್ಸಿನ ಸ್ವಲ್ಪ ಭಾಗ ನೆಲಕ್ಕೆ ಬೀಳುತ್ತದೆ.ಆಗ ಅಲ್ಲಿ ವನಸ್ಪತಿ (ಔಷಧೀಯ ಸಸ್ಯಗಳು)ಹುಟ್ಟುತ್ತವೆ.ಇದರಿಂದ ಚಂದ್ರನಿಗೆ ಓಶಧೀಶ ಎನ್ನುವ ಹೆಸರು ಬಂದಿದೆ,
ನಂತರ ಚಂದ್ರನು ಹುಟ್ಟಿ ದೊಡ್ಡವನಾದ ಮೇಲೆ ಆತನನ್ನು ದೇವತೆಗಳು ತಮ್ಮ ಜೊತೆಗೆ ಕರೆದುಕೊಳ್ಳುತ್ತಾರೆ.ಆಗ ದೇವತೆಗಳ ಬಳಿ ಇರುವ ಅಮೃತ ಕ್ಕಾಗಿ ಸುರಾಸುರ ರ ನಡುವೆ ಯಾವಾಗಲು ಕದನ ಉಂಟಾಗುತ್ತಿರುತ್ತದೆ,ಇದರಿಂದಾಗಿ ದೇವತೆಗಳು ಚಂದ್ರನ ಬಳಿ ಅಮೃತ ವನ್ನು ಕೊಟ್ಟು ಜೋಪಾನವಾಗಿ ಇಡಲು ತಿಳಿಸುತ್ತಾರೆ.ಹೀಗಾಗಿ ಚಂದ್ರನಿಗೆ ಸುಧಾಕರ ಎಂಬ ಹೆಸರು ಬಂತು.
ಅಲ್ಲದೆ ಚಂದ್ರನು ಮೊಲದ ರೀತಿ ಮುಖವನ್ನು ಹೊಂದಿದ್ದಾನೆ.ಆದರಿಂದ ಆತನಿಗೆ ಶಶಾಂಕ ಎನ್ನುವ ಹೆಸರೂ ಬಂದಿದೆ.

ಶಿವನು ಮೃತ್ಯುಂಜಯನಾದದ್ದು

                                   ಶಿವನು ಮೃತ್ಯುಂಜಯನಾದದ್ದು
ಹಿಂದೆ ಮರ್ಕಂಡ ಎಂಬ ಮುನಿಗಳಿದ್ದರು.ಅವರಿಗೆ ಬಹಳ ಕಾಲದಿಂದ ಮಕ್ಕಳಾಗಲಿಲ್ಲ. ಅದಕ್ಕಾಗಿ ಅವರು ತಪಸ್ಸು ಮಾಡಿದರು.ಪ್ರತ್ಯಕ್ಷನಾದ ದೇವರು ಅವರ ಬಳಿ ದೀರ್ಘಾಯುಷಿಯಾಗಿ ಮೂರ್ಖನಾಗಿರುವ ಮಗ ಬೇಕೋ ಇಲ್ಲವೇ ಮೆಧಾವಿಯಾಗಿದ್ದು ಅಲ್ಪಾಯುಷಿಯಾಗಿರುವ ಮಗ ಬೇಕೋ ಎಂದು ಕೇಳಲು ಮರ್ಕಂಡರು ೨ನೆ ಯದನ್ನು ಆಯ್ಕೆ ಮಾಡಿಕೊಂಡರು.ಹಾಗೆ ಅವರಿಗೆ ಪುತ್ರನ ಜನನವಾಯಿತು.
ಹಾಗೆ ಹುಟ್ಟಿದ ಮಗ ಮಾರ್ಕಂಡೇಯ ಎಂಬ ಹೆಸರನ್ನು ಪಡೆದ.ಪುತ್ರನ ಜನನದಿಂದ ಸಂತೋಷವಾಗಿದ್ದರೂ ಆತನಿಗೆ ಅಲ್ಪಾಯುಷ್ಶ ಎಂಬುದು ತಂದೆಯ ಮನದಲ್ಲಿತ್ತು.ಹೀಗಾಗಿ ಅವರು ಮಾರ್ಕಂದೇಯನಿಗೆ ಶಿವ ಪಂಚಾಕ್ಷರಿ ಜಪ ಮಾಡಲು ತಿಳಿಸಿದರು.ಅಂತೆಯೇ ಬಾಲಕನು ಮಾಡುತ್ತಿದ್ದ.
ಹೀಗಿರಲು ಒಂದು ದಿನಾ ಆತ ಶಿವ ಪೂಜೆ ಮಾಡುತ್ತಿರಲು ಆತನ ಆಯಸ್ಸು ಮುಗಿದ ಕಾರಣ ಕೊಂಡೊಯ್ಯಲು  ಖುದ್ದು ಯಮನೇ ಮೃತ್ಯು ರೂಪದಲ್ಲಿ ಬಂದ.ಆದರೆ ಮಾರ್ಕಂಡೇಯ ಶಿವ ಪೂಜೆ ಮಾಡುತ್ತಿದ್ದ ಕಾರಣ ಮಾರ್ಕಂಡೇಯ ಶಿವಲಿಂಗವನ್ನೇ ಗಟ್ಟಿಯಾಗಿ ಬಿಗಿದಪ್ಪಿಕೊಂಡು ಕುಳಿತ.ಆತ ಆರ್ತನಾಗಿ ಶಿವನನ್ನು ತನ್ನ ರಕ್ಷಣೆಗಾಗಿ ಬರುವಂತೆ ಕೇಳಿಕೊಂಡ.
ಒಂದೆಡೆ ಮೃತ್ಯು ಮತ್ತು ಇನ್ನೊಂದೆಡೆ  ಶಿವಧ್ಯಾನ ಮಾಡುತ್ತಿರುವ ಮಾರ್ಕಂಡೇಯ. ಶಿವನು ಭಕ್ತನ ರಕ್ಷಣೆಗಾಗಿ ಓಡೋಡಿ ಬಂದ.ಶಿವನಿಗೂ ಮತ್ತು ಯಮನಿಗೂ ಘೋರ ಯುದ್ಧವಾಯಿತು.ಕೊನೆಗೆ ಶಿವನು ಯಮನ ಮೇಲೆ ವಿಜಯ ಸಾಧಿಸಿ ಮಾರ್ಕಂದೇಯನಿಗೆ ಆಯುಸ್ಸನ್ನು ನೀಡಿದ.ಹೀಗೆ ಮೃತ್ಯು ವಿನ ಜೊತೆ ಹೋರಾಡಿ ಶಿವನು ಜಯಿಸಿದ ಕಾರಣ ಶಿವನಿಗೆ ಮೃತ್ಯುಂಜಯ ಎಂಬ ಹೆಸರು ಬಂತು.

Saturday, December 25, 2010

ಗಜೇಂದ್ರ ಮೋಕ್ಷ

                                                 ಗಜೇಂದ್ರ ಮೋಕ್ಷ
ಹಿಂದೆ ಜಯ-ವಿಜಯ ಎಂಬ ಮುನಿ ಕುಮಾರರಿದ್ದರು.ಅವರೀರ್ವರೂ ಅಣ್ಣ-ತಮ್ಮಂದಿರು ಮತ್ತು ವಿಷ್ಣು ಭಕ್ತರು.ಒಮ್ಮೆ ಓರ್ವ ರಾಜ ತಾನು ಮಾಡುವ ಯಾಗಕ್ಕೆ ಇವರೀರ್ವರನ್ನೂ ಪುರೋಹಿತರಾಗಿ ಆಹ್ವಾನಿಸಿದ.ಜಯ-ವಿಜಯರು ಸಂತೋಷದಿಂದ ಅಲ್ಲಿಗೆ ಹೋಗಿ ಯಾಗ ನಡೆಸಿಕೊಟ್ಟರು. ಇದರಿಂದ ಸಂತೋಷಗೊಂಡ ರಾಜ ಅವರೀರ್ವರಿಗೂ ಸೂಕ್ತ ದಕ್ಷಿಣೆ ನೀಡಿ ಕಳುಹಿಸಿದ.
ಜಯ-ವಿಜಯರು ಮನೆಗೆ ಬಂದರು.ಆಗ ಜಯನು ತಮಗೆ ಸಿಕ್ಕಿದ ದಕ್ಷಿಣೆಯನ್ನು ಸಮನಾಗಿ ಹಂಚಿಕೊಳ್ಳೋಣವೆಂದು ತಿಳಿಸಿದ.ಆದರೆ ವಿಜಯನು ಅದಕ್ಕೆ ಒಪ್ಪದೇ ಜಯನ ಪಾಲು ಆತನಿಗೆ ಮತ್ತು ತನ್ನ ಪಾಲು ತನಗೆ ಎಂದು ಹಠ ಹಿಡಿದ.ಈರ್ವರೂ ತಮ್ಮ ತಮ್ಮ  ನಿಲುವಿಗೆ ಅಂಟಿಕೊಂಡಿದ್ದರು.ಜಗಳ ಪ್ರಾರಂಭವಾಗಿ ಅದು ವಿಕೋಪಕ್ಕೆ ತಿರುಗಿತು.
ಸಿಟ್ಟಿನ ಭರದಲ್ಲಿ ಜಯನು ತನ್ನ ತಮ್ಮನಿಗೆ ನೀನು ಮೊಸಳೆಯಾಗು ಎಂದು ಶಾಪವಿತ್ತ.ಇದಕ್ಕೆ  ಪ್ರತಿಯಾಗಿ ವಿಜಯನೂ ತನ್ನ ಅಣ್ಣನಿಗೆ ನೀನು ಆನೆಯಾಗು ಎಂದು ಶಾಪವಿತ್ತ.ಕೊನೆಗೆ ಇಬ್ಬರಿಗೂ ತಾವು ಮಾಡಿದ ತಪ್ಪಿನ ಅರಿವಾಗಿ ಅವರು ಮಹಾವಿಷ್ಣುವನ್ನು ಪ್ರಾರ್ಥಿಸಿದರು.ಆಗ ವಿಷ್ಣುವು ಪ್ರತ್ಯಕ್ಷನಾಗಿ ಸಿಟ್ಟಿನ ಭರದಲ್ಲಿ ಕೊಟ್ಟ ಶಾಪವನ್ನು ಅನುಭವಿಸಲೇಬೇಕು.ಆದರೆ ಆದಷ್ಟು ಬೇಗ ಇಬ್ಬರಿಗೂ ತಾನು ಶಾಪ ವಿಮೋಚನೆ ಮಾಡುತ್ತೇನೆ ಎಂದು ಅಭಯವಿತ್ತ.
ಜಯ-ವಿಜಯರು ಆನೆ-ಮೊಸಳೆ ಗಳಾಗಿ ಗಂಗಾ ತೀರದಲ್ಲಿ ಹುಟ್ಟಿದರು.ಅದರೂ ಅವುಗಳು ತಮ್ಮ ತಮ್ಮಲ್ಲೇ ಜಗಳವಾದುತ್ತಿದ್ದವು.ಒಮ್ಮೆ ಆನೆ ನೀರು ಕುಡಿಯಲು ಬಂದಾಗ ಮೊಸಳೆ ಅದರ ಕಾಲನ್ನು ಕಚ್ಚಿ ಹಿಡಿಯಿತು.ನೋವಿನಿಂದ ಆನೆ ಚೀರಿಟ್ಟಿತು.ಮತ್ತು ಅದು ವಿಷ್ಣುವನ್ನು ಸಂಕಷ್ಟದಿಂದ ಪಾರುಮಾಡುವಂತೆ ಸ್ತುತಿಸಿತು.
ಅದರ ಮೊರೆಗೆ ಓಗೊಟ್ಟ ಶ್ರೀಹರಿ ತನ್ನ ಸುದರ್ಶನ ಚಕ್ರದಿಂದ ಮೊಸಳೆಯನ್ನು ಸಂಹರಿಸಿದ.ಕೂಡಲೇ ಅವೆರೆದಕ್ಕೂ ಶಾಪ ವಿಮೋಚನೆಯಾಗಿ ಆ ಜಾಗದಲ್ಲಿ ಜಯ-ವಿಜಯರು ನಿಂತಿದ್ದರು.ತನ್ನ ಭಕ್ತರಾದ ಅವರೀರ್ವರನ್ನೂ ಶ್ರೀಹರಿ ವೈಕುಂಟದ ದ್ವಾರಪಾಲಕರಾಗಿ ನೇಮಿಸಿಕೊಂಡ.

ಕೃಷ್ಣ ದಾಮೋದರನಾದದ್ದು

                                     ಕೃಷ್ಣ ದಾಮೋದರನಾದದ್ದು
ಬಾಲಕ ಕೃಷ್ಣ ತುಂಬಾ ತುಂಟ.ತಾಯಿ ಯಶೋದೆಯ ಕಣ್ಣು ತಪ್ಪಿಸಿ ಹೊರಗೆ ಹೋಗಿ,ಬೇರೆಯವರ  ಮನೆಯನ್ನು ತನ್ನ ಗೆಳೆಯರ ಜೊತೆ ಪ್ರವೇಶಿಸಿ ಅಲ್ಲಿ ಕಾಪಿಟ್ಟಿದ್ದ ಬೆಣ್ಣೆ,ಮೊಸರು,ಹಾಲು ಎಲ್ಲವನ್ನೂ ಕದ್ದು ತಿನ್ನುತ್ತಿದ್ದ.ಇದಕ್ಕೆ ಅವನ ತುಂಟ ಗೆಳೆಯರ ಕುಮ್ಮಕ್ಕೂ ಇತ್ತು.ಯಶೋದೆಯ ಬಳಿ ಗೋಪಿಯರು ಬಂದು ತಮ್ಮ ಮನೆಯಲ್ಲಿಟ್ಟಿದ್ದ ಹಾಲು,ಮೊಸರು ಮತ್ತು ಬೆಣ್ಣೆಯನ್ನು ಕೃಷ್ಣ ಕಳ್ಳತನದಿಂದ ಮನೆಯೊಳಗೇ ಬಂದು ತಿಂದಿದ್ದಾನೆ ಎಂದು ಪ್ರತಿದಿನಾ ದೂರು ಹೇಳುತ್ತಿದ್ದರು.ಯಶೋದೆಗೋ ಇದನ್ನೆಲ್ಲಾ ಕೇಳಿ ಸಾಕಾಗಿ ಹೋಗಿತ್ತು.ಹೇಗಾದರೂ ಕೃಷ್ಣನನ್ನು ಆ ಥರ ಮಾಡದಂತೆ ಮಾಡುವುದು ಹೇಗೆಂದು ಆಕೆ ಯೋಚಿಸುತ್ತಿದ್ದಳು.ಅದಕ್ಕೂ ಕಾಲ ಕೂಡಿ ಬಂತು.
            ಒಮ್ಮೆ ಯಶೋದೆ ಮನೆಯಲ್ಲೇ ಕುಳಿತು ಬೆಣ್ಣೆ ಕಡೆಯುತ್ತಿದ್ದಳು.ತುಂಟ ಕೃಷ್ಣ ಅಲ್ಲೇ ಆಡುತ್ತಿದ್ದ.ಇನ್ನು ಅವನು ತನ್ನ ಕಣ್ಣು ತಪ್ಪಿಸಿ ಹೊರಗೆ ಹೋಗುತ್ತಾನೆ ಮತ್ತು ಬೇರೆಯವರ ಮನೆ ಪ್ರವೇಶಿಸಿ ಮೊಸರು,ಬೆಣ್ಣೆ ಎಲ್ಲವನ್ನೂ ತಿನ್ನುತ್ತಾನೆ ಎಂದು ಊಹಿಸಿದ ಯಶೋದೆ ಒಂದು ಹಗ್ಗದಿಂದ ಅಲ್ಲೇ ಇದ್ದ ಒಂದು ಒರಳಿಗೆ ಆತನ ಸೊಂಟವನ್ನು ಬಿಗಿದಳು.ಆ ಒರಳು ಯಮ ಭಾರ.ಅದಕ್ಕೆ ಕೃಷ್ಣನನ್ನು ಅದಕ್ಕೆ ಕಟ್ಟಿ ಹಾಕಿದರೆ ಆತ ಎಲ್ಲಿಗೂ ಹೋಗಲು ಸಾಧ್ಯವಿಲ್ಲ ಎನ್ನುವುದು ಅವಳ ಗ್ರಹಿಕೆ.
ಹೀಗೆ ಉಪಾಯ ಮಾಡಿದ ಯಶೋದೆ ಅಲ್ಲೇ ಇದ್ದ ಹಗ್ಗದಿಂದ ಕೃಷ್ಣನನ್ನು ಆ ಒರಳಿಗೆ ಕಟ್ಟಿ ತಾನು ನಿಶ್ಚಿಂತೆಯಿಂದ ಬೆಣ್ಣೆ ಕಡೆಯಲು ಒಳ ಹೋದಳು.ಆದರೆ ಇದನ್ನೆಲ್ಲಾ ನೋಡುತ್ತಿದ್ದ ಕೃಷ್ಣ ತನಗೆ ಕಟ್ಟಿದ್ದ ಹಗ್ಗವನ್ನೂ ಮತ್ತು ಒರಳನ್ನೂ ಒಮ್ಮೆ ನೋಡುತ್ತಾನೆ.ತಾಯಿ ಒಳಹೊಗುವುದನ್ನೇ ಕಾಯುತ್ತಿದ್ದ ಕೃಷ್ಣ ಒರಳು ಸಮೇತ ಹೊರಬರುತ್ತಾನೆ.ಅದು ಭಾರವಾಗಿದ್ದರೂ ಅದನ್ನು ಎಳೆದುಕೊಂಡು ಹೊರಗೆ ಬರುತ್ತಾನೆ.ಹೊರಗೆ ಅಲ್ಲಿ ೨ ಅರ್ಜುನ ವೃಕ್ಷ ಗಳು ಬೆಳೆದಿವೆ.ಕೃಷ್ಣ ಅವುಗಳ ಮಧ್ಯದಿಂದಲೇ ಒರಳನ್ನು ಎಳೆದುಕೊಂಡು ಬರಲು ಯತ್ನಿಸುತ್ತಾನೆ.
ಆಗ ಆ ಎರಡೂ ಅರ್ಜುನ ವೃಕ್ಷಗಳೂ ಮುರಿದು ಬೀಳುತ್ತವೆ.ಅವುಗಳ ಜಾಗದಲ್ಲಿ ಇಬ್ಬರು ಯಕ್ಷರು ಪ್ರತ್ಯಕ್ಷರಾಗಿ ತಮ್ಮ ಶಾಪ ವಿಮೋಚನೆ ಮಾಡಿದ ಕೃಷ್ಣ ನನ್ನು  ಸ್ತುತಿಸಿ ಅಲ್ಲಿಂದ ತಮ್ಮ ಲೋಕಕ್ಕೆ ತೆರಳುತ್ತಾರೆ.ಹೀಗೆ ಹಗ್ಗದಿಂದ(ದಾಮ) ಹೊಟ್ಟೆಯ(ಉದರ)ಭಾಗಕ್ಕೆ ಬಂಧಿಸಲ್ಪಟ್ಟ ಕೃಷ್ಣನಿಗೆ ದಾಮೋದರ ಎನ್ನುವ ಹೆಸರು ಬಂತು.

