Monday, February 28, 2011

ಅಕ್ಕಿ ಪತ್ತೀಸ್ ಮಾಡುವುದು ಹೇಗೆ?

                                     ಅಕ್ಕಿ ಪತ್ತೀಸ್ ಮಾಡುವುದು ಹೇಗೆ?
ಅಕ್ಕಿ ಪತ್ತೀಸ್ ಮಾಡುವುದು ಹೇಗೆಂದು ಈಗ ತಿಳಿದುಕೊಳ್ಳೋಣ.


ಬೇಕಾಗುವ ಸಾಮಗ್ರಿಗಳು
೧ ಕಪ್ ತೊಳೆದ ಅಕ್ಕಿ(ನೆನಸುವ ಅಗತ್ಯವಿಲ್ಲ)
೨ ಕಪ್ ತೆಂಗಿನ ಹಾಲು
ರುಚಿಗೆ ತಕ್ಕಷ್ಟು ಉಪ್ಪು
ಬ್ರೆಡ್ ಪುಡಿ
೨ ಟೇಬಲ್ ಚಮಚ ಮೈದಾ ಹಿಟ್ಟು
ಸ್ವಲ್ಪ ನೀರು.
ಶಾಲ್ಲೋ ಫ್ರೈ ಮಾಡಲು ಸ್ವಲ್ಪ ಎಣ್ಣೆ
ಬಾದಾಮಿ ಮತ್ತು ಪಿಸ್ತಾ ಚೂರುಗಳು


ಮಾಡುವ ವಿಧಾನ
ಮೊದಲಿಗೆ ತೊಳೆದಿಟ್ಟ ಅಕ್ಕಿ,ತೆಂಗಿನ ಕಾಯಿ ಹಾಲು ಮತ್ತು ಉಪ್ಪು ಸೇರಿಸಿ ಕುಕ್ಕರಿನಲ್ಲಿ ಅನ್ನ ಮಾಡಿ.ನಂತರ ಈ ಅನ್ನವನ್ನು ಒಂದು ಪಾತ್ರೆಯಲ್ಲಿ ತೆಗೆದಿಡಿ.ನಂತರ ಅದನ್ನು ಚೆನ್ನಾಗಿ ಮ್ಯಾಶ್ ಮಾಡಿ ಅದನ್ನು ವಡೆ ಆಕಾರದಲ್ಲಿ ತಟ್ಟಿಕೊಳ್ಳಿ.ಈಗ ಮೈದಾ ಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ ಅದನ್ನು ಪೇಸ್ಟ್ ಮಾಡಿಟ್ಟುಕೊಳ್ಳಿ.
ಈಗ ತಯಾರಾದ ಅನ್ನದ ಉಂಡೆಗಳನ್ನು(ವಡೆಗಳನ್ನು) ಮೊದಲು ಮೈದಾ ಪೇಸ್ಟ್ ನಲ್ಲಿ ಅದ್ದಿ ತೆಗೆದು ನಂತರ ಅದನ್ನು ಬ್ರೆಡ್ ಪುಡಿಯಲ್ಲಿ ಉರುಳಿಸಿ.ನಂತರ ಇದನ್ನು ಒಂದು ಕಾದ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಶ್ಯಾಲ್ಲೋ ಫ್ರೈ ಮಾಡಿ.ಹೀಗೆ ಫ್ರೈ ಮಾಡಿದ ಪತ್ತೀಸ್ ಗಳನ್ನು ಒಂದು ಪ್ಲೇಟ್ ನಲ್ಲಿ ಹಾಕಿ ಅದರ ಮೇಲೆ ಬಾದಾಮ್ ಮತ್ತು ಪಿಸ್ತಾ ಚೂರುಗಳನ್ನು ಉದುರಿಸಿದರೆ ಅಕ್ಕಿಯ ಪತ್ತೀಸ್ ತಿನ್ನಲು ರೆಡಿ.

Sunday, February 27, 2011

ಗಿರೀಶನ ಶಿವ ಭಕ್ತಿ

                                 ಗಿರೀಶನ ಶಿವ ಭಕ್ತಿ
ಗಿರೀಶ ತನ್ನ ತಂದೆ-ತಾಯಿಗೆ ಓರ್ವನೇ ಮಗ.ಒಮ್ಮೆ ಗೌರಿ ಹಬ್ಬದಂದು ತನ್ನ ಸಹಪಾಠಿಗಳು ತಮ್ಮ ಸಹೋದರಿಯನ್ನು ಮನೆಗೆ ಕರೆತರುವುದನ್ನು ಕಂಡ ಗಿರೀಶನಿಗೂ ಆಸೆಯಾಯಿತು.ಆತ ಮನೆಗೆ ಬಂದು ಪಾಲಕರ ಬಳಿ ತನ್ನ ಆಸೆಯನ್ನು ಹೇಳಿದಾಗ ಅವರು ಗಿರೀಶನಿಗೆ ತಿಳಿಹೇಳಲು ತುಂಬಾ ಪ್ರಯತ್ನಪಟ್ಟರು.ಆದರೆ ಗಿರೀಶ ಹಠಮಾರಿಯಾಗಿದ್ದ.ಕೊನೆಗೆ ಅವರು ಪಾರ್ವತಿಯೇ ನಿನ್ನ ಸೋದರಿ ಮತ್ತು ಆಕೆಯ ಗಂಡ ಪರಶಿವನೇ ನಿನ್ನ ಭಾವ ಎಂದುಬಿಟ್ಟರು.ಇದನ್ನು ಕೇಳಿದ ಗಿರೀಶನಿಗೆ ಆನಂದವಾಯಿತು.
ಸರಿ,ಈಗ ಆತ ತನ್ನ ಸೋದರಿಯನ್ನು ಮನೆಗೆ ಹಬ್ಬಕ್ಕೆ ಕರೆಯಲು ಸಿದ್ಧನಾಗಿ ಬಿಟ್ಟ.ಕೊನೆಗೆ ಪಾಲಕರು ಆತನಿಗೆ ತಿಂಡಿಯ ಕಟ್ಟನ್ನೂ,ಕುಡಿಯಲು ನೀರಿನ ಬಾಟಲನ್ನೂ ಕೊಟ್ಟು ಉತ್ತರ ದಿಕ್ಕಿನಲ್ಲಿ ಪರ್ವತದ ಮಧ್ಯೆ ಅವರು ಸಿಗುತ್ತಾರೆ ಎಂದರು.ಗಿರೀಶ ಉತ್ತರ ದಿಕ್ಕಿನಲ್ಲಿ ಪಯಣವನ್ನು ಆರಂಭಿಸಿದ.
ಆದರೆ ಎಷ್ಟು ದೂರ ಹೋದರೂ ಅವನಿಗೆ ತನ್ನ ಸೋದರಿಯ ಮನೆ ಸಿಗಲಿಲ್ಲ.ಇದರಿಂದ ಕಂಗಾಲಾದ ಹುಡುಗ ಪಾರ್ವತಿಯ ಹೆಸರನ್ನೂ ಮತ್ತು ಪರಶಿವನ ಹೆಸರನ್ನೂ ಕರೆಯಲು ಸುರುಮಾಡಿದ.ಆತನ ಸ್ವರವೇ ಪ್ರತಿಧ್ವನಿ ಆಗುತ್ತಿತ್ತು.ಆತನ ಆಹಾರ,ನೀರು ಎಲ್ಲ ಮುಗಿದು ಹೋಯಿತು.ಸಂಜೆಯಾಯಿತು.ಹುಡುಗ ಆಯಾಸದಿಂದ ಕೆಲವೆಡೆ ಬಿದ್ದ ಕೂಡ.ಗಾಯವಾಗಿ ರಕ್ತ ಕೂಡ ಬಂತು.
ಆದರೂ ಗಿರೀಶನಿಗೆ ಸೋದರಿಯನ್ನು ಹುಡುಕಿಯೇ ಮನೆಗೆ ಹಿಂತಿರುಗುವ ಛಲ.ಆತ ನಡೆದೂ ನಡೆದೂ ದಣಿಯುತ್ತಾನೆ.ಕತ್ತಲಾದರೂ ತನ್ನ ಸೋದರಿಯ ಸುಳಿವೇ ಸಿಗದೇ ಆತ ಕಂಗಾಲಾಗುತ್ತಾನೆ.ಕತ್ತಲೆಯಲ್ಲಿ ಆತ ಒಂದು ಅಂಚಿಗೆ ಬಂದು ನಿಂತಿರುತ್ತಾನೆ.ಮುಂದೆ ಹೋಗಲು ಯತ್ನಿಸಿ ಆತ ಪ್ರಪಾತಕ್ಕೆ ಬೀಳುತ್ತಾನೆ.ಆಗ ಆತನನ್ನು ಬೀಳದಂತೆ ಹಿಡಿಯಲು ಸಾಕ್ಷಾತ್ ಪರಶಿವನೇ ತನ್ನ ಪತ್ನಿ ಪಾರ್ವತಿಯ ಜೊತೆ ಬರುತ್ತಾನೆ.
ಗಿರೀಶ ಈರ್ವರನ್ನೂ ನೋಡಿ ಹಬ್ಬಕ್ಕೆ ಮನೆಗೆ ಬರುವಂತೆ ಆಹ್ವಾನಿಸುತ್ತಾನೆ.ಹಾಗೆಯೇ ಆತನ ಭಕ್ತಿಗೆ ಮನಸೋತ ಶಿವ-ಪಾರ್ವತಿಯರು ಪ್ರತಿ ವರುಷ ಗಿರೀಶನ ಮನೆಗೆ ಹಬ್ಬಕ್ಕೆ ಬರುತ್ತಿರುತ್ತಾರೆ.
ನೀತಿ:ನೈಜ ಭಕ್ತಿಯಿಂದ ಕರೆದರೆ ಶಿವನೂ ಓಡಿ ಬರುತ್ತಾನೆ.

ಬಸುರಿ ಬಿಲ್ಲಿ ಬೆಕ್ಕು

                                            ಬಸುರಿ ಬಿಲ್ಲಿ ಬೆಕ್ಕು
ಬಿಲ್ಲಿ ಬೆಕ್ಕು ಮತ್ತೆ ಬಸುರಿಯಾಗಿದೆ
೨ ವರ್ಷದಲ್ಲಿ ೪ನೆ ಸಲ ಹೆರಿಗೆಗೆ ಅಣಿಯಾಗಿದೆ;
ಬಿಲ್ಲಿ ಬೆಕ್ಕು ಈಗ ನನಗೆ ಕಾಣುತ್ತಿದೆ ಚಂದ
ಎಲ್ಲರೂ ಸುಂದರವಾಗಿ ಕಾಣುತ್ತಾರೇನೋ  ಹೊಟ್ಟೆಯಲ್ಲಿ ಇರುವಾಗ ಕಂದ!

Saturday, February 26, 2011

ತೊಂದರೆ ನೀಡುವವರನ್ನು ಕಡೆಗಣಿಸಿ

                               ತೊಂದರೆ ನೀಡುವವರನ್ನು ಕಡೆಗಣಿಸಿ
ಒಮ್ಮೆ ಒಂದು ತಾಯಿ ತೆಂಗಿನ ಮರ ಎತ್ತರಕ್ಕೆ ಬೆಳೆದು ನಿಂತಿತ್ತು. ಅದರ ಹತ್ತಿರದಲ್ಲೇ ಅದರ ಮಗನಾದ ಮರಿ ತೆಂಗಿನ ಮರವೂ ಮೊಳಕೆಯೊಡೆದಿತ್ತು. ಆದರೆ ಮರಿ ತೆಂಗಿನ ಮರಕ್ಕೆ ಮುಂದೆ ಬೆಳೆಯಲು ಒಂದು ಮುಳ್ಳಿನ ಗಿಡ ಅಡ್ಡಿಯಾಗಿತ್ತು.ಅದು ಮರಿ ತೆಂಗಿನ ಮರಕ್ಕೆ ಬರಬೇಕಾದ ಸೂರ್ಯನ ಬೆಳಕಿಗೆ ತಡೆ ಆಗಿತ್ತು.ಮರಿ ತೆಂಗಿನ ಮರಕ್ಕೆ ಸಿಗಬೇಕಾದ ನೀರನ್ನು ತಾನೇ ಹೀರಿಕೊಳ್ಳುತಿತ್ತು.
ಇದರಿಂದ ರೋಸಿದ ಮರಿ ತೆಂಗಿನ ಮರ ಮುಳ್ಳಿನ ಗಿಡದ ಬಳಿ ತನಗೂ ಬೆಳೆಯಲು ಬಿಡುವಂತೆ ವಿನಂತಿಸಿಕೊಂಡಿತು.ಆದರೆ ಮುಳ್ಳಿನ ಗಿಡ ಹಟಮಾರಿಯಾಗಿತ್ತು.ಅದು ಮರಿ ತೆಂಗಿನ ಮರದ ಮಾತನ್ನು ಉಡಾಫೆ ಮಾಡಿತು.ಈಗ ಮರಿ ತೆಂಗಿನ ಮರ ತನ್ನ ತಾಯಿಯ ಬಳಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿತು.ಮುಳ್ಳಿನ ಗಿಡ ತನ್ನ ಹಟವನ್ನು ಬಿಡದಿರುವುದನ್ನೂ ತಿಳಿಸಿತು.ಆಗ ತಾಯಿ ತೆಂಗಿನ ಮರ ತನ್ನ ಮಗನಿಗೆ ಹೇಳಿತು:
ನಿನಗೆ ಬೆಳೆಯಲು ಎಲ್ಲಾ ಅವಕಾಶವಿದೆ.ನೀನೂ ನನ್ನಂತೆ ಎತ್ತರವಾಗಿ ಬೆಳೆಯಬಲ್ಲೆ.ಆಗ ಈ ಮುಳ್ಳಿನ ಗಿಡ ನಿನ್ನ ಕಣ್ಣಿಗೆ ಕಾಣುವುದೂ ಇಲ್ಲ.ಈಗ ತೊಂದರೆ ಕೊಡುತ್ತಿರುವ ಮುಳ್ಳಿನ ಗಿಡವನ್ನು ಕಡೆಗಣಿಸಿ,ನಿನ್ನ ಬೆಳವಣಿಗೆಯ ಕಡೆಗೆ ಗಮನ ಕೊಡು ಎಂದಿತು.
ನೀತಿ:ವಿನಾಕಾರಣ ತೊಂದರೆ ಕೊಡುತ್ತಿರುವವರನ್ನು ಕಡೆಗಣಿಸಿ ಬಾಳಿನಲ್ಲಿ ಮುನ್ನುಗ್ಗಬೇಕು.

