Monday, January 31, 2011

ಗಂಗೆ ಜಾಹ್ನವಿ ಆದ ಬಗೆ

                           ಗಂಗೆ ಜಾಹ್ನವಿ ಆದ ಬಗೆ
ಭಗೀರಥನು ಗಂಗೆಯನ್ನು  ಸ್ವರ್ಗದಿಂದ ಕೆಳಗೆ ತಂದು ಆ ನೀರನ್ನು ಪಾತಾಳದಲ್ಲಿರುವ ತನ್ನ ಪೂರ್ವಜರ ದೇಹದ ಭಸ್ಮದ ಮೇಲೆ ಹರಿಸಿ ಅವರಿಗೆ ಮುಕ್ತಿ ಕರುಣಿಸಲು ಗಂಗೆಯನ್ನು ಕುರಿತು ತಪಸ್ಸು ಮಾಡುತ್ತಾನೆ.ಗಂಗೆಯು ಪ್ರತ್ಯಕ್ಷಳಾಗಿ ಭಗೀರಥನ ಬೇಡಿಕೆಗೆ ಅಸ್ತು  ಅಂದಳಾದರೂ ಸ್ವರ್ಗದಿಂದ ಧರೆಗಿಳಿಯುವಾಗ ತನ್ನ ಪ್ರವಾಹವನ್ನು ತಡೆಯುವುದು ಶಿವನಿಗೆ ಮಾತ್ರ ಸಾಧ್ಯ ಎಂದು ಅವನನ್ನು ಕುರಿತು ತಪಸ್ಸು ಮಾಡಲು ತಿಳಿಸುತ್ತಾಳೆ.ಅಂತೆಯೇ ಭಗೀರಥನು ಶಿವನ್ನು ಕುರಿತು ತಪಸ್ಸು ಮಾಡಿ ಅವನನ್ನು ಪ್ರಸನ್ನ ಗೊಳಿಸುತ್ತಾನೆ.
ಶಿವನು ಪ್ರತ್ಯಕ್ಷನಾದಾಗ ಅವನಲ್ಲಿ ಗಂಗೆಯನ್ನು ತನ್ನ ಜಟೆಯಲ್ಲಿ ಹಿಡಿದುಕೊಳ್ಳುವಂತೆ ಬಿನ್ನವಿಸುತ್ತಾನೆ.ಅಂತೆಯೇ ಶಿವನು ಒಪ್ಪಿದ.ಹೀಗಾಗಿ ಅವನಿಗೆ ಗಂಗಾಧರ ಎನ್ನುವ ಹೆಸರು ಬಂತು.ಗಂಗೆ ಅಂತೆಯೇ ಶಿವನ ಜಟೆಯಿಂದ.ಕೆಳಗೆ ಇಳಿದು ಬರುತ್ತಾಳೆ.ಭೂಮಿಗೆ ಬರುವಾಗ ಆಕೆ ಜಹ್ನು ಎಂಬ ಮುನಿಯ ಆಶ್ರಮದಿಂದ ಬರಬೇಕಾಗುತ್ತದೆ.ಆದರೆ ಆಕೆಯ ಪ್ರವಾಹದಿಂದ ಮುನಿಯ ಆಶ್ರಮ ಕೊಚ್ಚಿ ಹೋಗುತ್ತದೆ.
ಇದರಿಂದ ಕೋಪಗೊಂಡ ಮುನಿಯು ಆ ಗಂಗೆಯನ್ನೇ ಕುಡಿದು ಬಿಡುತ್ತಾನೆ.ಇತ್ತ ಭಗೀರಥನು ಪಾತಾಳದಲ್ಲಿ ಇನ್ನೂ ಗಂಗೆಯು ಬರದೆ ಇರುವುದನ್ನು ಕಂಡು ಆಶ್ರಮದ ಬಳಿ ಬರುತ್ತಾನೆ.ಅಲ್ಲಿ ನಡೆದ್ದನ್ನನ್ನು ಊಹಿಸಿದ ಭಗೀರಥ ನಂತರ ಜಹ್ನು ಮುನಿಯನ್ನು ಸ್ತುತಿಸುತ್ತಾನೆ.
ಇದರಿಂದ ಪ್ರಸನ್ನಗೊಂಡ ಮುನಿ ಗಂಗೆಯನ್ನು ತನ್ನ ಕಿವಿಯಿಂದ ಹೊರಗೆ ಬಿಡಲು ಒಪ್ಪಿಕೊಳ್ಳುತ್ತಾನೆ.ಹೀಗೆ ಗಂಗೆ ಜಹ್ನು ಮುನಿಯ ಕಿವಿಯಿಂದ ಹೊರಬಂದು ಜಾಹ್ನವಿ ಎಂಬ ಹೆಸರು ಪಡೆಯುತ್ತಾಳೆ.ನಂತರ ಆಕೆ ಪಾತಾಳಕ್ಕೆ ಹರಿದು ಭಗೀರಥನ ಪೂರ್ವಜರಿಗೆ ಮುಕ್ತಿ ಕರುಣಿಸುತ್ತಾಳೆ.
ಹೀಗೆ ಗಂಗೆ ದೇವಲೋಕ(ಹಿಮಾಲಯ) ದಿಂದ ಕೆಳಗೆ ಇಳಿದು ಭೂಲೋಕ(ಭಾರತ ದೇಶ) ವನ್ನು ಪ್ರವೇಶಿಸಿ ನಂತರ ಪಾತಾಳ ಲೋಕ(ಬಂಗಾಳ ಕೊಲ್ಲಿ) ಯನ್ನು ಪ್ರವೇಶಿಸುತ್ತಾಳೆ.

Saturday, January 29, 2011

ಬಿಲ್ಲಿಯ ಗಂಡ ಬಿಲ್ಲ

                               ಬಿಲ್ಲಿಯ ಗಂಡ ಬಿಲ್ಲ
ಬಿಲ್ಲಿ ಬೆಕ್ಕಿನ ಗಂಡ ಬಿಲ್ಲ
ಹಿಂಬಾಲಿಸುವನು ಬಿಲ್ಲಿಯನ್ನೇ,ಹೋದಡೆಯಲ್ಲೆಲ್ಲಾ;
ಬೆಕ್ಕುಗಳಲ್ಲಿ ಇರುವ ಪ್ರೀತಿ ಮನುಷ್ಯರಲ್ಲಿ ಏಕೆ ಇಲ್ಲ?
ಸದಾ ಜಗಳವನ್ನೇ ಆಡುತಿಹರು ಇಂದಿನ ಗಂಡ-ಹೆಂಡತಿಯರೆಲ್ಲಾ .

Tuesday, January 25, 2011

ಅತಿ ಆಸೆ ಗತಿಗೇಡು

                                          ಅತಿ ಆಸೆ ಗತಿಗೇಡು
ಅತಿ ಆಸೆ ಗತಿಗೇಡು ಎಂಬುದು ನಾಣ್ಣುಡಿ
ನನ್ನ ವಿಷಯದಲ್ಲದು ತುಂಬಾ ನಿಜಾರೀ!
ಅತಿ ಸಣ್ಣ ಬದಲಾವಣೆಗೂ ಎಷ್ಟೊಂದು ಹರ್ಷಿಸಿದ್ದೆ ನಾನು
ಈಗ ಪ್ರಶ್ನಿಸಿಕೊಳ್ಳಬೇಕಾಗಿದೆ ಆದದ್ದಾದರೂ ಏನು?

ಆಗುತ್ತಿವೆ ಅತಿ ಸಣ್ಣ ಬದಲಾವಣೆಗಳು ನನ್ನ ದೇಹದೊಳಗೆ
ಏನನ್ನಬೇಕು ಕ್ರೂರತನವೇ ಮೈದಳೆದಿರುವ ವಿಧಿಲೀಲೆಗೆ;
ಕನ್ನಡಿಯಲ್ಲಿ ಕಾಣಿಸಿದ ಗಂಟಿಗೆ ಕೈಚಾಚಿದ್ದು ನನ್ನದೇ ತಪ್ಪು
ಮುಂದಾದರೂ ಆದೀತೆ ನನ್ನ ಜೀವನವು ಓರಣ-ಒಪ್ಪು?

Monday, January 24, 2011

ದೇವರಿಗೇಕೆ ಸಿಟ್ಟು?

                                              ದೇವರಿಗೇಕೆ ಸಿಟ್ಟು?
ದೇವರಿಗೇಕೆ ನನ್ನ ಮೇಲೆ ಸಿಟ್ಟು?
ಕೊಡುತ್ತಿದ್ದಾನಲ್ಲ ಕಷ್ಟಗಳನ್ನು, ಮಾಡಿ ಒಟ್ಟು;
ಒಂದರ ಮೇಲೊಂದರಂತೆ ಬಂದೆರಗುತ್ತಿದೆ ವಿಪತ್ತು
ನನ್ನಿಂದಾಗಿ ಖಾಲಿಯಾಗುತ್ತಿದೆ ಅಪ್ಪನ ಸಂಪತ್ತು.

ಒಂದು ಸರಿಯಾಗುತ್ತಿದೆ ಎನ್ನುವಾಗ ಇನ್ನೊಂದು ಬಂದಿದೆ
ಹೀಗೆ ಮುಂದುವರಿಯುತ್ತಿದ್ದರೆ ನನ್ನ ಕಷ್ಟಗಳಿಗೆ ಕೊನೆ ಎಲ್ಲಿದೆ?
ಆಸ್ಪತ್ರೆಯ ಸಹವಾಸ ನನಗಿನ್ನು ಸಾಕಾಗಿದೆ
ಯಾರಿಂದಲಾದರೂ ಭರವಸೆಯ ಮಾತೀಗ ಬೇಕಾಗಿದೆ.