Friday, December 24, 2010

ಪರೋಪಕಾರದಿಂದ ಒಳಿತು

                                         ಪರೋಪಕಾರದಿಂದ ಒಳಿತು 
ಒಂದು ಊರು.ಅಲ್ಲಿ ಒಂದು ದೇವಸ್ಥಾನ.ಅಲ್ಲಿ ಬರುವ ಭಕ್ತರೆಲ್ಲರೂ ಸ್ಥಿತಿವಂತರೆ.ಅಲ್ಲಿ ಒಬ್ಬ ಹುಡುಗ ಹೂವು ಮಾರುತ್ತಿದ್ದ.ಆತ ದೇವಸ್ಥಾನಕ್ಕೆಂದು ಬರುವ ಭಕ್ತರೆಲ್ಲರ ಬಳಿ ಅವರ ಬಳಿ ಹೋಗಿ ತನ್ನ ಹೂವು ಕೊಂಡುಕೊಳ್ಳುವಂತೆ ಪೀಡಿಸುತ್ತಿದ್ದ.ಇದರಿಂದ ಅಲ್ಲಿಗೆ ದೇವರ ದರ್ಶನಕ್ಕೆಂದು ಬರುತ್ತಿದ್ದ ಭಕ್ತರಿಗೆಲ್ಲಾ ಕಿರಿಕಿರಿಯಾಗುತ್ತಿತ್ತು.ಹೂವು ಕೊಳ್ಳುವವರೆಗೆ ಹುಡುಗ ಬಿಡುತ್ತಿರಲಿಲ್ಲ.ಹೀಗಿರಲು ಒಂದು ದಿನಾ ಓರ್ವ ಮಹಿಳೆ ದೇವಸ್ಥಾನಕ್ಕೆ ಬಂದರು.ಹುಡುಗ ಯಥಾ ಪ್ರಕಾರ ಅವರ ಬಳಿ ತೆರಳಿ ತನ್ನ ಹೂವು  ಕೊಳ್ಳುವಂತೆ ಪೀಡಿಸಲಾರಂಭಿಸಿದ.ಇದರಿಂದ ಸಿಟ್ಟಿಗೆದ್ದ ಮಹಿಳೆ ಅವನನ್ನು ಬೈದು ಅಟ್ಟಿದರು.
ಮಹಿಳೆ ನಂತರ ಸುಮಾರು ದಿನದ ಮೇಲೆ ದೇವಸ್ಥಾನಕ್ಕೆ  ಮತ್ತೆ ಬಂದರು.ಆಗ ಕೂಡ ಆ ಹುಡುಗ ಅಲ್ಲಿದ್ದ.ಆದರೆ ಆತ ಹೂವಿನ   ಬುಟ್ಟಿಯೊಂದಿಗೆ ಒಂದು ಮೂಲೆಯಲ್ಲಿ ಕುಳಿತ್ತಿದ್ದ.ತನ್ನ ಬಳಿ ಬಂದು ಹೂವು ಕೇಳಿದವರಿಗೆ ಮಾತ್ರ ಹೂವು ನೀಡುತ್ತಿದ್ದ.ಇದರಿಂದ ಮಹಿಳೆಗೆ ಸೋಜಿಗವಾಯಿತು.ತಾನು ಆವತ್ತು ಬೈದ ಕಾರಣ ಹುಡುಗ ಸುಧಾರಿಸಿದ್ದಾನೆ ಎಂದೂ ಅವರಿಗೆ ಅನಿಸಿತು.ಅವರು ಹುಡುಗನ ಬಳಿ ತೆರಳಿ ಆತನ ವರ್ತನೆಯ ಕಾರಣ ಕೇಳಿದರು.
ಆಗ ಹುಡುಗ "ತನ್ನ ಮನೆಯಲ್ಲಿ ತಾನೂ,ತನ್ನ ತಾಯಿ ಮತ್ತು ತಂಗಿ ವಾಸಿಸುತ್ತಿದ್ದೆವು.ಆದರೆ ತಂಗಿಗೆ ಕ್ಯಾನ್ಸರ್  ಖಾಯಿಲೆ ಆಯ್ತು.ತಂದೆ ಇಲ್ಲದ ಕಾರಣ ತಾನೇ ತಂಗಿಯ ಶುಶ್ರೂಷೆಯ ಜವಾಬ್ದಾರಿ ಹೊರಬೇಕಾಯಿತು.ಆದರೆ ಈಗ್ಗೆ ೪ ದಿನದ ಹಿಂದೆ ನನ್ನ ತಂಗಿ ತೀರಿಹೋದಳು.ಅವಳೇ ಇಲ್ಲದ ಮೇಲೆ ನಾನು ಇನ್ನಾರಿಗೊಸ್ಕರ ಹಣ ಒಟ್ಟು ಮಾಡಲಿ?ಆದರಿಂದ ಬಂದಷ್ಟು ಬರಲಿ ಎಂದು ಮೂಲೆಯಲಿ ಕುಳಿತ್ತಿದ್ದೇನೆ" ಎಂದು ತಿಳಿಸಿದ.
ಇದನ್ನು ಕೇಳಿದ ಮಹಿಳೆಗೆ ತನ್ನ ಮೇಲೆ ತಿರಸ್ಕಾರ ಉಂಟಾಯಿತು.ಒಂದು ೧೦ ರುಪಾಯಿಯ ಹೂವನ್ನು ಹುಡುಗನ ಬಳಿ ಕೊಂಡಿದ್ದರೆ ತನ್ನ ಶ್ರೀಮಂತಿಕೆಗೆ ಏನೂ ಕುಂದು ಬರುತ್ತಿರಲಿಲ್ಲ.ಆದರೆ ತನ್ನ ನಿರಾಕರಣೆಯಿಂದ ಒಂದು ಜೀವ ಅನ್ಯಾಯವಾಗಿ ಸಾಯಬೇಕಾಯಿತು ಎಂದು ತಿಳಿದ ಮಹಿಳೆ ಹುಡುಗನ ವಿದ್ಯಾಭಾಸದ ಖರ್ಚು ಮತ್ತು ಆತನ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡಳು.
ನೀತಿ: ನಮ್ಮ ಕೈಯಲ್ಲಿ ಆಗುವುದಾದರೆ ಪರರಿಗೆ ಸಹಾಯ ಮಾಡಬೇಕು.

Thursday, December 23, 2010

ಆಡಿಯ ಕಥೆ

                                             ಆಡಿಯ ಕಥೆ
ಹಿಂದೆ ಅಂಧಕಾಸುರ ಎನ್ನುವ ರಾಕ್ಷಸನನ್ನು ಆತನ ಪಾಪ ಕೃತ್ಯಗಳಿಗಾಗಿ ಶಿವ ನು ಕೊಂದಿರುತ್ತಾನೆ.ಆಡಿಯು ಅಂಧಕಾಸುರನ ಮಗ.ಆತನಿಗೆ ಶಿವನು ತನ್ನ ತಂದೆಯ ಸಾವಿಗೆ ಕಾರಣನಾದದ್ದು ತಿಳಿಯುತ್ತದೆ.ಅವನಿಗೆ ಶಿವ ನ ಮೇಲೆ ಸಿಟ್ಟು ಬರುತ್ತದೆ.ತನ್ನ ತಂದೆಯ ಸಾವಿಗೆ ಕಾರಣನಾದ ಶಿವನ ಮೇಲೆ ಸೇಡು ತೀರಿಸಿಕೊಳ್ಳಲು ಆತ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ.ಆಗ ಆತನ ತಪಸ್ಸಿಗೆ ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ.
ಬ್ರಹ್ಮ ಏನು ವರ ಬೇಕು ಎಂದು ಆಡಿಯನ್ನು ಕೇಳಿದಾಗ ಆತ ತನಗೆ ಸಾವು ಬರದಂತೆ ವರ ನೀಡಲು ಕೇಳಿಕೊಳ್ಳುತ್ತಾನೆ.ಆದರೆ ಬ್ರಹ್ಮ ಅದು ಸಾಧ್ಯವಿಲ್ಲವೆಂದೂ ಬೇರೆ ವರ ಕೇಳಲು ತಿಳಿಸುತ್ತಾನೆ.ಆಗ ಆಡಿಯು ತಾನು ವೇಷ ಬದಲಿಸಿಕೊಂಡಾಗ ಮಾತ್ರ ತನಗೆ ಸಾವು ಬರಬೇಕೆಂದು ಕೇಳುತ್ತಾನೆ.ಅದಕ್ಕೆ ಬ್ರಹ್ಮ ಸರಿ ಎನ್ನುತ್ತಾನೆ.
ತನ್ನ ವರಪ್ರಭಾವದಿಂದ ಕೊಬ್ಬಿದ ಆಡಿಯು ದೇವತೆಗಳ ಮೇಲೆ ಯುದ್ಧ ಸಾರುತ್ತಾನೆ.ಮತ್ತು ಲೋಕಕಂಟಕನಾಗಿ ಬದಲಾಗುತ್ತಾನೆ.ಆಗ ದೇವತೆಗಳು ಶಿವನ ಬಳಿ ದೂರು ನೀಡುತ್ತಾರೆ.ಆದರೆ ಆಡಿಯು ಪಾರ್ವತಿಯ ಸೌಂದರ್ಯಕ್ಕೆ ಮರುಳಾಗುತ್ತಾನೆ.ಒಮ್ಮೆ ಶಿವನು ಬೇರೆ ಕೆಲಸದ ಮೇಲೆ ಹೊರಗೆ ಹೋಗಿದ್ದಾಗ ಆಡಿಯು ಶಿವನಂತೆ ವೇಷ ಧರಿಸಿ ಪಾರ್ವತಿಯ ಬಳಿ ತೆರಳುತ್ತಾನೆ.
ಇದನ್ನರಿಯದ ಪಾರ್ವತಿ ಶಿವನೆಂದೇ ಭಾವಿಸಿ ಉಪಚರಿಸುತ್ತಾಳೆ.ಆಗ ಆಡಿಯು ಪಾರ್ವತಿಯನ್ನು ರೇಗಿಸಲು ಅವಳು ಕಪ್ಪು ಎಂದು ಮೂದಲಿಸುತ್ತಾನೆ.ಇದರಿಂದ ಪಾರ್ವತಿ ಬೇಸರಗೊಂಡು ಅಲ್ಲಿಂದ ತೆರಳಿ ತಪಸ್ಸಿಗೆ ಕೂಡುತ್ತಾಳೆ.ನಂತರ ಶಿವನು ವಾಪಸ್ ಬಂದಾಗ ಪಾರ್ವತಿ ಅಲ್ಲಿರದೆ ಆಡಿಯು ಪಾರ್ವತಿಯ ವೇಷ ಧರಿಸಿರುತ್ತಾನೆ.ಶಿವನು ಪಾರ್ವತಿಯೆಂದೇ ಭಾವಿಸುತ್ತಾನೆ.ಆದರೆ ಆಡಿಯ ವರ್ತನೆಯಿಂದ ಶಿವನಿಗೆ ಸಂಶಯ ಬರುತ್ತದೆ.
ಆಗ ಶಿವನಿಗೆ ಇದು ಪಾರ್ವತಿಯಲ್ಲವಂದೂ ಅವಳ ರೂಪದಲ್ಲಿ ಇರುವ ಆಡಿ ರಾಕ್ಷಸ ಎಂದೂ ತಿಳಿಯುತ್ತದೆ.ಮತ್ತು ಅವನಿಗೆ ಬ್ರಹ್ಮ ನೀಡಿದ ವರವೂ ಜ್ಞಾಪಕಕ್ಕೆ ಬರುತ್ತದೆ.ಈಗ ಆಡಿಯು ವೇಷ ಬದಲಿಸಿ ಇರುವ ಕಾರಣ ಶಿವನು ಆತನ ಸಂಹಾರ ಮಾಡುತ್ತಾನೆ.ಮತ್ತು ಲೋಕದಲ್ಲಿ ಶಾಂತಿ ನೆಲಸುವಂತೆ ಮಾಡುತ್ತಾನೆ.

Wednesday, December 22, 2010

ದಂಡಕಾರಣ್ಯದ ಹುಟ್ಟು

                                 ದಂಡಕಾರಣ್ಯದ ಹುಟ್ಟು
ಹಿಂದೆ ಅಸುರೀ ರಾಜನಿಗೆ ದಂಡ ಎಂಬ ಮಗನಿದ್ದ.ಆದರೆ ಆತ ತುಂಬಾ ತಂಟೆ ಕೋರನಾಗಿದ್ದ.ಇದರಿಂದ ಬೇಸತ್ತ ಅಸುರೀ ರಾಜ ತನ್ನ ಮಗನನ್ನು ಒಂದು ಕಾಡಿನಲ್ಲಿ ತಂದು ಬಿಟ್ಟ.ದಂಡ ಕಾಡಿನಲ್ಲೇ ಅಲೆಯುತ್ತಿದ್ದ.ಆಗ ಅವನಿಗೆ ಅಸುರರ ಗುರು ಶುಕ್ರಾಚಾರ್ಯರ ಪರಿಚಯವಾಯಿತು.ದಂಡನು ಅಸುರ ರಾಜಕುಮಾರ ಎಂಬುದನ್ನು ಅರಿತ ಶುಕ್ರಾಚಾರ್ಯರು ಅವನನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸಿದರು.ಮತ್ತು ತಮ್ಮ ಆಶ್ರಮದಲ್ಲೇ ಇರಲು ಅನುವು ಮಾಡಿಕೊಟ್ಟರು.
ಆದರೆ ದಂಡ ತನ್ನ ತಂಟೆ ಮಾಡುವ ಗುಣವನ್ನು ಮಾತ್ರ ಬಿಡಲಿಲ್ಲ.ಹೀಗಿರಲು ಒಂದು ದಿನಾ ಶುಕ್ರಾಚಾರ್ಯರು ಯಾವುದೋ ಕೆಲಸದ ನಿಮಿತ್ತ ಹೊರಹೋಗಿದ್ದರು.ಆ ಸಮಯದಲ್ಲಿ ದಂಡ ಗುರುಪುತ್ರಿಗೆ ಕೀಟಲೆ ಮಾಡಲು ಆರಂಭಿಸಿದ.ಒಂದು ಹಂತದಲ್ಲಿ ಆತ ಗುರುಪುತ್ರಿಯ ಮೇಲೆ ಬಲಪ್ರಯೋಗವನ್ನೂ ಮಾಡಿದ.ಇದರಿಂದ ನೊಂದ ಗುರುಪುತ್ರಿ ಅಳುತ್ತಾ ಒಂದು ಮೂಲೆಯಲ್ಲಿ ಕುಳಿತುಕೊಂಡಳು.
ಶುಕ್ರಾಚಾರ್ಯರು ಹಿಂತಿರುಗಿದ ಮೇಲೆ ಗುರುಪುತ್ರಿಯ ಬಾಯಿಂದ ನಡೆದದ್ದನ್ನು ಕೇಳಿ ಕೋಪಗೊಂಡರು.ಅವರು ದಂಡನಿಗೆ ಆತ ಪಟ್ಟಕ್ಕೆ ಬಂದ ಮೇಲೆ ಆತನ ರಾಜ್ಯದಲ್ಲಿ ಧೂಳಿನ ಮಳೆ ಸುರಿದು ಕಟ್ಟಡಗಳು ನಿರ್ನಾಮವಾಗಿ ಆ ಜಾಗದಲ್ಲಿ ಕಾಡುಗಳು ಬೆಳೆಯಲಿ ಎಂದು ಶಾಪವಿತ್ತರು.ಅಂತೆಯೇ ಆಯಿತು.ಹಾಗೆ ಕಾಡುಗಳು ಬೆಳೆದ ಜಾಗವನ್ನು ಇಂದು ದಂಡಕಾರಣ್ಯ ಎಂದು ಗುರುತಿಸುತ್ತಾರೆ.

ಕೇದಗೆ ಹೂವೇಕೆ ಶಿವಪೂಜೆಗೆ ವರ್ಜ್ಯ?

                                      ಕೇದಗೆ ಹೂವೇಕೆ ಶಿವಪೂಜೆಗೆ ವರ್ಜ್ಯ?
ಹಿಂದೆ ವಿಷ್ಣುವಿಗೂ ಮತ್ತು ಬ್ರಹ್ಮನಿಗೂ ತಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ಎಂದು ವಾಗ್ವಾದ ಸುರುವಾಯಿತು.ಅದು ವಿಕೋಪಕ್ಕೆ ತಿರುಗಿ ಅವರು ಒಬ್ಬರ ಮೇಲೆ ಮತ್ತೊಬ್ಬರು ಯುದ್ಧ ಮಾಡಲು ಸುರು ಮಾಡಿದರು.ತ್ರಿಮೂರ್ತಿಗಳ ನಡುವೆಯೇ ಯುದ್ಧ ಎಂದಾದಾಗ ಲೋಕವೇ ತತ್ತರಿಸಿತು.ಬ್ರಹ್ಮ ಮತ್ತು ವಿಷ್ಣು ಪರಸ್ಪರರ ಮೇಲೆ ಆಯುಧಗಳನ್ನು ಪ್ರಯೋಗಿಸುತ್ತಿದ್ದರು.ಇದರಿಂದ ಮೂರೂ ಲೋಕಗಳೂ ಹಾನಿಗೀದಾದವು.
ಆಗ ದೇವತೆಗಳು ಎಲ್ಲ ಸೇರಿ ಶಿವನ ಮೊರೆ ಹೊಕ್ಕು ಪರಿಸ್ಥಿತಿಯನ್ನು ವಿವರಿಸಿದರು.ಆಗ ಶಿವನು ಲಿಂಗ ರೂಪವನ್ನು ಧರಿಸಿ ಜಗಳವಾಡುತ್ತಿದ್ದವರ ನಡುವೆ ಕಾಣಿಸಿಕೊಂಡ.ತಮ್ಮ ನಡುವೆ ಇದ್ದಕ್ಕಿಂದ್ದಂತೆ  ಉದ್ಭವವಾದ ಲಿಂಗವನ್ನು ಕಂಡು ಅಚ್ಚರಿಗೊಳಗಾದ ಬ್ರಹ್ಮನು ಲಿಂಗದ ಮೇಲ್ಭಾಗವನ್ನೂ,ವಿಷ್ಣುವು ಲಿಂಗದ ಕೆಳಭಾಗವನ್ನೂ ಅನ್ವೇಷಿಸಲು ಹೊರಟರು.ಆದರೆ ಅದರ ಅಂತ್ಯವನ್ನೇ ಕಾಣಲಿಲ್ಲ.
ಆಗ ಮೇಲ್ಭಾಗದಲ್ಲಿದ್ದ ಬ್ರಹ್ಮನಿಗೆ ಒಂದು ಕೇದಗೆ ಹೂವು ಕೆಳಗೆ ಬೀಳುತ್ತಿರುವುದು ಕಂಡಿತು.ಆಗ ಬ್ರಹ್ಮನು ಆ ಕೇದಗೆ ಹೂವಿನ ಬಳಿ ತಾನು ಲಿಂಗದ ಅಂತ್ಯವನ್ನು ಕಂಡದ್ದಾಗಿ ತಿಳಿಸಬೇಕೆಂದು ಕೇಳಿಕೊಂಡ.ಅದಕ್ಕೆ ಕೇದಗೆ ಹೂವು ಸುಳ್ಳು ಹೇಳಲು ಒಪ್ಪಿತು.ಅಂತೆಯೇ ಕೇದಗೆ ಹೂವು ವಿಷ್ಣುವಿನ ಬಳಿ ಬ್ರಹ್ಮನು ಲಿಂಗದ ಅಂತ್ಯವನ್ನು ಕಂಡಿದ್ದಾಗಿ ತಿಳಿಸಿತು. ಆಗ ವಿಷ್ಣುವು ತನ್ನ ಸೋಲನ್ನು ಒಪ್ಪಿಕೊಂಡು ಬ್ರಹ್ಮನೇ ಶ್ರೇಷ್ಠ ಎಂದು ಹೇಳಿದ.
ಇದು ಶಿವನಿಗೆ ತಿಳಿಯಿತು.ಆತ ಕೇದಗೆ ಹೂವಿನ ಮೇಲೆ ಸಿಟ್ಟು ಬಂತು.ಸುಳ್ಳು ಹೇಳಿದ್ದಕ್ಕಾಗಿ ಆ ಹೂವಿಗೆ ಶಿಕ್ಷೆ ಕೊಡಲು ನಿರ್ಧರಿಸಿದ.ಶಿವನು ಕೇದಗೆ ಹೂವಿಗೆ "ಇನ್ನು ತನ್ನ ಪೂಜೆಗೆ ಯಾರೂ ಕೇದಗೆ ಹೂವನ್ನು ಯಾರೂ ಉಪಯೋಗಿಸಬಾರದು"ಎಂದು ಶಾಪವಿತ್ತ.ಅಂದಿನಿಂದ ಶಿವ ಪೂಜೆಗೆ ಯಾರೂ ಕೇದಗೆ ಹೂವು ಬಳಸುವುದಿಲ್ಲ.