Thursday, February 24, 2011

ಮೀರಾಳ ಕೃಷ್ಣ ಭಕ್ತಿ

                                             ಮೀರಾಳ ಕೃಷ್ಣ ಭಕ್ತಿ
ಮೀರಾ ಓರ್ವ ರಾಜಕುಮಾರಿ.ಆಕೆಯ ತಂದೆ-ತಾಯಿಗಳು ಅವಳ ಚಿಕ್ಕ ವಯಸ್ಸಿನಲ್ಲಿ ತೀರಿಕೊಂಡಿರುತ್ತಾರೆ.ಅವಳು ತನ್ನ ಅಜ್ಜನ ಬಳಿ ಬೆಳೆಯುತ್ತಿರುತ್ತಾಳೆ.
ಆಕೆ ಚಿಕ್ಕಂದಿನಿಂದಲೂ ಕೃಷ್ಣನೇ ತನ್ನ ಪತಿ ಎಂದು ತಿಳಿದುಕೊಂಡಿರುತ್ತಾಳೆ.ಕೃಷ್ಣ ವಿಗ್ರಹದ ಜೊತೆಗೆ ಆಕೆಯ ಪಾಠ,ಆಟ ಎಲ್ಲ.ಹೀಗಿರುವಾಗ ಆಕೆ ಸಂಗೀತ ಮತ್ತು ನೃತ್ಯ ದಲ್ಲಿ ಪ್ರವೀಣಳಾಗುತ್ತಾಳೆ.ಆಕೆ ಪ್ರತಿದಿನ ಕೃಷ್ಣ ದೇವಾಲಯಕ್ಕೆ ಹೋಗಿ ತನ್ನ ನೃತ್ಯ ಸೇವೆಯನ್ನು ನೀಡುತ್ತಿರುತ್ತಾಳೆ.
ಒಮ್ಮೆ ಅದನ್ನು ಪಕ್ಕದ ಊರಿನ ರಾಜ ನೋಡುತ್ತಾನೆ.ಆತ ಆಕೆಗೆ ಮನಸೋತು ಆಕೆಯನ್ನು ಮದುವೆಯಾಗಲು ಇಷ್ಟ ಪಡುತ್ತಾನೆ.ಹಾಗೆಂದು ಅವಳ ಅಜ್ಜನ ಬಳಿ ತಿಳಿಸುತ್ತಾನೆ.ಆದರೆ ಮೀರಾ ಕೃಷ್ಣನೇ ತನ್ನ ಗಂಡ ಎಂದು ಭಾವಿಸಿರುತ್ತಾಳೆ.ಆದರೂ ತನ್ನ ಅಜ್ಜನ ಮನ ನೋಯಿಸಲು ಇಚ್ಚಿಸದೇ ಮದುವೆಗೆ ಒಪ್ಪುತ್ತಾಳೆ.ಮದುವೆ ನಡೆಯುತ್ತದೆ.ಆದರೆ ಆಕೆಯ ಅತ್ತೆಗೆ ತನ್ನ ಸೊಸೆ ದೇವಾಲಯದಲ್ಲಿ ನೃತ್ಯ ಮಾಡುವುದು ಸರಿ ಕಾಣುವುದಿಲ್ಲ.ಹಾಗೆಂದೂ ಆಕೆ ಹೇಳುತ್ತಾಳೆ ಕೂಡ.
                   ಆದರೆ ಮೀರಾ ಅದನ್ನೆಲ್ಲ ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ.ಆಕೆ ತನ್ನ ಇಷ್ಟದಂತೆ ನಡೆದುಕೊಳ್ಳುತ್ತಾಳೆ.ಹೀಗಿರುವಾಗಲೇ ಆಕೆಯ ಪತಿ ಮರಣಿಸುತ್ತಾನೆ.
ಆ ಕಾಲದಲ್ಲಿ ಸತಿ ಹೋಗುವುದು ಇತ್ತು.ಅಂತೆಯೇ ಮೀರಾಳ ಅತ್ತೆ ಕೂಡ ಮೀರಾ ತನ್ನ ಪತಿ ಜೊತೆ ಸತಿ ಹೋಗಬೇಕೆಂದು ಬಯಸುತ್ತಾಳೆ.ಆದರೆ ಮೀರಾ ತನ್ನ ಪತಿ  ಕೃಷ್ಣ.ಆತ ತನ್ನ  ಜೊತೆಯಲ್ಲೇ ಇದ್ದಾನೆ ಎಂದು ಸತಿ ಹೋಗಲು ನಿರಾಕರಿಸುತ್ತಾಳೆ.ಇದರಿಂದ ಆಕೆ ರಾಜಭವನ ಬಿಡಬೇಕಾಗಿ ಬರುತ್ತದೆ.
ಆದರೆ ಮೀರಾ ಇದಾವುದಕ್ಕೂ ಹೆದರದೆ ಕೃಷ್ಣನೇ ತನ್ನ ಪತಿ ಎಂದು ದೃಢವಾಗಿ ನಂಬಿ ತನ್ನ ಮಿಕ್ಕ ಜೀವನವನ್ನು ಕೃಷ್ಣನ ಭಜನೆಯಲ್ಲಿ ಕಳೆಯುತ್ತಾಳೆ.

ಆಸೆಯೇ ದುಃಖಕ್ಕೆ ಮೂಲ

                                        ಆಸೆಯೇ ದುಃಖಕ್ಕೆ ಮೂಲ
ಮಿಸ್ಟರ್.ಫ್ರಾಂಕ್ಲಿನ್ ಅವರು ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿದ್ದವರು.
ಒಮ್ಮೆ ಅವರ ಬಳಿ ಓರ್ವ ವ್ಯಕ್ತಿ ತನ್ನ ಮಗನ ಜೊತೆ ಬರುತ್ತಾನೆ.ಆತ ಫ್ರಾಂಕ್ಲಿನ್ ಅವರನ್ನು ಭೇಟಿ ಮಾಡಿ ತನ್ನ ಮಗನನ್ನು ಅವರಿಗೆ ತೋರಿಸಿ ಇವನಿಗೆ ವಿದ್ಯಾಭ್ಯಾಸ ಮಾಡಿಸುವಷ್ಟು ಹಣ ನನ್ನಲಿಲ್ಲ.ನಾನು ಬಹಳ ಕಷ್ಟದಲ್ಲಿ ಇದ್ದೇನೆ ಎಂದು ತನ್ನ ಕಷ್ಟಗಳೆಲ್ಲವನ್ನು  ಅವರ ಬಳಿ ಹೇಳಿಕೊಂಡ.
ಫ್ರಾಂಕ್ಲಿನ್ ಅವರು ಎಲ್ಲವನ್ನು ಮೌನವಾಗಿ ಕೇಳಿಸಿಕೊಂಡರು..ನಂತರ ಅವರು ಮೇಜಿನ ಮೇಲಿದ್ದ ಒಂದು ಸೇಬು ಹಣ್ಣನ್ನು ತೆಗೆದು ಆ ಹುಡುಗನಿಗೆ ಕೊಟ್ಟರು.ಆತ ಅದನ್ನು ತನ್ನ ಬಲಕೈಯಲ್ಲಿ ಹಿಡಿದುಕೊಂಡ.ಫ್ರಾಂಕ್ಲಿನ್ ಅವರು ಮತ್ತೊಂದು ಹಣ್ಣನ್ನು ತೆಗೆದು ಆ ಹುಡುಗನಿಗೆ ಕೊಟ್ಟರು.ಈಗ ಆತ ಅದನ್ನು ತನ್ನ ಎಡಕೈಯಲ್ಲಿ ಹಿಡಿದುಕೊಂಡ.ಫ್ರಾಂಕ್ಲಿನ್ ಅವರು ಅಷ್ಟಕ್ಕೇ ಸುಮ್ಮನಾಗದೆ ಆತನಿಗೆ ಮತ್ತೊಂದು ಹಣ್ಣನ್ನು ಕೊಟ್ಟರು.
ಈಗ ಹುಡುಗನಿಗೆ ನಿಜವಾಗಲೂ ಕಷ್ಟವಾಯಿತು.ಆತನಿಗೆ ಹಣ್ಣಿನ ಮೇಲೆ ಆಸೆ.ಆದರೆ ಎರಡೂ ಕೈಗಳಲ್ಲಿ ಮೊದಲೇ ಹಣ್ಣುಗಳನ್ನು ಹಿಡಿದುಕೊಂಡಿದ್ದಾನೆ.ಆದರೂ ಹಣ್ಣನ್ನು ಬಿಡಲು ಮನಸ್ಸಿಲ್ಲ.ಆತ ಹಣ್ಣನ್ನು ಹಿಡಿಯಲು ಯತ್ನಿಸಿದಾಗ ಆತನ ಎರಡೂ ಕೈಯಲ್ಲಿ ಇದ್ದ ಹಣ್ಣು ನೆಲಕ್ಕೆ ಬೀಳುತ್ತವೆ.
ಇದನ್ನೆಲ್ಲಾ ನೋಡುತ್ತಿದ್ದ ಫ್ರಾಂಕ್ಲಿನ್ ಅವರು ತಂದೆಯ ಬಳಿ ನಮಗೆ ಎಷ್ಟು ಪ್ರಾಪ್ತಿಯೋ,ಅಷ್ಟಕ್ಕೇ ತೃಪ್ತಿ ಪಡಬೇಕು.ಇಲ್ಲದಿದ್ದರೆ ನಮಗೆ ಯಾವುದೂ ದಕ್ಕುವುದಿಲ್ಲ . ನಮ್ಮ ಹೆಚ್ಚು ಬೇಕೆಂಬ ಆಸೆಯೇ ಹೆಚ್ಚಿನ ಕಷ್ಟಗಳಿಗೆ ಮೂಲ ಎಂದರು.ಅವರ ಮಾತಿನ ಅಂತರ್ಯವನ್ನು ತಿಳಿದುಕೊಂಡ ತಂದೆ ಅವರಿಗೆ ವಂದಿಸಿ ತನ್ನ ಮಗನ ಜೊತೆ ಅಲ್ಲಿಂದ ಹೊರಟು ಹೋದನು.

Wednesday, February 23, 2011

ತೇನ ವಿನಾ ತೃಣಮಪಿ ನ ಚಲತಿ

                                          ತೇನ ವಿನಾ ತೃಣಮಪಿ ನ ಚಲತಿ
ಒಂದೂರು.ಅಲ್ಲಿ ಓರ್ವ ಶ್ರೀಮಂತನಿದ್ದ.ಅವನ ಬಳಿ ಎಲ್ಲವೂ ಇತ್ತು.ಆದರೆ ಅವನಿಗೆ ಸಂತಾನ ಭಾಗ್ಯ ಇರಲಿಲ್ಲ.ಇದರಿಂದ ಅವನು ತುಂಬಾ ದುಃಖದಲ್ಲಿದ್ದ.ಅವನು ಮಾಡದ ಪೂಜೆಗಳಿಲ್ಲಹೋಗದ ದೇವಸ್ಥಾನಗಳಿಲ್ಲ.ಕೊನೆಗೂ ಅವನ ಮೊರೆ ದೇವರಿಗೆ ಕೇಳಿಸಿತು.ಅವನಿಗೊಬ್ಬ ಮಗನ ಜನನವಾಯಿತು.
ಶ್ರೀಮಂತನ ಮನೆಯಲ್ಲಿ ಸಂಭ್ರಮವೋ ಸಂಭ್ರಮ.ಬಹಳ ವರುಷಗಳಾದ ಮೇಲೆ ಹುಟ್ಟಿದವನೆಂದು ಅವನನ್ನು ಮುದ್ದು ಮಾಡಿದ್ದೇ ಮಾಡಿದ್ದು.ಹೀಗಿರುವಾಗ ಶ್ರೀಮಂತನ ಮಗ ಸತ್ತು ಹೋಗುತ್ತಾನೆ.ಇದರಿಂದ ಮನೆಯಲ್ಲಿ ಇದ್ದವರೆಲ್ಲರಿಗೂ ಆಘಾತ ಆಯಿತು.
ಊರವರೆಲ್ಲರೂ ತಮ್ಮ ಸಮಾಧಾನ ಹೇಳಲು ಅವನ ಮನೆಗೆ ಬಂದರು.ಆದರೆ ಶ್ರೀಮಂತ ನಿರ್ಲಿಪ್ತನಾಗಿ ಕುಳಿತ್ತಿದ್ದ.ಅವನನ್ನು ಮಾತನಾಡಿಸಿದಾಗ ಆತ  ಹೇಳಿದ್ದಿಷ್ಟೇ "ಆ ದೇವನೇ ಮಗನನ್ನು ಕೊಟ್ಟ.ಈಗ ಆತನೇ ಹಿಂದಕ್ಕೆ ಕರೆದುಕೊಂಡ.ಆತನ ಆಟ ಬಲ್ಲವರಾರು?ತೇನ ವಿನಾ ತೃಣಮಪಿ ನ ಚಲತಿ."ಎಂದನು.