Saturday, January 22, 2011

ಮಾದಾಸುರನ ಹುಟ್ಟು

                                      ಮಾದಾಸುರನ ಹುಟ್ಟು
ಹಿಂದೆ ದೇವತೆಗಳ ವೈದ್ಯರಾದ ಅಶ್ವಿನೀ ದೇವತೆಗಳು ಇತರ ದೇವತೆಗಳಂತೆ ಯಾಗದಲ್ಲಿ ಹವಿಸ್ಸನ್ನು ಪಡೆಯುವಂತೆ ಇರಲಿಲ್ಲ.ಏಕೆಂದರೆ ಅವರಿಗೆ ಅಮರತ್ವವನ್ನು ಪಡೆಯಲು ಆಗಿರಲಿಲ್ಲ.ಇದರಿಂದಾಗಿ ಅವರು ಉಳಿದ ದೇವತೆಗಳ ಜೊತೆ ತಮ್ಮನ್ನು ಗುರುತಿಸಿಕೊಳ್ಳಲು ಆಗುತ್ತಿರಲಿಲ್ಲ.ಇದರಿಂದ ನೊಂದ ಅಸ್ವಿನೀ ದೇವತೆಗಳು ಇಂದ್ರನ ಬಳಿ ಬಂದು ತಮಗೂ ಅಮರತ್ವವನ್ನು ಪಡೆಯಲು ಅಮೃತವನ್ನು ನೀಡಲು ಕೇಳಿಕೊಂಡರು.
ಆದರೆ ಇಂದ್ರ ಅದಕ್ಕೊಪ್ಪದೆ ಕೇಳಿದವರಿಗೆಲ್ಲ ಅಮೃತವನ್ನು ನೀಡಲು ಸಾಧ್ಯವಿಲ್ಲವೆಂದು ಅವರನ್ನು ಅವಮಾನಿತರಾಗಿ ಮಾಡಿದ.ಆಗ ಅಶ್ವಿನೀ ದೇವತೆಗಳು ಚ್ಯವನ ಮುನಿ ಯ ಬಳಿ ತಮಗೆ ಸಹಾಯ ಮಾಡಲು ಕೇಳಿಕೊಂಡರು.ಇದಕ್ಕೆ ಒಪ್ಪಿದ ಮುನಿ ಅವರಿಗೆ ಅಮರತ್ವವು ಪ್ರಾಪ್ತಿಯಾಗುವಂತೆ ಮಾಡಲು ಯಾಗ ಮಾಡಲು ನಿರ್ಧರಿಸಿದ.ಇದು ಇಂದ್ರನ ಕಿವಿಗೆ ಬಿತ್ತು.ಆತ ಯಾಗವನ್ನು ವಿಫಲಗೊಳಿಸಲು ನಾನಾ ಉಪಾಯಗಳನ್ನು ಮಾಡುತ್ತಾನೆ.
ಇದರಿಂದ ಕೋಪಗೊಂಡ ಚ್ಯವನ ಮುನಿ ಮಾದಾಸುರ ಎನ್ನುವ ಅಸುರನನ್ನು ಸೃಷ್ಟಿಸುತ್ತಾರೆ.ಆತನ ಘೋರ ರೂಪ ಹೇಗಿರುತ್ತದೆ ಎಂದರೆ ಆತ ಒಂದೇ ಗುಟುಕಿಗೆ ಸಮಸ್ತ ಬ್ರಹ್ಮಾಂಡವನ್ನೇ ಆಪೋಶನ ತೆಗೆದು ಕೊಳ್ಳಬಲ್ಲವನಾಗಿದ್ದ.ಆತನ ಮೇಲ್ಭಾಗದ ದವಡೆಯಲ್ಲಿ ಸಮಸ್ತ ಸ್ವರ್ಗವೂ ಮತ್ತು ದವಡೆಯ ಕೆಳಭಾಗದಲ್ಲಿ ಸಮಸ್ತ ಭೂಮಿಯೂ ಆವರಿಸಲ್ಪಡುತ್ತದೆ.
ತನ್ನ ಗೆಳೆಯರೆಲ್ಲರೂ ಮಾದಾಸುರನ ಮುಷ್ಟಿಯಲ್ಲಿ ಇರುವುದನ್ನು ಗಮನಿಸಿದ ಇಂದ್ರ,ಮುನಿಗೆ ಶರಣು ಬರುತ್ತಾನೆ.ಆಗ ಚ್ಯವನ ಮುನಿಯು ಇಂದ್ರನಿಗೆ ಅಭಯವನ್ನಿತ್ತು ಮಾದಾಸುರನು ತನ್ನ ಉಗ್ರ ರೂಪವನ್ನು ಬಿಟ್ಟು ಬಿಡಲು ಸೂಚಿಸುತ್ತಾರೆ.ಬದಲಿಗೆ ಇಂದ್ರ ಅಶ್ವಿನೀ ದೇವತೆಗಳನ್ನು ದೇವತೆಗಳೆಂದು ಗೌರವಿಸಲು ಮತ್ತು ಯಾಗದಲ್ಲಿ ಅವರಿಗೂ ಹವಿಸ್ಸಾನ್ನು ನೀಡಲು ಒಪ್ಪಿಕೊಳ್ಳುತ್ತಾನೆ.

Wednesday, January 19, 2011

ಹೇಳಲು ಸುಲಭ,ಮಾಡುವುದು ಕಷ್ಟ

                             ಹೇಳಲು ಸುಲಭ,ಮಾಡುವುದು ಕಷ್ಟ
ಹೇಳುವುದು ಸುಲಭ,ಮಾಡುವುದು ಕಷ್ಟ
ಪುಕ್ಕಟೆ ಸಲಹೆ ನೀಡುವವರಿಗೆ ಆಗುವುದಿಲ್ಲ ಏನೂ ನಷ್ಟ;
ನನ್ನ ಜಾಗದಲ್ಲಿ ನಿಂತು ನೋಡಿದಾಗ ನಿಮಗಾಗುವುದು ಪರಿಸ್ಥಿತಿಯ ಅರಿವು
ನದಿ ದಂಡೆಯಲ್ಲಿ ನಿಂತು ಹೇಳಲಾಗದು ನದಿ ನೀರಿನ ಆಳ ಮತ್ತು ಹರಿವು.

ಕ್ಷೀಣ ಆಸೆಯೊಂದು ಇನ್ನೂ ಉಸಿರಾಡುತ್ತಿದೆ ಮನದಲ್ಲಿ
ಆಗಬೇಕು ನಾನೂ ಎಲ್ಲರಂತೆ ಈ ಜಗದಲ್ಲಿ;
ಹಾಕಲು ಮನಸಿಲ್ಲ ನನ್ನ ಆಸೆಗಳಿಗಿಲ್ಲಿ ಪೂರ್ಣವಿರಾಮ
ಬೇರೆಯವರ ಬಳಿ ಹೇಳಿಕೊಂಡರೆ ಸಿಗುವುದು ಮನಕೆ ಸ್ವಲ್ಪ ಆರಾಮ.

Tuesday, January 18, 2011

ಬೆಳೆವ ಸಿರಿ ಮೊಳಕೆಯಲ್ಲಿ

                                          ಬೆಳೆವ ಸಿರಿ ಮೊಳಕೆಯಲ್ಲಿ
ಇದು ಸ್ವಾಮಿ ವಿವೇಕಾನಂದರ ಜೀವನದಲ್ಲಿ ನಡೆದ ಘಟನೆ.ವಿವೇಕಾನಂದರ ತಾಯಿ ಭುವನೇಶ್ವರಿ ದೇವಿ.ಅವರು ಒಮ್ಮೆ ಮಲಗಿದ್ದಾಗ ಶಿವನು ಅವರ ಕನಸಿನಲ್ಲಿ ಬಂದು ತಾನು ಅವಳಲ್ಲಿ ಜನ್ಮ ತಾಳುವುದಾಗಿ ತಿಳಿಸಿದನಂತೆ.ಆಗಲೇ ವಿವೇಕಾನಂದರ ಜನ್ಮವಾಯಿತು.ಆದರೆ ವಿವೇಕಾನಂದರ ಬಾಲ್ಯದ ಹೆಸರು ನರೇಂದ್ರನಾಥ ದತ್ತ.ಬಾಲಕ ನರೇಂದ್ರನು ತುಂಬಾ ತುಂಟ.ಇದರಿಂದಾಗಿ ಅವನ ತಾಯಿಗೆ ಸಾಕೋ-ಸಾಕಾಗಿ ಹೋಗುತ್ತಿತ್ತು.
ಒಮ್ಮೆ ನರೇಂದ್ರನು ತನ್ನ ಓರಿಗೆಯ ಗೆಳೆಯರ ಜೊತೆ ಆಟವಾಡುತ್ತಿದ್ದಾಗ ಅವನಿಗೆ ತಾನು ತಪಸ್ಸಿನ ಆಟ ಆಡಿದರೆ ಹೇಗೆ?ಎಂಬ ಯೋಚನೆ ಬಂತು.ಅಂತೆಯೇ ಬಾಲಕರು ತಪಸ್ಸಿನ ಆಟ ಆಡಲು ಪ್ರಾರಂಭಿಸಿದರು.ಹೀಗಿರುವಾಗ ಬಾಲಕ ನರೇಂದ್ರನು ಸಮಾಧಿ ಸ್ಥಿತಿಗೆ ತಲುಪಿದನು.ಆತನಿಗೆ ಇಹದ ಪರಿವೆಯೇ ಇಲ್ಲವಾಯ್ತು.
ಆದರೆ ಆತನ ಗೆಳೆಯನಲ್ಲೊಬ್ಬ ಆಗಿಂದಾಗ್ಗೆ ಕಣ್ಣು ತೆರೆದು ಉಳಿದವರು ಏನು ಮಾಡುತ್ತಿದ್ದಾರೆಂದು ನೋಡುತ್ತಿದ್ದ.ಹಾಗೆಯೇ ಆತನ ದೃಷ್ಟಿ ನರೇಂದ್ರನ ಕಡೆಗೆ ಹರಿಯಿತು.ಆಗ ಅವನಿಗೆ ನರೇಂದ್ರನ ಮುಂದೆ ಒಂದು ಹಾವು ಹೆಡೆ ಬಿಚ್ಚಿ ಕುಳಿತಿರುವುದು ಕಂಡಿತು.ಎದ್ದೆನೋ,ಬಿದ್ದೆನೋ ಎಂಬಂತೆ ಆತ ಓಡಿ ನರೇಂದ್ರನ ಪಾಲಕರನ್ನು ಮತ್ತು ಊರ ಹಿರಿಯರನ್ನು ಅಲ್ಲಿಗೆ ಕರೆತಂದ.ಜನರು ಸೇರಿದುದನ್ನು ಕಂಡ ಹಾವು ಹೆಡೆ ಕೆಳಗಿಳಿಸಿ ಸುಮ್ಮನೆ ಸರಿದು ಹೋಯಿತು.
ಆಗ ಊರ ಹಿರಿಯರು ನರೇಂದ್ರನ ಪಾಲಕರ ಬಳಿ ನಿಮ್ಮ ಮಗ ಸಾಮಾನ್ಯನಲ್ಲ.ಸಾಕ್ಷಾತ್ ನಾಗದೇವರೇ ಬಂದು ಆತನಿಗೆ ಆಶೀರ್ವಾದ ಮಾಡಿದ್ದಾರೆ.ಆಟ ಜೀವನದಲ್ಲಿ ಬಹಳ ಮುಂದೆ ಬರುತ್ತಾನೆ ಎಂದು ಹೇಳಿದರು.ಅಂತೆಯೇ ಆಯಿತು.ಸ್ವಾಮಿ ವಿವೇಕಾನಂದರು ಸನ್ಯಾಸತ್ವವನ್ನು ಸ್ವೀಕರಿಸಿ ಮಾಡಿದ ಅಮೋಘ ಕಾರ್ಯಗಳು ಎಲ್ಲರಿಗೂ ತಿಳಿದೇ ಇದೆ.

