ಗಂಜಿ ಮಾಡುವುದು ಹೇಗೆ?
ಗಂಜಿ ಅನ್ನುವುದು ಒಂದು ಪೌಷ್ಟಿಕ ಆಹಾರ.ಈಗ ಗಂಜಿಯನ್ನು ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.
ಮೊದಲಿಗೆ ಒಂದು ಪಾತ್ರೆಯಲ್ಲಿ ಅದರ ಮುಕ್ಕಾಲು ಭಾಗದಷ್ಟು ನೀರು ತುಂಬಿಸಿ ಮಧ್ಯಮ ಉರಿಯಲ್ಲಿ ಕಾಯಲು ಬಿಡಿ.ಇದೇ ಸಮಯದಲ್ಲಿ ಸುಮಾರು ೩ ಜನಕ್ಕೆ ೨ ೧/೨ ಪಾವಿನಷ್ಟು ಬೆಳ್ತಿಗೆ ಅಕ್ಕಿಯನ್ನು ಅಳತೆ ಮಾಡಿ ಅದರಲ್ಲಿ ಕಲ್ಲುಗಳು ಮತ್ತು ಹುಳಗಳು ಇಲ್ಲದಂತೆ ಕಸ ತೆಗೆಯಬೇಕು.
ಈಗ ನೀರು ಕಾಯಲು ಇಟ್ಟದ್ದು ಅದರಿಂದ ಗುಳ್ಳೆಗಳು ಬರುವವರೆಗೆ ನೀರು ಕಾಯಬೇಕು.ಅದೇ ಹೊತ್ತಿನಲ್ಲಿ ನಾವು ಕಸದಿಂದ ಶುದ್ಧಗೊಳಿಸಿದ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು,ಅದನ್ನು ೩ ರಿಂದ ೪ ಬಾರಿ ತಣ್ಣೀರಿನಿಂದ ತೊಳೆಯಬೇಕು.ಹೀಗೆ ಮಾಡುವುದರಿಂದ ಅಕ್ಕಿಯು ಶುದ್ಧವಾಗುತ್ತದೆ.ನಂತರ ಈ ಅಕ್ಕಿಯನ್ನು ನೀರು ಇಲ್ಲದಂತೆ ಸೋಸಿ ನಂತರ ಅದನ್ನು ಕುದಿಯುತ್ತಿರುವ ನೀರಿಗೆ ಹಾಕಬೇಕು.
ಈಗ ಅಕ್ಕಿಯು ಕುದಿಯುತ್ತಿರುವ ನೀರಿನ ಜೊತೆ ಬೆಂದು ಅನ್ನವಾಗುತ್ತದೆ.ಇದಕ್ಕೆ ಸುಮಾರು ೧/೨ ಗಂಟೆಯಷ್ಟು ಸಮಯ ತಗಲುತ್ತದೆ.ಈ ಸಮಯದಲ್ಲಿ ಆಗಾಗ ಬಂದು ಕೈ ಆಡಿಸುತ್ತಾ ಅಕ್ಕಿ ಸರಿಯಾಗಿ ಬೆಂದಿದೆಯೇ ಎನ್ನುವುದನ್ನು ಪರೀಕ್ಷಿಸುತ್ತಿರಬೇಕು.ಯಾವಾಗ ಬೇಯುತ್ತಿರುವ ಅಕ್ಕಿಯು ಮೃದುವಾಗಿ ಅದನ್ನು ಹಿಚಿಕಿದಾಗ ತುಂಡಾಗುತ್ತದೆಯೋ ,ಆಗ ಅಕ್ಕಿಯು ಅನ್ನವಾಗಿದೆ ಎಂದರ್ಥ.
ನಂತರದ ಕೆಲಸವೇ ಈ ಅನ್ನವನ್ನು ಬಸಿಯುವುದು.ಅನ್ನದ ಪಾತ್ರೆಯನ್ನು ಇನ್ನೊಂದು ಪಾತ್ರೆಗೆ ಬೋರಲು ಮಾಡಿ,ಅದರ ನೀರೆಲ್ಲಾ ಕೆಳಗೆ ಅಂದರೆ ಬೇರೆ ಪಾತ್ರೆಗೆ ಬೀಳುವಂತೆ ಮಾಡಬೇಕು.ಈ ನೀರೇ ತೆಳಿ.ಈಗ ಬೇರ್ಪಟ್ಟ ಅನ್ನವನ್ನು ಒಂದು ಬಟ್ಟಲಿಗೆ ಹಾಕಿಕೊಂಡು ಅದಕ್ಕೆ ಈ ತೆಳಿಯನ್ನು ಹಾಕಿಕೊಂಡು ನಂತರ ಅದಕ್ಕೆ ಉಪ್ಪು ಮತ್ತು ತುಪ್ಪ ಹಾಕಿಕೊಂಡು ಕಲಸಿಕೊಳ್ಳಬೇಕು.
ಹೀಗೆ ಸಿದ್ಧವಾದ ಗಂಜಿಯನ್ನು ಉಪ್ಪಿನಕಾಯಿ ಜೊತೆ ತಿಂದರೆ ಬಹಳ ರುಚಿ.ಇದು ಪೌಷ್ಟಿಕ ಆಹಾರವಾದ ಕಾರಣ ಜ್ವರ ಬಂದಾಗ ಮತ್ತು ಇತರ ಖಾಯಿಲೆಗಳು ಬಂದಾಗ ರೋಗಿಗೆ ಇದನ್ನು ಬಿಸಿಬಿಸಿಯಾಗಿ ತಿನ್ನಲು ಕೊಡುತ್ತಾರೆ.ಇದರಿಂದ ತಕ್ಷಣವೇ ಶಕ್ತಿ ಬರುತ್ತದೆ.
No comments:
Post a Comment