Tuesday, February 22, 2011

ಬಾದಾಮ್ ಕುಲ್ಫಿ ಮಾಡುವುದು ಹೇಗೆ?

                                  ಬಾದಾಮ್ ಕುಲ್ಫಿ ಮಾಡುವುದು ಹೇಗೆ?
ಬಾದಾಮ್ ಕುಲ್ಫಿ ಮಾಡುವುದು ಹೇಗೆ ಎನ್ನುವುದನ್ನು ಒಂದು ಕುಕೆರಿ ಶೋವ್ದಲ್ಲಿ ನೋಡಿ ಕಲಿತಿದ್ದೇನೆ.ಅದನ್ನು ಈಗ ಹಂಚಿಕೊಳ್ಳುವೆ.
ಬೇಕಾಗುವ ಸಾಮಗ್ರಿಗಳು
೪ ಕಪ್ ಹಾಲು
೧ ಕಪ್ ಮಿಲ್ಕ್ ಮೇಡ್
ಚೂರು ಮಾಡಿದ ಬಾದಾಮ್ ಚೂರುಗಳು
ಚೂರು ಮಾಡಿದ ಪಿಸ್ತಾ ಚೂರುಗಳು
ಸ್ವಲ್ಪ ಏಲಕ್ಕಿ ಪುಡಿ
೨ ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್
ನೀರು
 ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಹಾಲು ಮತ್ತು ಮಿಲ್ಕ್ ಮೇಡ್ ಅನ್ನು ಸೇರಿಸಿ ಕಾಯಲು ಬಿಡಿ.ಇದೇ ಸಮಯದಲ್ಲಿ ಒಂದು ಪಾತ್ರೆಗೆ ಕಾರ್ನ್ ಫ್ಲೋರ್ ಮತ್ತು ನೀರನ್ನು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ.ಹಾಲು ಕುದಿದು ಗಟ್ಟಿಯಾಗುವ ಹಂತಕ್ಕೆ ಬಂದಾಗ ಅದಕ್ಕೆ ಈ ಕಾರ್ನ್ ಫ್ಲೋರ್ ಮಿಶ್ರಣ ಸೇರಿಸಿ.ಅದನ್ನು ಕದಡುತ್ತಲೇ ಅದಕ್ಕೆ ತುಂಡು ಮಾಡಿದ ಬಾದಾಮ್ ,ಪಿಸ್ತಾ ಚೂರುಗಳನ್ನು ಸೇರಿಸಿ.ಈಗ ಗ್ಯಾಸ್ off ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ.ಈಗ ಅದನ್ನು ತಣ್ಣಗಾಗಲು ಬಿಡಿ. ನಂತರ ಅದನ್ನು ಒಂದು ಕುಲ್ಫಿ ಲೋಟೆಗೆ ಹಾಕಿ  fridge  ನಲ್ಲಿ ಇಡಿ.ಒಂದು ರಾತ್ರಿ ಪೂರ್ತಿ.ಮಾರನೆ ದಿನ ಬೆಳಿಗ್ಗೆ ರುಚಿಯಾದ ಬಾದಾಮ್ ಕುಲ್ಫಿ ತಿನ್ನಲು ರೆಡಿ.



Monday, February 21, 2011

ವುದ್ನೆಟ್ ಮಾಡುವುದು ಹೇಗೆ?

                                       ವುದ್ನೆಟ್ ಮಾಡುವುದು ಹೇಗೆ?
ವುದ್ನೆಟ್ ಇದು ಉದ್ದಿನ ಹಿಟ್ಟಿನ ಅಪಭ್ರಂಶ.ಸ್ವಾಭಾವಿಕವಾಗಿ ಇದಕ್ಕೆ ಉದ್ದಿನ ಹಿಟ್ಟು ಮುಖ್ಯ.
ಮಾಡುವ ವಿಧಾನ:
ಮೊದಲು ಒಂದು ಖಾಲಿ ಬಾಣಲೆಯನ್ನು ಗ್ಯಾಸ್ ಸ್ಟೌ ಮೇಲೆ ಇಟ್ಟು ಅದಕ್ಕೆ ಉದ್ದಿನ ಬೇಳೆಯನ್ನು ಹಾಕಬೇಕು. ಇದನ್ನು ಎಣ್ಣೆ ಹಾಕದೆ ಹಾಗೆ ಕೆಂಪಗಾಗುವವರೆಗೆ ಹುರಿಯಬೇಕು.ನಂತರ ಅದು ತಣ್ಣಗಾದ ಮೇಲೆ ಅದನ್ನು ಒಂದು ಮಿಕ್ಸಿ ಜಾರ್ ಗೆ ಹಾಕಿ ಅದನ್ನು ನುಣ್ಣಗೆ ಪುಡಿ ಮಾಡಬೇಕು.ಈಗ ಉದ್ದಿನ ಹಿಟ್ಟು ರೆಡಿ.
ಈ ಉದ್ದಿನ ಹಿಟ್ಟನ್ನು ಎಷ್ಟು ಬೇಕಾದರೂ ಮಾಡಿ ಇಟ್ಟುಕೊಳ್ಳಬಹುದು.ವುದ್ನೆಟ್ ಮಾಡಬೇಕು ಎಂದು ಎನಿಸಿದಾಗ ಇದನ್ನು ಉಪಯೋಗಿಸಬಹುದು.ಈಗ ವುದ್ನೆಟ್ ಮಾಡಲು ಸುರು ಮಾಡೋಣ.ಮೊದಲು ಒಂದು ಅಂದಾಜಿನ ಮೇಲೆ(ಅಂದರೆ ಊಟಕ್ಕೆ ಇರುವ ಜನರಂತೆ) ಪುಡಿ ಮಾಡಿದ ಉದ್ದಿನ ಹಿಟ್ಟನ್ನು ಒಂದು ಪಾತ್ರೆಗೆ ಹಾಕಬೇಕು.ಇದಕ್ಕೆ ಸ್ವಲ್ಪ ಮೊಸರು(ಇದೂ ಅಂದಾಜಿನ ಮೇಲೆ),ಉದ್ನೆಟ್ ನೀರಾಗಬೇಕೆಂದಿದ್ದರೆ ಹೆಚ್ಚು ಮೊಸರು,ಇಲ್ಲದಿದ್ದರೆ ಸ್ವಲ್ಪ ಸಾಕು.) ಅದನ್ನು ಮಿಕ್ಸ್ ಮಾಡಬೇಕು.(ಅಂದರೆ ಗಂಟು ಇರದಂತೆ ಕಲಸಬೇಕು.)
ನಂತರ ಅದಕ್ಕೆ ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿ,ಶುಂಟಿ,ಬೇಸಪ್ಪು ಎಲ್ಲವನ್ನು ಹಾಕಬೇಕು.ಹಸಿಮೆಣಸಿನಕಾಯಿಯನ್ನು ಚೆನ್ನಾಗಿ ಅದರ ಖಾರ ಎಲ್ಲ ಬಿಡುವಂತೆ ಅದುಮಿ ಹಿಚುಕಬೇಕು.ಇನ್ನೂ ಖಾರ ಇಷ್ಟ ಪಡುವವರು ಅದಕ್ಕೆ ಕೆಂಪು ಬ್ಯಾಡಗಿ ಒಣ ಮೆಣಸಿನಕಾಯಿಯನ್ನು ಹಾಕಬಹುದು.ಮೊಸರಲ್ಲಿ ಅದ್ದಿದ ಮೆಣಸಿನಕಾಯಿಯನ್ನೂ ಹಾಕಬಹುದು.ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು.ಇದಾದ ಮೇಲೆ ಸ್ವಲ್ಪ ರುಚಿಗೆ ತಕ್ಕಷ್ಟು ಇಂಗು ಸೇರಿಸಬೇಕು.ಇದು ದಪ್ಪ ಅನಿಸಿದರೆ ಮತ್ತಷ್ಟು ಮೊಸರು ಸೇರಿಸಬಹುದು.
ಈಗ ನಮ್ಮ ವುದ್ನೆಟ್ ರೆಡಿ.ಇದನ್ನು ಬಿಸಿ ಅನ್ನದ ಜೊತೆ ಕಲಸಿ ತಿಂದರೆ ಬಹಳ ರುಚಿ.

Sunday, February 20, 2011

ಗಂಜಿ ಮಾಡುವುದು ಹೇಗೆ?

                                                   ಗಂಜಿ ಮಾಡುವುದು ಹೇಗೆ?
ಗಂಜಿ ಅನ್ನುವುದು ಒಂದು ಪೌಷ್ಟಿಕ ಆಹಾರ.ಈಗ ಗಂಜಿಯನ್ನು ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.
ಮೊದಲಿಗೆ ಒಂದು ಪಾತ್ರೆಯಲ್ಲಿ ಅದರ ಮುಕ್ಕಾಲು ಭಾಗದಷ್ಟು ನೀರು ತುಂಬಿಸಿ ಮಧ್ಯಮ ಉರಿಯಲ್ಲಿ ಕಾಯಲು ಬಿಡಿ.ಇದೇ ಸಮಯದಲ್ಲಿ ಸುಮಾರು ೩ ಜನಕ್ಕೆ ೨ ೧/೨ ಪಾವಿನಷ್ಟು ಬೆಳ್ತಿಗೆ ಅಕ್ಕಿಯನ್ನು ಅಳತೆ ಮಾಡಿ ಅದರಲ್ಲಿ ಕಲ್ಲುಗಳು ಮತ್ತು ಹುಳಗಳು ಇಲ್ಲದಂತೆ ಕಸ ತೆಗೆಯಬೇಕು.
ಈಗ ನೀರು ಕಾಯಲು ಇಟ್ಟದ್ದು ಅದರಿಂದ ಗುಳ್ಳೆಗಳು ಬರುವವರೆಗೆ ನೀರು ಕಾಯಬೇಕು.ಅದೇ ಹೊತ್ತಿನಲ್ಲಿ ನಾವು ಕಸದಿಂದ ಶುದ್ಧಗೊಳಿಸಿದ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು,ಅದನ್ನು  ೩ ರಿಂದ ೪ ಬಾರಿ ತಣ್ಣೀರಿನಿಂದ ತೊಳೆಯಬೇಕು.ಹೀಗೆ ಮಾಡುವುದರಿಂದ ಅಕ್ಕಿಯು ಶುದ್ಧವಾಗುತ್ತದೆ.ನಂತರ ಈ ಅಕ್ಕಿಯನ್ನು ನೀರು ಇಲ್ಲದಂತೆ ಸೋಸಿ ನಂತರ ಅದನ್ನು ಕುದಿಯುತ್ತಿರುವ ನೀರಿಗೆ ಹಾಕಬೇಕು.
ಈಗ ಅಕ್ಕಿಯು ಕುದಿಯುತ್ತಿರುವ ನೀರಿನ ಜೊತೆ ಬೆಂದು ಅನ್ನವಾಗುತ್ತದೆ.ಇದಕ್ಕೆ ಸುಮಾರು ೧/೨ ಗಂಟೆಯಷ್ಟು ಸಮಯ  ತಗಲುತ್ತದೆ.ಈ ಸಮಯದಲ್ಲಿ ಆಗಾಗ ಬಂದು ಕೈ ಆಡಿಸುತ್ತಾ ಅಕ್ಕಿ ಸರಿಯಾಗಿ ಬೆಂದಿದೆಯೇ ಎನ್ನುವುದನ್ನು ಪರೀಕ್ಷಿಸುತ್ತಿರಬೇಕು.ಯಾವಾಗ ಬೇಯುತ್ತಿರುವ ಅಕ್ಕಿಯು ಮೃದುವಾಗಿ ಅದನ್ನು ಹಿಚಿಕಿದಾಗ ತುಂಡಾಗುತ್ತದೆಯೋ ,ಆಗ ಅಕ್ಕಿಯು ಅನ್ನವಾಗಿದೆ ಎಂದರ್ಥ.
ನಂತರದ ಕೆಲಸವೇ ಈ ಅನ್ನವನ್ನು ಬಸಿಯುವುದು.ಅನ್ನದ ಪಾತ್ರೆಯನ್ನು ಇನ್ನೊಂದು ಪಾತ್ರೆಗೆ ಬೋರಲು ಮಾಡಿ,ಅದರ ನೀರೆಲ್ಲಾ ಕೆಳಗೆ ಅಂದರೆ ಬೇರೆ ಪಾತ್ರೆಗೆ ಬೀಳುವಂತೆ ಮಾಡಬೇಕು.ಈ ನೀರೇ ತೆಳಿ.ಈಗ ಬೇರ್ಪಟ್ಟ ಅನ್ನವನ್ನು ಒಂದು ಬಟ್ಟಲಿಗೆ ಹಾಕಿಕೊಂಡು ಅದಕ್ಕೆ ಈ ತೆಳಿಯನ್ನು ಹಾಕಿಕೊಂಡು ನಂತರ ಅದಕ್ಕೆ ಉಪ್ಪು ಮತ್ತು ತುಪ್ಪ ಹಾಕಿಕೊಂಡು ಕಲಸಿಕೊಳ್ಳಬೇಕು.
ಹೀಗೆ ಸಿದ್ಧವಾದ ಗಂಜಿಯನ್ನು ಉಪ್ಪಿನಕಾಯಿ ಜೊತೆ ತಿಂದರೆ ಬಹಳ ರುಚಿ.ಇದು ಪೌಷ್ಟಿಕ ಆಹಾರವಾದ ಕಾರಣ ಜ್ವರ ಬಂದಾಗ ಮತ್ತು ಇತರ ಖಾಯಿಲೆಗಳು ಬಂದಾಗ ರೋಗಿಗೆ ಇದನ್ನು ಬಿಸಿಬಿಸಿಯಾಗಿ ತಿನ್ನಲು ಕೊಡುತ್ತಾರೆ.ಇದರಿಂದ ತಕ್ಷಣವೇ ಶಕ್ತಿ ಬರುತ್ತದೆ.