Monday, December 20, 2010

ಹಾವುಗಳಿಗೇಕೆ ಎರಡು ನಾಲಿಗೆ?

                          ಹಾವುಗಳಿಗೇಕೆ ಎರಡು ನಾಲಿಗೆ? 
ಬಹಳ ಹಿಂದೆ ಕಶ್ಯಪ ಮುನಿಗಳಿಗೆ ಇಬ್ಬರು ಹೆಂಡತಿಯರಿದ್ದರು.ಅವರೇ ಕದ್ರು ಮತ್ತು ವಿನುತ.ಇವರಲ್ಲಿ ಕದ್ರುವಿಗೆ ಸರ್ಪಗಳು(ಹಾವುಗಳು) ಮಕ್ಕಳು.ವಿನುತಗೆ ಅರುಣ ಮತ್ತು ಗರುಡ ಎಂಬ ಇಬ್ಬರು ಮಕ್ಕಳು. ಹೀಗಿರಲು ಒಂದು ದಿನಾ ಅವರೀರ್ವರೂ ಸಮುದ್ರ ಮಂಥನದಲ್ಲಿ ಬಿಳಿಗುದುರೆ ಹುಟ್ಟುವುದನ್ನು ಕಾಣುತ್ತಾರೆ.ಆಗ ಅವರೀರ್ವರಲ್ಲೂ ಒಂದು ಪಂಥ ಏರ್ಪಡುತ್ತದೆ.ಅದೇನೆಂದರೆ ವಿನುತ ಆ ಕುದುರೆ ಪೂರ್ತಿ ಬಿಳಿಯಾಗಿದೆ  ಎನ್ನುತ್ತಾಳೆ.ಆದರೆ ಕದ್ರು ಅದರ ಬಾಲ ಮಾತ್ರ ಕಪ್ಪಗಾಗಿದೆ ಎನ್ನುತ್ತಾಳೆ.ಪಂಥದಲ್ಲಿ ಸೋತವರು ಗೆದ್ದವರ ದಾಸಿಯಾಗಬೇಕು ಎಂದು ನಿರ್ಣಯವಾಗುತ್ತದೆ.
ಆದರೆ ಕದ್ರು ಪಂಥದಲ್ಲಿ ತಾನೇ ಗೆಲ್ಲಬೇಕು ಎಂದು ತನ್ನ ಮಕ್ಕಳಾದ ಹಾವುಗಳನ್ನು ಕರೆದು ಕುದುರೆಯ ಬಾಲದಲ್ಲಿ ಸೇರಿಕೊಳ್ಳುವಂತೆ ಸೂಚಿಸುತ್ತಾಳೆ.ಈಗ ಕುದುರೆಯ ಬಾಲ ಕಪ್ಪಗೆ ಕಾಣುತ್ತಿದೆ ಮತ್ತು ವಿನುತ ಕದ್ರುವಿನ ದಾಸಿಯಾಗುತ್ತಾಳೆ.ಆದರೆ ಕದ್ರು ವಿನುತಳನ್ನು ಅತ್ಯಂತ ಹೀನಾಯವಾಗಿ ನದೆಸಿಕೊಳ್ಳುತ್ತಾಳೆ.ಇದರಿಂದ  ಗರುಡನಿಗೆ ಬೇಸರವಾಗುತ್ತದೆ.ಮತ್ತು ಆತ ಸರ್ಪಗಳ ಬಳಿ ಬಂದು ತನ್ನ ತಾಯಿಯ ಬಂಧ ಮುಕ್ತಿಯ ಬಗ್ಗೆ ಮಾತಾಡುತ್ತಾನೆ.
ಆಗ ಸರ್ಪಗಳು ತಮಗೆ ಸ್ವರ್ಗದಿಂದ ಅಮೃತ ತಂದು ಕೊಟ್ಟರೆ ಬಂಧ ಮುಕ್ತಿ ಮಾಡುವುದಾಗಿ ತಿಳಿಸುತ್ತವೆ.ಅಂತೆಯೇ ಗರುಡ ಸ್ವರ್ಗಕ್ಕೆ ಹೋಗಿ ಇಂದ್ರನ ಭೇಟಿ ಮಾಡುತ್ತಾನೆ.ಆದರೆ ಇಂದ್ರ ಅಮೃತ ನೀಡಲು ಹಿಂಜರಿಯುತ್ತಾನೆ.ಆಗ ಗರುಡ ತನ್ನ ತಾಯಿಯ ಬಂಧ ಮುಕ್ತಿಯಾದ ಕೂಡಲೇ ಅಮೃತ ವಾಪಸ್ ತರುವುದಾಗಿ ತಿಳಿಸುತ್ತಾನೆ.ಮತ್ತು ಇಂದ್ರ ಒಪ್ಪಿ ಅಮೃತ ನೀಡುತ್ತಾನೆ.
ಅಮೃತವನ್ನು ಕಂಡ ಸರ್ಪಗಳು ಸಂತೋಷಗೊಂಡು  ವಿನುತಾಳನ್ನು ಬಂಧ  ಮುಕ್ತಿಗೊಳಿಸುತ್ತವೆ ಆದರೆ ತಕ್ಷಣ ಗರುಡ ಅಮೃತವನ್ನು ಅಲ್ಲಿಂದ ಕೊಂಡೊಯುತ್ತಾನೆ.ಸರ್ಪಗಳು ನಿರಾಸೆಯಿಂದ ಆ ಅಮೃತ ಇಟ್ಟಿದ್ದ ಧರ್ಬೆಯನ್ನೇ ನೆಕ್ಕುತ್ತವೆ.ಆಗ ನೆಕ್ಕಿ ನೆಕ್ಕಿ ಅವುಗಳ ನಾಲಿಗೆ ಎರಡಾಗಿ ಸೀಳಿ ಹೋಗುತ್ತದೆ.ಆಮೇಲಿಂದ ಗರುಡನಿಗೂ,ಸರ್ಪಗಳಿಗೂ ವೈರತ್ವ ಉಂಟಾಗುತ್ತದೆ ಮತ್ತು ಸರ್ಪಗಳ ನಾಲಿಗೆ ಎರಡಾಗಿ ಸೀಳಿ ಹೋಗಿದೆ.

ಉಪಮನ್ಯುವಿನ ವಿಧೇಯತೆ

                                              ಉಪಮನ್ಯುವಿನ ವಿಧೇಯತೆ
ಉಪಮನ್ಯು ಎಂಬ ಬಾಲಕ ಆಚಾರ್ಯ ಧೌಮ್ಯ ರ ಆಶ್ರಮದಲ್ಲಿ ಕಲಿಯುತ್ತಿದ್ದನು.ಆಚಾರ್ಯ ಧೌಮ್ಯರಿಗೆ ಉಪಮನ್ಯು ಎಂದರೆ ವಿಶೇಷ ಪ್ರೀತಿ.ಗುರುಗಳಿಗೆ ಉಪಮನ್ಯುವಿನ ವ್ಯಾಸಂಗ ಪೂರ್ತಿಯಾಗಿದೆ ಎನಿಸಲು ಅವರು ಉಪಮನ್ಯುವನ್ನು ಕರೆದು ಇನ್ನು ಮುಂದೆ ಅವನು ದನಗಳನ್ನು ಮೇಯಿಸಲು ಕಾಡಿಗೆ ಹೋಗತಕ್ಕದ್ದು ಎಂದು ಅಪ್ಪಣೆ ಕೊಡಿಸಿದರು.
ಉಪಮನ್ಯು ಅದಕ್ಕೆ ಎದುರಾಡದೆ ದಿನಾ ದನಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಿದ್ದ.ಆದರೆ ಹಿಂದುರುಗಿದಾಗ ಗುರುಗಳು ಉಣ್ಣಲು ಏನೂ ಕೊಡುತ್ತಿರಲಿಲ್ಲ.ಆದರೂ ಉಪಮನ್ಯು ಏನೂ ಹೇಳಲಿಲ್ಲ.ಆದರೆ ಆತನು ಆರೋಗ್ಯವಂತ ನಾಗೆ ಇದ್ದ.ಆಗ ಗುರುಗಳು ಅವನ ಬಳಿ ಕಾರಣ ಕೇಳಿದಾಗ ಉಪಮನ್ಯು ತಾನು ಭಿಕ್ಷಾಟನೆ ಮಾಡಿ ಉಣ್ಣುತ್ತಿರುವುದಾಗಿ ತಿಳಿಸಿದ.ಆಗ ಗುರುಗಳು ಗುರುವಿಗೆ ನೀಡದೆ ಉಣ್ಣುವುದು ತಪ್ಪು ಎಂದರು.
ಅದಕ್ಕೂ ಸರಿ ಎಂದ ಉಪಮನ್ಯು ಭಿಕ್ಷಾಟನೆಯ ಆಹಾರವನ್ನು ಗುರುಗಳಿಗೇ ನೀಡುತ್ತಿದ್ದ.ಆದರೆ ಉಪಮನ್ಯು ಆರೋಗ್ಯ ವಂತನಾಗೆ ಇದ್ದ.ಇದಕ್ಕೂ ಗುರುಗಳು ಕಾರಣ ಕೇಳಿದಾಗ ತಾನು ೨ನೆ ಸಲ ಭಿಕ್ಷೆಗೆ ಹೋಗುತ್ತಿರುವುದಾಗಿ ತಿಳಿಸಿದ.ಅದಕ್ಕೆ ಗುರುಗಳು ೨ ಸಲ ಭಿಕ್ಷಾಟನೆಗೆ ಆಕ್ಷೇಪ ಎತ್ತಿದರು.ಉಪಮನ್ಯು ಅದನ್ನೂ ನಿಲ್ಲಿಸಿದ.ಅದರೂ ಆತ ಅರೋಗ್ಯ ವಂತನಾಗೆ ಇದ್ದ.ಅದಕ್ಕೂ ಗುರುಗಳು ಕಾರಣ ಕೇಳಿದಾಗ ಉಪಮನ್ಯು ತಾನು ದನಗಳ ಹಾಲು ಕರೆದು ಕುಡಿಯುತ್ತಿರುವುದಾಗಿ ತಿಳಿಸಿದ.
ಅದಕ್ಕೂ  ಗುರುಗಳು ಆಕ್ಷೇಪ ಎತ್ತಿದರು.ಕೊನೆಗೆ ಉಪಮನ್ಯು ಅದನ್ನೂ ನಿಲ್ಲಿಸಿದ.ಆದರೆ ಹಸಿವು ತಾಳಲಾರದೆ ಆತ ಎಕ್ಕದ ಎಲೆಗಳನ್ನು ತಿನ್ನುತ್ತಾನೆ.ಇದರಿಂದ ಆತ ಕಣ್ಣು ಕಳೆದುಕೊಳ್ಳುತ್ತಾನೆ.ಆದರೂ ಆತ ತಡಬಡಾಯಿಸಿಕೊಂಡು ಆಶ್ರಮಕ್ಕೆ ಬರುತ್ತಾನೆ.ಆದರೆ ಕಣ್ಣು ಕಾಣದ ಕಾರಣ ಹಾಳು ಬಾವಿಗೆ ಬೀಳುತ್ತಾನೆ.ಎಷ್ಟು ಹೊತ್ತಾದರೂ ಉಪಮನ್ಯು ಬಾರದೆ ಇರುವುದನ್ನು ಗಮನಿಸಿದ ಗುರುಗಳು ಆತನನ್ನು ಹುದುಕಲಾರಂಭಿಸುತ್ತಾರೆ.ಆಗ ಉಪಮನ್ಯು ಕಣ್ಣು ಕಾಣದೆ ಬಾವಿಗೆ ಬಿದ್ದಿರುವುದು ತಿಳಿಯುತ್ತದೆ.
ಗುರುಗಳು ಉಪಮನ್ಯುವನ್ನು ಮೇಲಕ್ಕೆತ್ತಿ ಕಾರಣ ಕೇಳಿದಾಗ ಆತ ಸತ್ಯವನ್ನೇ ನುಡಿಯುತ್ತಾನೆ.ಇದರಿಂದ ತೃಪ್ತಿಗೊಂಡ ಗುರುಗಳು ಆತನಿಗೆ ಕಣ್ಣು ಬರುವಂತೆ ಅನುಗ್ರಹಿಸಿದರು.ಮತ್ತು ಉಪಮನ್ಯುವಿಗೆ ತಮ್ಮ ಎಲ್ಲ ವಿದ್ಯೆಯನ್ನು ಧಾರೆ ಎರೆದು ತಮ್ಮ ಉತ್ತರಾಧಿಕಾರಿಯಾಗಿ ಮಾಡಿದರು.
ನೀತಿ:ವಿದ್ಯೆಗೆ ವಿನಯವೇ ಭೂಷಣ.

Sunday, December 19, 2010

ಸಂದೀಪನ ಗುರುಭಕ್ತಿ

                                 ಸಂದೀಪನ ಗುರುಭಕ್ತಿ
ಹಿಂದೆ ಸಂದೀಪ ಎನ್ನುವವನು ವಿದ್ಯಾರ್ಜನೆಗಾಗಿ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿದ್ದ. ಹೀಗಿರಲು ಒಮ್ಮೆ ಗುರುಗಳಿಗೆ ತಮ್ಮ ಶಿಷ್ಯರನ್ನು ಪರೀಕ್ಷಿಸಬೇಕೆಂಬ ಮನಸ್ಸಾಯಿತು.ಅವರು ತಮ್ಮ ಶಿಷ್ಯಂದಿರನ್ನು ಬಳಿಗೆ ಕರೆದು "ನನಗೆ ಕಾಶಿಗೆ ಹೋಗಬೇಕೆಂಬ ಮನಸ್ಸಾಗಿದೆ.ನನಗೆ ಖಾಯಿಲೆಯೂ ಕಾಡುತ್ತಿದೆ."ಎಂದರು.ಆಗ ಅವರ ಶಿಷ್ಯರೆಲ್ಲರೂ ಎಲ್ಲಿ ತಮ್ಮನ್ನು ಗುರುಗಳ ಜೊತೆಗೆ ಬರಲು ತಿಳಿಸುತ್ತಾರೋ ಎಂದು ಹೆದರಿದರು.ಅವರಾರಿಗೂ ಗುರುಗಳ ಸೇವೆ ಮಾಡಿಕೊಂಡಿರಲು ಇಷ್ಟವಿರಲಿಲ್ಲ.
ಆದರೆ ಸಂದೀಪ ಮಾತ್ರ ಗುರುಗಳ ಜೊತೆ ಕಾಶಿಗೆ ಹೋಗಲು ಸಿದ್ಧನಾದ.ಕಾಶಿಯಲ್ಲಿ ಗುರುಗಳ ಸೇವೆಯನ್ನು ಮಾಡುತ್ತಿದ್ದ.ಭಿಕ್ಷಾಟನೆಗೆ ಹೋಗಿ ಆಹಾರವನ್ನು ತರುತ್ತಿದ್ದ.ಮತ್ತು ಗುರುಗಳ ಗಾಯಗಳಿಗೆ ಮದ್ದು ಹಚ್ಚಿ ಆರೈಕೆ ಮಾಡುತ್ತಿದ್ದ.ಗುರುಗಳು ಎಷ್ಟೇ ಸಿಟ್ಟು ಮಾಡಿಕೊಂಡರೂ ಬೇಸರ ಮಾಡಿಕೊಳ್ಳದೆ ಅವರ ಆರೈಕೆ ಮಾಡುತ್ತಿದ್ದ.
ಅವನ ಗುರುಸೇವೆಯಿಂದ ಸಾಕ್ಷಾತ್ ಪರಶಿವನೇ ಸಂತುಷ್ಟನಾಗಿ ವರವನ್ನು ನೀಡಲು ಬಂದನು.ಆಗ ಸಂದೀಪನು ವಿನೀತನಾಗಿ ತಾನು ಗುರುಗಳ ಬಳಿ ಕೇಳಿ ಹೇಳುವುದಾಗಿ ತಿಳಿಸಿದ.ಆದರೆ ವಿಷಯ ತಿಳಿದ ಗುರುಗಳು ಸಂದೀಪನನ್ನೇ ಮೂದಲಿಸಿ ಸುಳ್ಳು ಹೇಳಿದಕ್ಕಾಗಿ ಹೊಡೆದು ಅಟ್ಟಿದರು.ಆದರೆ ಸಂದೀಪ ಪರಶಿವನ ಬಳಿ ಬಂದು ತನ್ನ ಗುರುಗಳ ಖಾಯಿಲೆ ವಾಸಿಯಾಗುವಂತೆ ಅನುಗ್ರಹಿಸಲು ಬೇಡಿಕೊಂಡ.ಆದರೆ ನಡೆದಿದ್ದನ್ನು ಮೊದಲೇ ಅರಿತ್ತಿದ್ದ ಪರಶಿವನು ಸಂದೀಪನ ನಿಷ್ಕಲ್ಮಶ ಗುರುಭಕ್ತಿಗೆ ಮೆಚ್ಚಿ ಅವನು ಕೇಳಿದ ವರವನ್ನೂ ಮತ್ತು ಆತನಿಗೆ ಸಕಲ ಸಂಪತ್ತನ್ನೂ ನೀಡಿದ.
ನೀತಿ:ಗುರುಭಕ್ತಿಯು ದೇವಭಕ್ತಿಗೆ ಸಮನಾದದ್ದು.