Monday, January 17, 2011

ಮೋಹ ಮುಕ್ತರು

                                               ಮೋಹ ಮುಕ್ತರು
ವಿವೇಕಾನಂದ ಅವರು ಪರಿವ್ರಾಜಕರು.ಅಂದರೆ ತಾವು ನಂಬಿದ ಸಿದ್ಧಾಂತವನ್ನು ಲೋಕದೆಲ್ಲೆಡೆ ಅನವರತ ಪ್ರಚಾರ ಮಾಡುವುದು.ಹೀಗೆ ಒಮ್ಮೆ ವಿವೇಕಾನಂದರು ಪರ್ಯಟನೆ ಮಾಡುತ್ತಾ ರಾಜ ಅಜಿತ್ ಸಿಂಗ್ ನ ರಾಜ್ಯಕ್ಕೆ ಬರುತ್ತಾರೆ.ವಿವೇಕಾನಂದರ ಆಗಮನದ ಸುದ್ದಿ ತಿಳಿಯುತ್ತಲೇ ರಾಜ ಅಭ್ಯಾಸಬಲದಂತೆ ಅವರಿಗಾಗಿ ಸುಂದರ ಮಹಿಳೆಯರಿಂದ ಸಂಗೀತ ಮತ್ತು ನೃತ್ಯದ ಏರ್ಪಾಟು ಮಾಡುತ್ತಾನೆ.ಇದು ವಿವೇಕಾನಂದರಿಗೆ ತಿಳಿಯುತ್ತದೆ.
ಆದರೆ ಅವರಿಗೆ ತುಂಬಾ ಬೇಜಾರಾಗುತ್ತದೆ.ತಾನು ಓರ್ವ ಸನ್ಯಾಸಿ ಎಂದು ತಿಳಿದಿದ್ದರೂ ರಾಜ ಈ ಏರ್ಪಾಟು ಮಾಡಿರುವುದು ಅವರಿಗೆ ಬೇಸರ ಉಂಟುಮಾಡುತ್ತದೆ.ಅವರು ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಕುಳಿತುಬಿಡುತ್ತಾರೆ.ಅತ್ತ ರಾಜನಿಗೂ ತನ್ನ ತಪ್ಪಿನ ಅರಿವಾಗುತ್ತದೆ.
ಆದರೇನು ಮಾಡುವುದು?ಏರ್ಪಾಟು ಮಾಡಿ ಆಗಿದೆ.ಆಗ ಸಂಗೀತ ಹಾಡಲೆಂದು ನಿಯೋಜಿತಳಾದ ಮಹಿಳೆಗೆ ಇದು ತಿಳಿದು ಆಕೆಗೆ ತುಂಬಾ ಬೇಸರವಾಗುತ್ತದೆ.ಆಗ ಆಕೆ ಅಲ್ಲಿಯೇ ಒಂದು ಹಾಡು ಹೇಳಲಾರಂಭಿಸುತ್ತಾಳೆ.ಅದರ ಅರ್ಥ ಇಷ್ಟೇ "ತಾಯಿ ಮಗುವನ್ನು ನೋಡಲು ಬರುವುದು ತಪ್ಪೇ?ಭಕ್ತ ಭಗವಂತನನ್ನು ಕಾಣಲು ಬಯಸುವುದು ತಪ್ಪೇ?"ಎನ್ನುವುದು.ಈ ಹಾಡು ಕೋಣೆಯಲ್ಲಿ ಕುಳಿತ್ತಿದ್ದ ವಿವೇಕಾನಂದರಿಗೆ ಕೇಳುತ್ತದೆ.
ಆಗ ಅವರು ಆತ್ಮ ವಿಮರ್ಶೆ ಮಾಡಿಕೊಳ್ಳುತ್ತಾರೆ.ತಾನೇಕೆ ಹಾಗೆ ಮಾಡಿದೆ?ತಾನು ನಿಜವಾಗಲೂ ಮೋಹಮುಕ್ತನೆ ಆಗಿದ್ದಲ್ಲಿ ಹಾಡು ಕೇಳಲು ಹಿಂಜರಿಕೆ ಏಕೆ? ಎಂದು ಯೋಚಿಸಿದ ವಿವೇಕಾನಂದರು ಕೂಡಲೇ ಕೋಣೆಯ ಬಾಗಿಲು ತೆಗೆದು ಹೊರಗೆ ಬಂದು ಆ ಮಹಿಳೆಯ ಬಳಿ ಕುಳಿತು ಹಾಡು ಕೇಳುತ್ತಾರೆ.ಮತ್ತು ತಾನು ನಿಜವಾಗಲೂ ಮೋಹಮುಕ್ತ ಎಂದು ಸಾಬೀತು ಪಡಿಸುತ್ತಾರೆ.

Sunday, January 16, 2011

ಕಾಕಾಸುರ ವಧೆ

                                  ಕಾಕಾಸುರ ವಧೆ
ಬಹಳ ಹಿಂದೆ ಇಂದ್ರನ ಮಗ ಜಯಂತ ತನ್ನ ಸ್ನೇಹಿತರಾದ ಅಪ್ಸರೆಯರು ಮತ್ತು ಗಂಧರ್ವ ರೊಡನೆ ಭೂಲೋಕಕ್ಕೆ ಬಂದಿಳಿದ.ಆತನಿಗೆ ಮನರಂಜನೆಯೇ ಮುಖ್ಯ ಉದ್ದೇಶವಾಗಿತ್ತು.ಹೀಗಿರಲು ಅವರು ಒಂದು ಕಡೆ ತುಂಬು ನೀರಿನ ಸರೋವರವನ್ನು ಕಂಡು ಅಲ್ಲಿ ಜಲಕ್ರೀದೆಯಾಡಲು  ಬಂದು ಇಳಿಯುತ್ತಾರೆ.
ಆದರೆ ಅದು ಓರ್ವ ಮುನಿಯ ಅಶ್ರಮವಾಗಿರುತ್ತದೆ.ಇದರ ಅರಿವು ಇಲ್ಲದ ಜಯಂತ ಮತ್ತು ಆತನ ಸ್ನೇಹಿತರು ಅಲ್ಲಿಯ ಮರ-ಗಿಡಗಳನ್ನು ವಿರೂಪಗೊಳಿಸುತ್ತಾರೆ ಮತ್ತು ಅಲ್ಲಿಯ ಶಾಂತ ವಾತಾವರಣಕ್ಕೆ ಧಕ್ಕೆ ತರುತ್ತಾರೆ.ಇದು ಸಹಜವಾಗಿ ತಪೋನಿರತ ಮುನಿಯ ತಪೋಭಂಗಕ್ಕೆ ಕಾರಣವಾಗುತ್ತದೆ.
ಆತ ಸಿಟ್ಟಿನಿಂದ ಇದಕ್ಕೆಲ್ಲ ಕಾರಣನಾದ ಜಯಂತನು ಕಾಗೆಯಾಗಲಿ ಎಂದು ಶಪಿಸುತ್ತಾನೆ.ಕೂಡಲೇ ಜಯಂತನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಮುನಿಯ ಕಾಲಿಗೆ ಬಿದ್ದು ಶರಣಾಗುತ್ತಾನೆ.ಆಗ ಮುನಿಯು ಶ್ರೀರಾಮನ ಪಾದಸ್ಪರ್ಶದಿಂದ ಶಾಪದಿಂದ ಮುಕ್ತಿಯಾಗುವುದು  ಎಂದು ಹರಸುತ್ತಾನೆ.
ಜಯಂತನ ಸ್ನೇಹಿತರು ನೋಡುತ್ತಿರುವಂತೆಯೇ ಅವನಿಗೆ ಕಾಗೆಯ ರೂಪ ಬರುತ್ತದೆ ಮತ್ತು ಆತ ಅಲ್ಲಿಂದ ಹಾರಿಹೋಗುತ್ತಾನೆ.ಇದು ಒಬ್ಬ ರಾಕ್ಷಸನ ಕಿವಿಗೆ ಬೀಳುತ್ತದೆ ಮತ್ತು ಆತ ಜಯಂತನ ದೇಹದಲ್ಲಿ ಸೇರಿಕೊಂಡು ಆತನಿಂದ ಪಾಪಕೃತ್ಯಗಳನ್ನು ಮಾಡಿಸುತ್ತಾನೆ.ಹೀಗಾಗಿ ಆ ಕಾಗೆಗೆ ಕಾಕಾಸುರ ಎನ್ನುವ ಹೆಸರು ಬಂತು.
ಅದು ರಾಮಾವತಾರದ ಕಾಲ.ರಾಮ ಮತ್ತು ಸೀತೆಯರು ವನವಿಹಾರಕ್ಕೆಂದು ಕಾಡಿಗೆ ಬರುತ್ತಾರೆ.ಆಗ ಕಾಕಾಸುರ ಅಲ್ಲಿ ಮಲಗಿದ್ದ ಸೀತೆಯ ಎದೆಯನ್ನು ಕುಕ್ಕುತ್ತಾನೆ.ಇದರಿಂದ ಸೀತೆ ಭೀತಗೊಳ್ಳುತ್ತಾಳೆ.ಆಗ ಶ್ರೀರಾಮ ಕೈಗೆ ಸಿಕ್ಕಿದ ಒಂದು ಧರ್ಬೆಯನ್ನು ಮಂತ್ರಿಸಿ ಆ ಕಾಕಾಸುರನ ಮೇಲೆ ಪ್ರಯೋಗಿಸುತ್ತಾನೆ.ಅದರ ಹೊಡೆತ ತಾಳಲಾರದೆ ಕಾಕಾಸುರ ಶ್ರೀರಾಮನ ಕಾಲಿಗೆ ಬೀಳುತ್ತಾನೆ.ಆಗ ಜಯಂತನಿಗೆ ಶಾಪ ವಿಮೋಚನೆಯಾಗುತ್ತದೆ.
ಆದರೆ ಇದನ್ನೆಲ್ಲಾ ಮಾಡಿದ್ದು ಕಾಗೆಯ ದೇಹದೊಳಗಿದ್ದ ರಾಕ್ಷಸ.ಆತನೂ ರಾಮನಿಗೆ ಶರಣು ಬಂದಾಗ ರಾಮನು ಇನ್ನು ಮುಂದೆ ಕಾಗೆಗಳಿಗೆ ಒಂದೇ ಕಣ್ಣಿನಿಂದ ನೋಡುವಂತೆ ಆಗಲಿ ಎಂದು ಹರಸುತ್ತಾನೆ.ಆದ್ದರಿಂದ ಕಾಗೆಗಳು ಒಂದು ವಸ್ತುವನ್ನು ಎರಡೂ ಕಣ್ಣುಗಳಿಂದ ನೋಡಲಾರವು.