Saturday, February 19, 2011

ಕೆರೆಯ ನೀರನ್ನು ಕೆರೆಗೆ ಚೆಲ್ಲಿ.....

                                     ಕೆರೆಯ ನೀರನ್ನು ಕೆರೆಗೆ ಚೆಲ್ಲಿ.....
ವಲ್ಲಭಾಚಾರ್ಯರು ತಮ್ಮ ಕಾಲದ ಪ್ರಕಾಂಡ ವಿದ್ವಾಂಸರು.ಒಮ್ಮೆ ಅವರು ವಾದ ಕೂಟದಲ್ಲಿ ಎಲ್ಲಾ ಜಯವನ್ನು ಗಳಿಸುತ್ತಾ ಶ್ರೀಕೃಷ್ಣ ದೇವರಾಯನ ಆಸ್ಥಾನಕ್ಕೆ ಬಂದರು.ಆಗ ರಾಜನು ಒಂದು ವಾದ ಗೋಷ್ಠಿಯನ್ನು ಏರ್ಪಾಟು ಮಾಡಿದನು.ವಲ್ಲಭಾಚಾರ್ಯರು ಅದ್ವೈತ ಸಿದ್ಧಾಂತದಲ್ಲಿ ಪಂಡಿತರು.ಹೀಗಾಗಿ ರಾಜನು ಹಿಂದೂ ಧರ್ಮದ ೩ ಪಂಗಡಗಳಾದ ದ್ವೈತ,ಅದ್ವೈತ,ವಿಶಿಷ್ಟಾದ್ವೈತ ಇವುಗಳಲ್ಲಿ ಚರ್ಚೆಯನ್ನು ಏರ್ಪಡಿಸಿದನು.
ವಲ್ಲಭಾಚಾರ್ಯರು ತಮ್ಮ ಪಾಂಡಿತ್ಯದಿಂದ ಎಲ್ಲರನ್ನೂ ಸೋಲಿಸಿದರು.ಇದರಿಂದ ಪ್ರಭಾವಿತನಾದ ರಾಜನು ಅವರಿಗೆ ೧೦೦ ಮಣ ಬಂಗಾರದ ನಾಣ್ಯಗಳನ್ನು ಬಹುಮಾನವಾಗಿ ನೀಡಿದನು.
ಆದರೆ ವಲ್ಲಭಾಚಾರ್ಯರು ಅದರಲ್ಲಿ ಕೇವಲ ೭ ಬಂಗಾರದ ನಾಣ್ಯಗಳನ್ನು ತಮ್ಮ ಬಳಿ ಇಟ್ಟುಕೊಂಡು ಉಳಿದದ್ದನ್ನು ಅಲ್ಲಿದ್ದ ಬಡವರಿಗೆ ದಾನ ಮಾಡಿದರು.ತಾವು ತೆಗೆದುಕೊಂಡ ೭ ಬಂಗಾರದ ನಾಣ್ಯಗಳನ್ನು ಅವರು ಕರಗಿಸಿ ಅದರಿಂದ ಆಭರಣಗಳನ್ನು ತಯಾರಿಸಿ ಅವನ್ನು ತಿರುಪತಿ ವೆಂಕಟರಮಣ ನಿಗೆ ಅರ್ಪಿಸಿದರು.ಹೀಗೆ ಅವರು ನಿಜವಾದ ಅರ್ಥದಲ್ಲಿ ತಮಗೆ ಸಿಕ್ಕಂಥ ಹಣವನ್ನು ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ ಒಳ್ಳೆಯ ಕೆಲಸಕ್ಕಾಗಿ ವಿನಿಯೋಗಿಸಿದರು.

ಉಪದೇಶ ನೀಡುವುದು ಸುಲಭ

                                             ಉಪದೇಶ ನೀಡುವುದು ಸುಲಭ
ಆಚಾರ್ಯ ವಿನೋಬಾ  ಭಾವೆ ಅವರು  ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವರು.ಭಾರತದಲ್ಲಿ ಬಡವರ ದುಡಿಯಲಾಗದೆ ಇರುವ ಕಷ್ಟ ಕಂಡು ಅವರು ಭೂದಾನ ಚಳುವಳಿಯನ್ನು ಪ್ರಾರಂಭಿಸಿದರು.ಆ ಚಳುವಳಿಯಲ್ಲಿ ಬಹಳ ಭೂಮಿಯನ್ನು ಹೊಂದಿರುವ ಶ್ರೀಮಂತರು ತಾವೇ ಸ್ವ ಇಚ್ಛೆಯಿಂದ ತಮ್ಮಲ್ಲಿರುವ ಹೆಚ್ಚಿನ ಭೂಮಿಯನ್ನು ಬಡವರಿಗೆ ದಾನ ಮಾಡುವುದು.
ಹೀಗೆ ಅವರು ಭಾರತದೆಲ್ಲೆಡೆ ಸಂಚರಿಸುತ್ತಾ ಒಂದು ಹಳ್ಳಿಗೆ ಬಂದರು.ಹಳ್ಳಿಗರಿಗೆ ಸಂಭ್ರಮವೋ ಸಂಭ್ರಮ.ಅವರು ವಿನೋಬಾ ಭಾವೆ ಅವರ ಭಾಷಣಕ್ಕೆ ಏರ್ಪಾಟು ಮಾಡಿದರು.ಮೊದಲು ಓರ್ವ ಗ್ರಾಮಸ್ಥ ವಿನೋಬಾ ಭಾವೆ ಅವರ ಬಗ್ಗೆ ಹೇಳುತ್ತಾ ಊರಿನ ಶ್ರೀಮಂತರು ತಮ್ಮ ಹೆಚ್ಚುವರಿ ಭೂಮಿಯನ್ನು ಬಡವರಿಗೆ ದಾನ ಮಾಡಬೇಕೆಂದು ಮನವಿ ಮಾಡಿಕೊಂಡನು.
ಆದರೆ ಆತನ ಮಾತುಗಳು ಹಳ್ಳಿಗರ ಮೇಲೆ ಯಾವ ಪ್ರಭಾವವನ್ನೂ ಬೀರಲಿಲ್ಲ.ಏಕೆಂದರೆ ಯಾರೂ ತಮ್ಮ ಹೆಚ್ಚುವರಿ ಭೂಮಿಯನ್ನು ದಾನ ಮಾಡಲು ಮುಂದೆ ಬರಲಿಲ್ಲ.ಇದನ್ನೆಲ್ಲಾ ಗಮನಿಸುತ್ತಿದ್ದ ವಿನೋಬಾ ಭಾವೆ ಅವರು ಆ ಹಳ್ಳಿಗನನ್ನು ತಮ್ಮ ಬಳಿ ಕರೆದು ಆತನ ಬಳಿ ಎಷ್ಟು ಭೂಮಿ ಇದೆಯೆಂದು ವಿಚಾರಿಸಿದರು.ಆಗ ಆತ ತಾನೋರ್ವ ಸಣ್ಣ ರೈತನೆಂದೂ,ತನ್ನ ಬಳಿ ಅಷ್ಟು ಭೂಮಿ ಇಲ್ಲವೆಂದೂ ಹೇಳಿದ.
ಆಗ ವಿನೋಬಾ ಭಾವೆ ಅವರು ಇತರರಿಗೆ ಉಪದೇಶ ನೀಡುವ ಮೊದಲು ತಮ್ಮಿಂದ ಅದನ್ನು ಪಾಲಿಸಲು ಆಗುತ್ತದೆಯೇ? ಎಂಬುದನ್ನು ಮೊದಲು ನೋಡಬೇಕು ಎಂದರು.ಇದರಿಂದ ಲಜ್ಜೆಗೊಂಡ ಆತ ತನ್ನ ಬಳಿ ೧೦ ಎಕರೆ ಭೂಮಿ ಇರುವುದಾಗಿಯೂ ಅದರಲ್ಲಿ ತಾನು ೨ ಎಕರೆ ಭೂಮಿಯನ್ನು ದಾನವಾಗಿ ನೀಡಲು ಸಿದ್ಧನಿರುವುದಾಗಿ ತಿಳಿಸಿದ.ಆತ ಹೀಗೆ ಹೇಳಿದ ತಕ್ಷಣವೇ ಇತರ ಶ್ರೀಮಂತರೂ ಭೂದಾನ ಮಾಡಲು ಮುಂದೆ ಬಂದರು.
ನೀತಿ:ಇತರರಿಗೆ ಉಪದೇಶ ನೀಡುವ ಮೊದಲು ಅದನ್ನು ತಮಗೆ ಪಾಲಿಸಲು ಸಾಧ್ಯವೇ ಎಂಬುದನ್ನು ನೋಡಬೇಕು.

ಆಸೆ

                                                      ಆಸೆ
ಕಾದ ಹೆಂಚಿನ ಮೇಲೆ ಏಳುತ್ತದೆ ದೋಸೆ
ನನ್ನ ಜೀವನದಲ್ಲೂ ಒಳ್ಳೆಯ ದಿನಗಳು ಬರುವುದೆಂಬ ಆಸೆ;
ವಾತಾವರಣದ ಏರುಪೇರಿನ ಮೇಲೆ ನನ್ನ ಆರೋಗ್ಯ ಅವಲಂಬಿತ
ಸಿಗುತ್ತದೆಯೇ ನನಗೆ ಖುಷಿಯೇ ಜೀವನದಲ್ಲಿ ಸತತ?

Thursday, February 17, 2011

ಗತಿಸಿದ ಕಾಲ

                                                    ಗತಿಸಿದ ಕಾಲ
ಗತಿಸಿದ ಕಾಲ ಎಂದೂ ಮರಳಿ ಬಾರದು
ಏನೂ ಸಾಧಿಸದೆ ಇರುವ ಕೊರಗು ಮನದಲ್ಲಿ ಇರುವುದು;
ಯಾರೂ ಕಂಡು-ಕೇಳರಿಯದ ಖಾಯಿಲೆಯಿಂದ ಬಳಲುತ್ತಿರುವೆ  ನಾನು
ಕಾಲಿಗೆ ಬಲವಿಲ್ಲದ್ದಿದ್ದರೇನಂತೆ?ಕುದುರೆಯಂತೆ ಓಡುತಿಹುದು ಮನವು.


ನಡೆಯಲಾಗುವುದಿಲ್ಲ,ಆದರೂ ನಾನು ನಡೆದು ತೋರಿಸುವ ಕಾಲ ಬಂದಿದೆ
ಯಾರೇನೇ ಅಂದರೂ , ಮುನ್ನುಗ್ಗುತ್ತಲಿರುವೆ ಧೃತಿಗೆಡದೆ;
ಪಾಲಕರ ಉಪಕಾರವನ್ನು ಎಂತು ಮರೆಯಲಿ?
ಸಲಹುತ್ತಿದ್ದಾರೆ ನನ್ನನ್ನು ಜೋಪಾನದಿಂದ ,ತಟ್ಟದಂತೆ ಸಮಸ್ಯೆಗಳ ಸುಳಿ..