Thursday, December 16, 2010

ಅಜಮಿಳನ ಕಥೆ

                                   ಅಜಮಿಳನ ಕಥೆ
ಅಜಮಿಳ ಎಂಬುವವನು ತನ್ನ ಪೋಷಕರಿಗೆ ಒಬ್ಬನೇ ಮಗ.ಆತ ಬಾಲ್ಯದಿಂದಲೇ ವೈದಿಕ ವೃತ್ತಿ ಯ ಕಡೆ ಆಕರ್ಷಿತನಾಗಿದ್ದ. ಆತನಿಗೆ ಮದುವೆಯು ಆಗಿತ್ತು.ಓರ್ವ ಬ್ರಾಹ್ಮಣನ ಎಲ್ಲ ಕೆಲಸಗಳನ್ನು ಆತ ಚಾಚು ತಪ್ಪದೆ ಮಾಡುತ್ತಿದ್ದ.
ಹೀಗಿರಲು ಒಂದು ದಿನ ಆತ ಯಾಗಕ್ಕೆ ಸೌದೆ ತರಲು ಕಾಡಿಗೆ ಹೋಗಿದ್ದಾಗ ಅಲ್ಲಿ ಓರ್ವ ಆಂದರ ತರುಣಿಯನ್ನು ಕಂಡು ಆಕೆಯನ್ನು ಮನೆಗೆ ಕರೆತರುತ್ತಾನೆ.ಮತ್ತು ಆಕೆಯ ಮೋಹ ಪಾಶದಲ್ಲಿ ಎಲ್ಲರನ್ನು ಮರೆಯುತ್ತಾನೆ.ತನ್ನ ವೈದಿಕ ಧರ್ಮವನ್ನು ಸಹ. ಆತನಿಗೆ ಆ ತರುಣಿಯಲ್ಲಿ ತುಂಬಾ ಮಕ್ಕಳಾಗುತ್ತಾರೆ.ಅಜಮಿಳ ಓರ್ವ ಕಳ್ಳನೂ,ಸುಳ್ಳನೂ ಆಗಿ ಬದಲಾಗುತ್ತಾನೆ.
ಹೀಗಿರಲು ಅಜಮಿಳ ನಿಗೆ ವೃದ್ಧಾಪ್ಯ ಬರುತ್ತದೆ.ಆತ ಈಗ ಮನೆಯಲ್ಲೇ ಇರಲಾರಂಭಿಸಿದ್ದಾನೆ.ಆತನ ಕೊನೆ ಮಗ ನಾರಾಯಣ ಎಂದರೆ ಅವನಿಗೆ ತುಂಬಾ ಪ್ರೀತಿ.ಒಮ್ಮೆ ಮರಣ ಶಯ್ಯೆಯಲ್ಲಿ ಇದ್ದಾಗ ತುಂಬಾ ನೀರದಿಕೆಯಾಗಿ ಆತ ನೀರು ತರಲು ತನ್ನ ಮಗನಾದ ನಾರಾಯಣ ನನ್ನು ಕರೆಯುತ್ತಿರುವಾಗಲೇ ಆತನ ಪ್ರಾಣ ಹೋಗುತ್ತದೆ.
ಆಗ ಯಮದೂತರು ಆತನ ಪ್ರಾಣ ಕೊಂಡೊಯ್ಯಲು ಬರುತ್ತಾರೆ ಆತನ ಕುಕೃತ್ಯಗಳಿಗೆ ಶಿಕ್ಷೆ ನೀಡಲು.ಆದರೆ ಅಜಾಮಿಳನು ಸಾಯುವ ಮೊದಲು ನಾರಾಯಣ ನ ನಾಮ ಸ್ಮರಣೆ ಮಾಡಿದ್ದರಿಂದ ಆತನಿಗೆ ಮೋಕ್ಷ ಕರುಣಿಸಲು ವಿಷ್ನುದೂತರೂ ಬರುತ್ತಾರೆ.ಆಗ ಯಮದೂತರಿಗೂ,ವಿಷ್ನುದೂತರಿಗೂ ಅಜಮಿಳ ಯಾರ ಜೊತೆ ಹೋಗಬೇಕೆಂದು ಜಗಳ ಪ್ರಾರಂಭವಾಗುತ್ತದೆ.ಆದರೆ ಎಷ್ಟೇ ಪಾಪ ಮಾಡಿದ್ದರೂ, ಮರಣ ಶಯ್ಯೆಯಲ್ಲಿ ನಾರಾಯಣ ನ ನಾಮ ಸ್ಮರಣೆ ಮಾಡಿದ್ದರಿಂದ ಅಜಮಿಳನಿಗೆ ತನ್ನ ಪಾಪಗಳಿಂದ ಮುಕ್ತಿ ದೊರೆಯುತ್ತದೆ.

Wednesday, December 15, 2010

ತ್ರಿಪುರಾಂತಕ

                                     ತ್ರಿಪುರಾಂತಕ
ಬಹಳ ಹಿಂದೆ ರಾಕ್ಷಸನಾದ ತಾರಕ ನಿಗೆ ೩ ತಮ್ಮಂದಿರು ಇದ್ದರು.ಈ ೩ ಜನ ಸೇರಿ ಬ್ರಹ್ಮ ನನ್ನು ಕುರಿತು ತಪಸ್ಸು ಮಾಡಿದರು.ಇದರಿಂದ ಸುಪ್ರೀತನಾದ ಬ್ರಹ್ಮ ಅವರಿಗೆ ಅಂತರಿಕ್ಷದಲ್ಲೇ ತೇಲಾಡುವ ೩ ನಗರ ಗಳನ್ನೂ ವರವಾಗಿ ನಿರ್ಮಿಸಿ ಕೊಡುತ್ತಾನೆ.ಮತ್ತು ಯಾರು ಈ ೩ ನಗರಗಳನ್ನು ಕೇವಲ ಒಂದೇ ಬಾಣದಿಂದ ಒಂದು ಮಾಡಿ ಅದನ್ನು ಸುಟ್ಟು ಬೂದಿ ಮಾಡುತ್ತಾರೋ,ಅವರಿಂದ ಆ ೩ ರಾಕ್ಷಸರಿಗೆ ಮರಣ ಎಂದು ವರವನ್ನಿತ್ತ.
ಈ ವರ ಪ್ರಭಾವದಿಂದ ಮದೋನ್ಮತ್ತರಾದ ಆ ೩ ರಾಕ್ಷಸರು (ತ್ರಿಪುರಾಸುರ) ರು ಸ್ವರ್ಗದ ಮೇಲೆ ಆಕ್ರಮಣ ಮಾಡಿ ಅಲ್ಲಿಂದ ದೇವತೆಗಳನ್ನು ಒದ್ದು ಓಡಿಸುತ್ತಾರೆ.ಇದರಿಂದ ನೊಂದ ದೇವತೆಗಳು ಪರಶಿವ ನ  ಬಳಿ ಬಂದು ಸಹಾಯ ಮಾಡಲು ಕೇಳಿ ಕೊಳ್ಳುತ್ತಾರೆ.ಆಗ ಶಿವನು ಆ ರಾಕ್ಷಸರು ಪಡೆದ ವರದ ಮಾಹಿತಿಯನ್ನು ಪಡೆಯುತ್ತಾನೆ.
ನಂತರ ಎಲ್ಲ ದೇವತೆಗಳ ಶಕ್ತಿಯಿಂದ ಕೂಡಿದ ಒಂದು ಬಾಣವನ್ನು ತಯಾರಿಸುತ್ತಾನೆ.ಆ ಬಾಣವು ಅತ್ಯಂತ ಪ್ರಭಾವ ಉಳ್ಳದ್ದು ಆಗಿರುತ್ತದೆ.ಆ ಬಾಣದಿಂದ ಶಿವನು ರಾಕ್ಷಸರ ೩ ನಗರಗಳನ್ನು ಒಟ್ಟು ಮಾಡಿ,ಅದಕ್ಕೆ ಬೆಂಕಿ ಹಚ್ಚುತ್ತಾನೆ.ಹೀಗೆ ತ್ರಿಪುರಗಳನ್ನು  ನಾಶ ಮಾಡಿದ ನಂತರ ಆ ರಾಕ್ಷಸರನ್ನೂ ಕೊಲ್ಲುತ್ತಾನೆ.ಇದರಿಂದ ಶಿವನಿಗೆ ತ್ರಿಪುರಾಂತಕ  ಎಂಬ ಹೆಸರು ಬಂದಿದೆ.

ನರಾಂತಕ-ದೇವಾನ್ತಕ ವಧೆ

                                                  ನರಾಂತಕ-ದೇವಾನ್ತಕ ವಧೆ
ನರಾಂತಕ ಮತ್ತು ದೇವಾನ್ತಕ ಎಂಬಿಬ್ಬರು ರಾಕ್ಷಸರು ಮುನಿ ರುದ್ರಕೇತು ಎಂಬ ಮುನಿಯ ಮಕ್ಕಳು.ಮುನಿಯ ಮಕ್ಕಳಾಗಿದ್ದರೂ, ಅವರು ಪರಶಿವನ್ನು ಕುರಿತು ತಪಸ್ಸು ಮಾಡಿ ಅನೇಕ ವರಗಳನ್ನು ಪಡೆದು ಬಲಶಾಲಿ ಮತ್ತು ಕ್ರೂರಿ ಗಳಾಗಿ ಬದಲಾಗುತ್ತಾರೆ.ಅವರು ಸ್ವರ್ಗ ದ ಮೇಲೆ ಆಕ್ರಮಣ ಮಾಡುತ್ತಾರೆ.
ಆಗ ದೇವತೆಗಳ ಮೊರೆ ಕೇಳಿ ಗಣೇಶನು ಅವರ ಸಹಾಯಕ್ಕೆ ಬರಲು ನಿಶ್ಚಯಿಸಿ ಮಹೋತ್ಕಟ  ಎಂಬ ಅವತಾರವನ್ನು ಎತ್ತುತ್ತಾನೆ.ಅವನು ತನ್ನ ದಂತಗಳಿಂದ ಅಸುರರಿಬ್ಬರನ್ನು ಕೊಲ್ಲುತ್ತಾನೆ ಮತ್ತು ಲೋಕವನ್ನು ರಾಕ್ಷಸರಿಂದ ರಕ್ಷಿಸುತ್ತಾನೆ.ಹೀಗೆಂದು ಗಣೇಶ ಪುರಾಣ ದಲ್ಲಿ ಬರುವ ಕಥೆ ತಿಳಿಸುತ್ತದೆ.

ಅಘಾಸುರ ವಧೆ

                                                  ಅಘಾಸುರ ವಧೆ
ಅಘಾಸುರ ಎನ್ನುವ ರಾಕ್ಷಸನು ಕಂಸನ ಸಹಚರ.ಕಂಸನಿಗೆ ಶ್ರೀ ಕೃಷ್ಣನೇ  ತನ್ನ ಮೃತ್ಯು ಎಂದು ತಿಳಿದಾಗ ಆತ ಅಘಾಸುರನನ್ನು ಕರೆದು ಕೃಷ್ಣ ನನ್ನು ಕೊಲ್ಲುವಂತೆ ತಿಳಿಸಿದ.ಅಂತೆಯೇ ಅಘಾಸುರನು ಗೋಕುಲ ದಲ್ಲಿ ಹೆಬ್ಬಾವಿನ ರೂಪದಲ್ಲಿ ಬರುತ್ತಾನೆ.ಅಲ್ಲಿ ಗೋಪಾಲ ರು ಆಟವಾಡುತ್ತಿದ್ದ ಪ್ರದೇಶಕ್ಕೆ ಹೋಗಿ ಅಲ್ಲಿ ಬಾಯಿ ತೆರೆದು ಮಲಗುತ್ತಾನೆ.
ಇದನ್ನು ಅರಿಯದ ಗೋಪಾಲರು ಅದನ್ನು ಗುಹೆಯೆಂದು ಭಾವಿಸಿ ಅದರ ಒಳ ಹೋಗುತ್ತಾರೆ.ಕೂಡಲೇ ಅಘಾಸುರನು ಕೃಷ್ಣ ನು ಒಳಬಂದನೆಂದು ತಿಳಿದು ಬಾಯಿ ಮುಚ್ಚುತ್ತಾನೆ.ಆದರೆ ಕೃಷ್ಣ ಇನ್ನೂ ಹೊರಗೆ ಇರುತ್ತಾನೆ.ತನ್ನ ಸ್ನೇಹಿತರು ಗುಹೆಯ ಒಳಹೋದದ್ದನ್ನು ಆದರೆ ಅದರಿಂದ ಹೊರಬರದೆ ಇದ್ದದ್ದನ್ನು ಗಮನಿಸಿದ ಕೃಷ್ಣ ಕೇಡನ್ನು ಶಂಕಿಸುತ್ತಾನೆ.ತಾನೂ ಆ ಹೆಬ್ಬಾವಿನ ಬಳಿ ಬಂದು ನೋಡುತ್ತಿದ್ದಾಗ ಮತ್ತೆ ಅಘಾಸುರನು ಬಾಯಿ ತೆಗೆದು ಕೃಷ್ಣ ನನ್ನು ನುಂಗುತ್ತಾನೆ.
ತನ್ನ ಗೆಳೆಯರು ಹೆಬ್ಬಾವಿನ ಹೊಟ್ಟೆಯೊಳಗೆ ಅಚೇತನರಾಗಿ ಮಲಗಿರುವುದನ್ನು ಕಂಡ ಕೃಷ್ಣನಿಗೆ ಅಪಾಯದ ಅರಿವಾಗುತ್ತದೆ.ಕೂಡಲೇ ಆತ ದೊಡ್ಡದಾಗಿ ಬೆಳೆದು ಹೆಬ್ಬಾವಿನ ಹೊಟ್ಟೆಯನ್ನು ಸೀಳುತ್ತಾನೆ.ಮತ್ತು ತನ್ನ ಗೆಳೆಯರನ್ನು ಅಲ್ಲಿಂದ ಹೊರ ತರುತ್ತಾನೆ.ಹೀಗೆ ಕೃಷ್ಣ ಅಘಾಸುರ ನನ್ನು ವಧಿಸುತ್ತಾನೆ.

Monday, December 13, 2010

ಲವಣಾಸುರ ವಧೆ

                                               ಲವಣಾಸುರ ವಧೆ
ರಾಮನು ಪಟ್ಟಕ್ಕೆ ಬಂದ ಮೇಲೆ ಆತನ ರಾಜ್ಯದಲ್ಲಿ ಎಲ್ಲೆಲೂ ಶಾಂತಿ ನೆಲೆಸಿತ್ತು.ಆದರೆ ಲವಣಾಸುರ ಎಂಬ ರಾಕ್ಷಸನು ರಾಮರಾಜ್ಯದಲ್ಲಿ ಪ್ರಜೆಗಳಿಗೆ ಕಿರುಕುಳ ನೀಡುತ್ತಿದ್ದ.ಅಷ್ಟೇ ಅಲ್ಲದೆ ಸಾಧುಗಳು ಯಾಗ ಮಾಡುವಾಗ ಅದಕ್ಕೆ ಅಡ್ಡಿ ಉಂಟು ಮಾಡುವುದು,ಪ್ರಶ್ನಿಸಿದರೆ ಅವರನ್ನೇ ತಿನ್ನುವುದು ಹೀಗೆಲ್ಲ ಮಾಡುತ್ತಿದ್ದ.ಇದರಿಂದ ನೊಂದ ಸಾಧುಗಳು ರಾಮನ ಬಳಿ ಬಂದು ಸಹಾಯಕ್ಕಾಗಿ ಮೊರೆ ಇಟ್ಟರು. ಮತ್ತು ರಾಮ ಅವರಿಗೆ ಅಭಯವನ್ನಿತ್ತ.
ಲವಣಾಸುರ ನು ಮಧು ಎಂಬ ಅಸುರ ರಾಜನ ಮಗ.ಈ ಮಧುವು ತನ್ನ ಒಳ್ಳೆ ಗುಣದಿಂದ ದೇವತೆಗಳ ಮಿತ್ರನಾಗಿದ್ದ.ಅವನ ಒಳ್ಳೆ ಗುಣಕ್ಕೆ ಮೆಚ್ಚಿ ಸಾಕ್ಷಾತ್ ಪರಶಿವನೇ ತನ್ನ ತ್ರಿಶೂಲವನ್ನು ಅವನಿಗೆ ನೀಡಿದ್ದ.ಆದರೆ ಆತನ ಮಗನಾದ ಲವಣ ನು ಆತನ ವಿರುದ್ಧ ಗುಣಗಳನ್ನು ಹೊಂದಿದ್ದ.ಚಿಕ್ಕವನಿರುವಾಗಲೇ ಲವಣ ನು ತನ್ನ ಸಹಪಾಥಿಗಳನ್ನು ಕೊಂದು ತಿನ್ನುತ್ತಿದ್ದ.ಮತ್ತು ಎಲ್ಲರಿಗೂ ಭೀತಿ ಉಂಟು ಮಾಡುತ್ತಾ ಬೆಳೆದ.
ಇದೆ ಕೊರಗಿನಲ್ಲಿ ಮಧುವು ಕೊನೆ ಉಸಿರೆಳೆಯುತ್ತಾನೆ.ಆಮೇಲೆ ಲವಣ ನು ಪಟ್ಟಕ್ಕೆ ಬರುತ್ತಾನೆ ಮತ್ತು ತನ್ನ ತಂದೆಯು  ಶಿವನಿಂದ ಉಡುಗೊರೆಯಾಗಿ ಪಡೆದಿದ್ದ ತ್ರಿಶೂಲವನ್ನು ತನ್ನದಾಗಿ ಮಾಡಿಕೊಂಡು ಎಲ್ಲ ರಾಜರನ್ನು ಸೋಲಿಸುತ್ತ ಬರುತ್ತಾನೆ.ಇದನ್ನರಿತ ರಾಮನು ಲವಣ ನ ಜೊತೆ ಯುದ್ಧಕ್ಕೆ ಭರತ ನನ್ನು ಕಳುಹಿಸಲು ಯೋಚಿಸುತ್ತಾನೆ.ಇದನ್ನರಿತ ರಾಮನ ಇನ್ನೋರ್ವ ತಮ್ಮ ಶತ್ರುಘ್ನ ತನಗೂ ರಾಮ ಸೇವೆ ಮಾಡಲು  ಅವಕಾಶ ಮಾಡಿ ಕೊಡಲು ಪ್ರಾರ್ಥಿಸುತ್ತಾನೆ.ಮತ್ತು ಅದಕ್ಕೆ ರಾಮ ಒಪ್ಪುತ್ತಾನೆ.
ಹೀಗೆ ಶತ್ರುಘ್ನ ಲವಣಾಸುರ ನ ಜೊತೆ ಯುದ್ಧ ಮಾಡಲು ತೆರಳುತ್ತಾನೆ.ಲವಣಾಸುರ ಬೇಟೆಯಿಂದ ವಾಪಸ್ಸಾಗುವ ಸಮಯದಲ್ಲಿ ಶತ್ರುಘ್ನ ಲವಣಾಸುರ ನ ಮೇಲೆ ಯುದ್ಧ ಸಾರುತ್ತಾನೆ.ತನ್ನ ಬಳಿ ಇರುವ ತ್ರಿಶೂಲದಿಂದ ಕೊಬ್ಬಿದ ಲವಣ ಯುದ್ಧಕ್ಕೆ ಬರುತ್ತಾನೆ.ಆಗ ವಿಷ್ಣುವೇ ದಯಪಾಲಿಸಿದ ಒಂದು ಬಾಣ ವನ್ನು ಉಪಯೋಗಿಸಿ ಶತ್ರುಘ್ನ ಲವಣಾಸುರ ನನ್ನು ಕೊಲ್ಲುತ್ತಾನೆ.
ಆ ನಂತರ ರಾಮನು ಶತ್ರುಘ್ನ ನನ್ನು ಲವಣಾಸುರ ನ ರಾಜ್ಯಕ್ಕೆ ಅಧಿಪತಿಯಾಗಿ ಮಾಡುತ್ತಾನೆ.