ಆತ್ಮ ರಕ್ಷಣೆಯೇ ಮೇಲು

                                  ಆತ್ಮ ರಕ್ಷಣೆಯೇ ಮೇಲು
ಒಮ್ಮೆ ರಾಮಕೃಷ್ಣ ಪರಮಹಂಸರು ಪ್ರವಚನ ನೀಡುತ್ತಿದ್ದರು.ಅವರು ಜನರಿಗೆ ಕೆಟ್ಟದ್ದನ್ನು ಮಾಡಬಾರದು ಎಂದು ನೆರೆದ ಜನರಿಗೆ ತಿಳಿಹೇಳುತ್ತಿದ್ದರು.ಆದರೆ ಅವರ ಪ್ರವಚನ ಕೇಳಲು ಜನರ ಜೊತೆ ಒಂದು ಹಾವು ಕೂಡ ಬಂದಿತ್ತು.ಪ್ರವಚನ ಕೇಳಿದ ಹಾವಿಗೆ ತಾನು ಮಾಡುವುದು ತಪ್ಪು ಎಂದು ಅನಿಸಿತು.ತಾನು ಇನ್ನು ಮುಂದೆ ಜನರಿಗೆ ಕಚ್ಚುವುದಾಗಲೀ ಅಥವಾ ಭುಸುಗುಟ್ಟಿ ಅವರನ್ನು ಹೆದರಿಸುವುದಾಗಲೀ ಮಾಡುವುದಿಲ್ಲವೆಂದು ನಿರ್ಧಾರ ಮಾಡಿತು.ಮತ್ತು ಅಂತೆಯೇ ನಡೆದುಕೊಳ್ಳಲು ಆರಂಭಿಸಿತು.ಆದರೆ ಈ ಹಾವು ಕಚ್ಚದೆ ಇರುವುದು  ಮತ್ತು ಭುಸುಗುಡದೆ ಇರುವುದು ಜನರಿಗೆ ತಮಾಷೆಯ ವಿಷಯವಾಯಿತು.ಅದರಲ್ಲೂ ಮಕ್ಕಳು ಇದರಿಂದ ತುಂಬಾ ಸಂತಸಕ್ಕೆ ಒಳಗಾದರು.
ಅವರು ಈ ಹಾವಿನ ಬಳಿ ಬಂದು ಅದಕ್ಕೆ ಕಲ್ಲಿನಿಂದ ಹೊಡೆಯುವುದು ಮತ್ತು ಅದಕ್ಕೆ ಚುಚ್ಚುವುದು ಹೀಗೆ ಅನೇಕ ರೀತಿಯ ತರಲೆ ಕೆಲಸಗಳನ್ನು ಮಾಡುತ್ತಿದ್ದರು.ಹಾವಿಗೆ ಇದರಿಂದ ನೋವಾಗುತ್ತಿತ್ತು ಆದರೆ ತಾನು ಕೈಗೊಂಡ ಪ್ರತಿಜ್ಞೆಯ ನೆನೆಪಾಗಿ ಸುಮ್ಮನಿರುತ್ತಿತ್ತು.ಅದು ಅವರನ್ನು ಹೆದರಿಸಲೂ ಹೋಗಲಿಲ್ಲ.
ಆದರೆ ಮಕ್ಕಳು ಹೊಡೆದ ಕಲ್ಲೇಟಿನಿಂದ ಅದಕ್ಕೆ ತುಂಬಾ ಗಾಯವಾಯಿತು.ಮತ್ತು ಗಾಯಗಳಿಂದ ರಕ್ತ ಸುರಿಯಲು ಶುರುವಾಯಿತು.ಹಾವಿಗೆ ಇನ್ನು ತಾನು ಬದುಕುವುದಿಲ್ಲ ಎಂದು ತಿಳಿಯಿತು.ಅದು ರಾಮಕೃಷ್ಣರ ಬಳಿ ಬಂದು ತಾನು ಅವರು ಹೇಳಿದಂತೆಯೇ ಮಾಡಿದರೂ ಜನರು ತನ್ನನ್ನು ಹೊಡೆದು ಗಾಯಗೊಳಿಸಿದ್ದಾರೆ ಎಂದು ಅಲವತ್ತುಗೊಂಡಿತು.ಆಗ ರಾಮಕೃಷ್ಣರು ಕಚ್ಚದೆ ಇರುವುದು ಸರಿ.ಆದರೆ ಆತ್ಮ ರಕ್ಷಣೆಗಾಗಿ ಭುಸುಗುಡದೆ ಇದ್ದರೆ ಲೋಕದಲ್ಲಿ ಜನರು ಜೀವಿಸಗೊಡುವುದಿಲ್ಲ.ಆದ್ದರಿಂದ ಆತ್ಮ ರಕ್ಷಣೆಗಾಗಿ ಭುಸುಗುಟ್ಟಿ ಜನರನ್ನು ಹೆದರಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿ ಹೇಳಿ ಹಾವಿನ ಗಾಯಗಳಿಗೆ ಶ್ರುಶ್ರೂಷೆ ಮಾಡಿ ಕಳುಹಿಸಿದರು.
ನೀತಿ:ಆತ್ಮ ರಕ್ಷಣೆಗಾಗಿ ಏನೂ ಮಾಡಬಹುದು.

Friday, January 14, 2011

ಸ್ವಾತಂತ್ರ್ಯ ಸಂಗ್ರಾಮದ ಕಥೆ

                              ಸ್ವಾತಂತ್ರ್ಯ ಸಂಗ್ರಾಮದ ಕಥೆ
ಇದು ಸ್ವಾತಂತ್ರ್ಯ ಸಂಗ್ರಾಮ ಮೇರು ಘಟ್ಟದಲ್ಲಿದ್ದಾಗ ನಡೆದ ಘಟನೆ.ಬ್ರಿಟಿಶ್ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರನ್ನು ಹಿಡಿದು ಜೈಲಿಗೆ ಅಟ್ಟುತಿತ್ತು.ಆಗ ಓರ್ವ ಕೈದಿ ಸೆರೆಮನೆಯ ಆವರಣದಲ್ಲಿ ಪೋಲೀಸರೊಡನೆ ಬರುತ್ತಿರುತ್ತಾನೆ.ಆತನಿಗೆ ಎದೆಗೆ ,ಕೈಗೆ,ಕಾಲಿಗೆ ಎಲ್ಲ ಭಾರವಾದ ಕಬ್ಬಿಣದ ಗುಂಡುಗಳಿಂದ ಬಂಧಿಸಿರುತ್ತಾರೆ.ಅದು ಎಷ್ಟು ಭಾರವಾಗಿರುತ್ತದೆ ಎಂದರೆ ಕಾಲು ಎತ್ತಿ ಇಡುವಾಗಲೆಲ್ಲ ಭಾರಕ್ಕೆ ಚರ್ಮವೂ ಕಿತ್ತು ಬರುತ್ತಿರುತ್ತದೆ.
ಬ್ರಿಟಿಷರು ಇಂತಹ ಅಮಾನವೀಯ ಶಿಕ್ಷೆ ನೀಡಲು ಕಾರಣ ಕೈದಿ ಬ್ರಿಟಿಶ್ ಜೈಲರಿನ ಕಣ್ಣಲ್ಲಿ ಕಣ್ಣು ಇಟ್ಟು ಮಾತಾಡಿದ್ದು.ನಿಯಮದ ಪ್ರಕಾರ ಭಾರತೀಯರು ಬ್ರಿಟಿಷರ ಮುಂದೆ ತಲೆ ಬಗ್ಗಿಸಿಯೇ ಮಾತನಾಡಬೇಕು.ಕಣ್ಣಿನಲ್ಲಿ ಕಣ್ಣು ಇಟ್ಟು ಮಾತನಾಡಬಾರದು.ಆದರೆ ಕೈದಿ ಆ ಅಚಾತುರ್ಯವನ್ನು ಮಾಡಿದ ಕಾರಣ ಆತನಿಗೆ ಆ ಶಿಕ್ಷೆ. ಆದರೆ ಆತ ಪ್ರತಿ ಸಲ ಕಾಲು ಎತ್ತಿ ಇಡುವಾಗಲೂ ವಂದೇ ಮಾತರಂ ಎಂದೇ ಹೇಳುತ್ತಿದ್ದ.
ಆ ಜೈಲಿನಲ್ಲಿ ಓರ್ವ ಸನ್ಯಾಸಿಯೂ ಬಂಧಿಯಾಗಿದ್ದರು.ಕೈದಿ ಅವರನ್ನು ಕಂಡು ನಮಸ್ಕರಿಸಿ ತಾನು ಮಾಡಿದ್ದು ತಪ್ಪೇ? ಎಂದು ಕೇಳಿದ. ಆಗ ಆ ಸನ್ಯಾಸಿ ಭಾರತೀಯರೆಲ್ಲರೂ ಇದೇ ತರಹ ಬ್ರಿಟಿಷರ ಕಣ್ಣಿನಲ್ಲಿ ಕಣ್ಣು ಇಟ್ಟು ಮಾತನಾಡಿದರೆ ಅವರು ದೇಶ ಬಿಟ್ಟು ಹೋಗುವ ದಿನಾ ದೂರ ಇಲ್ಲ.ನೀನು ಮಾಡಿದ್ದು ಸರಿಯಾಗಿದೆ ಎಂದು ಆ ಕೈದಿಯನ್ನು ಹುರಿದುಂಬಿಸಿದರು.

ಕಸ್ತೂರ್ಬಾ ಅವರ ಮರಣ

                                   ಕಸ್ತೂರ್ಬಾ ಅವರ ಮರಣ
ಕಸ್ತೂರ್ಬಾ ಗಾಂಧಿ ಅವರು ಮಹಾತ್ಮಾ ಗಾಂಧಿ ಅವರ ಪತ್ನಿ.ಮಹಾತ್ಮಾ ಗಾಂಧಿ ಅವರ ಜೀವನದ ಬಗ್ಗೆ ಜನರಿಗೆ ತಿಳಿದಷ್ಟು ಕಸ್ತೂರ್ಬಾ ಅವರ ಬಗ್ಗೆ ತಿಳಿದಿಲ್ಲ.ಇದು ಅವರ ಬದುಕಿನಲ್ಲಿ ನಡೆದ ಘಟನೆ.
ಒಮ್ಮೆ ಕಸ್ತೂರ್ಬಾ ಮತ್ತು ಮಹಾತ್ಮಾ ಇಬ್ಬರನ್ನೂ ಬ್ರಿಟಿಶ್ ಸರ್ಕಾರ ಬಂಧಿಸಿ ಅಘಾ ಖಾನ್ ಸೆರೆಮನೆಯಲ್ಲಿ ಇಡುತ್ತದೆ.ಆಗ ಅವರೀರ್ವರಿಗೂ ೭೦ ವರುಷದ ಆಸುಪಾಸು.ಆರೋಗ್ಯವೂ ಆಗಿಂದಾಗ್ಗೆ ಕೈಕೊಡುತಿರುತ್ತದೆ.ಅದರೂ ಅವರೀರ್ವರೂ ಸೆರೆಮನೆ ವಾಸಕ್ಕೆ ತಯಾರಾಗುತ್ತಾರೆ.ಆದರೆ ಕಸ್ತೂರ್ಬಾ ಅವರ ಆರೋಗ್ಯ ಜೈಲಿನಲ್ಲಿ ದಿನದಿಂದ ದಿನಕ್ಕೆ ಹದಗೆಡುತ್ತದೆ.ಆಗಲೇ ಅವರಿಗೆ ಗಾಂಧೀಜಿ ಅವರ ಸಹಾಯಕರಾಗಿದ್ದ ಮಹಾದೇವ ದೇಸಾಯಿ ಅವರು ಸಾವಿಗೀಡಾದ ಸುದ್ದಿ ತಿಳಿಯುತ್ತದೆ.ಕಸ್ತೂರ್ಬಾ ಅವರಿಗೆ ಈ ಘಟನೆ ತುಂಬಾ ಆಘಾತವನ್ನು ಉಂಟುಮಾಡುತ್ತದೆ.
ಆಗಲೇ ಅವರಿಗೆ ತೀವ್ರತರನಾದ ಹೃದಯಾಘಾತವಾಗುತ್ತದೆಆದರೆ ಬ್ರಿಟಿಷರು ಯಾವುದೇ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಅವರಿಗೆ ನೀಡುವುದಿಲ್ಲ.ತನ್ನ ಕೊನೆ ದಿನಗಳು ಬರುತ್ತಿರುವುದನ್ನು ಮನಗಂಡ ಕಸ್ತೂರ್ಬಾ ಅವರು ಗಾಂಧೀಜಿ ಅವರನ್ನು ಬರಹೇಳುತ್ತಾರೆ.ಗಾಂಧೀಜಿ ಬಂದು ಕಸ್ತೂರ್ಬಾ ಅವರನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾರೆ.ಕಸ್ತೂರ್ಬಾ ಅವರು ತನ್ನ ಪತಿಯ ತೊಡೆಯ ಮೇಲೆ ಪ್ರಾಣ ಬಿಡುತ್ತಾರೆ.
ಆದರೆ ಬ್ರಿಟಿಶ್ ಸರ್ಕಾರ ಅವರ ಅಂತ್ಯ ಕ್ರಿಯೆ ಜೈಲಿನ ಹೊರಗೆ ಮಾಡಲು ಅನುಮತಿ ನೀಡುವುದಿಲ್ಲ.ಕೊನೆಗೆ ಗಾಂಧೀಜಿ ಅವರು ಜೈಲಿನ ಒಳಗೆ ಕಸ್ತೂರ್ಬಾ ಅವರ ಶವದಹನಕ್ಕೆ ಏರ್ಪಾಡು ಮಾಡುತ್ತಾರೆ.ಶವಕ್ಕೆ ಬೆಂಕಿ ನೀಡಿದ ಮೇಲೂ ಗಾಂಧೀಜಿ ಅಲ್ಲೇ ನಿಂತಿರುತ್ತಾರೆ.ಎಲ್ಲರೂ ಅವರ ಬಳಿ ಇನ್ನು ಹೋಗಬಹುದು ಎಂದು ತಿಳಿಸಿದರೂ ಗಾಂಧೀಜಿ "ಕಸ್ತೂರ್ಬಾ ಅವರು ನನ್ನ ಜೀವನದ ಎಲ್ಲ ನೋವು ನಲಿವುಗಳಲ್ಲಿ ಭಾಗಿಯಾಗಿದ್ದಾಳೆ.ಆದ್ದರಿಂದ ಆಕೆಯ ಕೊನೆಯ ಕ್ಷಣದಲ್ಲಿ ನಾನು ಅವಳ ಜೊತೆ ಇರುತ್ತೇನೆ "ಎಂದರು.ಶವವು ಪೂರ್ತಿಯಾಗಿ ದಹನವಾಗುವವರೆಗೆ ಗಾಂಧೀಜಿ ಅಲ್ಲೇ ಇದ್ದರು.