Wednesday, February 16, 2011

ಭಕ್ತಿಯ ಶಕ್ತಿ

                                             ಭಕ್ತಿಯ ಶಕ್ತಿ
ಗೀತಗೋವಿಂದ  ಕಾವ್ಯವನ್ನು ಬರೆದ ಕವಿ ಜಯದೇವ ಬಹಳ ದೊಡ್ಡ ಕೃಷ್ಣ ಭಕ್ತನಾಗಿದ್ದ.ಆತನ ಭಕ್ತಿ ಎಷ್ಟರ ಮಟ್ಟಿನದೆಂದರೆ ಆತ ಗೀತ ಗೋವಿಂದವನ್ನು ಬರೆಯುವಾಗ  ಸಾಕ್ಷಾತ್ ಕೃಷ್ಣನೇ ಬಂದು ಆತನ ಮುಂದೆ ಬಂದು ನರ್ತಿಸುತ್ತಿದ್ದನಂತೆ.ಹೀಗಿರುವಾಗ ಒಮ್ಮೆ ಆತನ ಬಳಿ ಓರ್ವ ಶ್ರೀಮಂತ ಬರುತ್ತಾನೆ.ಆತನ ಬಳಿ ಒಂದು ಕಾಗದವಿರುತ್ತದೆ.ಅದನ್ನು ಜಯದೇವನಿಗೆ ತೋರಿಸಿ ನಿನ್ನ ತಂದೆ ನನ್ನ ಬಳಿ ಸಾಲ ಮಾಡಿದ್ದ.ಈಗ ಅದು ಬಡ್ಡಿಗೆ ಬಡ್ಡಿ ಬೆಳೆದು ತುಂಬಾ ಆಗಿದೆ.ಅದಕ್ಕಾಗಿ ಈಗ ಈ ಮನೆಯನ್ನೇ ಅಡವಿರಿಸಿಕೊಳ್ಳಲು ಯೋಚಿಸಿದ್ದೇನೆ.ಈ ಪತ್ರಕ್ಕೆ ಒಂದು ರುಜು ಹಾಕು ಎಂದನು.ಜಯದೇವನಿಗೋ ಇದರ ಬಗ್ಗೆ ಏನೂ ತಿಳಿದಿಲ್ಲ.ಆದರೂ ಆತ ರುಜು ಹಾಕಲು ತಯಾರಾಗುತ್ತಾನೆ.
ಅವನು ಇನ್ನೇನು ರುಜು ಹಾಕಬೇಕು ಎನ್ನುವಷ್ಟರಲ್ಲಿ ಆ ಶ್ರೀಮಂತನ ಮಗಳು ಓಡಿ ಬಂದು ಮನೆಗೆ ಬೆಂಕಿ ಬಿದ್ದಿರುವುದಾಗಿ ತಿಳಿಸುತ್ತಾಳೆ. ಕೂಡಲೇ ಶ್ರೀಮಂತ ಬಾಯಿ ಬಡಿದುಕೊಂಡು ಅತ್ತ ಓಡುತ್ತಾನೆ.ಆದರೆ ಅಷ್ಟರಲ್ಲಾಗಲೇ ಬೆಂಕಿಯ ಕೆನ್ನಾಲಿಗೆಗಳು ಮನೆಯನ್ನು ಸುತ್ತುವರಿದಿರುತ್ತವೆ.ಶ್ರೀಮಂತನ ಹಿಂದೆಯೇ ಜಯದೇವನೂ ಬಂದಿರುತ್ತಾನೆ.ಶ್ರೀಮಂತನ ಮನೆಗೆ  ವ್ಯಾಪಿಸಿದ ಬೆಂಕಿಯನ್ನು ಕಂಡು ಜಯದೇವನು ಉರಿಯುತ್ತಿರುವ ಮನೆಗೆ ನುಗ್ಗುತ್ತಾನೆ.
ಅದೇನಾಶ್ಚರ್ಯ!ಜಯದೇವನು ಮನೆಗೆ ಹೊಕ್ಕ ತಕ್ಷಣವೇ ಅದೆಲ್ಲಿಂದಲೋ ಕಪ್ಪು ಮೋಡಗಳು ಮನೆಯ ಮೇಲುಗಡೆ ಬಂದು ಮಳೆಯನ್ನು ಸುರಿಸುತ್ತವೆ.ಬೆಂಕಿ ಕೂಡಲೇ ನಂದಿ ಹೋಗುತ್ತದೆ.ಇದನ್ನೆಲ್ಲಾ ಕಣ್ಣಾರೆ ಕಂಡ ಶ್ರೀಮಂತ ಜಯದೇವನ ಬಳಿ ಬಂದು ಆತನಿಗೆ ಧನ್ಯವಾದ ಅರ್ಪಿಸುತ್ತಾನೆ ಮತ್ತು ಆತನ ಮನೆಯನ್ನು ಅವನಿಗೆ ವಾಪಸ್ ಕೊಡುತ್ತಾನೆ.
ನೀತಿ:ನಂಬಿದವರನ್ನು ದೇವರು ಯಾವತ್ತೂ ಕೈಬಿಡುವುದಿಲ್ಲ.

Tuesday, February 15, 2011

ನಡೆ-ನುಡಿ ಹೇಗಿರಬೇಕು?

                                           ನಡೆ-ನುಡಿ ಹೇಗಿರಬೇಕು?
ಮತ್ತೊಬ್ಬರ ಜೊತೆ ಮಾತನಾಡುವಾಗ ಹೇಗೆ ವರ್ತಿಸಬೇಕು?ಎಂಬುದಕ್ಕೆ ಒಂದು ಕಥೆ ಇಲ್ಲಿದೆ.
ಹಿಂದೆ ಭಾರತವನ್ನು ಮುಘಲ್ ದೊರೆ ಹುಮಾಯೂನ್ ಆಳುತ್ತಿದ್ದ ಕಾಲ.ಬಹ್ರಾಂ ಖಾನ್ ಎಂಬುವವನು ಆತನ ಸೇನಾಪತಿ.ಒಮ್ಮೆ ಹುಮಾಯೂನ್ ತನ್ನ ಸೈನ್ಯದ ಬಗ್ಗೆ ಚರ್ಚಿಸಲು ಬಹ್ರಾಂ ಖಾನ್ ಅನ್ನು ತನ್ನ ಬಳಿಗೆ ಕರೆಸಿಕೊಂಡು ಮಾತನಾಡುತ್ತಿದ್ದ.ಆದರೆ ಬಹ್ರಾಂ ಖಾನ್ ರಾಜನನ್ನು ಕಂಡ ತಕ್ಷಣವೇ ತಲೆ ತಗ್ಗಿಸಿದವನು ಮತ್ತೆ ತಲೆ ಮೇಲೆ ಎತ್ತಲೇ ಇಲ್ಲ.ಇದನ್ನು ಗಮನಿಸಿದ ಹುಮಾಯೂನ್ ಗೆ ತನ್ನ ಮಾತಿನ ಕಡೆ ಸೇನಾಪತಿ ಲಕ್ಷ್ಯ  ಕೊಡುತ್ತಿಲ್ಲ ಎಂದು ಭಾಸವಾಯಿತು.
ಅವನು  ಅದನ್ನು ಸೇನಾಪತಿಗೆ ಹೇಳಿಯೂ ಬಿಟ್ಟ.ಆಗ ಬಹ್ರಾಂ ಖಾನ್ ತಾನು ಧರ್ಮ ಶಾಸ್ತ್ರದಲ್ಲಿ ಹೇಳಿದ ಹಾಗೆ ಮಾಡುತ್ತಿದ್ದೇನೆ ಎಂದು ಉತ್ತರಿಸಿದ.ಕುತೂಹಲಗೊಂಡ ಹುಮಾಯೂನ್ ಅದೇನೆಂದು ಕೇಳಲು ಬಹ್ರಾಂ ಖಾನ್ ಧರ್ಮಶಾಸ್ತ್ರದಲ್ಲಿ ಮೂವರಿಗೆ ಮಾತನಾಡುವಾಗ ಗೌರವ ನೀಡಬೇಕೆಂದು ಇದೆ.
೧.ಧರ್ಮ ಗುರುಗಳು ಮಾತನಾಡುವಾಗ.
೨.ರಾಜ ಅಥವಾ ಇತರ ಉನ್ನತ ಅಧಿಕಾರಿಗಳು ಮಾತನಾಡುವಾಗ.
೩.ಮಹಿಳೆಯರು ಮಾತನಾಡುವಾಗ.
ಈ ಸಂಧರ್ಭಗಳಲ್ಲಿ ವ್ಯಕ್ತಿಯು ಮಾತನಾಡುವ ವ್ಯಕ್ತಿಯ ಕಣ್ಣಿನಲ್ಲಿ ಕಣ್ಣು ಇಟ್ಟು ಮಾತನಾಡದೆ ತಲೆ ತಗ್ಗಿಸಿ ಅವರ ಮಾತು ಕೇಳಿಕೊಂಡು ,ಅವರಿಗೆ ಗೌರವ ತೋರಿಸಬೇಕು ಎಂದನು.

Monday, February 14, 2011

ಯಾರಿಗೆ ಹೇಳಲಿ?

                                   ಯಾರಿಗೆ ಹೇಳಲಿ?
ಹೇಳುವೆನೆಂದರೂ ಯಾರಿಗೆ ಹೇಳಲಿ?
ಮನದ ತಳಮಳವ ಹತ್ತಿಕ್ಕಲಾರದೆ ಹೋಗುತ್ತಿದ್ದೇನೆ ಬಳಲಿ;
ನನ್ನ ವಯಸ್ಸಿನ ಹುಡುಗಿಯರ ಸಾಧನೆಯ ಕಂಡು ಆಗುತ್ತಿದೆ ಬೆರಗು
ಆಸ್ಪತ್ರೆ-ಮನೆ ಇಷ್ಟರಲ್ಲೇ ನನ್ನ ಜೀವನ ಮುಗಿದು ಹೋಗುತ್ತಿದೆಯಲ್ಲಾ ಎಂಬ ಕೊರಗು.

ನನ್ನ ಸ್ಥಿತಿ ನೋಡಿ ಪರರು ನಗುವರೆಂಬ ಸಂಶಯ
ನನಗೂ ಸಹಾನುಭೂತಿ ತೋರಿಸಿ ಎಂಬುದೇ ನನ್ನ ಆಶಯ;
ಎಲ್ಲರಂತೆ ನಾನಿಲ್ಲ ಎಂಬುದು ವಾಸ್ತವ
ಆ ಭಾವನೆಯೇ ಕೊಲ್ಲುತ್ತಿದೆ ನನ್ನ ಮನವ.



Sunday, February 13, 2011

ಸರಮೆ ಎಂಬ ದೇವನಾಯಿ

                                                ಸರಮೆ ಎಂಬ ದೇವನಾಯಿ
ಸರಮೆ ಎಂಬುದು ದೇವತೆಗಳ ರಾಜ ಇಂದ್ರನ ಬಳಿಯಿದ್ದ ನಾಯಿ.ಸರಮೆಯೇ ಭೂಲೋಕದ ನಾಯಿಗಳಿಗೂ ಮೂಲ ಎಂದು ನಂಬಲಾಗಿದೆ.ಹೀಗಿರುವಾಗ ದೇವಲೋಕಕ್ಕೆ ದಾನವರಿಂದ ಅಪಾಯವಿರುವುದನ್ನು ಮನಗಂಡ ದೇವೇಂದ್ರ ಒಂದು ಯಾಗ ಮಾಡಲು ಸಂಕಲ್ಪಿಸಿದ.ಅದರಂತೆ ಯಾಗದಲ್ಲಿ ದಾನವಾಗಿ ನೀಡಲು ದನಗಳನ್ನು ಕಲೆಹಾಕಿದ.ಮತ್ತು ಅವುಗಳನ್ನು ನೋಡಿಕೊಳ್ಳಲು ಸರಮೆಯನ್ನು ನೇಮಿಸಿದ.
ಆದರೆ ಇದರ ಸುಳಿವು ಹತ್ತಿದ ದಾನವರು ಆ ದನಗಳನ್ನೇ ಅಪಹರಿಸಲು ಸಂಚು ಹೂಡಿದರು.ಆದರೆ ಸರಮೆಯು ಅವರಿಗೆ ಹಾಗೆ ಮಾಡಲು ಬಿಡಲಿಲ್ಲ.ಕೊನೆಗೆ ದಾನವರು ಸರಮೆಗೆ ತಾವು ಕದ್ದುದರಲ್ಲಿ ಅರ್ಧ ಪಾಲನ್ನು ಕೊಡುವುದಾಗಿ ಆಸೆ ತೋರಿಸಿದರು.ಇದನ್ನು ನಂಬಿದ ಸರಮೆ ದಾನವರಿಗೆ ಹಸುಗಳನ್ನು ಕೊಂಡೊಯ್ಯಲು ಬಿಟ್ಟಿತು.ದಾನವರು ಹೋಗುವ ಮೊದಲು ಸರಮೆಗೆ ಹಸುಗಳ ಸ್ವಲ್ಪ ಹಾಲನ್ನು ಕುಡಿಯಲು ಅನುವು ಮಾಡಿಕೊಟ್ಟರು.
ಇಂದ್ರ ಹಸುಗಳ ಕಳುವಿನ ಬಗ್ಗೆ ಸರಮೆಯನ್ನು ಕೇಳಿದಾಗ ಅದು ತನಗೆ ಏನೂ ಗೊತ್ತಿಲ್ಲವೆಂದು ವಾದಿಸಿತು.ಇದರಿಂದ ಸಿಟ್ಟಾದ ಇಂದ್ರ ಸರಮೆಯನ್ನು ಝಾಡಿಸಿ ಒದ್ದ.ಆ ಹೊಡೆತದ ಪರಿಣಾಮವಾಗಿ ಸರಮೆ ಕುಡಿದಿದ್ದ ಹಾಲು ಎಲ್ಲಾ ಹೊರಗೆ ಚೆಲ್ಲಿತು.ಆಗ ಸರಮೆಯ ಬಣ್ಣ ಬಯಲಾಯಿತು.
ನಂತರ ಸರಮೆ ದೇವೇಂದ್ರನಿಗೆ ನಡೆದ್ದಿದ್ದನ್ನು ತಿಳಿಸಿತು.ನಂತರ ಸರಮೆ ದೇವೇಂದ್ರ ಮತ್ತು ಇತರ ದೇವತೆಗಳನ್ನು ಹಸುಗಳು ಇದ್ದ ಜಾಗವನ್ನು ವಾಸನೆಯ ಮೂಲಕ ಕಂಡುಹಿಡಿದು ಹಸುಗಳನ್ನು ಪತ್ತೆ ಹಚ್ಚಿತು.ನಂತರ ದೇವತೆಗಳು ದಾನವರೊಡನೆ ಯುದ್ಧ ಮಾಡಿ ಹಸುಗಳನ್ನು ಹಿಂದಕ್ಕೆ ಪಡೆದುಕೊಂಡರು.

