ಉಪದೇಶ ನೀಡುವುದು ಸುಲಭ
ಆಚಾರ್ಯ ವಿನೋಬಾ ಭಾವೆ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವರು.ಭಾರತದಲ್ಲಿ ಬಡವರ ದುಡಿಯಲಾಗದೆ ಇರುವ ಕಷ್ಟ ಕಂಡು ಅವರು ಭೂದಾನ ಚಳುವಳಿಯನ್ನು ಪ್ರಾರಂಭಿಸಿದರು.ಆ ಚಳುವಳಿಯಲ್ಲಿ ಬಹಳ ಭೂಮಿಯನ್ನು ಹೊಂದಿರುವ ಶ್ರೀಮಂತರು ತಾವೇ ಸ್ವ ಇಚ್ಛೆಯಿಂದ ತಮ್ಮಲ್ಲಿರುವ ಹೆಚ್ಚಿನ ಭೂಮಿಯನ್ನು ಬಡವರಿಗೆ ದಾನ ಮಾಡುವುದು.
ಹೀಗೆ ಅವರು ಭಾರತದೆಲ್ಲೆಡೆ ಸಂಚರಿಸುತ್ತಾ ಒಂದು ಹಳ್ಳಿಗೆ ಬಂದರು.ಹಳ್ಳಿಗರಿಗೆ ಸಂಭ್ರಮವೋ ಸಂಭ್ರಮ.ಅವರು ವಿನೋಬಾ ಭಾವೆ ಅವರ ಭಾಷಣಕ್ಕೆ ಏರ್ಪಾಟು ಮಾಡಿದರು.ಮೊದಲು ಓರ್ವ ಗ್ರಾಮಸ್ಥ ವಿನೋಬಾ ಭಾವೆ ಅವರ ಬಗ್ಗೆ ಹೇಳುತ್ತಾ ಊರಿನ ಶ್ರೀಮಂತರು ತಮ್ಮ ಹೆಚ್ಚುವರಿ ಭೂಮಿಯನ್ನು ಬಡವರಿಗೆ ದಾನ ಮಾಡಬೇಕೆಂದು ಮನವಿ ಮಾಡಿಕೊಂಡನು.
ಆದರೆ ಆತನ ಮಾತುಗಳು ಹಳ್ಳಿಗರ ಮೇಲೆ ಯಾವ ಪ್ರಭಾವವನ್ನೂ ಬೀರಲಿಲ್ಲ.ಏಕೆಂದರೆ ಯಾರೂ ತಮ್ಮ ಹೆಚ್ಚುವರಿ ಭೂಮಿಯನ್ನು ದಾನ ಮಾಡಲು ಮುಂದೆ ಬರಲಿಲ್ಲ.ಇದನ್ನೆಲ್ಲಾ ಗಮನಿಸುತ್ತಿದ್ದ ವಿನೋಬಾ ಭಾವೆ ಅವರು ಆ ಹಳ್ಳಿಗನನ್ನು ತಮ್ಮ ಬಳಿ ಕರೆದು ಆತನ ಬಳಿ ಎಷ್ಟು ಭೂಮಿ ಇದೆಯೆಂದು ವಿಚಾರಿಸಿದರು.ಆಗ ಆತ ತಾನೋರ್ವ ಸಣ್ಣ ರೈತನೆಂದೂ,ತನ್ನ ಬಳಿ ಅಷ್ಟು ಭೂಮಿ ಇಲ್ಲವೆಂದೂ ಹೇಳಿದ.
ಆಗ ವಿನೋಬಾ ಭಾವೆ ಅವರು ಇತರರಿಗೆ ಉಪದೇಶ ನೀಡುವ ಮೊದಲು ತಮ್ಮಿಂದ ಅದನ್ನು ಪಾಲಿಸಲು ಆಗುತ್ತದೆಯೇ? ಎಂಬುದನ್ನು ಮೊದಲು ನೋಡಬೇಕು ಎಂದರು.ಇದರಿಂದ ಲಜ್ಜೆಗೊಂಡ ಆತ ತನ್ನ ಬಳಿ ೧೦ ಎಕರೆ ಭೂಮಿ ಇರುವುದಾಗಿಯೂ ಅದರಲ್ಲಿ ತಾನು ೨ ಎಕರೆ ಭೂಮಿಯನ್ನು ದಾನವಾಗಿ ನೀಡಲು ಸಿದ್ಧನಿರುವುದಾಗಿ ತಿಳಿಸಿದ.ಆತ ಹೀಗೆ ಹೇಳಿದ ತಕ್ಷಣವೇ ಇತರ ಶ್ರೀಮಂತರೂ ಭೂದಾನ ಮಾಡಲು ಮುಂದೆ ಬಂದರು.
ನೀತಿ:ಇತರರಿಗೆ ಉಪದೇಶ ನೀಡುವ ಮೊದಲು ಅದನ್ನು ತಮಗೆ ಪಾಲಿಸಲು ಸಾಧ್ಯವೇ ಎಂಬುದನ್ನು ನೋಡಬೇಕು.
No comments:
Post a Comment