ಗಿರೀಶನ ಶಿವ ಭಕ್ತಿ
ಗಿರೀಶ ತನ್ನ ತಂದೆ-ತಾಯಿಗೆ ಓರ್ವನೇ ಮಗ.ಒಮ್ಮೆ ಗೌರಿ ಹಬ್ಬದಂದು ತನ್ನ ಸಹಪಾಠಿಗಳು ತಮ್ಮ ಸಹೋದರಿಯನ್ನು ಮನೆಗೆ ಕರೆತರುವುದನ್ನು ಕಂಡ ಗಿರೀಶನಿಗೂ ಆಸೆಯಾಯಿತು.ಆತ ಮನೆಗೆ ಬಂದು ಪಾಲಕರ ಬಳಿ ತನ್ನ ಆಸೆಯನ್ನು ಹೇಳಿದಾಗ ಅವರು ಗಿರೀಶನಿಗೆ ತಿಳಿಹೇಳಲು ತುಂಬಾ ಪ್ರಯತ್ನಪಟ್ಟರು.ಆದರೆ ಗಿರೀಶ ಹಠಮಾರಿಯಾಗಿದ್ದ.ಕೊನೆಗೆ ಅವರು ಪಾರ್ವತಿಯೇ ನಿನ್ನ ಸೋದರಿ ಮತ್ತು ಆಕೆಯ ಗಂಡ ಪರಶಿವನೇ ನಿನ್ನ ಭಾವ ಎಂದುಬಿಟ್ಟರು.ಇದನ್ನು ಕೇಳಿದ ಗಿರೀಶನಿಗೆ ಆನಂದವಾಯಿತು.
ಸರಿ,ಈಗ ಆತ ತನ್ನ ಸೋದರಿಯನ್ನು ಮನೆಗೆ ಹಬ್ಬಕ್ಕೆ ಕರೆಯಲು ಸಿದ್ಧನಾಗಿ ಬಿಟ್ಟ.ಕೊನೆಗೆ ಪಾಲಕರು ಆತನಿಗೆ ತಿಂಡಿಯ ಕಟ್ಟನ್ನೂ,ಕುಡಿಯಲು ನೀರಿನ ಬಾಟಲನ್ನೂ ಕೊಟ್ಟು ಉತ್ತರ ದಿಕ್ಕಿನಲ್ಲಿ ಪರ್ವತದ ಮಧ್ಯೆ ಅವರು ಸಿಗುತ್ತಾರೆ ಎಂದರು.ಗಿರೀಶ ಉತ್ತರ ದಿಕ್ಕಿನಲ್ಲಿ ಪಯಣವನ್ನು ಆರಂಭಿಸಿದ.
ಆದರೆ ಎಷ್ಟು ದೂರ ಹೋದರೂ ಅವನಿಗೆ ತನ್ನ ಸೋದರಿಯ ಮನೆ ಸಿಗಲಿಲ್ಲ.ಇದರಿಂದ ಕಂಗಾಲಾದ ಹುಡುಗ ಪಾರ್ವತಿಯ ಹೆಸರನ್ನೂ ಮತ್ತು ಪರಶಿವನ ಹೆಸರನ್ನೂ ಕರೆಯಲು ಸುರುಮಾಡಿದ.ಆತನ ಸ್ವರವೇ ಪ್ರತಿಧ್ವನಿ ಆಗುತ್ತಿತ್ತು.ಆತನ ಆಹಾರ,ನೀರು ಎಲ್ಲ ಮುಗಿದು ಹೋಯಿತು.ಸಂಜೆಯಾಯಿತು.ಹುಡುಗ ಆಯಾಸದಿಂದ ಕೆಲವೆಡೆ ಬಿದ್ದ ಕೂಡ.ಗಾಯವಾಗಿ ರಕ್ತ ಕೂಡ ಬಂತು.
ಆದರೂ ಗಿರೀಶನಿಗೆ ಸೋದರಿಯನ್ನು ಹುಡುಕಿಯೇ ಮನೆಗೆ ಹಿಂತಿರುಗುವ ಛಲ.ಆತ ನಡೆದೂ ನಡೆದೂ ದಣಿಯುತ್ತಾನೆ.ಕತ್ತಲಾದರೂ ತನ್ನ ಸೋದರಿಯ ಸುಳಿವೇ ಸಿಗದೇ ಆತ ಕಂಗಾಲಾಗುತ್ತಾನೆ.ಕತ್ತಲೆಯಲ್ಲಿ ಆತ ಒಂದು ಅಂಚಿಗೆ ಬಂದು ನಿಂತಿರುತ್ತಾನೆ.ಮುಂದೆ ಹೋಗಲು ಯತ್ನಿಸಿ ಆತ ಪ್ರಪಾತಕ್ಕೆ ಬೀಳುತ್ತಾನೆ.ಆಗ ಆತನನ್ನು ಬೀಳದಂತೆ ಹಿಡಿಯಲು ಸಾಕ್ಷಾತ್ ಪರಶಿವನೇ ತನ್ನ ಪತ್ನಿ ಪಾರ್ವತಿಯ ಜೊತೆ ಬರುತ್ತಾನೆ.
ಗಿರೀಶ ಈರ್ವರನ್ನೂ ನೋಡಿ ಹಬ್ಬಕ್ಕೆ ಮನೆಗೆ ಬರುವಂತೆ ಆಹ್ವಾನಿಸುತ್ತಾನೆ.ಹಾಗೆಯೇ ಆತನ ಭಕ್ತಿಗೆ ಮನಸೋತ ಶಿವ-ಪಾರ್ವತಿಯರು ಪ್ರತಿ ವರುಷ ಗಿರೀಶನ ಮನೆಗೆ ಹಬ್ಬಕ್ಕೆ ಬರುತ್ತಿರುತ್ತಾರೆ.
ನೀತಿ:ನೈಜ ಭಕ್ತಿಯಿಂದ ಕರೆದರೆ ಶಿವನೂ ಓಡಿ ಬರುತ್ತಾನೆ.
No comments:
Post a Comment