Saturday, February 12, 2011

ಸ್ವರ್ಗ-ನರಕ

                                          ಸ್ವರ್ಗ-ನರಕ
ಸ್ವರ್ಗ ಮತ್ತು ನರಕದ ಇರುವಿಕೆಯನ್ನು  ಕಂಡವರಿಲ್ಲ.ಆದರೂ ಇಲ್ಲೊಂದು ಕಥೆ ಅದರ ಬಗ್ಗೆ ಹೇಳುತ್ತದೆ.
ಬಹಳ ಹಿಂದೆ ಓರ್ವನಿಗೆ ಸ್ವರ್ಗ ಮತ್ತು ನರಕಗಳು ನಿಜವಾಗಿಯೂ ಇವೆಯೇ? ಎಂದು ಶಂಕೆ ಹುಟ್ಟಿತು.ಆತ ತನಗೆ ಪರಿಚಯವಿದ್ದವರನ್ನೆಲ್ಲ ಇದರ ಬಗ್ಗೆ ಕೇಳಿದ.ಆದರೆ ಪ್ರತಿ ಒಬ್ಬರು ತಮ್ಮದೇ ವಿಚಾರ ಧಾರೆಯನ್ನೇ ಮುಂದಿಡುತ್ತಿದ್ದರು.ಇದರಿಂದ ಆತನಿಗೆ ಸಮಾಧಾನ ವಾಗಲಿಲ್ಲ.ಕೊನೆಗೆ ದೇವರ ಬಳಿ ಇದರ ಬಗ್ಗೆ ಕೇಳೋಣ ಎಂದು ಆತ ದೇವರನ್ನು ಕುರಿತು ತಪಸ್ಸು ಮಾಡಿ ದೇವರನ್ನು ಸಾಕ್ಷಾತ್ಕಾರ ಮಾಡಿಕೊಂಡ.
ದೇವರ ಬಳಿ ತನ್ನ ಶಂಕೆಯನ್ನು ಹೇಳಿಕೊಂಡ.ಆಗ ದೇವರು ತನ್ನೊಂದಿಗೆ ಬರುವಂತೆ ಅವನಿಗೆ ತಿಳಿಸಿದರು.ದೇವರು ಆತನನ್ನು ಎರಡು ಕೋಣೆಗೆ ಕರೆದೊಯ್ದರು.ಒಂದು ಕೋಣೆಯಲ್ಲಿ ವಿಶಾಲವಾದ ಮೇಜಿತ್ತು.ಅದರ ಮೇಲೆ ವಿವಿಧ ತಿಂಡಿ-ತಿನಿಸುಗಳು ಇದ್ದವು.ಅದರ ಸುತ್ತ ಜನರು ನೆರೆದಿದ್ದರು.ತಿಂಡಿಯನ್ನು ತಿನ್ನಲು ಅವರಿಗೆಲ್ಲಾ ಒಂದು ಉದ್ದದ ಹಿಡಿ ಉಳ್ಳ ಚಮಚವನ್ನು ನೀಡಲಾಗಿತ್ತು.ಆದರೆ ಅವರಾರೂ ತಿಂಡಿ ತಿನ್ನುತ್ತಿರಲಿಲ್ಲ.ಅವರೆಲ್ಲ ರೋಗಿಷ್ಟರಂತೆ ಕಾಣುತ್ತಿದ್ದರು.ಅವರಿಗೆ ತಮ್ಮ ಮುಂದೆ ಇದ್ದ ಭಕ್ಷಗಳ ಪರಿವೆಯೇ ಇರಲಿಲ್ಲ.ಅವರೆಲ್ಲರೂ ಬಹಳ ದುಃಖದಲ್ಲಿ ಇದ್ದರು.
ನಂತರ ದೇವರು ಅವನನ್ನು ಇನ್ನೊಂದು ಕೋಣೆಗೆ ಕರೆದೊಯ್ದರು.ಅಲ್ಲೋ ಹಿಂದಿನ ಕೋಣೆಯಂತೆಯೇ ವಿವಿಧ ಭಕ್ಷಗಳಿದ್ದವು.ಅದರ ಸುತ್ತಾ ಜನರೂ ಸೇರಿದ್ದರು.ಆದರೆ ಅವರೆಲ್ಲರೂ ಸಂತಸದಿಂದ ಇದ್ದರು.ಇಲ್ಲೂ ಅವರಿಗೆ ತಿಂಡಿ ತಿನ್ನಲು ಹಿಂದಿನ ಕೋಣೆಯಂತೆಯೇ ಉದ್ದದ ಹಿಡಿ ಉಳ್ಳ ಚಮಚವನ್ನು ನೀಡಲಾಗಿತ್ತು.ಆದರೆ ಅವರೆಲ್ಲರೂ ಸಂತಸದಿಂದ ಇದ್ದರು.ಇದು ಭಕ್ತನಿಗೆ ಕಂಡು ಬಂದು ಅವನಿಗೆ ಸೋಜಿಗವೆನಿಸಿತು.ಅವನು ದೇವರನ್ನು ಕೇಳಿದ.
ಆಗ ದೇವರು ಮೊದಲು ನೋಡಿದ ಕೋಣೆಯೇ ನರಕ.ಅಲ್ಲಿ ಇರುವ ಜನರು ಒಬ್ಬರಿಗೆ ಒಬ್ಬರು ಸಹಾಯ ಮಾಡುವುದಿಲ್ಲ.ಆದ್ದರಿಂದ ದುಃಖದಲ್ಲಿ ಇದ್ದಾರೆ.ಆದರೆ ಎರಡನೇ ಕೋಣೆಯ ಜನರು ಒಬ್ಬರಿಗೆ ಒಬ್ಬರು ಸಹಾಯ ಮಾಡುತ್ತಾರೆ.ಉದ್ದವಾದ ಹಿಡಿ ಉಳ್ಳ ಚಮಚವಿದ್ದರೂ ಅದರಲ್ಲಿ ಇತರರಿಗೆ ತಿನ್ನಿಸುತ್ತಾರೆ.ಅದೇ ಸ್ವರ್ಗ.ಆದರೆ ಮೊದಲ ಕೋಣೆಯಲ್ಲಿ ಜನರು ತಾವೂ ತಿನ್ನದೇ,ಪರರಿಗೂ ತಿನ್ನಲು ಬಿಡುತ್ತಿಲ್ಲ.ಆದ್ದರಿಂದ ಅದೇ ನರಕ ಎಂದನು.
ನೀತಿ:ಪರೋಪಕಾರದಲ್ಲೇ ಸ್ವರ್ಗವಿದೆ.

Friday, February 11, 2011

ಮೊದಲು ಮಾನವರಾಗೋಣ

                                   ಮೊದಲು ಮಾನವರಾಗೋಣ
 ಬಾಬು ರಾಜೇಂದ್ರ ಪ್ರಸಾದ್ ಅವರು ಭಾರತದ ಪ್ರಥಮ ರಾಷ್ಟ್ರಪತಿ.ಭಾರತಕ್ಕೆ  ಸ್ವಾತಂತ್ರ್ಯ ಬಂದಾಗ ಭಾರತವನ್ನು ಜಾತ್ಯತೀತ ರಾಷ್ಟ್ರವಾಗಿ ಘೋಶಿಸಬೇಕೆಂಬುದು ಭಾರತದ ಪ್ರಥಮ ಪ್ರಧಾನಿ ನೆಹರು ಅವರ ಆಸೆಯಾಗಿತ್ತು.ಹೀಗಿರುವಾಗಲೇ ಭಾರತ ಸರಕಾರ ಮುಸ್ಲಿಂ ರಾಜರ ಧಾಳಿಯಿಂದ ಹಾನಿಗೊಳಗಾಗಿದ್ದ ಸೋಮನಾಥ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ನಿರ್ಧರಿಸಿತು.ಅಂತೆಯೇ ದೇವಾಲಯದ ಕೆಲಸವೂ ಆರಂಭವಾಯಿತು.
ಕೆಲಸ ಪೂರ್ತಿಯಾದ ಮೇಲೆ ನವೀಕೃತ ದೇವಸ್ಥಾನದ ಉದ್ಘಾಟನೆಗೆ ರಾಜೇಂದ್ರ ಪ್ರಸಾದ್ ಅವರನ್ನು ಕರೆಯಲಾಯಿತು.ಅವರು ಒಪ್ಪಿಕೊಂಡರು.ಆದರೆ ಇದಕ್ಕೆ ಪ್ರಧಾನಿ ನೆಹರು ಅವರು ಅಪಸ್ವರ ಎತ್ತಿದರು.ಅವರ ಪ್ರಕಾರ ಭಾರತ ಒಂದು ಜಾತ್ಯತೀತ ದೇಶ.ಹೀಗಾಗಿ ಒಂದು ಧರ್ಮದ ಕಟ್ಟಡದ ಉದ್ಘಾಟನೆಗೆ ಭಾರತದ ರಾಷ್ಟ್ರಪತಿಗಳು ಹೋಗುವುದು ತರವಲ್ಲ ಎಂಬುದಾಗಿತ್ತು.ಅದನ್ನು ಅವರು ಹೇಳಿದರು ಕೂಡ.
ಆದರೆ ರಾಜೇಂದ್ರ ಪ್ರಸಾದ್ ಅವರು ಇದಕ್ಕೆ ಒಪ್ಪಲಿಲ್ಲ.ಅವರು ತಾನು ಓರ್ವ ಭಕ್ತನಾಗಿ ಮತ್ತು ಮಾನವನಾಗಿ ಕಟ್ಟಡದ ಉದ್ಘಾಟನೆಗೆ ಹೋಗುವುದೇ ಹೊರತು ಭಾರತದ ರಾಷ್ಟ್ರಪತಿಯಾಗಿ ಅಲ್ಲ ಎಂದು ಬಿಟ್ಟರು.ಅಂತೆಯೇ ಅವರು ನಡೆದುಕೊಂಡರು ಕೂಡ.ಅವರು ತಾವು ಹೋಗುವ ಮೊದಲೇ ಸೋಮನಾಥ ದೇವಾಲಯದ ಅಧಿಕಾರಿಗಳಿಗೆ ಹೇಳಿದ್ದರು "ನಾನು ರಾಷ್ಟ್ರಪತಿಯಾಗಿ ಕಾರ್ಯಕ್ರಮಕ್ಕೆ ಬರುತ್ತಿಲ್ಲ.ಓರ್ವ ಸಾಮಾನ್ಯ ಭಕ್ತನಂತೆ ನಾನು ಬರುತ್ತಿದ್ದೇನೆ.ನನ್ನಿಂದಾಗಿ ದೇವರ ಯಾವ ಸೇವೆಯೂ ನಿಧಾನವಾಗದೆ ಅದರ ಸಮಯಕ್ಕೆ ತಕ್ಕಂತೆ ನಡೆಯಲಿ" ಎಂದು ಸೂಚಿಸಿದ್ದರು.
ನೀತಿ:ಮೊದಲು ನಾವು ಎಲ್ಲರೂ ಮಾನವರು.ನಂತರ ನಮ್ಮನ್ನು ಧರ್ಮದ ಆಧಾರದ ಮೇಲೆ ಗುರುತಿಸಿಕೊಳ್ಳಬಹುದು.

ತಾನೊಂದು ಬಗೆದರೆ.....

                                          ತಾನೊಂದು ಬಗೆದರೆ.....
ತಾನೊಂದು ಬಗೆದರೆ ದೈವವೊಂದು ಬಗೆಯಿತು...
ಈ ಸಲವೂ ನನ್ನ ಜೀವನದಲ್ಲಿ ಹೀಗೇ ಆಯಿತು;
ದೇವರಿಗೂ ಒಂದು ದಿನಾ ನನ್ನ ಜೀವನದಲ್ಲಿ ಆಟವಾಡುತ್ತಾ ಬೇಸರ ಬರಬಹುದು
ಆಗ ನನ್ನ ಮೇಲೆ ಕರುಣೆ ಬಂದು,ನನ್ನ ಮೇಲೆ ಕೃಪೆ ತೋರಲು ಮನ ಮಾಡಬಹುದು.


ಆದರೆ ನಾನು ಇಷ್ಟಕ್ಕೆ ನಂಬಿಕೆ ಕಳೆದುಕೊಳ್ಳುವುದಿಲ್ಲ
ಎಲ್ಲದರ ಹಿಂದೆಯೂ ಒಂದಲ್ಲ ಒಂದು ಮರ್ಮ ಖಂಡಿತ ಇರದೇ ಇರಲಿಕ್ಕಿಲ್ಲ;
ದೇವರು ಎಲ್ಲ ಸಂತಸವನ್ನು ಒಮ್ಮೆಗೆ ಕೊಡಲಿಕ್ಕಿಲ್ಲ
ಹೊಟ್ಟೆನೋವು ಬರುವುದು ಒಮ್ಮೆಗೆ ಹೆಚ್ಚು ತಿಂದರೆ ಬೆಲ್ಲ!