Thursday, January 13, 2011

ಅಸಹಾಯಕಳೆಂದು ಹೀಗಳೆಯದಿರಿ

                                        ಅಸಹಾಯಕಳೆಂದು ಹೀಗಳೆಯದಿರಿ
ಅಸಹಾಯಕಳೆಂದು ಹೀಗಳೆಯದಿರಿ
ಕೈಯ ೫ ಬೆರಳೂ ಸಮವಾಗಿಲ್ಲ ಎನ್ನುವುದನ್ನು ಮರೆಯದಿರಿ;
ಕಾಲ ಚಕ್ರ ಇನ್ನೊಂದು ಸುತ್ತು ಉರುಳಲೇ ಬೇಕು
ಈಗ ಕೆಳಗೆ ಇರುವವರು,ಮುಂದೆ ಮೇಲೆ ಬರಲೇ ಬೇಕು.

ಕನಸುಗಳು ಸುಟ್ಟು ಸಮಾಧಿಯಾಗಿವೆ
ಏಕೋ ಗೊತ್ತಿಲ್ಲ,ವಿಧಿಯ ಮೇಲೆ ಸಿಟ್ಟು ಬರುತಿದೆ;
ಯಾವ ಪಾಪಕೃತ್ಯ ಮಾಡದೆಯೇ ನನಗೆ ಈ ಶಿಕ್ಷೆ
ಇನ್ನೊಬ್ಬರ ಬಳಿ ಅಂಗಲಾಚಬೇಕಾಗಿದೆ,"ಕೊಡಿ ಪ್ರೀತಿಯ ರಕ್ಷೆ".

Wednesday, January 12, 2011

ಜಟಾಸುರ ವಧೆ

                                         ಜಟಾಸುರ ವಧೆ
ಹಿಂದೆ  ಪಾಂಡವರು ವನವಾಸದಲ್ಲಿ ಇದ್ದಾಗ ಜಟಾಸುರ ಎನ್ನುವ ರಾಕ್ಷಸ ಬ್ರಾಹ್ಮಣ ವೇಷದಲ್ಲಿ ಅವರ ನಡುವೆ ಬಂದು ಸೇರಿಕೊಳ್ಳುತ್ತಾನೆ.ಅವನ ಮುಖ್ಯ ಉದ್ದೇಶ ದ್ರೌಪದಿಯನ್ನು ಅಪಹರಿಸುವುದು ಮತ್ತು ಪಾಂಡವರನ್ನು ಒತ್ತೆಯಾಳಾಗಿ ಇಟ್ಟುಕೊಳ್ಳುವುದು.ಆದರೆ ಭೀಮನು ತನ್ನ ಸಹೋದರರನ್ನು ಹದ್ದಿನ ಕಣ್ಣಿನಿಂದ ಕಾಪಾಡುತ್ತಿದ್ದನು.ಹೀಗಿರಲು ಒಂದು ದಿನಾ ಭೀಮನು ಯಾವುದೋ ಕೆಲಸದ ಮೇಲೆ ಹೊರಹೋಗಿದ್ದಾಗ ಜಟಾಸುರನು ಪಾಂಡವರಾದ  ಯುಧಿಷ್ಠಿರ,ನಕುಲ ಮತ್ತು ಸಹದೇವ ಇವರನ್ನು ಒತ್ತೆಯಾಳಾಗಿ ವಶಪಡಿಸಿಕೊಂಡು ,ದ್ರೌಪದಿ ಯನ್ನು ತನ್ನ ಜೊತೆ ಬರುವಂತೆ ವಶಪಡಿಸಿಕೊಂಡು ಅಲ್ಲಿಂದ ತೆರಳುತ್ತಾನೆ.ಆದರೆ ಹಾಗೆ ಹೋಗುವಾಗ ಯುಧಿಷ್ಠಿರ  ಅವನಿಗೆ ಧರ್ಮಸೂಕ್ಷ್ಮ ಮಾತುಗಳನ್ನು ಆಡುತ್ತ ಆತನ ವೇಗವನ್ನು ಕಡಿಮೆ ಮಾಡುತ್ತಾನೆ.ನಂತರ ಭೀಮನು ಇವರ ಸುಳಿವೇ ಇಲ್ಲದಿರುವುದನ್ನು ಕಂಡು ಜಟಾಸುರನ ಹಿಂದೆ ಬಿದ್ದು ಅವನನ್ನು ಹಿಡಿದು ನಂತರ ಅವನನ್ನು ಕೊಂದು ಉಳಿದ ಪಾಂಡವರು ಮತ್ತು ದ್ರೌಪದಿಯೊಡನೆ ಮನೆಗೆ ಮರಳುತ್ತಾನೆ.

ಜೀವನವೆಂಬ ಅರಣ್ಯ

                                           ಜೀವನವೆಂಬ ಅರಣ್ಯ
ಜೀವನವೆಂಬ ಅರಣ್ಯದಲ್ಲಿ ಎತ್ತ ನೋಡಿದರೂ ಕತ್ತಲು
ಭರವಸೆಯ ಬೆಳಕೇ ಕಾಣದಾಗಿದೆ ಎತ್ತಲೂ;
ಅಂದುಕೊಂಡಿದ್ದನ್ನು ಸಾಧಿಸಲಾಗದಿರುವ ಕೊರಗು ಮನದಲ್ಲಿದೆ
ಆರೋಗ್ಯವೇ ಭಾಗ್ಯ ಎಂಬ ಅರಿವು ಈಗ ನನಗಾಗಿದೆ

ಆಕಾಶಕ್ಕೇ ಏಣಿ ಹಾಕಲು ಹೊರಟಿದ್ದೆ
ಎಲ್ಲವೂ ಗಗನಕುಸುಮ ಎಂಬುದರ ಅರಿವಾಗಿ ಬೆಚ್ಚಿ ಬಿದ್ದೆ;
ನನ್ನ ಕನಸು ಹೀಗೆ ಸಾಯುತ್ತದೆ ಎಂದು ತಿಳಿದಿರಲಿಲ್ಲ
ಮೊದಲೇ ಗೊತ್ತಿದ್ದರೆ ಕನಸನ್ನೇ ಕಾಣುತ್ತಿರಲಿಲ್ಲ

Tuesday, January 11, 2011

ಕೋಕ-ವಿಕೋಕ ವಧೆ

                                   ಕೋಕ-ವಿಕೋಕ ವಧೆ
 ಕೋಕ ಮತ್ತು ವಿಕೋಕ ಎನ್ನುವವರು ಸಹೋದರರು.ಅವರು ಕಲಿಯುಗದಲ್ಲಿ ನಾನಾ ಕಷ್ಟಗಳನ್ನು ಜನರಿಗೆ ನೀಡುತ್ತಿರುತ್ತಾರೆ.ಹೀಗಿರಲು ಅವರು ತಮಗೆ ಮರಣ ಭಯವೇ ಇಲ್ಲದಿರುವಂತೆ ಮಾಡಲು ಬ್ರಹ್ಮನನ್ನು ಕುರಿತು ಘೋರ ತಪಸ್ಸು ಮಾಡುತ್ತಾರೆ.ಬ್ರಹ್ಮನು ಅವರ ತಪಸ್ಸಿಗೆ ಮೆಚ್ಚಿ ಅವರ ಮನೋ ಕಾಮನೆಯಂತೆಯೇ ವರ ನೀಡುತ್ತಾನೆ.ಇದರಿಂದ ತಮಗೆ ಮರಣ ಭಯವೇ ಇಲ್ಲವೆಂದು ಕೊಬ್ಬಿದ ಆ ದುರುಳ ರಾಕ್ಷಸರು ಜನ ಕಂಟಕರಾಗಿ ಬದಲಾಗುತ್ತಾರೆ.
ಕೊನೆಗೆ ಎಲ್ಲರೂ ಮಹಾವಿಷ್ಣುವಿನ ಮೊರೆ ಹೋಗುತ್ತಾರೆ.ಆಗ ವಿಷ್ಣುವಿಗೆ ಆ ರಾಕ್ಷಸರು ಒಬ್ಬರನ್ನು ಒಬ್ಬರು ಹಿಡಿದುಕೊಂಡಾಗ ಮಾತ್ರ ಅವರ ಮರಣ ಸಾಧ್ಯ ಎಂಬುದು ತಿಳಿಯುತ್ತದೆ.ಅಂತೆಯೇ ಅವನು ಕಲಿಯುಗದಲ್ಲಿ ಕಲ್ಕಿ ಯ ಅವತಾರವನ್ನು ಎತ್ತುತ್ತಾನೆ.ಮತ್ತು ಕಲ್ಕಿಯು ಆ ರಾಕ್ಷಸರ ನಡುವೆಯೇ ಆವಿರ್ಭವಿಸುತ್ತಾನೆ.
ಹೀಗೆ ಹುಟ್ಟಿದ ಕಲ್ಕಿಯನ್ನು ಹಿಡಿಯಲು ಆ ರಾಕ್ಷಸರು ಪೈಪೋಟಿಗೆ ಬಿದ್ದವರಂತೆ ಒಬ್ಬರನ್ನು ಇನ್ನೊಬ್ಬರು ಹಿಡಿದುಕೊಳ್ಳುತ್ತಾರೆ.ಇದೆ ಸಮಯಕ್ಕೆ ಕಾಯುತ್ತಿದ್ದ ಕಲ್ಕಿಯು ಆಗ ಆ ದುರುಳ ರಾಕ್ಷಸರ ಹಣೆಗೆ ಗುರಿಯಿಟ್ಟು ಅವರನ್ನು ಕೊಲ್ಲುತ್ತಾನೆ.