Sunday, December 12, 2010

ಅಹಿರಾವಣ ವಧೆ

                                           ಅಹಿರಾವಣ ವಧೆ
ರಾಮಾಯಣ ಕಾಲದಲ್ಲಿ ಅಹಿರಾವಣ ಎಂಬ ರಾಕ್ಷಸನು ರಾವಣ ನ ತಮ್ಮನಾಗಿದ್ದ  ಮತ್ತು ಆತ ಪಾತಾಳ ಲೋಕದ ಅಧಿಪತಿಯಾಗಿದ್ದ.ರಾಮ - ಲಕ್ಷ್ಮಣ ರು ಯುದ್ಧದಲ್ಲಿ ರಾವಣನ ಮಗನಾದ ಇಂದ್ರಜಿತ್ ನನ್ನು ಕೊಲ್ಲುತ್ತಾರೆ.ಇದು ರಾವಣನಿಗೆ ಗೊತ್ತಾಗಿ ಆತ ರಾಮ-ಲಕ್ಷ್ಮಣ ರನ್ನು ಕೊಲ್ಲಲು ಅಹಿರಾವಣನ ಸಹಾಯ ಯಾಚಿಸುತ್ತಾನೆ.ಇದು ರಾಮ ಭಕ್ತನಾದ ವಿಭೀಷಣ ನಿಗೆ ಹೇಗೋ ಗೊತ್ತಾಗಿ ಆತ ರಾಮನಿಗೆ ವಿಷಯ ತಿಳಿಸುತ್ತಾನೆ.
ಆಗ ರಾಮ ತನ್ನನ್ನು ಮತ್ತು ಲಕ್ಷ್ಮಣ ಮಲಗಿದ್ದಾಗ ಕಾಯಲು ಹನುಮಂತ ನನ್ನು ನೇಮಿಸುತ್ತಾನೆ.ಹನುಮಂತ ಅಹಿರಾವಣನು ಕೋಣೆ ಒಳಗೆ ಪ್ರವೇಶಿಸಲು ಬಿಡುವುದಿಲ್ಲ.ಇದರಿಂದ ಹತಾಶನಾದ ಅಹಿರಾವಣ ವಿಭೀಷಣ ನ ಹಾಗೆ ವೇಷ ಬದಲಿಸಿಕೊಂಡು ಬರುತ್ತಾನೆ ಮತ್ತು ಕೋಣೆ ಒಳಗೆ ಪ್ರವೇಶಿಸಿ ರಾಮ-ಲಕ್ಷ್ಮಣ ರನ್ನು ಪಾತಾಳ ಲೋಕಕ್ಕೆ ಅಪಹರಿಉತ್ತಾನೆ.
ಇದರಿಂದ ಕ್ರೋಧನಾದ ಹನುಮಂತ ಪಾತಾಳ ಲೋಕಕ್ಕೆ ಪ್ರವೇಶಿಸುತ್ತಾನೆ.ಆಗ ಅಲ್ಲಿ ದ್ವಾರಪಾಲಕನಾಗಿ ಒಂದು ಮಂಗ ಕುಳಿತಿರುತ್ತದೆ.ಅಚ್ಚರಿಗೊಂಡ ಹನುಮಂತ ಅದಾರೆಂದು ಕೇಳಲು ತಾನು ಹನುಮಂತನ ಮಗ ಎಂದು ಹೇಳುತ್ತದೆ.ಹನುಮಂತನಾದರೋ ಬ್ರಹ್ಮಚಾರಿ.ಆತನಿಗೆ ಕಳವಳವಾಗುತ್ತದೆ.
ಆಗ ಮಂಗ ಹನುಮಂತ ಲಂಕೆಗೆ ಹೋಗಲು ಸಮುದ್ರೋಲ್ಲಂಘನ ಮಾಡುತ್ತಿದ್ದಾಗ ಆತನ ಬೆವರ ಹನಿಯಿಂದ ತಾನು ಹುಟ್ಟಿದ್ದು ಎಂದು ತಿಳಿಸುತ್ತದೆ.ಸಾಕ್ಷಾತ್ ಹನುಮಂತ ನನ್ನೇ ಕಂಡು ಆತನನ್ನು ಒಳಗೆ ಬಿಡಲು ಒಪ್ಪುತ್ತದೆ ಮತ್ತು ಅಹಿರಾವಣ ನ ಪ್ರಾಣವು ೫ ದಿಕ್ಕುಗಲ್ಲಿ ದುಂಬಿ ರೂಪದಲ್ಲಿ ಇರಿಸಲ್ಪಟ್ಟಿದೆ ಎಂದೂ ,ದುಂಬಿಗಳನ್ನು  ಕೊಂದರೆ  ಅಹಿರಾವಣನನ್ನು ಸಂಹರಿಸ ಬಹುದೆಂದು ಉಪಾಯ ಹೇಳುತ್ತದೆ.
ಆಗ ಹನುಮಂತ ಪಂಚಮುಖಿ ಹನುಮಂತ ನಾಗಿ ಬದಲಾಗುತ್ತಾನೆ ಮತ್ತು ಆ ದುಂಬಿಗಳನ್ನು ಕೊಂದು ಅಹಿರಾವಣ ನನ್ನೂ  ಕೊಲ್ಲುತ್ತಾನೆ.
ಮತ್ತು ರಾಮ-ಲಕ್ಷ್ಮಣರನ್ನು ಮತ್ತೆ ಲಂಕೆಗೆ ಕರೆತರುತ್ತಾನೆ.

ಕೃಷ್ಣ ಮುರಾರಿ ಮತ್ತು ಮುಕುಂದ ಆದ ಬಗೆ

                                                  ಕೃಷ್ಣ ಮುರಾರಿ ಮತ್ತು ಮುಕುಂದ ಆದ ಬಗೆ
ಕೃಷ್ಣನಿಗೆ ಮುರಾರಿ ಎನ್ನುವ ಹೆಸರಿದೆ.ಮುರಾರಿ ಎಂದರೆ ಮುರ + ಅರಿ.ಅಂದರೆ ಹಿಂದೆ ಮುರ ಮಾಖಿಳನ್ ಎಂಬ ರಾಕ್ಷಸನ್ನು ಕೃಷ್ಣ ಕೊಂದ ಕಾರಣ ಮತ್ತು ಕೃಷ್ಣ ಮುರ ರಾಕ್ಷಸನಿಗೆ ಅರಿ ಅಂದರೆ ವೈರಿಯಾದ ಕಾರಣ ಕೃಷ್ಣನಿಗೆ ಮುರಾರಿ ಎನ್ನುವ ಹೆಸರು ಬಂತು.
ಮುಕುಂದ ಎಂದರೆ ಮುಕ್ತಿಯನ್ನು ನೀಡುವವನು.ಆತನೇ ಮುಕುಂದ ಅಂದರೆ ಕೃಷ್ಣ.

Saturday, December 11, 2010

ಕೃಷ್ಣನು ಗೋವಿಂದ ಮತ್ತು ಗೋಪಾಲ ಆದ ಬಗೆ

                        ಕೃಷ್ಣನು ಗೋವಿಂದ ಮತ್ತು ಗೋಪಾಲ ಆದ ಬಗೆ
ಕೃಷ್ಣನು ಗೋಕುಲದಲ್ಲಿ ಬೆಳೆಯುತ್ತಿದ್ದನು.ಆತ ವಸುದೇವನ ಮಗನಾಗಿ ವಾಸುದೇವ ಎಂದು ಕರೆಯಲ್ಪಡುತ್ತಾನೆ.ಮತ್ತು ಗೋಕುಲದಲ್ಲಿ ಆತ ಗೋವುಗಳನ್ನು ಮೇಯಿಸಲು ಯಮುನಾ ನದಿ ತೀರಕ್ಕೆ ಕರಕೊಂಡು ಹೋಗುತ್ತಿದ್ದನು.ಇದರಿಂದಾಗಿ ಅವನಿಗೆ ಗೋವಿಂದ ಮತ್ತು ಗೋಪಾಲ ಎಂಬ ಹೆಸರುಗಳು ಬಂದವು.ಸಂಸ್ಕೃತ ಮತ್ತು ಅನೇಕ ಭಾರತೀಯ ಭಾಷೆಗಳಲ್ಲೂ ಸಹ ಗೋವು ಅಂದರೆ ದನ ಹಾಗು ದನದ ಜಾತಿಗೆ ಸೇರಿದ ಜಾನುವಾರು ಎಂದರ್ಥ.

Friday, December 10, 2010

ಮುಚುಕುಂದನ ಕಥೆ

                                                ಮುಚುಕುಂದನ ಕಥೆ
ಬಹಳ ಹಿಂದೆ ಭೂಮಿಯನ್ನು ಮುಚುಕುಂದ ಎಂಬ ರಾಜನು ಆಳುತ್ತಿದ್ದ.ಆತ ಧರ್ಮ ಪರಿಪಾಲಕನಾಗಿದ್ದು ದೇವತೆಗಳ ಮಿತ್ರನಾಗಿದ್ದ.ಹೀಗಿರಲು ಒಂದು ದಿನ ರಾಕ್ಷಸರು ದೇವತೆಗಳ ಮೇಲೆ ಧಾಳಿ ಮಾಡಿದರು.ಆಗ ದೇವತೆಗಳು ಮುಚುಕುಂದನ ಸಹಾಯ ಯಾಚಿಸಿದರು.ಮುಚುಕುಂದ ಅವರಿಗೆ ಸಹಾಯ ಮಾಡಲು ಒಪ್ಪಿ ದೇವತೆಗಳ ಜೊತೆಗೆ ತೆರಳಿದ.
ಆ ಯುದ್ಧ ಸಹಸ್ರಾರು ವರುಷಗಳ ತನಕ ನಡೆಯಿತು.ಆಗ ಭೂಲೋಕದಲ್ಲಿ ದ್ವಾಪರ ಯುಗ ಪ್ರಾರಂಭವಾಗಿತ್ತು,ಮತ್ತು ಅದು ಶ್ರೀಕೃಷ್ಣ ಅವತಾರದ ಪುಣ್ಯಕಾಲ.ಯುದ್ಧದಲ್ಲಿ ಮುಚುಕುಂದ ತೀವ್ರವಾಗಿ ದಣಿದಿದ್ದ ಮತ್ತು ಯುದ್ಧದಲ್ಲಿ ದೇವತೆಗಳಿಗೆ ಜಯ ಉಂಟಾಯಿತು.ತಮಗಾಗಿ ತಮ್ಮ ಜೊತೆ ಬಂದ ಮುಚುಕುಂದನಿಗೆ ದೇವತೆಗಳು ವರವನ್ನು ನೀಡಲು ಮುಂದಾದರು.
ಆದರೆ ಮುಚುಕುಂದ ತೀವೃವಾಗಿ ದಣಿದ ಕಾರಣ ಆತ ವಿಶ್ರಾಂತಿ ಪಡೆಯಲು ಇಚ್ಚಿಸಿದ.ಇದಕ್ಕೆ ಸರಿ ಎಂದ ದೇವತೆಗಳು ಯಾರಾದರು ಮುಚುಕುಂದನ ವಿರಾಮಕ್ಕೆ ಭಂಗ ತಂದರೆ ಅವರು  ಅಲ್ಲೇ ಸುಟ್ಟು ಬೂದಿಯಾಗಲಿ ಎಂದು ಹರಸಿದರು.ಮುಚುಕುಂದ ಭೂಲೋಕಕ್ಕೆ ಮರಳಿದ ಮತ್ತು ಒಂದು ಗುಹೆಯಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ.
ಆಗ ಕಂಸನು ಬಾಲಕ ಶ್ರೀಕೃಷ್ಣನನ್ನು ಕೊಲ್ಲಲು ಕಾಲಯವನ ಎಂಬ ರಾಕ್ಷಸನ್ನು ಕಳುಹಿಸುತ್ತಾನೆ.ಕಾಲಯವನನಿಗೂ ಕೃಷ್ಣನಿಗೂ ಭಯಂಕರ ಯುದ್ಧವಾಗುತ್ತದೆ, ಆಗ ಯುದ್ಧದ ಅಂತ್ಯವನ್ನು ಅರಿಯದೆ ಶ್ರೀಕೃಷ್ಣನಿಗೆ ಮುಚುಕುಂದನ ನೆನಪಾಗುತ್ತದೆ.ಕೂಡಲೇ ಆತ ಕಾಲಯವನನಿಂದ ತಪ್ಪಿಸಿಕೊಂಗು ಮುಚುಕುಂದ ಇರುವ ಗುಹೆಗೆ ಹೋಗಿ ಅಲ್ಲಿ ಅದಗುತ್ತಬೆ.
ಕಾಲಯವನನೂ ಕೃಷ್ಣನ ಹಿಂದೆ ಓಡಿ ಬರುತ್ತಾನೆ ಮತ್ತು ಅಲ್ಲಿ ಮಲಗಿದ್ದ ಮುಚುಕುಂದನನ್ನೇ ಕೃಷ್ಣ ಎಂದು ಭಾವಿಸಿ ಅವನಿಗೆ ಹೊಡೆಯುತ್ತಾನೆ.ಇದರಿಂದ ಎಚ್ಚರಗೊಂಡ ಮುಚುಕುಂದ ಕಣ್ಣು ಬಿಡಲು ಅಲ್ಲೇ ನಿಂತಿದ್ದ ಕಾಲಯವನ ಕಣ್ಣಿಗೆ ಬೀಳುತ್ತಾನೆ ಮತ್ತು ಕಾಲಯವನ ಮುಚುಕುಂದನ ವರ ಪ್ರಭಾವದಿಂದ ಅಲ್ಲೇ ಸತ್ತು ಕೆಳಗೆ ಬೀಳುತ್ತಾನೆ.ಹೀಗೆ ಕಾಲಯವನ ರಾಕ್ಷಸನ ಅಂತ್ಯವಾಗುತ್ತದೆ.
ಆಗ ಕೃಷ್ಣ ಅಡಗಿದ್ದ ಜಾಗದಿಂದ ಹೊರಬಂದು ತನ್ನ ಭಕ್ತನಾದ ಮುಚುಕುಂದನಿಗೆ ಮೋಕ್ಷವನ್ನು ಕರುಣಿಸುತ್ತಾನೆ.

ಕೃಷ್ಣ ಜನಾರ್ದನ ಆದ ಬಗೆ

                                                     ಕೃಷ್ಣ ಜನಾರ್ದನ ಆದ ಬಗೆ
ಕೃಷ್ಣನು ತನ್ನ ಜೀವಿತಾವಧಿಯಲ್ಲಿ ದುಷ್ಟರ ಜೊತೆ ಸೆಣಸು ಮಾಡುತ್ತಾ,ತನ್ನನ್ನು ಕೊಲ್ಲಲು ಕಂಸ ಕಳುಹಿಸಿದ ದುಷ್ಟ ರಾಕ್ಷಸರ ಜೊತೆ ಕಾದಾಡುತ್ತ ಇದ್ದನು.ನಂತರ ಯುದ್ಧದಲ್ಲಿ ಪಾಂಡವರ ಜೊತೆಗಿದ್ದು,ಅರ್ಜುನನ ಸಾರಥಿಯಾಗಿ ಆತನಿಗೆ ಮಾರ್ಗದರ್ಶನವನ್ನು ನೀಡುತಿದ್ದ.ಹೀಗಿರುವಾಗಲೇ ಒಮ್ಮೆ ಅರ್ಜುನ ಯುದ್ಧದಲ್ಲಿ ಕೃಷ್ಣನ ನೆರವಿನಿಂದ ವಿಜಯಿಯಾದಾಗ ಆತನ ಸ್ತುತಿ ಮಾಡುತ್ತಾನೆ.ಆಗ ಅರ್ಜುನ ಕೃಷ್ಣನನ್ನು "ಜನಾರ್ದನ" ಎಂದು ಕರೆಯುತ್ತಾನೆ.ಇದರ ಅರ್ಥ "ಯಾರು ದುಷ್ಟ ಜನರಿಗೆ ಸಂಕಟ ಪ್ರಾಯವಾಗಿದ್ದಾನೋ ", ಮತ್ತು "ಯಾರಲ್ಲಿ ಜನರು ಯಶಸ್ಸನ್ನು ಮತ್ತು ಜಯವನ್ನು ಕೊಡಲಿ ಎಂದು ಪ್ರಾರ್ಥಿಸುತ್ತರೋ ಅವನು"ಎಂಬುದೇ ಇದರರ್ಥ.ಜನಾರ್ದನ ಎಂಬುದು ವಿಷ್ಣು ಸಹಸ್ರನಾಮ  ದಲ್ಲಿ ಬರುವ ವಿಷ್ಣುವಿನ ೧೨೬ ನೆ ಹೆಸರಾಗಿದೆ.

Thursday, December 9, 2010

ಕೃಷ್ಣನು ಕೇಶವನಾದ ಬಗೆ

                                          ಕೃಷ್ಣನು ಕೇಶವನಾದ ಬಗೆ
 ಹಿಂದೆ ಕೃಷ್ಣನು ಗೋಕುಲದಲ್ಲಿ ಬೆಳೆಯುತ್ತಿದ್ದಾಗ ಆತನೇ ತನ್ನ ಮೃತ್ಯು ಎಂದು ಅರಿತ ಕಂಸ ಕೃಷ್ಣನನ್ನು ಕೊಲ್ಲಲು ತನ್ನ ಬಂಟರಾದ ರಾಕ್ಷಸರನ್ನು ಕಳುಹಿಸುತ್ತಾನೆ.ಹಾಗೆಯೇ ಕಂಸ ಕೇಶಿ ಎಂಬ ರಾಕ್ಷಸನನ್ನು ಕೃಷ್ಣ ಸಂಹಾರಕ್ಕಾಗಿ ಕಳುಹಿಸುತ್ತಾನೆ.ಕೇಶಿ ರಾಕ್ಷಸನಿಗೆ ಉದ್ದವಾದ ಕೂದಲು ಇರುವುದರಿಂದ ಆತನಿಗೆ ಆ ಹೆಸರು ಬಂದಿದೆ.
ಕೇಶಿ ರಾಕ್ಷಸನು ಕುದುರೆಯ  ರೂಪದಲ್ಲಿ ಗೋಕುಲಕ್ಕೆ ಬರುತ್ತಾನೆ.ಕೃಷ್ಣನು ಇನ್ನು ಬಾಲಕ.ಆತನಿಗೆ ಇದು ಕುದುರೆಯ ವೇಷದಲ್ಲಿ ಬಂದ ರಾಕ್ಷಸ ಎಂಬುದರ ಅರಿವಾಗುತ್ತದೆ.ಕೃಷ್ಣನು ಆ ಕುದುರೆಯನ್ನು ಕೊಲ್ಲುತ್ತಾನೆ.ಅಂತೆಯೇ ಕೇಶಿ ರಾಕ್ಷಸನನ್ನು ಸಹ.ಹೀಗಾಗಿ ಕೃಷ್ಣನಿಗೆ "ಕೇಶವ"  ಎಂಬ ಹೆಸರು ಬಂತು.