Thursday, February 10, 2011

ಸಂಕಲ್ಪದ ಶಕ್ತಿ

                                   ಸಂಕಲ್ಪದ ಶಕ್ತಿ
ಬಹಳ ಹಿಂದೆ ಕೋಸಲ ದೇಶದ ರಾಜನಿಗೆ ತನಗೆ ಇನ್ನೂ ಸಂತಾನವಾಗಿಲ್ಲ ಎಂದು ಬಹಳ ಚಿಂತೆಯಾಗಿತ್ತು.ತನ್ನ ನಂತರ ರಾಜ್ಯವು ಪರರ ಕೈಗೆ ಸೇರಿ ಅಧೋಗತಿಯನ್ನು ಹೊಂದುತ್ತದೆ ಎಂಬುದು ಆತನ ಕೊರಗಾಗಿತ್ತು.ಆತ ಮಾಡದ ವೃತಗಳಿಲ್ಲ ಮತ್ತು ಮಾಡದ ಪೂಜೆಗಳಿಲ್ಲ. ಆದರೂ ಫಲಿತಾಂಶ ಶೂನ್ಯ.
ಹೀಗಿರಲು ತನ್ನ ರಾಜ್ಯಕ್ಕೆ ಓರ್ವ ಮಹಿಮೆಯುಳ್ಳ ತಪಸ್ವಿ ಬಂದಿರುವ ಸಮಾಚಾರ ರಾಜನಿಗೆ ತಿಳಿಯುತ್ತದೆ.ಅವರು ತಮ್ಮ ಮಹಿಮೆಯಿಂದ ಜನರ ಕಷ್ಟಗಳನ್ನು ದೂರ ಮಾಡಬಲ್ಲರು ಎನ್ನುವುದೂ ತಿಳಿಯುತ್ತದೆ.ಹೇಗಾದರೂ ಮಾಡಿ ಅವರ ಜೊತೆ ತನ್ನ ಸಮಸ್ಯೆಯ ಬಗ್ಗೆ ಮಾತನಾಡಬೇಕೆಂದು ರಾಜ ನಿರ್ಧರಿಸುತ್ತಾನೆ.
ಅಂತೆಯೇ ಒಂದು ದಿನಾ ಆತ ರಾಣಿಯ ಜೊತೆಗೂಡಿ ತಪಸ್ವಿಯ ಬಳಿ ಬಂದು ತನ್ನ ಸಮಸ್ಯೆಯನ್ನು ಹೇಳಿಕೊಳ್ಳುತ್ತಾನೆ.ಆದರೆ ತಪಸ್ವಿ ಇದು ತನ್ನಿಂದ ಆಗದು ಎಂದು ಹೇಳಿ ಬಿಡುತ್ತಾನೆ.ಆದರೆ ರಾಜ ಪಟ್ಟು ಬಿಡದೆ ಒತ್ತಾಯಿಸಲಾರಂಭಿಸಿದಾಗ ಕೊನೆಗೆ ತಪಸ್ವಿ ಒಪ್ಪಿಕೊಂಡು ಒಂದು ಕಾಗದದಲ್ಲಿ ಎನೋ ಬರೆದು,ಅದನ್ನು ಒಂದು ತಾಯಿತಕ್ಕೆ ಕಟ್ಟಿ ಅದನ್ನು ರಾಣಿಯ ಕೈಗೆ ಕಟ್ಟುತ್ತಾನೆ.ಅವರಿಗೆ ಒಳ್ಳೆಯದಾಗಲಿ ಎಂದು ಹರಸಿ ಕಳುಹಿಸುತ್ತಾನೆ.
ಹೀಗೆ ಹೋದ ರಾಜ ಹೊಸ ಹುಮ್ಮಸ್ಸಿನಿಂದ ರಾಜ್ಯಭಾರ ಮಾಡಲಾರಂಭಿಸಿದ.ಎಲ್ಲರೊಂದಿಗೂ ನಗುತ್ತಲೇ ವ್ಯವಹರಿಸುತ್ತಿದ್ದ.ಹೀಗಿರುವಾಗ ರಾಣಿ ಗರ್ಭಿಣಿಯಾದಳು.ರಾಜನ ಸಂತಸಕ್ಕೆ ಪಾರವೇ ಇಲ್ಲ.ಆತ ಸಮಸ್ತ ಪ್ರಜೆಗಳಿಗೂ ಉಡುಗೊರೆಯನ್ನು ನೀಡಿದ.ಒಂದು ಶುಭಕಾಲದಲ್ಲಿ ರಾಣಿ ಗಂಡು ಮಗುವಿಗೆ ಜನ್ಮವಿತ್ತಳು.
ಇದಕ್ಕೆಲ್ಲ ಕಾರಣನಾದ ತಪಸ್ವಿಗೆ ವಂದಿಸಲು ರಾಜ ತಪಸ್ವಿಯ ಬಳಿ ಹೋದ.ಆಗ ತಪಸ್ವಿ ರಾಣಿಯ ಕೈಗೆ ಕಟ್ಟಿದ ತಾಯಿತವನ್ನು ಬಿಚ್ಚಿ ನೋಡಲು ತಿಳಿಸಿದ.ಅಂತೆಯೇ ರಾಜ ಮಾಡಲು,ತಾಯಿತದಲ್ಲಿ ಇಟ್ಟಿದ್ದ ಕಾಗದದಲ್ಲಿ ಏನೂ ಇರಲಿಲ್ಲ.ಇದು ರಾಜನ ಆಶ್ಚರ್ಯಕ್ಕೆ ಕಾರಣವಾಯಿತು,ಆಗ ತಪಸ್ವಿ ನಾವು ಮನದಲ್ಲಿ ಏನು ಬೇಕೆಂದು ಚಿಂತನ ಮಾಡುತ್ತೇವೆಯೋ.ನಮ್ಮ ದೇಹ ಅದಕ್ಕೆ ತಕ್ಕಂತೆ ವರ್ತಿಸುತ್ತದೆ. ಹೀಗಿರಲು ಇದರಲ್ಲಿ ನನ್ನ ಪಾತ್ರವೇನು ಇಲ್ಲ.ಎಂದು ತಿಳಿಸಿದ.
ನೀತಿ:ಸಕಾರಾತ್ಮಕ ಚಿಂತನೆಯನ್ನೇ  ಮಾಡಬೇಕು.

ಮೂರಕ್ಕೆ ಮುಕ್ತಾಯ

                                                         ಮೂರಕ್ಕೆ ಮುಕ್ತಾಯ
ಮೂರಕ್ಕೆ ಮುಕ್ತಾಯ ಎಂದು ಕೇಳಿ ತಿಳಿದಿದ್ದೇನೆ ಹಿರಿಯರ ಬಳಿ
ಇನ್ನಾದರೂ ಮುಗಿಯುವುದೇ ನನ್ನ ಆಸ್ಪತ್ರೆ ಸಹವಾಸದ ಸರಪಳಿ?
ದೇವರು ನನಗೆ ಈಗಲೇ ನೀಡಲಾರಂಭಿಸಿದ್ದಾನೆ ಯುಗಾದಿಯ ಬೇವು-ಬೆಲ್ಲ
ಬೇವು ಮುಗಿಯಿತು,ಇನ್ನೇನ್ನಿದ್ದರೂ ಮುಂದಿನ ಸರದಿಯಲ್ಲಿ ಬರುವುದು ಬೆಲ್ಲ.

ಅತೀ ದುರ್ಬಲ ಪರಾವಲಂಬ ಜೀವಿಯೂ ನನ್ನ ದೇಹವನ್ನು ಪ್ರವೇಶಿಸಲು ಉತ್ಸುಕವಾಗಿದೆ
ಎಷ್ಟೇ  ಜಾಗರೂಕತೆಯಿಂದ ಇದ್ದರೂ ಯಾವುದೂ ಉಪಯೋಗಕ್ಕೆ ಬರದಾಗಿದೆ;
ಸಣ್ಣ ಜ್ವರ ಬಂದರೂ ಥರಗುಟ್ಟುತ್ತದೆ ಜೀವ
ತಾಳಿಕೊಳ್ಳಲಾರೆ ಮೇಲಿಂದ ಮೇಲೆ ಬಂದೆರಗುವ ರೋಗಗಳ ಹಾವಳಿಯ. 

Monday, February 7, 2011

ಒಳ್ಳೆಯವರಿಗಿದು ಕಾಲವಲ್ಲ

                                        ಒಳ್ಳೆಯವರಿಗಿದು ಕಾಲವಲ್ಲ
ಕಲಿಯುಗದಲ್ಲಿ ಒಳ್ಳೆಯವರಿಗಿದು ಕಾಲವಲ್ಲ
ಸತ್ಯವೇ,ಇಲ್ಲದಿದ್ದರೆ ನನಗಿಂಥಾ ಸ್ಥಿತಿ ಬರುತ್ತಿರಲಿಲ್ಲ;
ಇದು ಆತ್ಮ ಪ್ರಶಂಸೆಯ ಮಾತಲ್ಲ
ಬೇವನ್ನೇ ಉಂಡಿದ್ದೇನೆ ಹೆಚ್ಚು,ಸವಿಯಲು ಸಿಕ್ಕಿದ್ದು ಸ್ವಲ್ಪವೇ ಬೆಲ್ಲ.

ಮುಂದೊಂದು ದಿನಾ ದೇವರಿಗೆ ನನ್ನ ಮೇಲೆ ಕರುಣೆ ಬರಬಹುದು
ಆ ನಿರೀಕ್ಷೆಯಲ್ಲಿ ಇಂದು ನನ್ನ ಬದುಕು ಸಾಗುತಿಹಿದು;
ಮತ್ಸರವಾಗುತ್ತದೆ ನನ್ನ ವಯಸ್ಸಿನ ಬೇರೆ ಹುಡುಗಿಯರನ್ನು ಕಂಡಾಗ
ಮನಕ್ಕೆ ಬೇಸರವಾಗುತ್ತದೆ ,ನನ್ನ ಹಿಂದಿನ ಮತ್ತು ಇಂದಿನ ಸ್ಥಿತಿಯನ್ನು ಹೋಲಿಸಿದಾಗ.

Sunday, February 6, 2011

ದೇವಯಾನಿ ಮತ್ತು ಕಚ

                                                    ದೇವಯಾನಿ ಮತ್ತು ಕಚ
ದೇವತೆಗಳು ಅಮೃತವನ್ನು ಕುಡಿದು ಅಮರತ್ವವನ್ನು ಸಿದ್ಧಿಸಿಕೊಂಡಿರುತ್ತಾರೆ.ಆದರೆ ದೇವ-ದಾನವ ಕಾಳಗದಲ್ಲಿ ದೇವತೆಗಳು ವಿಜಯಿಗಳಾದರೂ ದಾನವರು ಮತ್ತೆ ಅಷ್ಟೇ ಸಂಖ್ಯೆಯಲ್ಲಿ ದೇವತೆಗಳ ಜೊತೆ ಯುದ್ಧಕ್ಕೆ ಬರುತ್ತಿರುತ್ತಾರೆ.ಇದಕ್ಕೆ ಕಾರಣ ದಾನವರ ಗುರು ಶುಕ್ರಾಚಾರ್ಯರು ತಮ್ಮ ಸಂಜೀವನೀ ವಿದ್ಯೆಯಿಂದ ಹತರಾದ ದಾನವರನ್ನು ಬದುಕಿಸುತ್ತಿದ್ದದ್ದು.ಇದರಿಂದ ದೇವತೆಗಳಿಗೆ ತಲೆನೋವು ಆರಂಭವಾಯಿತು.
ತಾವೂ ಹೇಗಾದರೂ ಮಾಡಿ ಸಂಜೀವನೀ ವಿದ್ಯೆಯನ್ನು ಪಡೆಯಬೇಕೆಂದು ಪ್ರಯತ್ನಿಸುತ್ತಾರೆ.ಇದನ್ನು ಅರಿತ ದೇವಗುರು ಬ್ರಹಸ್ಪತಿ ಗಳ ಮಗನಾದ ಕಚ ಇದಕ್ಕೆ ತಯಾರಾಗುತ್ತಾನೆ.ಆತನು ಶುಕ್ರಾಚಾರ್ಯರ ಬಳಿಗೆ ಶಿಷ್ಯನಾಗಿ ಹೋಗುತ್ತಾನೆ.ಆತನು ತಮ್ಮ ವೈರಿ ಪಾಳಯದವನು ಎಂದು ಗೊತ್ತಿದ್ದರೂ ಶುಕ್ರಾಚಾರ್ಯರು ಕಚನ ನಡತೆಯಿಂದ ಸಂತಸಗೊಂಡು ಆತನನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸುತ್ತಾರೆ.
ಕಚನು ಶುಕ್ರಾಚಾರ್ಯರ ಬಳಿ ಅಧ್ಯಯನ ಮಾಡುತ್ತಿದ್ದಾಗ ಶುಕ್ರಾಚಾರ್ಯರ ಪುತ್ರಿ ದೇವಯಾನಿ ಆತನಲ್ಲಿ ಮೋಹಗೊಳ್ಳುತ್ತಾಳೆ.ಆದರೆ ದಾನವರಿಗೆ ಕಚನು ತಮ್ಮ ಗುರುಗಳ ಬಳಿ ಬಂದು ವ್ಯಾಸಂಗ ಮಾಡುವುದು ಇಷ್ಟವಾಗುವುದಿಲ್ಲ.ಅವರು ಕಚನನ್ನು ಅಪಹರಿಸಿ ಆತನನ್ನು ಕೊಂದು ಆತನ ಶವದ ಭಸ್ಮವನ್ನು ದ್ರಾಕ್ಷಾರಸದಲ್ಲಿ ಸೇರಿಸಿ ಶುಕ್ರಾಚಾರ್ಯರಿಗೆ ಕುಡಿಸುತ್ತಾರೆ.ಇತ್ತ ದೇವಯಾನಿ ಕಚನನ್ನು ಕಾಣದೆ ತಳಮಳಗೊಳ್ಳುತ್ತಾಳೆ.
ಆಗ ಶುಕ್ರಾಚಾರ್ಯರು ತಮ್ಮ ದಿವ್ಯ ದೃಷ್ಟಿಯಿಂದ ಆದದ್ದನ್ನು ಊಹಿಸಿಕೊಳ್ಳುತ್ತಾರೆ.ಈಗ ಅವರಿಗೆ ಉಭಯ ಸಂಕಟ.ಕಚನು ತಮ್ಮ ಉದರಲ್ಲಿ ಇದ್ದಾನೆ.ಆತನನ್ನು ಬದುಕಿಸಬೇಕಾದರೆ ತಾವು ಸಾಯಬೇಕು.ಆನಂತರ ತಾವು ಬದುಕಬೇಕಾದರೆ ಕಚನಿಗೆ ಸಂಜೀವನೀ ವಿದ್ಯೆಯನ್ನು ಉಪದೇಶಿಸಿ ಆತನ ಹುಟ್ಟಿನ ನಂತರ ತಮ್ಮನ್ನು ಬದುಕಿಸಲು ಕೇಳಿಕೊಳ್ಳಬೇಕಾಗುತ್ತದೆ.ಇದು ಅವರಿಗೆ ಇಷ್ಟವಾಗುವುದಿಲ್ಲ.ಆದರೆ ತಮ್ಮ ಮುದ್ದಿನ ಮಗಳು ದೇವಯಾನಿಯ ಶೋಕವನ್ನು ನೋಡಲಾಗದೆ ಅವರು ತಮ್ಮ ಉದರದಲ್ಲಿದ್ದ ಕಚನಿಗೆ ಸಂಜೀವನೀ ವಿದ್ಯೆಯನ್ನು ಉಪದೇಶಿಸುತ್ತಾರೆ.
ಕಚನು ಮತ್ತೆ ಜೀವಗೊಂಡು ಎದ್ದು ಬಂದು ಸತ್ತು ಬಿದ್ದಿದ್ದ ಶುಕ್ರಾಚಾರ್ಯರನ್ನು ಮತ್ತೆ ಸಂಜೀವನೀ ವಿದ್ಯೆಯಿಂದ ಬದುಕಿಸುತ್ತಾನೆ.ಆಗ ದೇವಯಾನಿ ತನ್ನ ಪ್ರೀತಿಯನ್ನು ಕಚನಲ್ಲಿ ಹೇಳಿಕೊಳ್ಳುತ್ತಾಳೆ.ಆದರೆ ಕಚನು ದೇವಯಾನಿಯು ಗುರುಪುತ್ರಿಯಾದ ಕಾರಣ ಮತ್ತು ಈಗ ತಾನೂ ಶುಕ್ರಾಚಾರ್ಯರ ಮಗನಾದ ಕಾರಣ ಆಕೆಯ ಪ್ರೀತಿಯನ್ನು ತಿರಸ್ಕರಿಸುತ್ತಾನೆ.ಮತ್ತು ದೇವಲೋಕಕ್ಕೆ ಹೊರಟು ಹೋಗುತ್ತಾನೆ.