೫೦ ರ ಸಂಭ್ರಮ

                                              ೫೦ ರ ಸಂಭ್ರಮ
ನನ್ನ ಬ್ಲಾಗ್ ೫೦ ಲೇಖನಗಳ ಗಡಿ ದಾಟಿ ಮುನ್ನುಗ್ಗುತ್ತಿದೆ
ಆದ್ದರಿಂದ ಇನ್ನೂ ಹೆಚ್ಚು ಹೆಚ್ಚು ಬರೆಯಲು ಸ್ಪೂರ್ತಿ ಬಂದಿದೆ;
ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಲು ನನಗಿದೋ ಮುಕ್ತ ಅವಕಾಶ
ಯಾರೇ ಓದಲಿ ಬಿಡಲಿ ನನಗಾಗುವುದಿಲ್ಲ ನಿರಾಶ!

ನನ್ನ ಜೀವನದ ಏಳು-ಬೀಳುಗಳನ್ನು ಹಂಚಿಕೊಳ್ಳುವೆ
ಹಾಗೆ ಮಾಡಿ ನನ್ನ ಮನಸ್ಸಿನ ಭಾರವನ್ನು ತುಸು ಕಡಿಮೆ ಮಾಡಿಕೊಳ್ಳುವೆ;
ಯಾರಿಂದಲೂ ಸಹಾನುಭೂತಿಯ ಅಗತ್ಯ ನನಗಿಲ್ಲ
ಪ್ರೋತ್ಸಾಹದ ಮಾತುಗಳು ಬಂದರೆ ನನಗದು ಸಕ್ಕರೆ-ಬೆಲ್ಲ!

Sunday, January 9, 2011

ಹೊಸ ವರುಷ ಬಂದಿದೆ

                                           ಹೊಸ ವರುಷ ೨೦೧೧ ಬಂದಿದೆ
ಹೊಸ ವರುಷ ೨೦೧೧ ಬಂದಿದೆ
ತುಂಬಾ ನಿರೀಕ್ಷೆಯ ಮೂಟೆಗಳನ್ನೇ ಹೊತ್ತು ತಂದಿದೆ;
ಹಳೆಯ ಕಹಿ ನೆನಪುಗಳನ್ನು ಮರೆತು ಹೊಸದರೆಡೆಗೆ ಸಾಗೋಣ
ಎಲ್ಲರಿಗೂ,ಎಲ್ಲ ರೀತಿಯಿಂದ ಒಳ್ಳೆಯದಾಗಲಿ ಎಂದು ಹಾರೈಸೋಣ!

Saturday, January 8, 2011

ತಿರುಗುಬಾಣ

                                           ತಿರುಗುಬಾಣ
ಮಿಥುನ್ ಮತ್ತೆ ಆಸ್ಪತ್ರೆಗೆ ಸೇರಿದ್ದಾನೆ.ವೈದ್ಯರ ಪ್ರಕಾರ ಇದು foodpoisening  ಕೇಸ್.ಮಿಥುನ್ ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿರುತ್ತಾನೆ ಇದೆ ಕಾರಣದಿಂದ.ಆದರೆ ಪ್ರತಿ ಸಲ ಆತನ ಗೆಳೆಯ ರಾಜೇಶ್ ಆತನನ್ನು ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ದಾಖಲು ಮಾಡುತ್ತಿರುತ್ತಾನೆ.ಮಿಥುನಿನ ಹೆಂಡತಿ  ಅಚಲ ಆತನ ಪಕ್ಕದಲ್ಲೇ ಇದ್ದಾಳೆ.ಆಕೆ ಪ್ರತಿ ಬಾರಿ ಮಿಥುನ್ ಆಸ್ಪತ್ರೆಗೆ ಸೇರಿದಾಗಲೂ ಚಿಂತೆಗೆ ಒಳಗಾಗುತ್ತಾಳೆ.ಆದರೆ ರಾಜೇಶನಿಗೆ ಆಚಲಾಳ ಮೇಲೆಯೇ ಸಂಶಯ.ಆಕೆಯೇ ಮಿಥುನ್ ನಿನ ಆಹಾರದಲ್ಲಿ ವಿಷ ಬೆರೆಸುತ್ತಿದ್ದಾ ಳೆಂದು ಅವನ ಗುಮಾನಿ.
ಇದಕ್ಕಾಗಿ ಆತ ಪತ್ತೇದಾರ ರ ಸಹಾಯ ಯಾಚಿಸಲು ನಿರ್ಧರಿಸಿದ. ಪತ್ತೇದಾರ ವಿಜಯ್ ಮತ್ತು ಆತನ ಸಹಾಯಕಿ ನಿಶಾ ತಮ್ಮ ಕಚೇರಿಯಲ್ಲಿ ಕುಳಿತು ಮಾತನಾಡುತ್ತಿದ್ದಾರೆ.ಆಗ ರಾಜೇಶ್ ಒಳ ಬಂದ.ತನ್ನ ಅನುಮಾನವನ್ನು ಹೇಳಿಕೊಂಡ.ಆಗ ವಿಜಯಗೆ ರಾಜೇಶನ ಮೇಲೆ ಒಳ್ಳೆ ಅಭಿಪ್ರಾಯ ಬರುತ್ತದೆ.ಪ್ರತಿ ಸಲ ರಾಜೇಶ್ ಮಿಥುನಿನ ಸಹಾಯಕ್ಕೆ ಧಾವಿಸುತ್ತಿರುವುದು ವಿಜಯನಿಗೆ ಸಂತಸ ತರುತ್ತದೆ.ಆಗ ರಾಜೇಶ್ ಅಚಲ ಮನೆಯಲ್ಲೇ ಔತಣ ಕೂಟ ಏರ್ಪಡಿಸಿರುವುದನ್ನು ತಿಳಿಸುತ್ತಾನೆ..ವಿಜಯ್ ಮತ್ತು ನಿಶಾ ಅದಕ್ಕೆ ಹಾಜರಾಗಲು ನಿರ್ಣಯಿಸುತ್ತಾರೆ.
ಅಂತೆಯೇ ಅವರು ಔತಣ ಕೂಟಕ್ಕೆ ಹಾಜರಾಗುತ್ತಾರೆ.ಅದರಲ್ಲಿ ನಿಶಾ ಮಿಥುನ್ ಊಟ ಮಾಡುವ ತಟ್ಟೆಯನ್ನೇ ಬದಲಾಯಿಸುತ್ತಾಳೆ.ಮತ್ತು ಆ ತಟ್ಟೆಯಲ್ಲೇ ತಾನೂ ಉಣ್ಣುತ್ತಾಳೆ.ಆದರೆ ಇದರ ಬಗ್ಗೆ ಯಾರಿಗೂ ತಿಳಿಯುವುದಿಲ್ಲ.ಆದರೂ ಮಿಥುನ್ ಔತಣ ಕೂಟದ ನಂತರದ ೨ ದಿನಗಳಲ್ಲಿ  ಮತ್ತೆ ಆಸ್ಪತ್ರೆಗೆ ದಾಖಲಾಗುತ್ತಾನೆ.ಇದು ವಿಜಯ್ ನ ಅಚ್ಚರಿಗೆ ಕಾರಣವಾಗುತ್ತದೆ.ಒಂದು ವೇಳೆ ಆಹಾರದಲ್ಲಿ ವಿಷ ಬೆರೆತ್ತಿದ್ದರೆ ಔತಣ ಕೂಟದಲ್ಲಿ ಭಾಗಿಯಾಗಿದ್ದ ಉಳಿದ ಜನರು ಹೇಗೆ ಆರೋಗ್ಯವಂತರಾಗಿದ್ದಾರೆ?ಮತ್ತು ನಿಶಾ ಅದೇ ತಟ್ಟೆಯಲ್ಲೇ ಊಟ ಮಾಡಿದ್ದರೂ ಆಕೆಗೆ ಏನೂ ಆಗಿಲ್ಲ.ವಿಜಯನ ತಲೆ ಬಿಸಿ ಆಗುತ್ತದೆ.
ಹೀಗಿರುವಾಗಲೇ ವಿಜಯ್ ನ ಫೋನ್ ರಿಂಗುನಿಸುತ್ತದೆ.ಮತ್ತು ಅದರಲ್ಲಿ ರಾಜೇಶ್ ಮಾತನಾಡುತ್ತಿರುತ್ತಾನೆ. ಆತ ಆಚಲಾಳ ಸಾವಿನ ಸುದ್ದಿ ತಿಳಿಸಿ ಕೂಡಲೇ ಬರುವಂತೆ ತಿಳಿಸುತ್ತಾನೆ.ವಿಜಯ್ ಕೂಡಲೇ ಮಿಥುನಿನ ಮನೆಗೆ ತೆರಳುತ್ತಾನೆ.ಅಲ್ಲಿ ಮಿಥುನ್ ಒಂದು ಕಡೆ ಅನ್ಯಮನಸ್ಕನಾಗಿ ಕುಳಿತ್ತಿದ್ದ. ವಿಜಯ್ ಅವನ ಬಳಿ ಬಂದು ಸಾಂತ್ವಾನದ ಮಾತು ಹೇಳುತ್ತಾನೆ.ಆಗ ಮಿಥುನ್ ಹೇಳಿದ ಮಾತಿನಿಂದ ವಿಜಯ್ ಬೆಚ್ಚಿ ಬೀಳುತ್ತಾನೆ.
ಅದೇನೆಂದರೆ ಆಚಲಾಳ ಉಪಾಯ ಅವಳಿಗೆ ತಿರುಗುಬಾಣವಾದದ್ದು. ಯಾವತ್ತಿನಂತೆ ಅಚಲ ಮಿಥುನ್ ನನ್ನು ಊಟಕ್ಕೆ ಕರೆದಿದ್ದಾಳೆ.ಆದರೆ ಅಚಲ ಊಟ ತರುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಂಡಿದ್ದಾಳೆ.ಇದರಿಂದ ಸಂಶಯಿತನಾದ ಮಿಥುನ್ ಆ ಊಟವನ್ನು ಅವಳಿಗೆ ತಿನ್ನಲು ನೀಡಿದಾಗ ಮೊದಲು ಆಕೆ ನಿರಾಕರಿಸುತ್ತಾಳೆ.ಆಮೇಲೆ ಗತ್ಯಂತರವಿಲ್ಲದೆ ಉಣ್ಣುತ್ತಾಳೆ.ಮತ್ತು ಸತ್ತು ಕೆಳಗೆ ಬೀಳುತ್ತಾಳೆ.ಇದನ್ನು ಮಿಥುನ್ ವಿಜಯಗೆ ತಿಳಿಸುತ್ತಾನೆ.
ಆದರೂ ವಿಜಯಗೆ ಏನೋ ಸಂಶಯ.ಆಚಲಾಳ ಸಾವು ಬೇರೆ ಕಾರಣದಿಂದ ಆಗಿದೆ ಎಂಬುದು ಆತನ ಶಂಕೆ.ಅದಕ್ಕಾಗಿ ಆತ ಮಿಥುನ್ ಮತ್ತು ರಾಕೇಶ್ ಇಬ್ಬರನ್ನೂ ತನ್ನ ಕಚೇರಿಗೆ ಬರ ಹೇಳುತ್ತಾನೆ.ಅಲ್ಲಿ ಅವರಿಗೆ ಕುಡಿಯಲು ನಿಶಾ ಪಾನೀಯ ತರುತ್ತಾಳೆ.ಆಗ ವಿಜಯ್ ಪಾನೀಯದಲ್ಲಿ ಸತ್ಯವನ್ನೇ ಹೇಳುವ ಪುಡಿ ಬೇರೆಸಿದ್ದಾಗಿ ತಿಳಿಸಿ ಅದನ್ನು ಕುಡಿಯಲು ಸೂಚಿಸುತ್ತಾನೆ.ಆಗ ಇಬ್ಬರೂ ಬೇರೆ ದಾರಿ ಕಾಣದೆ ಅದನ್ನು ಕುಡಿಯಲೇ ಬೇಕಾಗುತ್ತದೆ.
ಮೊದಲು ರಾಜೇಶ್ ಮಾತನಾಡಲು ಆರಂಭಿಸುತ್ತಾನೆ.ತಾನು ಆಚಲಾಳನ್ನು ಇಷ್ಟ  ಪಡುತ್ತಿದ್ದದನ್ನು ತಿಳಿಸುತ್ತಾನೆ.ಆದರೆ ತಾನು ಅವಳ ಕೊಲೆಗೆ ಕಾರಣನಲ್ಲ ಎಂದು ತಿಳಿಸುತ್ತಾನೆ.ಇದನೆಲ್ಲ ನೋಡುತ್ತಿದ್ದ ಮಿಥುನ್ ಗೆ ಹೆದರಿಕೆಯಾಗುತ್ತದೆ.ನಂತರ ಆತನೂ ಮಾತನಾಡಲು ಆರಂಭಿಸುತ್ತಾನೆ.ಮಿಥುನ್ ಹೇಳಿದ ಪ್ರಕಾರ ಆತನಿಗೆ ಇನ್ನೋರ್ವ ಹೆಂಗಸಿನ ಜೊತೆ ಸಂಬಂಧ ಇರುತ್ತದೆ.ಅದು ಅಚಲಾಳಿಗೆ ತಿಳಿಯುತ್ತದೆ.ಆದರೆ ಆಕೆ ವಿಚ್ಛೇದನ  ಕೊಡಲು ನಿರಾಕರಿಸುತ್ತಾಳೆ.
ಆಗ ಮಿಥುನ್ ತಲೆಯಲ್ಲಿ ಒಂದು ಉಪಾಯ ಹೊಳೆಯುತ್ತದೆ.ತಾನೇ ಅಲ್ಪ ಪ್ರಮಾಣದಲ್ಲಿ ವಿಷ ಸೇವಿಸಿ ತನ್ನ ಗೆಳೆಯ ರಾಜೇಶನಿಗೆ ಬರಹೇಳುತ್ತಾನೆ ಮತ್ತು ಆಸ್ಪತ್ರೆಗೆ ಧಾಖಲಾಗುತ್ತಾನೆ.ಇದರಿಂದ ಎಲ್ಲರೂ ಆಚಲಾಳನ್ನೇ ಸಂಶಯದ ದೃಷ್ಟಿಯಿಂದ ನೋಡುತ್ತಾರೆ.ಇದರ ಲಾಭ ಪಡೆದ ಮಿಥುನ್ ಕೊನೆಗೆ ಅವಳನ್ನೇ ಸಾಯಿಸುತ್ತಾನೆ.ತನ್ನ ಮೇಲೆ ಯಾರಿಗೂ ಸಂಶಯ ಬರದು ಎಂದು ತಿಳಿಯುತ್ತಾನೆ.ಇದನ್ನೆಲ್ಲಾ ತಿಳಿದ ರಾಜೇಶ್ ವಿಜಯ್ ನ ಬಳಿ ಬಂದು ಆತನ ಕೈ ಕುಲುಕುತ್ತಾನೆ.ಕೊನೆಗೂ ಪಾನೀಯದಲ್ಲಿ ಸತ್ಯ ಹೇಳುವ ಪುಡಿ ಬೆರೆಸಿದ್ದಾಗಿ ಹೇಳಿದ ತಮ್ಮ ನಾಟಕ ಯಶಸ್ವಿಯಾಗಿ ಆಚಲಾಳ ಸಾವಿನ ರಹಸ್ಯ ಬಯಲಾದದ್ದಕ್ಕೆ ಸಂತಸಗೊಳ್ಳುತ್ತಾರೆ

