Saturday, February 12, 2011

ಸ್ವರ್ಗ-ನರಕ

                                          ಸ್ವರ್ಗ-ನರಕ
ಸ್ವರ್ಗ ಮತ್ತು ನರಕದ ಇರುವಿಕೆಯನ್ನು  ಕಂಡವರಿಲ್ಲ.ಆದರೂ ಇಲ್ಲೊಂದು ಕಥೆ ಅದರ ಬಗ್ಗೆ ಹೇಳುತ್ತದೆ.
ಬಹಳ ಹಿಂದೆ ಓರ್ವನಿಗೆ ಸ್ವರ್ಗ ಮತ್ತು ನರಕಗಳು ನಿಜವಾಗಿಯೂ ಇವೆಯೇ? ಎಂದು ಶಂಕೆ ಹುಟ್ಟಿತು.ಆತ ತನಗೆ ಪರಿಚಯವಿದ್ದವರನ್ನೆಲ್ಲ ಇದರ ಬಗ್ಗೆ ಕೇಳಿದ.ಆದರೆ ಪ್ರತಿ ಒಬ್ಬರು ತಮ್ಮದೇ ವಿಚಾರ ಧಾರೆಯನ್ನೇ ಮುಂದಿಡುತ್ತಿದ್ದರು.ಇದರಿಂದ ಆತನಿಗೆ ಸಮಾಧಾನ ವಾಗಲಿಲ್ಲ.ಕೊನೆಗೆ ದೇವರ ಬಳಿ ಇದರ ಬಗ್ಗೆ ಕೇಳೋಣ ಎಂದು ಆತ ದೇವರನ್ನು ಕುರಿತು ತಪಸ್ಸು ಮಾಡಿ ದೇವರನ್ನು ಸಾಕ್ಷಾತ್ಕಾರ ಮಾಡಿಕೊಂಡ.
ದೇವರ ಬಳಿ ತನ್ನ ಶಂಕೆಯನ್ನು ಹೇಳಿಕೊಂಡ.ಆಗ ದೇವರು ತನ್ನೊಂದಿಗೆ ಬರುವಂತೆ ಅವನಿಗೆ ತಿಳಿಸಿದರು.ದೇವರು ಆತನನ್ನು ಎರಡು ಕೋಣೆಗೆ ಕರೆದೊಯ್ದರು.ಒಂದು ಕೋಣೆಯಲ್ಲಿ ವಿಶಾಲವಾದ ಮೇಜಿತ್ತು.ಅದರ ಮೇಲೆ ವಿವಿಧ ತಿಂಡಿ-ತಿನಿಸುಗಳು ಇದ್ದವು.ಅದರ ಸುತ್ತ ಜನರು ನೆರೆದಿದ್ದರು.ತಿಂಡಿಯನ್ನು ತಿನ್ನಲು ಅವರಿಗೆಲ್ಲಾ ಒಂದು ಉದ್ದದ ಹಿಡಿ ಉಳ್ಳ ಚಮಚವನ್ನು ನೀಡಲಾಗಿತ್ತು.ಆದರೆ ಅವರಾರೂ ತಿಂಡಿ ತಿನ್ನುತ್ತಿರಲಿಲ್ಲ.ಅವರೆಲ್ಲ ರೋಗಿಷ್ಟರಂತೆ ಕಾಣುತ್ತಿದ್ದರು.ಅವರಿಗೆ ತಮ್ಮ ಮುಂದೆ ಇದ್ದ ಭಕ್ಷಗಳ ಪರಿವೆಯೇ ಇರಲಿಲ್ಲ.ಅವರೆಲ್ಲರೂ ಬಹಳ ದುಃಖದಲ್ಲಿ ಇದ್ದರು.
ನಂತರ ದೇವರು ಅವನನ್ನು ಇನ್ನೊಂದು ಕೋಣೆಗೆ ಕರೆದೊಯ್ದರು.ಅಲ್ಲೋ ಹಿಂದಿನ ಕೋಣೆಯಂತೆಯೇ ವಿವಿಧ ಭಕ್ಷಗಳಿದ್ದವು.ಅದರ ಸುತ್ತಾ ಜನರೂ ಸೇರಿದ್ದರು.ಆದರೆ ಅವರೆಲ್ಲರೂ ಸಂತಸದಿಂದ ಇದ್ದರು.ಇಲ್ಲೂ ಅವರಿಗೆ ತಿಂಡಿ ತಿನ್ನಲು ಹಿಂದಿನ ಕೋಣೆಯಂತೆಯೇ ಉದ್ದದ ಹಿಡಿ ಉಳ್ಳ ಚಮಚವನ್ನು ನೀಡಲಾಗಿತ್ತು.ಆದರೆ ಅವರೆಲ್ಲರೂ ಸಂತಸದಿಂದ ಇದ್ದರು.ಇದು ಭಕ್ತನಿಗೆ ಕಂಡು ಬಂದು ಅವನಿಗೆ ಸೋಜಿಗವೆನಿಸಿತು.ಅವನು ದೇವರನ್ನು ಕೇಳಿದ.
ಆಗ ದೇವರು ಮೊದಲು ನೋಡಿದ ಕೋಣೆಯೇ ನರಕ.ಅಲ್ಲಿ ಇರುವ ಜನರು ಒಬ್ಬರಿಗೆ ಒಬ್ಬರು ಸಹಾಯ ಮಾಡುವುದಿಲ್ಲ.ಆದ್ದರಿಂದ ದುಃಖದಲ್ಲಿ ಇದ್ದಾರೆ.ಆದರೆ ಎರಡನೇ ಕೋಣೆಯ ಜನರು ಒಬ್ಬರಿಗೆ ಒಬ್ಬರು ಸಹಾಯ ಮಾಡುತ್ತಾರೆ.ಉದ್ದವಾದ ಹಿಡಿ ಉಳ್ಳ ಚಮಚವಿದ್ದರೂ ಅದರಲ್ಲಿ ಇತರರಿಗೆ ತಿನ್ನಿಸುತ್ತಾರೆ.ಅದೇ ಸ್ವರ್ಗ.ಆದರೆ ಮೊದಲ ಕೋಣೆಯಲ್ಲಿ ಜನರು ತಾವೂ ತಿನ್ನದೇ,ಪರರಿಗೂ ತಿನ್ನಲು ಬಿಡುತ್ತಿಲ್ಲ.ಆದ್ದರಿಂದ ಅದೇ ನರಕ ಎಂದನು.
ನೀತಿ:ಪರೋಪಕಾರದಲ್ಲೇ ಸ್ವರ್ಗವಿದೆ.

No comments:

Post a Comment