Saturday, February 5, 2011

ನೆನಪುಗಳು

                                              ನೆನಪುಗಳು
ನೆನಪುಗಳ ಮಾತು ಮಧುರ ಎನ್ನುವುದು ಅಪ್ಪಟ ಸುಳ್ಳು
ನನ್ನ ಪಾಲಿಗೆ,ನೆನಪುಗಳೇ ಬಗಲ ಮುಳ್ಳು;
ಗತಕಾಲದ ನೆನಪುಗಳು ಬೇಡವೆಂದರೂ ಮನದಲ್ಲಿ ಬರುತ್ತಿವೆ
ಇದರಿಂದ ನನ್ನ ಮನಕ್ಕೆ ಸಂಕಟಗಳು  ಇನ್ನೂ ಹೆಚ್ಚಾಗುತ್ತಿವೆ.

ಮನೆ ಮುಂದಿನ ರಸ್ತೆಯಲ್ಲಿ ಜಿಂಕೆ ಮರಿಯಂತೆ ನಾನು ಓಡಾಡಿದ್ದೆ
ಆದರೆ ಈಗ ಕೈಲಾಗದೆ ಮೂಲೆಯಲ್ಲಿ ಕೂತಿರಬೇಕಾಗಿದೆ;
ಒಂದಲ್ಲ ಒಂದು ದಿನಾ ನನ್ನ ಸ್ಥಿತಿಯೂ ಉತ್ತಮವಾಗಬಹುದು
ಆಗ ನನ್ನಂತೆ ಕಷ್ಟದಲ್ಲಿರುವವರಿಗೆ ನನ್ನ ಬದುಕು ಪ್ರೇರಣದಾಯಕವಾಗಬಹುದು



Thursday, February 3, 2011

ಆತುರದ ತೀರ್ಮಾನ ಸಲ್ಲದು

                                  ಆತುರದ ತೀರ್ಮಾನ ಸಲ್ಲದು
ರಾಮಣ್ಣ ಮತ್ತು ಭೀಮಣ್ಣ ಸ್ನೇಹಿತರು.ಅವರೀರ್ವರಿಗೂ ಕಾಡಿಗೆ ಹೋಗಿ ಸೌದೆ ಒಟ್ಟು ಮಾಡುವುದೇ ಕೆಲಸ.ಅದನ್ನು ಊರಿಗೆ ತಂದು ಅವರು ಮಾರುತ್ತಿದ್ದರು.ಆದರೆ ರಾಮಣ್ಣನ ಸೌದೆ ಖರ್ಚಾದಷ್ಟು ವೇಗವಾಗಿ ಭೀಮಣ್ಣನ ಸೌದೆ ಖಾಲಿಯಾಗುತ್ತಿರಲಿಲ್ಲ.ಇದು ಭೀಮಣ್ಣನ ಅಊಯೆಗೆ ಕಾರಣವಾಯಿತು.
ಒಮ್ಮೆ ಮನೆಯಿಂದ ಸೌದೆ ಹೆಕ್ಕಲು ಹೊರಡುವಾಗ ಭೀಮಣ್ಣನಿಗೆ  ತನ್ನ  ಕೊಡಲಿ ಸಿಗಲಿಲ್ಲ.ಇದರಿಂದಾಗಿ ಆತನಿಗೆ ಕಾಡಿಗೆ ಹೋಗಲು ಸಾಧ್ಯವಾಗಲಿಲ್ಲ.ಆದರೆ ಆವತ್ತು ರಾಮಣ್ಣನಿಗೆ ಎಂದಿಗಿಂತ ಹೆಚ್ಚಾಗಿ ಸೌದೆ ಸಿಕ್ಕು ಆತ ಸಂತೋಷದಿಂದ ಮನೆಗೆ ಹಿಂತಿರುಗುತ್ತಿದ್ದ.ಇದನ್ನು ಕಂಡ ಭೀಮಣ್ಣನಿಗೆ ರಾಮಣ್ಣನೆ ತನ್ನ ಕೊಡಲಿ ಕಳವು ಮಾಡಿ ಎಂದಿಗಿಂತ ಹೆಚ್ಚಾಗಿ ಸೌದೆ ಒಟ್ಟು ಮಾಡಿ ಮಾರಲು ಯತ್ನಿಸಿರುವುದಾಗಿ ಅನಿಸಲು ಸುರುವಾಯಿತು.
ಅದು ಎಷ್ಟು ಅತಿರೇಕಕ್ಕೆ ಹೋಯಿತೆಂದರೆ ಆತನಿಗೆ ಊಟವೂ ರುಚಿಸಲಿಲ್ಲ ಮತ್ತು ಕಣ್ಣಿಗೆ ನಿದ್ದೆಯೂ ಹತ್ತಲಿಲ್ಲ.ಹೀಗಿರಲು ಆತ ಅಡುಗೆ ಮಾಡಲು ಪದಾರ್ಥಗಳನ್ನು ಹುಡುಕುತ್ತಿದ್ದಾಗ ಮೂಲೆಯಲ್ಲಿ ತನ್ನ ಕೊಡಲಿ ಬಿದ್ದಿರುವುದು ಅವನಿಗೆ ಕಾಣುತ್ತದೆ.ಆಗ ಆತನಿಗೆ ನಿಜದ ಅರಿವಾಗಿ ತಾನು ಆತುರದಲ್ಲಿ ರಾಮಣ್ಣನ ಮೇಲೆ ಸಂಶಯ  ಪಟ್ಟದ್ದು ತಪ್ಪು ಎಂದು ಪಶ್ಚಾತ್ತಾಪವಾಗುತ್ತದೆ.

ಅವಸರವೇ ಅವಘಡಕ್ಕೆ ಕಾರಣ

                                    ಅವಸರವೇ ಅವಘಡಕ್ಕೆ ಕಾರಣ
ಅವಸರವೇ ಅವಘಡಕ್ಕೆ ಕಾರಣ
ಎಂಥಾ ಅರ್ಥವತ್ತಾದ ಮಾತಿನ ತೋರಣ;
ಅವಸರ ಪಟ್ಟರೆ ನಾವೆಣಿಸಿದ ಕೆಲಸ ಶೀಘ್ರ ಆಗುವುದಿಲ್ಲ
ಇದೆಲ್ಲ ಗೊತ್ತಿದ್ದರೂ ನನಗೆ ಮಾತ್ರ ಇನ್ನೂ ಬುದ್ಧಿ ಬಂದಿಲ್ಲ.

ಸರಿಯಾಗಿದ್ದೇನೆಂದು ಎಲ್ಲರಿಗೂ ತೋರಿಸುವ ಆಸೆ
ಆದರೆ ನಾನು ಎಣಿಸಿದ ಹಾಗೆ  ನಡೆಯದೆ ಕಂದಿಹೋಗುತ್ತದೆ ಭರವಸೆ;
ನಾನು ಎಣಿಸದೆಯೇ ಇದು ನನಗೆ ಸಿಕ್ಕ ಬಳುವಳಿ
ಎಲ್ಲರಂತೆ ತಲೆ ಎತ್ತಿ ನಡೆದರೆ ಅದೇ ನನಗದು ಬಿರುದು-ಬಾವಲಿ.

Wednesday, February 2, 2011

ಹಾಲು ಮತ್ತು ಸಕ್ಕರೆ

                                      ಹಾಲು ಮತ್ತು ಸಕ್ಕರೆ
 ಪಾರ್ಸಿ ಜನಾಂಗದವರು  ಇಂದಿನ ಇರಾನ್ ದೇಶದವರು.ಆದರೆ ಅವರು ಅಗ್ನಿಯ ಉಪಾಸಕರು.ಹೀಗಿದ್ದಾಗ ಇರಾನ್ ಮೇಲೆ ಅರಬ್ಬರು ಆಕ್ರಮಣ ಮಾಡುತ್ತಾರೆ.ಅವರು ಬಲವಂತವಾಗಿ ಪಾರ್ಸಿಗಳನ್ನು ಮುಸಲ್ಮಾನ ಧರ್ಮಕ್ಕೆ ಮತಾಂತರ ಮಾಡಲು ಆರಂಭಿಸುತ್ತಾರೆ.ಇದರಿಂದ ಹೆದರಿದ ಪಾರ್ಸಿಗಳು ತಮ್ಮ ತಾಯ್ನಾಡನ್ನು ಬಿಟ್ಟು ಪ್ರಪಂಚದ ಎಲ್ಲೆಡೆಗೆ ಪಾಲಾಯನ ಮಾಡುತ್ತಾರೆ.ಅದರಲ್ಲಿ ಕೆಲವರು ಭಾರತಕ್ಕೂ ಬರುತ್ತಾರೆ.
ಅವರೆಲ್ಲ ಸೇರಿ ಒಬ್ಬ ರಾಜನ ಬಳಿ ತೆರಳಿ ತಮಗೆ ರಕ್ಷಣೆ ನೀಡುವಂತೆ ಹಾಗೂ ತಮ್ಮ ಆಚರಣೆಗಳನ್ನು ಮಾಡಲು ಅನುವಾಗುವಂತೆ ಮಾಡಲು ಸ್ವಾತಂತ್ರ್ಯ ನೀಡಲು ಮನವಿ ಮಾಡಿಕೊಳ್ಳುತ್ತಾರೆ.ಅದಕ್ಕೆಲ್ಲ ರಾಜನು ಒಪ್ಪಿದ.ಆದರೆ ಆತ ಇದರ ಬದಲಾಗಿ ತಮಗೆ ಏನು ಸಿಗುತ್ತದೆ ಎಂದು ಕೇಳಿದ.ಆಗ ಪಾರ್ಸಿಗಳ ಮುಖಂಡ ಒಂದು ಲೋಟೆ ಹಾಲು ಮತ್ತು ಒಂದು ಚಮಚ ಸಕ್ಕರೆ ನೀಡುವಂತೆ ವಿನಂತಿಸಿಕೊಳ್ಳುತ್ತಾನೆ.ರಾಜ ಅದನ್ನೆಲ್ಲವನ್ನು ನೀಡುತ್ತಾನೆ.
ಆಗ ಪಾರ್ಸಿಗಳ ಮುಖಂಡ ಸಕ್ಕರೆಯನ್ನು ಹಾಲಿನ ಲೋಟೆಯೊಳಗೆ ಹಾಕಿ ಕದಡುತ್ತಾನೆ.ಆಗ ಸಕ್ಕರೆ ಹಾಲಿನಲ್ಲಿ ಕರಗುತ್ತದೆ.ಆಗ ಮುಖಂಡ ರಾಜನ ಬಳಿ ಸಕ್ಕರೆಯನ್ನು ತೆಗೆದುಕೊಡುವಂತೆ ಕೇಳುತ್ತಾನೆ.ಆಗ ರಾಜ ಸಕ್ಕರೆ ಹಾಲಿನಲ್ಲಿ ಕರಗಿರುವುದಾಗಿ ಹೇಳುತ್ತಾನೆ.ಆಗ ಪಾರ್ಸಿಗಳ ಮುಖಂಡ ತಾವೂ ಭಾರತೀಯರ ಜೊತೆ ಹೀಗೆ ಹಾಲು-ಸಕ್ಕರೆಯಲ್ಲಿ ಬೆರೆತು ಹೋದ ಹಾಗೆ ಮತ್ತು ಅದರಿಂದ ಹಾಲಿನ ರುಚಿ ಹೆಚ್ಚಾಗಿರುವುದರ ಹಾಗೆ ತಾವೂ ಇರುವುದಾಗಿ ಭರವಸೆ  ನೀಡುತ್ತಾನೆ.