Friday, January 7, 2011

ಸಾಗರಕ್ಕೆ ಆ ಹೆಸರು ಬಂದ ಬಗೆ

                                     ಸಾಗರಕ್ಕೆ ಆ ಹೆಸರು ಬಂದ ಬಗೆ
ಬಹಳ ಹಿಂದೆ ಭಾರತ ದೇಶವನ್ನು ಸಗರ ಎನ್ನುವ ರಾಜ ಆಳುತ್ತಿದ್ದನು.ಆತ ಒಮ್ಮೆ ಒಂದು ದೊಡ್ಡ ಯಾಗ ಮಾಡಲು ಸಂಕಲ್ಪಿಸಿದನು.ಅದರಂತೆ ಆತ ಯಾಗ ಪಶುವಾದ ಕುದುರೆಯನ್ನು ಆಯ್ಕೆ ಮಾಡಿ ಅದನ್ನು ಹೊರಗೆ ತಿರುಗಲು ಬಿಟ್ಟನು.ಹಿಂದಿನ ಕಾಲದ ಪದ್ಧತಿಯಂತೆ ಯಾರಿಗೆ ರಾಜ ಮಾಡುವ ಯಾಗದಿಂದ ಅಸಮಾಧಾನವಿದೆಯೋ ಅಂಥವರು ಯಾಗ ಪಶುವನ್ನು ಕಟ್ಟಿ ಹಾಕುತ್ತಾರೆ.ಆಗ ರಾಜ ಬಂದು ಅವರ ಜೊತೆ ಮಾತನಾಡುತ್ತಾನೆ.
ಹೀಗಿರಲು ಸಾಗರನ ಯಾಗ ಪಶುವನ್ನು ಕೆಲವು ರಾಕ್ಷಸರು ಕೊಂಡೊಯ್ದು ಅದನ್ನು ಪಾತಾಳದಲ್ಲಿ ತಪಸ್ಸು ಮಾಡುತ್ತಿದ್ದ ಒಬ್ಬ ಮುನಿಯ ಆಶ್ರಮಕ್ಕೆ ತಂದು ಅಲ್ಲಿ ಅದನ್ನು ಕಟ್ಟಿ ಹಾಕುತ್ತಾರೆ.ಮುನಿಗೆ ಇದರ ಅರಿವೇ ಇರುವುದಿಲ್ಲ.ಯಾಗ ಪಶುವು ಎಷ್ಟೊತ್ತಾದರೂ ಹಿಂದಿರುಗದೆ  ಇರುವುದನ್ನು ಕಂಡ ರಾಜ ತನ್ನ ೧೦೦ ಜನ ಪುತ್ರರ ಬಳಿ ಅದನ್ನು ಹುಡುಕಿ ತರುವಂತೆ ತಿಳಿಸುತ್ತಾನೆ.ಅಂತೆಯೇ ಅವರು ಕುದುರೆಯನ್ನು ಹುಡುಕಿಕೊಂಡು ತೆರಳುತ್ತಾರೆ.
ಅವರು ಕೊನೆಗೆ ಪಾತಾಳ ಲೋಕಕ್ಕೆ ಹೋದಾಗ ಅಲ್ಲಿ ಒಬ್ಬ ಮುನಿಯ ಆಶ್ರಮದಲ್ಲಿ ಯಾಗ ಪಶುವನ್ನು ಕಟ್ಟಿ ಹಾಕಲಾಗಿರುವುದನ್ನು ಕಾಣುತ್ತಾರೆ. ಆ ಮುನಿಯೇ ತಮ್ಮ ಯಾಗ ಪಶುವನ್ನು ಕಟ್ಟಿ ಹಾಕಿರುವುದಾಗಿ ಊಹಿಸಿದ ಸಗರ ಪುತ್ರರು ಆ ಮುನಿಯನ್ನು ಕಟ್ಟಿ ತಮ್ಮೊಂದಿಗೆ ಕರೆದೊಯ್ಯುತ್ತಾರೆ.ಆಗ ತಪೋಭಂಗವಾದ ಮುನಿಯು ಕಣ್ಣು ಬಿಟ್ಟು ನೋಡಿದಾಗ ಸಗರ ಪುತ್ರರು ಸುಟ್ಟು ಬೂದಿಯಾಗುತ್ತಾರೆ.
ನಂತರ ಆ ಬೂದಿಯನ್ನು ಪಾತಾಳ ಲೋಕದಲ್ಲೇ ಇಡುತ್ತಾನೆ.
ನಂತರ ಸಗರನಿಗೆ ಈ ಸುದ್ದಿ ಗೊತ್ತಾಗುತ್ತದೆ.ಅವನು ಬಂದು ಆ ಬೂದಿಯನ್ನು ತಂದು ನೀರಿನಲ್ಲಿ ಕರಗಿಸುತ್ತಾನೆ.ಆತ ಕರಗಿಸಿದ ನೀರಿನ ಆಕರವೇ ಸಾಗರ ಎಂದು ಖ್ಯಾತಿ ಆಯಿತು.