ತುಳಸಿಯ ಹುಟ್ಟು

                                                               ತುಳಸಿಯ ಹುಟ್ಟು
ತುಳಸಿಯು ಜಲಂಧರ ಎನ್ನುವ ರಾಕ್ಷಸನ ಹೆಂಡತಿ.ಆಕೆ ಮಹಾ ಪತಿವ್ರತೆ.ಆಕೆಯ ಪಾತಿವೃತ್ಯ್ಯದಿಂದ ಜಲಂಧರನು ಅಜೇಯನಾಗಿರುತ್ತಾನೆ.ಆದರೆ ಜಲಂಧರನು ಸಾಕ್ಷಾತ್ ಶಿವ ಮತ್ತು ಸಮುದ್ರದ ಸಂಯೋಗದಿಂದ ಹುಟ್ಟಿದವನು.ಆದರೆ ಆತ ಇದರ ಅರಿವಿಲ್ಲದೆ
ಪಾರ್ವತಿಯ ಬಳಿ ಮೋಹಗೊಳ್ಳುತ್ತಾನೆ ಮತ್ತು ಶಿವನ ಬಳಿ ಆಕೆಯನ್ನು ತನಗೆ ಒಪ್ಪಿಸುವಂತೆ ಹೇಳುತ್ತಾನೆ.
ಆದರೆ ಶಿವ ಇದಕ್ಕೆ ನಿರಾಕರಿಸಿದಾಗ ಸಿಟ್ಟಿಗೆದ್ದ ಜಲಂಧರ ಶಿವನ ಮೇಲೆ ಯುದ್ಧಕ್ಕೆ ನಿಲ್ಲುತ್ತಾನೆ.ತುಳಸಿಯ ಪಾತಿವ್ರತ್ಯದಿಂದ ಶಿವನಿಗೆ ಆತನನ್ನು ಗೆಲ್ಲಲು ಆಗುವುದಿಲ್ಲ.ಆಗ ವಿಷ್ಣುವು ಜಲಂಧರನ ವೇಷದಲ್ಲಿ ಬಂದು ತುಳಸಿಯ ಪಾತಿವ್ರತ್ಯ ವನ್ನು ಭಂಗ ಗೊಳಿಸುತ್ತಾನೆ.ಆಗ ಅತ್ತ ಶಿವ ಜಲಂಧರ ನನ್ನು ಕೊಲ್ಲುತ್ತಾನೆ.
ಇದನ್ನು ತಿಳಿದ ತುಳಸಿಗೆ ತನಗಾದ ಮೋಸದ ಅರಿವಾಗಿ ಆಕೆ ಸಿಟ್ಟಿಗೆದ್ದು ವಿಷ್ಣುವಿಗೆ ಶಾಪ ನೀಡಲು ಸಿದ್ಧಳಾಗುತ್ತಲೇ ವಿಷ್ಣುವು ಆಕೆಯನ್ನು ಸಮಾಧಾನಪಡಿಸಿ ಆಕೆಯ ಸಾವಿನ ನಂತರ ಆಕೆಯ ಗೋರಿಯ ಮೇಲೆ ಒಂದು ಗಿಡವು ಹುಟ್ಟುತ್ತದೆಯೆಂದೂ,ಮತ್ತು ಆ ಗಿಡದ ಎಲೆಗಳಿಂದ (ತುಳಸಿ ಎಲೆಗಳಿಂದ)ಮಾಡಿದ ಮಾಲೆಯು ತನಗೆ ಪ್ರಿಯವಾಗುವುದೆಂದು ವರ ನೀಡುತ್ತಾನೆ.
ಹೀಗಾಗಿ ವಿಷ್ಣುವಿಗೆ ತುಳಸಿ ಅರ್ಚನೆ ಮತ್ತು ತುಳಸಿ ಮಾಲೆ ತುಂಬಾ ಪ್ರಿಯವಾದದ್ದು.ತುಳಸಿ ಯ ವೃಂದಾವನ ಮನೆಯ ಮುಂದಿದ್ದಾರೆ ಶುಭ ಎನ್ನುವುದು ಹಿಂದೂಗಳ ನಂಬಿಕೆ.

Wednesday, December 8, 2010

ತಾರಕಾಸುರ ವಧೆ

                                                 ತಾರಕಾಸುರ ವಧೆ
ತಾರಕಾಸುರ ಎನ್ನುವ ರಾಕ್ಷಸನು ದೇವತೆಗಳಿಗೆ ಕಂಟಕ ಪ್ರಾಯನಾಗಿದ್ದನು.ಆತ ತುಂಬಾ ಸಲ ದೇವತೆಗಳ ಮೇಲೆ ಧಾಳಿ ಮಾಡಿ ಅವರ ಸೋಲಿಗೂ ಕಾರಣನಾಗಿದ್ದ.ಆತನಿಗೆ ಇದ್ದ  ಒಂದು ವರದ  ಸಹಾಯದಿಂದ ಆತ ಇಷ್ಟೆಲ್ಲಾ ಅನಾಹುತಕ್ಕೆ ಕಾರಣನಾಗಿದ್ದ.ಆ ವರವೇನೆಂದರೆ ಆಜನ್ಮ ಬ್ರಹ್ಮಚಾರಿಯಾದ ಶಿವನ ಮಗನಿಂದಲೇ ತನ್ನ ಸಾವು ಬರಬೇಕು ಎಂಬುದು.
ಆದರೆ ಆತನ ಉಪಟಳ ಸಹಿಸಲಾರದ ದೇವತೆಗಳು ಮನ್ಮಥನ ಸಹಾಯವನ್ನು ಪಡೆದು ಪಾರ್ವತಿಯ ಮನವೊಲಿಸಿದರು.ಪಾರ್ವತಿಯು ಶಿವನ ತಪೋಭಂಗ ಉಂಟುಮಾಡಲು ತೆರಳಿದಳು.ಮನ್ಮಥನು ತನ್ನ ಹೂಬಾಣಗಳನ್ನು ಶಿವನ ಮೇಲೆ ಪ್ರಯೋಗಿಸಿದನು.ಶಿವನಿಗೆ ತನ್ನ ಧ್ಯಾನದಿಂದ ಎಚ್ಚರವಾಗಿ ಆತನು ಕೋಪದಿಂದ ಮನ್ಮಥನನ್ನು ನೋಡಲು ಶಿವನ ತಪಶ್ಶಕ್ತಿಯಿಂದ ಮನ್ಮಥನು ಸುಟ್ಟು ಬೂದಿಯಾಗುತ್ತಾನೆ.
ಆದರೆ ಪಾರ್ವತಿಯು ಶಿವನ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಾಳೆ.ಅವರಿಂದಾಗಿ ಕಾರ್ತಿಕೇಯ ನ ಜನನವಾಗುತ್ತದೆ.ಕಾರ್ತಿಕೇಯನು ತಾರಕಾಸುರನ ಜೊತೆ ಯುದ್ಧ ಮಾಡಿ ಅವನ ಸಂಹಾರ ಮಾಡುತ್ತಾನೆ.
ಹೀಗೆ ಶಿವನ ಮಗನಾದ ಕಾರ್ತಿಕೇಯನಿಂದ ತಾರಕಾಸುರನ ಸಂಹಾರವಾಗುತ್ತದೆ.

Tuesday, December 7, 2010

ಮನುಷ್ಯನ ಆಸೆಗೆ ಮಿತಿಯೇ ಇಲ್ಲ

                                                            ಯಯಾತಿಯ ಕಥೆ
ಬಹಳ ಹಿಂದೆ ಯಯಾತಿ ಎನ್ನುವ ಒಬ್ಬ ರಾಜ ಭೂಮಿಯನ್ನು ಆಳುತಿದ್ದ.ಆತನಿಗೆ ೧೦೦ ಜನ ಹೆಂಡತಿಯರು ಮತ್ತು ೧೦೦ ಜನ ಮಕ್ಕಳು.ಆತ ಚೆನ್ನಾಗಿ ರಾಜ್ಯಭಾರವನ್ನೂ ಮಾಡುತಿದ್ದ.ಹೀಗಿರಲು ಒಂದು ದಿನ ಮೃತ್ಯು ಅವನ ಮುಂದೆ ಬಂದು ನಿಂತಿತು.ನಿನ್ನ ಆಯುಷ್ಯ ಮುಗಿಯಿತು.ನಡೆ ಹೋಗೋಣ ಎಂದಿತು.
ಆದರೆ ಯಯಾತಿಗೆ ಸಾಯಲು ಮನಸ್ಸಿರಲಿಲ್ಲ.ಆತ ಮೃತ್ಯುವಿನ ಬಳಿ ತನಗೆ ಇನ್ನೂ ಬದುಕಲು ಆಸೆ ಇರುವುದಾಗಿ ,ತನ್ನನ್ನು ಸಾಯಿಸದಂತೆ ಬೇಡಿಕೊಂಡ.ಇದಕ್ಕೆ ಒಪ್ಪಿದ ಮೃತ್ಯು ನಿನ್ನ ಬದಲಿಗೆ ಬೇರೆ ಯಾರಾದರು ತಮ್ಮ ಜೀವನವನ್ನು ತ್ಯಾಗ ಮಾಡುವುದಾದರೆ ಆದೀತು ಎಂದಿತು.ಆಗ ಯಯಾತಿಯು ತನ್ನ ಮಕ್ಕಳನ್ನು ಕರೆದು ವಿಷಯ ತಿಳಿಸಿದಾಗ ಆತನ ಮೊದಲನೇ ಮಗ ತನ್ನ ಜೀವನವನ್ನು ತಂದೆಗಾಗಿ ನೀಡಲು ಒಪ್ಪಿಕೊಂಡ.ಯಯಾತಿ ಬದುಕುಳಿದ.
ಹೀಗೆ ಪ್ರತಿ ಸಲ ಯಯಾತಿಯ ಆಯುಷ್ಯ ಮುಗಿದಾಗ ಮೃತ್ಯು ಬರುವುದೂ ಮತ್ತು ಆತನ ಮಕ್ಕಳು ತಮ್ಮ ಜೀವನವನ್ನೇ ತಂದೆಗಾಗಿ ನೀಡುವುದು ನಡೆಯಿತು.ಹೀಗೆ ಆತನ ೯೯ ಮಕ್ಕಳು ತಮ್ಮ ಜೀವನವನ್ನು ತಂದೆಗೆ ಧಾರೆ ಎರೆದರು.ಯಯಾತಿ ಸುಮಾರು ವರುಷಗಳ ತನಕ ಬದುಕಿದ.ಈಗ ಆತನ ಕೊನೆ ಮಗನ ಸರದಿ.ಆತನಿಗಿನ್ನು ೧೪ ವರುಷ.ಆದರು ಆತ ತಂದೆಗಾಗಿ ಸಾಯಲು ಮುಂದೆ ಬಂದ.
ಆದರೆ ಮೃತ್ಯುವಿಗೆ ಆತನನ್ನು ಕೊಲ್ಲಲು ಮನಸ್ಸ್ಸಾಗಲಿಲ್ಲ.
ಮೃತ್ಯು ಹೇಳಿತು ನೀನಿನ್ನೂ ಚಿಕ್ಕ ಹುಡುಗ.ಮುಂದೆ ಬಾಳಿ ಬದುಕಬೇಕಾದವನು.ನಿನ್ನನ್ನು ಹೇಗೆ ಸಾಯಿಸಲಿ? ಎಂದು ಪ್ರಶ್ನಿಸಿತು.ಆಗ ಹುಡುಗ ನನ್ನ ದೇಹಕ್ಕೆ ಮಾತ್ರ ವಯಸ್ಸಾಗದೆ ಇರಬಹುದು,ಆದರೆ ನನ್ನ ಆತ್ಮಕ್ಕೆ ವಯಸ್ಸಾಗಿದೆ.ಈ ಶರೀರ ನನಗೆ ಬೇಕಾಗಿಲ್ಲ.ನಾನು ಪರಮಾತ್ಮನ ಬಳಿ ಹೋಗಲು ಇಚ್ಚಿಸುತ್ತೇನೆ ಎಂದ!
ಇದನ್ನು ನೋಡುತ್ತಿದ್ದ ಯಯಾತಿಗೆ ತನ್ನ ಮೇಲೆಯೇ ನಾಚಿಕೆ ಉಂಟಾಯಿತು.ಮನುಷ್ಯನ ಆಸೆಗೆ ಮಿತಿಯೇ ಇಲ್ಲ ಎನ್ನುವುದರ ಅರಿವಾಯಿತು.ಮತ್ತು ಆತನು ಸಾಯಲು ಸಿದ್ಧನಾದ
ನೀತಿ:  ಮನುಷ್ಯನ ಆಸೆಗೆ ಮಿತಿಯೇ ಇಲ್ಲ..

ಮೂಕಾಸುರ ವಧೆ

                                                                ಮೂಕಾಸುರ ವಧೆ
 ಹಿಂದೆ ಅರ್ಜುನ ಪರಶಿವನನ್ನು ಪಾಶುಪತಾಸ್ತ್ರ ಕ್ಕಾಗಿ ತಪಸ್ಸು ಮಾಡುತ್ತಿದ್ದ.ಮೂಕಾಸುರ ಎನ್ನುವವನು ಕೌರವರ ಸ್ನೇಹಿತ.ಆತ ಅರ್ಜುನನ ತಪ ಭಂಗ ಉಂಟುಮಾಡಲು ಕರಡಿಯ ವೇಷದಲ್ಲಿ ಬಂದು ಅರ್ಜುನನ ಮೇಲೆ ಆಕ್ರಮಣ ಮಾಡುತ್ತಾನೆ.ಅದೇ ಸಮಯಕ್ಕೆ ಪರಶಿವನೂ ಅರ್ಜುನನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾಗುತ್ತಾನೆ.
ಆಗ ಮೂಕಾಸುರನು ಅರ್ಜುನನ ಮೇಲೆ ಧಾಳಿ ಮಾಡಲು ಬರುವುದನ್ನು ಗಮನಿಸಿದ ಪರಶಿವ ತಾನು ಬೇಡರ ವೇಷ  ಹಾಕುತ್ತಾನೆ.ಅರ್ಜುನನೂ ಕರಡಿಗೆ ಬಾಣ ಹೊಡೆಯುತ್ತಾನೆ ಅಂತೆಯೇ ಪರಶಿವನು ಸಹ.ಮೂಕಾಸುರ ಹತನಾಗುತ್ತಾನೆ.ಆಗ ಕರಡಿಯನ್ನು ಕೊಂದವರು ಯಾರು ಎಂದು ಅರ್ಜುನ ಮತ್ತು ಪರಶಿವನ ನಡುವೆ ಜಗಳ ಪ್ರಾರಂಭವಾಗಿ ಅದು ಯುದ್ಧಕ್ಕೆ ತಿರುಗುತ್ತದೆ.
ಅರ್ಜುನನ ಯುದ್ಧ ಕೌಶಲ್ಯ ದಿಂದ ಸುಪ್ರೀತನಾದ ಪರಶಿವ ತನ್ನ ನಿಜರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ ಮತ್ತು ಆತನಿಗೆ  ಪಾಶುಪತಾಸ್ತ್ರ ವನ್ನೂ ದಯಪಾಲಿಸುತ್ತಾನೆ.
ಹೀಗೆಂದು ಮಹಾಭಾರತ ದಲ್ಲಿ ಬರುವ ಕಥೆ ತಿಳಿಸುತ್ತದೆ.

Saturday, December 4, 2010

ಅಂಧಕಾಸುರ ವಧೆ

                                                  ಅಂಧಕಾಸುರ ವಧೆ          
ಅಂಧಕಾಸುರ ಎನ್ನುವ ಒಬ್ಬ ರಾಕ್ಷಸನು ಅಸುರೀ ವಂಶದಲ್ಲಿ ಹುಟ್ಟುತ್ತಾನೆ.ಆದರೆ ಆತ ಅನಾಥನಾಗಿರುವ ಕಾರಣ ಆಸುರ ರಾಜನಾದ ಹಿರನ್ಯಾಕ್ಷನು ಆತನನ್ನು ದತ್ತು ತೆಗೆದುಕೊಂಡು ಪೋಷಿಸುತ್ತಾನೆ.ಹಿರಣ್ಯಾಕ್ಷ ನ ಮರಣಾನಂತರ ಅಂಧಕಾಸುರ ಪಟ್ಟಕ್ಕೆ ಬರುತ್ತಾನೆ.ಆದರೆ ತನ್ನ ಬಂಧುಗಳು ತನ್ನ ಹತ್ಯೆಗೆ ಮುಂದಾಗಿರುವುದನ್ನು ತಿಳಿದು,ರಾಜ್ಯವನ್ನೇ ಬಿಟ್ಟರು ಕಾಡಿಗೆ ತಪಸ್ಸಿಗೆ ತೆರಳುತ್ತಾನೆ.
ಅಲ್ಲಿ ಲಕ್ಷಾಂತರ ವರುಷಗಳ ವರೆಗೆ ಒಂಟಿ ಕಾಲಲ್ಲಿ ನಿಂತು ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ.ಇದರಿಂದ ಸುಪ್ರೀತನಾದ ಬ್ರಹ್ಮ ಪ್ರತ್ಯಕ್ಷನಾಗಿ ವರ ಕೇಳುವಂತೆ ತಿಳಿಸಿದಾಗ ತನಗೆ ಮರಣವೇ ಬರಬಾರದೆಂದೂ,ಒಂದು ವೇಳೆ ತಾನು ತನ್ನ ತಾಯಿಯ ಮೇಲೆಯೇ ಕೆಟ್ಟ ಕಣ್ಣು ಹಾಕಿದಾಗ ಮಾತ್ರ ತನಗೆ ಮರಣ ಬರಬೇಕೆಂದು ಪ್ರಾರ್ಥಿಸುತ್ತಾನೆ.ಬ್ರಹ್ಮ ಅಂತೆಯೇ ವರ ನೀಡುತ್ತಾನೆ.
ಅಂಧಕಾಸುರ ತನ್ನ ರಾಜ್ಯಕ್ಕೆ ಮರಳುತ್ತಾನೆ ಮತ್ತು ಲೋಕಕಂಟಕನಾಗಿ ಬದಲಾಗುತ್ತಾನೆ.ಒಮ್ಮೆ ಶಿವ-ಪಾರ್ವತಿಯರು ಭೂಲೋಕದಲ್ಲಿ ವಿಹರಿಸುತ್ತಿದ್ದಾಗ ಅವರನ್ನು ಅಂಧಕಾಸುರನ ಭಟರು ನೋಡುತ್ತಾರೆ ಮತ್ತು ಅಂಧಕಾಸುರನಿಗೆ ಸುದ್ದಿ ತಿಳಿಸುತ್ತಾರೆ.ಅಂಧಕಾಸುರನು ಪಾರ್ವತಿಯ ರೂಪಕ್ಕೆ ಮನಸೋತು ಆಕೆಯನ್ನು ತನಗೆ ಕೊಡುವಂತೆ ಶಿವನನ್ನು ಪೀಡಿಸುತ್ತಾನೆ.ಆದರೆ ಶಿವ ಒಪ್ಪುವುದಿಲ್ಲ.
ಇದರಿಂದ ಸಿಟ್ಟಿಗೆದ್ದ ಅಂಧಕಾಸುರ ಶಿವನ ಮೇಲೆ ಯುದ್ಧ ಸಾರುತ್ತಾನೆ .ಮಿಲಿಯಗಟ್ಟಲೆ ವರುಷ ಯುದ್ಧ ನಡೆಯುತ್ತದೆ .ಕೊನೆಗೆ ಶಿವನು ತನ್ನ ತ್ರಿಶೂಲದಿಂದ ಆತನನ್ನು ಸಂಹರಿಸುತ್ತಾನೆ.ಹೀಗೆ ತನ್ನ ತಾಯಿಯಾದ ಪಾರ್ವತಿಯ ಮೇಲೆಯೇ ಕೆಟ್ಟ ಕಣ್ಣು ಹಾಕಿ ತನ್ನ ಸಾವಿಗೆ ತಾನೇ ಕಾರಣನಾಗುತ್ತಾನೆ.

Friday, December 3, 2010

ನರಕಾಸುರ ವಧೆ

                                                  ನರಕಾಸುರ ವಧೆ
ಒಮ್ಮೆ ಭೂದೇವಿ ಮತ್ತು ವಿಷ್ಣುವಿನ ಸಂಗಮದಿಂದ ಓರ್ವ ಅಸುರ ಜನ್ಮ ತಾಳುತ್ತಾನೆ.ಮತ್ತು ಆತ ನರಕಾಸುರ ಎಂಬ ಹೆಸರನ್ನು ಹೊಂದುತ್ತಾನೆ.ಅಸುರೀ ಪ್ರವೃತ್ತಿಯವನಾದ ಈತ ಒಮ್ಮೆ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ,ತನಗೆ ತನ್ನ ತಾಯಿಯಿಂದ ಮಾತ್ರವೇ ಮರಣ ಬರಬೇಕು,ಮತ್ತಾರಿಂದಲೂ ಅಲ್ಲ ಎಂಬ ವರವನ್ನು  ಪಡೆಯುತ್ತಾನೆ.
ಈ ವರದಿಂದ ದರ್ಪದಿಂದ ಕೂದಿದವನಾಗಿ ಆತ ಅಸುರೀ ರಾಜ್ಯದ ಅಧಿಪತಿಯಾಗುತ್ತಾನೆ.ಮತ್ತು ದೇವತೆಗಳ ಮೇಲೆ ಧಾಳಿ ಮಾಡುತ್ತಾನೆ.ಆತ ದೇವತೆಗಳ ತಾಯಿಯಾದ ಅದಿತಿ ಯ ಕಿವಿ ಓಲೆಗಳನ್ನೇ ಅಪಹರಿಸುತ್ತಾನೆ.ಇದರಿಂದ ದುಖಿತಳಾದ ಅದಿತಿ ತನ್ನ ಮಗನಾದ ಇಂದ್ರನ ಬಳಿ ನಡೆದದ್ದನ್ನು ತಿಳಿಸುತ್ತಾಳೆ.ಆದರೆ ಇಂದ್ರ ಈ ನರಕಾಸುರನ ಉಪಟಳದಿಂದ ಪಾರು ಮಾಡುವಂತೆ ವಿಷ್ಣುವಿನ ಬಳಿ ಮೊರೆ ಇಡುತ್ತಾನೆ.
ಆಗ ಕೃಷ್ಣನ ಅವತಾರ ಭೂಲೋಕದಲ್ಲಿ ಆಗುತ್ತಿರುತ್ತದೆ.ಹೀಗಿರುವಾಗ ಕೃಷ್ಣ ತನ್ನ ಪ್ರಿಯ ಮಡದಿಯಾದ ಸತ್ಯಭಾಮೆಯ ಜೊತೆ ಆಕಾಶದಲ್ಲಿ ವಿಹರಿಸುತ್ತಿರುತ್ತಾನೆ.ಸತ್ಯಭಾಮೆ ಸೂರ್ಯ ಮತ್ತು ಭೂಮಿಯ ಆಶೀರ್ವಾದ ದಿಂದ ಹುಟ್ಟಿದವಳು.ಗರುಡನ ಬೆನ್ನ ಮೇಲೇರಿ ಈರ್ವರೂ ವಿಹರಿಸುತ್ತಿದ್ದಾಗ ನರಕಾಸುರ ಅವರ ದಾರಿಗೆ ತಡೆ ಒಡ್ಡುತ್ತಾನೆ ಮತ್ತು ಕೃಷ್ಣ ನ ಜೊತೆ ಯುದ್ಧ ಮಾಡಲು ಆರಂಭಿಸುತ್ತಾನೆ.
ಕೃಷ್ಣ ಆತನ ಮೇಲೆ ಬಾಣಗಳ ಮಳೆಯನ್ನೇ ಸುರಿಸುತ್ತಾನೆ.ಆದರೆ ನರಕಾಸುರ ತಾನು ಪಡೆದ ವರದ ಪ್ರಭಾವದಿಂದ ಅದೆಲ್ಲವನ್ನು ನಿವಾರಿಸಿಕೊಂಡು ಸತ್ಯಭಾಮೆಯ ಮೇಲೆ ಆಕ್ರಮಣ ಮಾಡುತ್ತಾನೆ.
ಆಗ ಕೃಷ್ಣ ನರಕಾಸುರ ಪಡೆದ ವರವನ್ನು ನೆನಪಿಸಿಕೊಂಡು ಮತ್ತು ತನ್ನ ಪ್ರಿಯ ಪತ್ನಿಯಾದ ಸತ್ಯಭಾಮೆಯ ಮೇಲೆ ಆಕ್ರಮಣ ಆಗುತ್ತಿರುವುದನ್ನು ಕಂಡು ಸತ್ಯಭಾಮೆಗೆ ತನ್ನ ಸುದರ್ಶನ ಚಕ್ರವನ್ನು ನೀಡಿ ಅದನ್ನು ಅಸುರನ ಮೇಲೆ ಪ್ರಯೋಗಿಸುವಂತೆ ತಿಳಿಸುತ್ತಾನೆ.ಅಂತೆಯೇ ಮಾಡಿದ ಸತ್ಯಭಾಮೆ ಸುದರ್ಶನ ಚಕ್ರದಿಂದ ನರಕಾಸುರನ್ನು ಸಂಹರಿಸುತ್ತಾಳೆ.ಆಕೆಯೂ ಭೂದೇವಿಯ ಅಂಶದಿಂದ ಹುಟ್ಟಿದವಳೇ..ಹೀಗಾಗಿ ನರಕಾಸುರ ಪಡೆದಾ ವರದಂತೆ ಆತನ್ನು ಸಂಹರಿಸುತ್ತಾಳೆ.
ಆದಿವಸ ಲೋಕವು ಪೀದಕನಾದ ನರಕಾಸುರನಿಂದ ಮುಕ್ತಿ ಹೊಂದಿತು.ಹೀಗಾಗಿ ಆ ದಿವಸವನ್ನು "ನರಕ ಚತುರ್ದಶಿ"  ಎಂದು ವಿಶ್ವದೆಲ್ಲದೆ ಜನರು ಆಚರಿಸುತ್ತಾರೆ.

Thursday, December 2, 2010

ಶ್ರೀಕೃಷ್ಣ ತುಲಾಭಾರ

                                                        ಶ್ರೀಕೃಷ್ಣ ತುಲಾಭಾರ
ಒಮ್ಮೆ ಶ್ರೀಕೃಷ್ಣನ  ಹೆಂಡತಿಯಾದ ಸತ್ಯಭಾಮೆಗೆ ತಾನು ಶ್ರೀಕೃಷ್ಣನ ತುಲಾಭಾರ ಮಾಡಿಸಬೇಕೆಂದೂ ,ಆ ಮೂಲಕ ತಾನು ಕೃಷ್ಣನ ಮೇಲೆ ಎಷ್ಟು ಪ್ರೀತಿ ಹಾಗೂ ಭಕ್ತಿಯನ್ನು ಇಟ್ಟಿದ್ದೇನೆ ಎಂದು ಜಗತ್ತಿಗೆ ತೋರಿಸುವ ಹಂಬಲ ಉಂಟಾಯಿತು.
ಆಕೆ ತನ್ನ ಆಶೆಯನ್ನು ಕೃಷ್ಣನ ಬಳಿ ಹೇಳಿದಾಗ ಆತ ನಗುಮೊಗದಿಂದ ಒಪ್ಪಿಗೆ ಸೂಚಿಸಿದ.ಸರಿ,ತುಲಾಭಾರಕ್ಕೆ ಎಲ್ಲ ಸಿದ್ಧತೆ ನಡೆದವು.ಕೃಷ್ಣ ಬಂದು ತಕ್ಕಡಿಯ ಒಂದು ತಟ್ಟೆಯಲ್ಲಿ ಬಂದು ಕುಳಿತುಕೊಂಡ.ಸತ್ಯಭಾಮೆ ಇನ್ನೊಂದು ತಟ್ಟೆಯಲ್ಲಿ ತನ್ನ ಒಡವೆಗಳನ್ನು ಹಾಕುತ್ತ ಹೋದಳು.
ಆದರೆ ಎಷ್ಟು ಒಡವೆ ಹಾಕಿದರೂ ಕೃಷ್ಣ ನಿರುವ ತಟ್ಟೆ ಮೇಲೆ ಏಳುತ್ತಲೇ ಇಲ್ಲ.ಇದರಿಂದ ಅವಮಾನಿತಳಾದ ಭಾಮೆ ತನ್ನೆಲ್ಲ ಐಶ್ವರ್ಯ ಮತ್ತು ತನಗೆ ಸೇರಿದ ಜಾನುವಾರುಗಳನ್ನೂ ಸೇರಿಸಿ ಹಾಕಿದರೂ ಕೃಷ್ಣ ನಿರುವ ತಟ್ಟೆ ಮಾತ್ರ ಮೇಲೆ ಏಳುತ್ತಲೇ ಇಲ್ಲ
ಕೊನೆಗೆ ಈ ಸುದ್ದಿಯನ್ನು ತಿಳಿದ ಕೃಷ್ಣನ ಪಟ್ಟ ಮಹಿಷಿಯಾದ ರುಕ್ಮಿಣಿಯು ಅಲ್ಲಿಗೆ ಬಂದಳು.ಇದನ್ನೆಲ್ಲಾ ನೋಡಿದ ಅವಳಿಗೆ ಶ್ರೀಕೃಷ್ಣನ ಲೀಲೆ ಅರ್ಥವಾಯಿತು.ಕೂಡಲೇ ಒಂದು ತುಳಸಿ ದಳ ದಲ್ಲಿ ಶ್ರೀಕೃಷ್ಣನ ನಾಮವನ್ನು ಬರೆದು ಅಲ್ಲಿಗೆ ತಂದಳು.ಆಗ ಸತ್ಯಭಾಮೆ ಅವಹೇಳನದಿಂದ ನಕ್ಕು ಇಷ್ಟು ಐಶ್ವರ್ಯ ನೀಡಿದರೂ ಮೇಲೆ ಏಳದ ತಟ್ಟೆ ಒಂದು ತುಳಸಿ ದಳಕ್ಕೆ ಏಳುವುದೇ? ಎಂದು ಅಪಹಾಸ್ಯ ಮಾಡಿದಳು.
ಆದರೂ ರುಕ್ಮಿಣಿ ಕೃಷ್ಣನನ್ನೇ ಸ್ಮರಿಸುತ್ತಾ ಆ ಐಶ್ವರ್ಯ ದ ಬದಲು ತಟ್ಟೆಗೆ ತುಳಸಿ ದಳ ಹಾಕಿದಳು.ಆಗ ಕೃಷ್ಣ ನಿರುವ ತಟ್ಟೆ ಮೇಲಕ್ಕೆ ಬಂತು ಮತ್ತು ತುಳಸಿ ದಳ ದ ತಟ್ಟೆಯ ಜೊತೆ ಸಮನಾಗಿ ತೂಗಾಡಿತು.ಆಗ ಸತ್ಯಭಾಮೆಗೆ ಭಕ್ತಿ ಮುಖ್ಯವೇ ಹೊರತು ಐಶ್ವರ್ಯವಲ್ಲ ಎನ್ನುವುದರ ಅರಿವಾಗಿ ನಾಚಿಕೆಯಿಂದ ತಲೆ ತಗ್ಗಿಸಿದಳು.

Wednesday, December 1, 2010

ಪಾರಿಜಾತದ ಕಥೆ

                                                                           ಪಾರಿಜಾತದ ಕಥೆ
ಪಾರಿಜಾತ ಹೂವು ಸುಗಂಧ ಭರಿತವಾದದ್ದು.ಆದರೆ ಮೊದಲು ಆ ಹೂವು ಭೂಮಿ ಮೇಲೆ ಇರಲಿಲ್ಲ.ಅದು ಕೇವಲ ಸ್ವರ್ಗದಲ್ಲಿ ಇಂದ್ರನ ತೋಟದಲ್ಲಿ ಮಾತ್ರ ಬೆಳೆಯುತ್ತಿತ್ತು.
ಒಮ್ಮೆ ಶ್ರೀಕೃಷ್ಣ ತನ್ನ ಮಡದಿಯಾದ ಸತ್ಯಭಾಮೆ ಯ ಜೊತೆ ಆಕಾಶ ಮಾರ್ಗದಲ್ಲಿ ವಿಹರಿಸುತಿದ್ದಾಗ ಸತ್ಯಭಾಮೆಗೆ ಇಂದ್ರನ ತೋಟದಲ್ಲಿ ಬೆಳೆದ ಪಾರಿಜಾತ ಹೂವಿನ ಪರಿಮಳ ಬರುತ್ತದೆ.ಇದಕ್ಕೆ ಮನಸೋತ ಭಾಮೆ ಅದೇನೆಂದು ಕೃಷ್ಣ ನ ಬಳಿ ಕೇಳಿದಳು. ಆಗ ಕೃಷ್ಣನು ಅದು ಪಾರಿಜಾತ ಹೂವೆಂದೂ,ಇಂದ್ರನ ತೋಟದಲ್ಲಿ ಬೆಳೆದಿದೆ ಎಂದೂ ತಿಳಿಸಿದ.ಆಗ ಭಾಮೆ ಆ ಗಿಡವನ್ನು ತಮ್ಮ ತೋಟದಲ್ಲೂ ಬೆಳೆಸುವ ಇಚ್ಛೆ ವ್ಯಕ್ತಪಡಿಸಿದಳು.
ಕೃಷ್ಣ ತನ್ನ ಮೋಹದ ಮಡದಿಯ ಆಶೆಗೆ ಇಲ್ಲವೆನ್ನಲಾಗದೆ ಇಂದ್ರನ ಬಳಿ ಆ ಬಗ್ಗೆ ಕೇಳಿದಾಗ ಇಂದ್ರ ಅದು ತನ್ನ ತೋಟದಲ್ಲಿ ಮಾತ್ರ ಇರುವುದೆಂದೂ,ತಾನು ಗಿಡ ಕೊದುವುದಿಲ್ಲವೆಂದೂ ದರ್ಪದಿಂದ ನಿರಾಕರಿಸಿದ.ಆಗ ಸಿಟ್ಟಿಗೆದ್ದ ಕೃಷ್ಣ ಇಂದ್ರನ ಜೊತೆ ಯುದ್ಧ ಮಾಡಿ ,ಆತನನ್ನು ಸೋಲಿಸಿ ,ಪಾರಿಜಾತದ ಗಿಡವನ್ನು ತನ್ನೊಂದಿಗೆ ಭೂಮಿಗೆ ತರುತ್ತಾನೆ.
ಈ ಪಾರಿಜಾತ ಹೂವು ರಾತ್ರಿ ಸಮಯದಲ್ಲಿ ಅರಳಿ, ಸೂರ್ಯೋದಯ ಆಗುತ್ತಿದಂತೆ ಉದುರಿ ಕೆಳಗೆ ಬೀಳುತ್ತದೆ.ಆ ಉದುರಿದ ಹೂವನ್ನು ಬೆಳಗ್ಗೆ ತೋಟಕ್ಕೆ ಹೋದ ಬಾಲಿಕೆಯರು ತೆಗೆದುಕೊಂಡು ಬಂದು ಸುವಾಸನ ಭರಿತವಾದ ಮಾಲೆಯನ್ನು ಕಟ್ಟುತ್ತಾರೆ.ಮತ್ತು ಈ ಹೂವು ಕೃಷ್ಣನಿಗೆ ತುಂಬಾ ಪ್ರಿಯವಾದದ್ದು.
      

Sunday, November 28, 2010

ಬಿಲ್ಲಿಯ ಮಗು

                                                                    ಬಿಲ್ಲಿಯ ಮಗು
ಬಿಲ್ಲಿಗೊಂದು ಮಗು ಹುಟ್ಟಿದೆ
ಈಗ ಬಿಲ್ಲಿಯ ಜವಾಬ್ದಾರಿ ಹೆಚ್ಚಿದೆ
ಎಲ್ಲಿಗೆ ಹೋದರು ಮಗು ಇರಲೇ ಬೇಕು
ಕೊನೆಗೆ ಹಾಲು ಕದ್ದು ಕುಡಿಯಲೂ ಮಗುವಿಗೆ ಟ್ರೇನಿಂಗ ಆಗಲೇ ಬೇಕು!

ನಮ್ಮ ಬೆಕ್ಕು ಬಿಲ್ಲಿ

                                                                      ನಮ್ಮ ಬೆಕ್ಕು ಬಿಲ್ಲಿ
ನಮ್ಮ ಮನೆಯ ಬೆಕ್ಕು ಬಿಲ್ಲಿ
ಹುದುಕುತಿತ್ತು,ಕುಡಿಯಲು ಹಾಲು ಎಲ್ಲಿ?
ಹಾಲಿಗಾಗಿ  ಹುಡುಕಿ ಸೋತ ಬಿಲ್ಲಿ
ಅಂದುಕೊಂಡಿತು,"ಕೈಗೆಟುಕದ ದ್ರಾಕ್ಷಿ ಹುಳಿ"!