Thursday, January 6, 2011

ಕೋಪದ ಕೈಗೆ ಬುದ್ಧಿ ಕೊಡಬಾರದು

                                            ಕೋಪದ ಕೈಗೆ ಬುದ್ಧಿ ಕೊಡಬಾರದು
ಹಿಂದೆ ನದಿಗಳನ್ನು ದಾಟಲು ಈಗಿನಂತೆ ಸಿಮೆಂಟಿನ ಸೇತುವೆಗಳಿರಲಿಲ್ಲ.ಮರದ ಇಕ್ಕಟ್ಟಾದ ಸೇತುವೆಗಳಿದ್ದವು.ಅದರಲ್ಲಿ ಒಮ್ಮೆಗೆ ಒಬ್ಬರು ಮಾತ್ರ ಹೋಗಬಹುದಿತ್ತು.ಹೀಗಿರುವಾಗ ಶಕ್ತಿ ಎನ್ನುವ ಮುನಿಕುಮಾರನಿದ್ದನು.ಆತ ದೊಡ್ಡ ತಪಸ್ವಿ.ಆತ ತಪಸ್ಸು ಮಾಡಿ ತುಂಬಾ ಶಕ್ತಿಯನ್ನು ಪಡೆದುಕೊಂಡಿದ್ದನು.
ಹೀಗಿರುವಾಗ ಒಮ್ಮೆ ಆ ದೇಶದ ರಾಜ ಬೇಟೆಯಾಡುತ್ತಾ ಶಕ್ತಿಯ ಆಶ್ರಮದ ಬಳಿ ಬಂದನು.ಆದರೆ ರಾಜನಿಗೆ ಇದರ ಅರಿವಿರಲಿಲ್ಲ.ಅದೇ ಸಮಯಕ್ಕೆ ಶಕ್ತಿಯು ಯಾಗ ಮಾಡಲು ಸೌದೆ ಒಟ್ಟು ಮಾಡುತ್ತಿದ್ದನು.ಆತನ ಕೆಲಸ ಪೂರ್ತಿಯಾಯಿತು.ಆತ ಹೊರಡಲು ಅನುವಾದನು.ಆತ ಇದ್ದ ಸ್ಥಳ ಮತ್ತು ಆಶ್ರಮ ದ ನಡುವೆ ಒಂದು ಮರದ ಸೇತುವೆಯಿತ್ತು.ಶಕ್ತಿಯು ಸೇತುವೆ ದಾಟಲು ಹೊರಟನು.ಆದರೆ ಅದೇ ಸಮಯಕ್ಕೆ ಸರಿಯಾಗಿ ರಾಜನು ಸೇತುವೆ ದಾಟಲು ಬರುತ್ತಿದ್ದನು.ಮೊದಲೇ ಹೇಳಿದಂತೆ ಸೇತುವೆಯಲ್ಲಿ ಒಮ್ಮೆಗೆ ಒಬ್ಬರು ಮಾತ್ರ ದಾಟಬಹುದು.ರಾಜ ಮತ್ತು ಶಕ್ತಿಯ ಮುಖಾಮುಖಿಯಾಯಿತು.
ರಾಜನಿಗೆ ತಾನು ಈ ದೇಶದ ರಾಜ.ಪ್ರಜೆಗಳು ತನಗೆ ಗೌರವ ಕೊಡಬೇಕೆಂಬ ಭಾವನೆ ಇತ್ತು.ಶಕ್ತಿಗೆ ತಾನು ಮುನಿ.ತಪಶ್ಶಕ್ತಿಯಿಂದ ಏನು ಬೇಕಾದರೂ ಮಾಡಬಲ್ಲೆ ಎಂಬ ಅಹಂ ಇತ್ತು.ಹೀಗಿರಲು ಸೇತುವೆ ದಾಟುವ ವಿಚಾರದಲ್ಲಿ ಶಕ್ತಿಗೂ ಮತ್ತು ರಾಜನಿಗೂ ವಾಗ್ವಾದ ಉಂಟಾಯಿತು.ಅದು ವಿಕೋಪಕ್ಕೆ ತಿರುಗಿತು.ಇಬ್ಬರೂ ತಮ್ಮ ತಮ್ಮ ಅಹಂ ಬಿಡಲೊಲ್ಲರು.
ಹೀಗಿರುವಾಗ ಶಕ್ತಿಗೆ ತನ್ನ ಜೊತೆ ಜಗಳವಾಡುತ್ತಿರುವ ರಾಜನ ಮೇಲೆ ತುಂಬಾ ಸಿಟ್ಟು ಬಂತು.ಆತ ರಾಜನಿಗೆ ನೀನು ಬ್ರಹ್ಮರಾಕ್ಷಸನಾಗು ಎಂದು ಶಪಿಸಿಯೇ ಬಿಟ್ಟನು.
ರಾಜನು ಕೂಡಲೇ ಬ್ರಹ್ಮರಾಕ್ಷಸನಾಗಿ ಬದಲಾದನು.ಆಗ ಆತ ಮಾಡಿದ ಮೊದಲ ಕೆಲಸವೇನೆಂದರೆ ಹಸಿವಿನಿಂದ ಶಕ್ತಿಯನ್ನೇ ಆತ ಕೊಂದು ತಿಂದನು.ಪಾಪ ಶಕ್ತಿ ತಾನು ಕೊಟ್ಟ ಶಾಪ ತನಗೆ ಮುಳುವಾಗಬಹುದು ಎಂದು ಎಣಿಸಿಯೇ ಇರಲಿಲ್ಲ.ಅನ್ಯಾಯವಾಗಿ ಕೋಪದ ಭರದಲ್ಲಿ ಆತ ತನ್ನ ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು.
ನೀತಿ:ಕೋಪದ ಭರದಲ್ಲಿ ಯಾವ ಕೆಲಸವನ್ನೂ ಮಾಡಬಾರದು.

Tuesday, January 4, 2011

ಭೈರವನ ಹುಟ್ಟು

                                    ಭೈರವನ ಹುಟ್ಟು
ಹಿಂದೆ ವಿಷ್ಣುವಿಗೂ ಮತ್ತು ಬ್ರಹ್ಮನಿಗೂ ಯಾರು ಜಗತ್ತಿನಲ್ಲಿ ಶ್ರೇಷ್ಠರು ಎಂದು ಜಗಳ ಪ್ರಾರಂಭವಾಯಿತು.ಆಗ ಸಿಟ್ಟಿನಲ್ಲಿ ಬ್ರಹ್ಮನು ವಿಷ್ಣುವಿಗೆ "ಎಲ್ಲರೂ ತನ್ನನ್ನೇ ಪೂಜಿಸುತ್ತಾರೆ.ಆದ್ದರಿಂದ ನಾನೇ ಶ್ರೇಷ್ಠ" ಎಂದು ಜಂಭ ಮಾಡಿದ.ಇದು ಶಿವನಿಗೆ ತಿಳಿದು ಅವನಿಗೆ ಬ್ರಹ್ಮನ ಮೇಲೆ ತುಂಬಾ ಸಿಟ್ಟು ಬಂತು.ಏಕೆಂದರೆ ಶಿವನೆ ನಿಜವಾಗಲೂ ಈ ಜಗತ್ತಿನ ಸೃಷ್ಟಿಕರ್ತ ನಾಗಿದ್ದಾನೆ.ಹೀಗಾಗಿ ಆತ ಬ್ರಹ್ಮನನ್ನು ಸಂಹರಿಸಲು ಹೊರಟ.
ಆಗ ಬ್ರಹ್ಮನಿಗೆ ೫ ತಲೆಗಳಿದ್ದವು.ಕೋಪೋದ್ರಿಕ್ತ ಶಿವ ಬ್ರಹ್ಮನ ೫ನೆ ತಲೆಯನ್ನು ಕತ್ತರಿಸಿ ಕೈಯಲ್ಲಿ ಇಟ್ಟುಕೊಂಡ.ಆಗ ಅವನಿಗೆ ಭೈರವ ಎಂಬ ಹೆಸರು ಬಂತು.ಇನ್ನೊಂದು  ಕಥೆಯ ಪ್ರಕಾರ ವಿಷ್ಣು ಮತ್ತು ಬ್ರಹ್ಮನ ಜಗಳದ ವಿಷಯವಾಗಿ ಶಿವನು ಸಿಟ್ಟುಗೊಂಡು ತನ್ನ ಹುಬ್ಬು(ಭ್ರೂ) ಗಳನ್ನೂ ಸಂಕುಚಿಸಿದ.ಆಗ ಆತನ ಕೋಪೋದ್ರಿಕ್ತ  ಅವತಾರವಾದ ಭೈರವನ ಜನನವಾಯಿತು.

Monday, January 3, 2011

ಪಾರ್ವತಿ ಗೌರಿ ಆದ ಬಗೆ

                                       ಪಾರ್ವತಿ ಗೌರಿ ಆದ ಬಗೆ
ಹಿಂದೆ ಪಾರ್ವತಿಯು ತನ್ನ ತಂದೆಯಾದ ದಕ್ಷನು ತಾನು ಮಾಡುತ್ತಿದ್ದ ಯಾಗದಲ್ಲಿ ತನ್ನ ಪತಿ ಪರಶಿವ ನಿಗೆ ಆಹ್ವಾನ ಕೊಡದೆ ಇದ್ದದ್ದಕ್ಕೆ ಬೇಸರಿಸಿಕೊಂಡು  ಅಗ್ನಿಪ್ರವೇಶ ಮಾಡುತ್ತಾಳೆ.ನಂತರ ಆಕೆ ಪರ್ವತ ರಾಜನ ಮಗಳಾಗಿ ಹುಟ್ಟಿ ಪಾರ್ವತಿ ಎಂಬ ಹೆಸರನ್ನು ಪಡೆಯುತ್ತಾಳೆ.ನಂತರ ಆಕೆ ಶಿವನನ್ನೇ ಪತಿಯಾಗಿ ಪಡೆಯಲು ಬಯಸಿ ಘೋರ ತಪಸ್ಸು ಮಾಡುತ್ತಾಳೆ.ಆದರೆ ಅದರಿಂದ ಆಕೆಯ ಚರ್ಮ ಕಪ್ಪಾಗಿ ಬದಲಾಗುತ್ತದೆ.
ತನ್ನ ಈ ಸ್ಥಿತಿಯಲ್ಲಿ ಶಿವನು ತನ್ನನ್ನು ಮೆಚ್ಚುವುದಿಲ್ಲವೆಂದು ಊಹಿಸಿದ ಪಾರ್ವತಿ ತನಗೆ ಗೌರ ವರ್ಣ(ಬಿಳಿ ಬಣ್ಣ)ಬರಬೇಕೆಂದು ಮತ್ತೆ ತಪಸ್ಸು ಮಾಡಿ ಗೌರ ವರ್ಣವನ್ನು ಪಡೆಯುತ್ತಾಳೆ.ಇದರಿಂದ ಅವಳಿಗೆ ಗೌರಿ ಎಂಬ ಹೆಸರು ಬಂತು.

Saturday, January 1, 2011

ಗಜಾಸುರ ವಧೆ

                                            ಗಜಾಸುರ ವಧೆ
ಹಿಂದೆ ದೇವತೆಗಳಿಗೂ ಮತ್ತು ದಾನವರಿಗೂ ಯುದ್ಧ ಆಗುತ್ತಿತ್ತು.ಆಗ ನೀಲ ಎನ್ನುವ ರಾಕ್ಷಸ ದೇವತೆಗಳನ್ನು ಸೋಲಿಸಲು ಅವರ ರಕ್ಷಕನಾದ ಶಿವನನ್ನೇ ಮೊದಲು ಸೋಲಿಸಬೇಕು ಎಂದು ಯೋಚಿಸಿ ರಾಕ್ಷಸ ನೀಲನು ಒಂದು ಆನೆಯ ದೇಹದ ಒಳಹೊಕ್ಕು ನಂತರ ಶಿವನ ಮೇಲೆ ಆಕ್ರಮಣ ಮಾಡುತ್ತಾನೆ.
ಆದರೆ ಶಿವನಿಗೆ ಇದು ಓರ್ವ ರಾಕ್ಷಸನ ಕೃತ್ಯ ಎಂದು ತಿಳಿಯುತ್ತದೆ. ಪಾಪದ ಪ್ರಾಣಿ ಆನೆಯನ್ನು ಘಾಸಿಗೊಳಿಸಲು ಇಚ್ಛಿಸದ ಶಿವನು ತಾನು ಕೂಡ ಅಣು ರೂಪದಲ್ಲಿ ಆನೆಯ ದೇಹದ ಒಳಹೋಗುತ್ತಾನೆ.ಅಲ್ಲಿ ತಾಂಡವ ನೃತ್ಯ ಮಾಡಿ ಆ ಗಜಾಸುರನನ್ನು ಕೊಲ್ಲುತ್ತಾನೆ.ಆನೆಗೆ ಏನೂ ಅಪಾಯ ಉಂಟಾಗುವುದಿಲ್ಲ.ಹೀಗಾಗಿ ಶಿವನಿಗೆ ಗಜಾಸುರಸೂದನ ಎಂಬ ಹೆಸರು ಬಂತು.