Saturday, November 27, 2010

ಚಾಮುಂಡಿಯ ಹುಟ್ಟು

                                                                      ಚಾಮುಂಡಿಯ ಹುಟ್ಟು
ಒಮ್ಮೆ ದೇವತೆಗಳಿಗೂ,ದಾನವರಿಗೂ ಭೀಕರ ಯುದ್ಧವಾಗಿ ದೇವತೆಗಳಿಗೆ ಸೋಲಾಯಿತು.ದಾನವರು ವಿಜಯಿಗಳಾಗಿ ದೇವತೆಗಳ ಎಲ್ಲ ಕೆಲಸವನ್ನು ತಾವೇ ಮಾಡಲು ಪ್ರಾರಂಭಿಸಿದರು.ಯಜ್ಯ-ಯಾಗಾದಿಗಳಲ್ಲಿ ಹವಿಸ್ಸನ್ನು ತಾವೇ ತೆಗೆದುಕೊಳ್ಳಲು ಪ್ರಾರಂಭಿಸಿದರು.ಮತ್ತು ದೇವತೆಗಳ ವಾಹನಗಳನ್ನು ಮತ್ತು ಅಷ್ಟ ದಿಕ್ಪಾಲಕರ ಕೆಲಸವನ್ನು ಕಸಿದುಕೊಂಡು,ದೇವತೆಗಳನ್ನು ಸ್ವರ್ಗದಿಂದ ಓಡಿಸಿದರು.
ಇದರಿಂದ ಚಿಂತಿತರಾದ ದೇವತೆಗಳು ಜಾಹ್ನವಿ ನದಿ ತೀರದಲ್ಲಿ ಕುಳಿತು ವಿಷ್ಣುವನ್ನು ಸ್ತುತಿಸಲಾರಂಭಿಸಿದರು. ಆಗ ಸ್ನಾನಕ್ಕೆಂದು ನದಿಗೆ ತೆರಳುತ್ತಿದ್ದ ಪಾರ್ವತಿಯು ಇವರನ್ನು ಗಮನಿಸಿದಳು.ಅವರ ಬಳಿ ಬಂದು ವಿಷಯವೇನೆಂದು ವಿಚಾರಿಸಿದಾಗ ದೇವತೆಗಳು ತಮ್ಮ ಕಷ್ಟವನ್ನು ವಿವರಿಸಿದರು.ಇದರಿಂದ ಕೋಪಗೊಂಡ ಪಾರ್ವತಿಯ ದೇಹದಿಂದ "ಕಾಳಿ"ಯು ಉದ್ಭವಿಸಿದಳು.ಆ ಕಾಳಿಯು ಕಪ್ಪನೆಯ ಶರೀರವನ್ನು ಹೊಂದಿದ್ದು ನೋಡಲು ಭಯಂಕರ ಆಗಿದ್ದಳು.
ಪಾರ್ವತಿಯು ಕಾಳಿಯ ಬಳಿ ಆಕೆಯ ಜನ್ಮ ರಹಸ್ಯವನ್ನು ತಿಳಿಸಿದಾಗ ಕಾಳಿಯು ದಾನವರನ್ನು ಕೊಲ್ಲಲು ಹೊರಟಳು.ಆಗ ಪಾರ್ವತಿಯು ದಾನವರೇ ನಮ್ಮ ಹತ್ತಿರ ಬರುವಂತೆ ಮಾಡಲು ಉಪಾಯವನ್ನು ಯೋಚಿಸಿದಳು.ಆಗ ದಾನವರ ಅಧಿಪತಿಯಾಗಿದ್ದವರು ಚಂಡ-ಮುಂಡ ಎಂಬ ರಾಕ್ಷಸರು.ಕಾಳಿಯು  ಸುಂದರ ರೂಪವನ್ನು ಧರಿಸಿ ಅತ್ತಿತ್ತ ಓಡಾಡುತಿದ್ದಳು.ಇದು ಆ ರಾಕ್ಷಸರ ಕಿವಿಗೆ ಬಿಟ್ಟು ಮತ್ತು ಅವರು ಆಕೆಯ ಬಳಿಗೆ ತಮ್ಮ ದೂತನನ್ನು ತಮ್ಮ ಪರವಾಗಿ ಮಾತನಾಡಲು ಕಳುಹಿಸಿದರು.
ದೂತನು ಕಾಳಿಯ ಬಳಿ ಬಂದು ವಿಷಯವನ್ನು ತಿಳಿಸಿದಾಗ ಕಾಳಿಯು "ನನ್ನ ಜೊತೆ ಯುಧ್ಧ ಮಾಡಿ ಯಾರು ವಿಜಯಿಗಳಗುವರೋ ,ಅವರನ್ನೇ ತಾನು ಮದುವೆಯಾಗಲು ಇಚ್ಚಿಸಿದುವಾಗಿ ತಿಳಿಸಿದಳು.ಇದನ್ನು ದೂತನು ಚಂಡ-ಮುಂಡ ರಾಕ್ಷಸರಿಗೆ ತಲುಪಿಸಿದನು.ತಮ್ಮ ಬಲ-ಪರಾಕ್ರಮಲಿಂದ ದೇವತೆಗಳನ್ನು ಸೋಲಿಸಿ ಮದೊನ್ಮತ್ತರಾಗಿದ್ದ ಚಂಡ-ಮುಂಡ ರು ಅದಕ್ಕೆ ಸಂತೋಷದಿಂದಲೇ ಒಪ್ಪಿದರು.
ಚಂಡ-ಮುಂದರು ಮೊದಲು ಕಾಳಿಯ ಬಳಿ ಧೂಮ್ರ ಲೋಚನ ಎಂಬ ತಮ್ಮ ಬಂಟನನ್ನು ಸೈನ್ಯದ ಸಹಿತ ಕಳುಹಿಸಿದರು.ಆದರೆ ಕಾಳಿಯು ಹೂಂಕಾರ ಮಾತ್ರದಿಂದ ಆತನನ್ನು ವಧಿಸಿದಳು ಮತ್ತು ಆತ ಕರೆ ತಂದಿದ್ದ ಸೈನ್ಯ ದಿಕ್ಕಾಪಾಲಾಗಿ ಚದುರಿತು.
ಇದನ್ನು ತಿಳಿದ ಚಂಡ=ಮುಂಡರು ತಾವೇ ಯುಧ್ಧಕ್ಕೆ ಹೊರಟರು.ಇದನ್ನು ಮೊದಲೇ ಊಹಿಸಿದ್ದ ಕಾಳಿಯು ತನ್ನ ನೈಜ ರೂಪದಲ್ಲಿ ಯುದ್ಧಕ್ಕೆ ಸಿದ್ಧವಾಗಿದ್ದಳು.ರಾಕ್ಷಸರು ಬಂದ ಕೂಡಲೇ ಅವರ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದಳು.ಘೋರ ಕದನ ನಡೆಯಿತು.ಕೊನೆಗೆ ಕಾಳಿಯು ಅವರೀರ್ವರ ತಲೆಯನ್ನು ಕತ್ತರಿಸಿ ಒಂದೊಂದು ಕೈಯಲ್ಲಿ ಹಿಡಿದುಕೊಂಡು ಪಾರ್ವತಿಯ ಬಳಿ ಬಂದಳು.
ಚಂಡ-ಮುಂಡರು ಹತರಾಗಿರುವುದನ್ನು ಕಂಡು ದೇವತೆಗಳು ಕಾಳಿಯನ್ನು ಸ್ತುತಿಸಿದರು. ಆಗ ಪಾರ್ವತಿಯು ಕಾಳಿಯ ಬಳಿ ಬಂದು ಚಂಡ-ಮುಂಡರ ಸಾವಿಗೆ ಕಾರಣಳಾದ ಕಾಳಿಯು ಇನ್ನು ಮುಂದೆ "ಚಾಮುಂಡಿ" ಎಂದು ಪ್ರಸಿದ್ಧಳಾಗುವಂತೆ ಹರಸಿದಳು.

Friday, November 26, 2010

ಮಧು-ಕೈಟಭ ವಧೆ

                                                        ಮಧು-ಕೈಟಭ ವಧೆ
ಒಮ್ಮೆ ಜಗತ್ತಿನಲ್ಲಿ ಪ್ರಳಯವಾಗಿ ಎಲ್ಲ ಮುಳುಗಿತು.ಸಕಲ ಜೀವರಾಶಿಗಳೂ ಅಳಿದು ಹೋದವು.ಈಗ
ಮತ್ತೊಮ್ಮೆ ಸೃಷ್ಟಿ ಕ್ರಿಯೆ ನಡಿಬೇಕು.ಅಗ ಭಗವಾನ್ ವಿಷ್ಣು ಯೋಗನಿದ್ರೆಗೆ ಜಾರಿದ.ಆದರೆ ಆತನ
ನಾಭಿಯಿಂದ ಹುಟ್ಟಿದ ಬ್ರಹ್ಮನು ಸೃಷ್ಟಿ ಕ್ರಿಯೆಯಲ್ಲಿ ತೊಡಗಿದ್ದ.
ಆಗ ನಿದ್ರೆಗೆ ಜಾರಿದ್ದ ವಿಷ್ಣುವಿನ ಕಿವಿಯಿಂದ ಮಧು-ಕೈಟಭ ಎಂಬ ಘೋರ ರಾಕ್ಷಸರ ಜನನವಾಯಿತು.ಆ ರಾಕ್ಷಸರು ಸೃಷ್ಟಿಕ್ರಿಯೆಯಲ್ಲಿ ತೊಡಗಿದ್ದ ಬ್ರಹ್ಮನನ್ನು ಕೊಲ್ಲಲು ಹವಣಿಸಿದರು.ಆದರೆ ವಿಷ್ಣುವು ಇನ್ನೂ ಯೋಗ ನಿದ್ರೆಯಿಂದ ಎಚ್ಚೆತ್ತಿಲ್ಲ.ಇದರಿಂದ ಚಿಂತಿತನಾದ ಬ್ರಹ್ಮನು ವಿಷ್ಣುವಿನ ಯೋಗನಿದ್ರೆಗೆ ಕಾರಣಳಾದ ಯೋಗಮಾಯೆಯನ್ನು ಸ್ತುತಿಸಿದನು.
ಇದರಿಂದ ಸಂಪ್ರೀತಳಾದ ಯೋಗಮಾಯೆ ವಿಷ್ಣುವಿನ ದೇಹದಿಂದ ಹೊರ ಬಂದಳು. ಮತ್ತು ಆಕೆ ಮಧು-ಕೈಟಭ ರಾಕ್ಷಸರ ದೇಹವನ್ನು ಹೊಕ್ಕಳು. ವಿಷ್ಣುವು ನಿದ್ರೆಯಿಂದ ಎಚ್ಚೆತ್ತು ನೋಡಲು ಮಧು-ಕೈಟಭರು ಬ್ರಹ್ಮನನ್ನೇ ಕೊಲ್ಲಲು ಹೊರಟಿರುವುದನ್ನು ಕಂಡನು.ಕೂಡಲೇ ಅವರ ಜೊತೆ ಯುಧ್ಧವನ್ನು ಪ್ರಾರಂಭಿಸಿದನು.
ಯುಧ್ಧ ಸುಮಾರು ೫,೦೦೦ ವರುಷಗಳ ತನಕ ನಡೆಯಿತು.ಆದರೆ ರಾಕ್ಷಸರು ಮಣಿಯುವ ಸೂಚನೆ ಕಾಣುತ್ತಿಲ್ಲ.ಆಗ ಯೋಗಮಾಯೆ ಮತ್ತೆ ರಾಕ್ಷಸರು ವಿಷ್ಣುವಿನಲ್ಲಿ ಮೋಹ ಗೊಳ್ಳುವಂತೆ ಮಾಡಿದಳು. ಆಗ ಆ ರಾಕ್ಷಸರು ವಿಷ್ಣುವಿಗೆ ತಾವು ಅವನಲ್ಲಿ ಪ್ರೀತಿಯಿಂದಿರಲು ಬಯಸುವುದಾಗಿ ಮತ್ತು ವರವನ್ನು ಕೇಳಲು ತಿಳಿಸಿದರು. ಆಗ ವಿಷ್ಣುವು ಅವರೀರ್ವರೂ ಈಗಲೇ ತನ್ನಿದ ಹತರಾಗಬೇಕೆಂದು ತಿಳಿಸಿದನು.ಮಾಯೆಗೆ ಒಳಗಾಗಿದ್ದ ರಾಕ್ಷಸರು ಅದಕ್ಕೆ ಒಪ್ಪಿದರು.ಆಗ ವಿಷ್ಣುವು ಅವರೀರ್ವರನ್ನೂ ಸಂಹರಿಸಿದನು.
ಹೀಗೆ ವಿಷ್ಣುವಿಗೆ "ಮಧುಸೂದನ" ಎಂಬ ಹೆಸರು ಬಂತು.

Thursday, November 25, 2010

ಸ್ನೇಹ ದೊಡ್ಡದು

                                                                  ಸ್ನೇಹ ದೊಡ್ಡದು
ಒಂದು ಕಾಡಿನಲ್ಲಿ ಒಂದು ಹುಲಿ ಮತ್ತು ಒಂದು ಒಂಟೆ ತುಂಬಾ ಸ್ನೇಹಿತರಾಗಿದ್ದವು.ಕಾಡಿನಲ್ಲಿ ಎಲ್ಲ ಪ್ರಾಣಿಗಳೂ ಆಶ್ಚರ್ಯ ಪದುತಿದ್ದವು ಇವುಗಳ ಸ್ನೇಹ ಕಂಡು.ತಮ್ಮ ಕಷ್ಟ-ಸುಖ ಎಲ್ಲವನ್ನು ಹಂಚಿಕೊಳ್ಳುತಿದ್ದವು.
ಒಮ್ಮೆ ಅವುಗಳ ಮಧ್ಯೆ ಒಂದು ಕ್ಷುಲ್ಲಕ ಕಾರಣಕ್ಕಾಗಿ ಮನಸ್ತಾಪ ಉಂಟಾಯಿತು.ಅದು ಎಲ್ಲಿವೆರೆಗೆ ಅಂದರೆ ಒಬ್ಬರ ಮುಖ  ಒಬ್ಬರು   ನೋಡಧಷ್ಟು.ಕೊನೆಗೆ ತಮ್ಮ ಜಗಳ ಪರಹರಿಸಲು ಕಾಡಿನ ರಾಜ ಸಿಂಹವೇ ಸರಿಯಾದ ವ್ಯಕ್ತಿ  ಎಂದು ನ್ಯಾಯ ಕೇಳಲು ಅದರ ಬಳಿ ಹೋದವು.
ಸಿಂಹವಾದರೋ ೩ ವಾರಗಳಿಂದ ಹೊಟ್ಟೆಗಿಲ್ಲದೆ ಗುಹೆಯಲ್ಲೇ ಕುಳಿತಿತ್ತು.ಇಗ ಒಂಟೆ ಮತ್ತು ಹುಲಿ ತಮ್ಮ ಬಳಿಗೆ ಬರುತ್ತಿರುವುದನ್ನು  ದೂರದಿಂದ ಗಮನಿಸಿದ ಸಿಂಹ ತನಗೆ ಹುಶರಿಲ್ಲವೆಂದು ನಾಟಕವಾಡುತ್ತ ಗುಹೆಯಲ್ಲೇ ಮಲಗಿತು.ಒಂಟೆ ಮತ್ತು ಹುಲಿ ಒಳಗೆ ಬಂದು ನರಳುತ್ತಿದ್ದ ಸಿಂಹವನ್ನು ನೋಡಿದವು.ತಮ್ಮ ಕಷ್ಟ ಹೇಳಲು ಇದು ಸರಿಯಾದ ಸಮಯ ಅಲ್ಲವೆಂದು ವಾಪಾಸ್ ಹೋಗುತ್ತಿದ್ದಾಗ ಸಿಂಹ ಅವುಗಳನ್ನು ಬಳಿಗೆ ಕರೆಯಿತು.
ಆಗ ಹುಲಿಯು ತನ್ನ ಸ್ನೇಹಿತನನ್ನು ಪರಿಚಯಿಸಿ ತಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇರುವುದಾಗಿಯೂ ,ಅದನ್ನು ಬಗೆಹರಿಸಬೇಕಂದು ಕೇಳಿಕೊಂಡಿತು. ಒಂಟೆಯನ್ನು ಕಡೆಗಣ್ಣಿನಿಂದ ನೋಡಿದ ಸಿಂಹ ಆಯಿತು ಎನ್ನಲು,ಹುಲಿಯು ತಮ್ಮ ಜಗಳದ ಬಗ್ಗೆ ವಿವರಿಸಲು ಶುರು ಮಾಡಿತು.ಆದರೆ ಸಿಂಹದ ಗಮನ ಒಂಟಯ. ಮೇಲೆಯೇ ಇರುವುದನ್ನು ಗಮನಿಸಿದ ಹುಲಿ ಕೇಡನ್ನು ಶಂಕಿಸಿತು.  ಆಗ ಸಿಂಹ ಒಂಟೆಯ ಮೇಲೆ ಎರಗಿತು.
ಇದನ್ನು ಮೊದಲೇ ಊಹಿಸಿದ್ದ ಹುಲಿ ಒಂಟೆಯನ್ನು ಆಚೆ ತಳ್ಳಿತು.ಇದರಿಂದ ಸಿಟ್ಟಿಗೆದ್ದ ಸಿಂಹ ಹುಲಿಯ ಮೇಲೆ ಆಕ್ರಮಣ ಮಾಡಿತು.ಒಂಟೆ ಇದರಿಂದ ಬೆಚ್ಚಿ ಬಿದ್ದು ಅಲ್ಲಿಂದ ಹೊರ ಹೋಯಿತು.ಸಿಂಹ ಮತ್ತು ಹುಲ್ಲಿಯ ನಡುವೆ ಕದನ ಶುರುವಾಗಿ ಹುಲಿಯು ಮಾರನಾನ್ತಿಕವಾದ ಗಾಯಗಳೊಂದಿಗೆ ಹೊರ ಬಂದಿತು.
ಅಲ್ಲೇ ನಿಂತಿದ್ದ ಒಂಟೆಯನ್ನು ಕಂಡು ಅಲ್ಲಿಂದ ಓದಿ ಹೋಗಲು ತಿಳಿಸಿತು.ಆದರೆ ಒಂಟೆ ತನ್ನ ಸಲುವಾಗಿ ಆಪತ್ತನ್ನು ಮ್ಯೆ ಮೇಲೆ ಎಲೆದುಕೊಂದದ್ದು ಯಾಕೆ ಎಂದು ಪ್ರಶ್ನಿಸಲು ಹುಲಿ ತಮ್ಮ ಗೆಲೆತನಕ್ಕಾಗಿ ಹೀಗೆಲ್ಲ ಮಾಡಿದ್ದಾಗಿ ತಿಳಿಸಿತು.ಆಗ ಒಂಟೆ "ಸ್ನೇಹಕ್ಕಿಂತ ದೊಡ್ದು ಯಾವೂದು ಇಲ್ಲ" ಎಂದು ಅರಿಯಿತು.