Sunday, January 16, 2011

ಆತ್ಮ ರಕ್ಷಣೆಯೇ ಮೇಲು

                                  ಆತ್ಮ ರಕ್ಷಣೆಯೇ ಮೇಲು
ಒಮ್ಮೆ ರಾಮಕೃಷ್ಣ ಪರಮಹಂಸರು ಪ್ರವಚನ ನೀಡುತ್ತಿದ್ದರು.ಅವರು ಜನರಿಗೆ ಕೆಟ್ಟದ್ದನ್ನು ಮಾಡಬಾರದು ಎಂದು ನೆರೆದ ಜನರಿಗೆ ತಿಳಿಹೇಳುತ್ತಿದ್ದರು.ಆದರೆ ಅವರ ಪ್ರವಚನ ಕೇಳಲು ಜನರ ಜೊತೆ ಒಂದು ಹಾವು ಕೂಡ ಬಂದಿತ್ತು.ಪ್ರವಚನ ಕೇಳಿದ ಹಾವಿಗೆ ತಾನು ಮಾಡುವುದು ತಪ್ಪು ಎಂದು ಅನಿಸಿತು.ತಾನು ಇನ್ನು ಮುಂದೆ ಜನರಿಗೆ ಕಚ್ಚುವುದಾಗಲೀ ಅಥವಾ ಭುಸುಗುಟ್ಟಿ ಅವರನ್ನು ಹೆದರಿಸುವುದಾಗಲೀ ಮಾಡುವುದಿಲ್ಲವೆಂದು ನಿರ್ಧಾರ ಮಾಡಿತು.ಮತ್ತು ಅಂತೆಯೇ ನಡೆದುಕೊಳ್ಳಲು ಆರಂಭಿಸಿತು.ಆದರೆ ಈ ಹಾವು ಕಚ್ಚದೆ ಇರುವುದು  ಮತ್ತು ಭುಸುಗುಡದೆ ಇರುವುದು ಜನರಿಗೆ ತಮಾಷೆಯ ವಿಷಯವಾಯಿತು.ಅದರಲ್ಲೂ ಮಕ್ಕಳು ಇದರಿಂದ ತುಂಬಾ ಸಂತಸಕ್ಕೆ ಒಳಗಾದರು.
ಅವರು ಈ ಹಾವಿನ ಬಳಿ ಬಂದು ಅದಕ್ಕೆ ಕಲ್ಲಿನಿಂದ ಹೊಡೆಯುವುದು ಮತ್ತು ಅದಕ್ಕೆ ಚುಚ್ಚುವುದು ಹೀಗೆ ಅನೇಕ ರೀತಿಯ ತರಲೆ ಕೆಲಸಗಳನ್ನು ಮಾಡುತ್ತಿದ್ದರು.ಹಾವಿಗೆ ಇದರಿಂದ ನೋವಾಗುತ್ತಿತ್ತು ಆದರೆ ತಾನು ಕೈಗೊಂಡ ಪ್ರತಿಜ್ಞೆಯ ನೆನೆಪಾಗಿ ಸುಮ್ಮನಿರುತ್ತಿತ್ತು.ಅದು ಅವರನ್ನು ಹೆದರಿಸಲೂ ಹೋಗಲಿಲ್ಲ.
ಆದರೆ ಮಕ್ಕಳು ಹೊಡೆದ ಕಲ್ಲೇಟಿನಿಂದ ಅದಕ್ಕೆ ತುಂಬಾ ಗಾಯವಾಯಿತು.ಮತ್ತು ಗಾಯಗಳಿಂದ ರಕ್ತ ಸುರಿಯಲು ಶುರುವಾಯಿತು.ಹಾವಿಗೆ ಇನ್ನು ತಾನು ಬದುಕುವುದಿಲ್ಲ ಎಂದು ತಿಳಿಯಿತು.ಅದು ರಾಮಕೃಷ್ಣರ ಬಳಿ ಬಂದು ತಾನು ಅವರು ಹೇಳಿದಂತೆಯೇ ಮಾಡಿದರೂ ಜನರು ತನ್ನನ್ನು ಹೊಡೆದು ಗಾಯಗೊಳಿಸಿದ್ದಾರೆ ಎಂದು ಅಲವತ್ತುಗೊಂಡಿತು.ಆಗ ರಾಮಕೃಷ್ಣರು ಕಚ್ಚದೆ ಇರುವುದು ಸರಿ.ಆದರೆ ಆತ್ಮ ರಕ್ಷಣೆಗಾಗಿ ಭುಸುಗುಡದೆ ಇದ್ದರೆ ಲೋಕದಲ್ಲಿ ಜನರು ಜೀವಿಸಗೊಡುವುದಿಲ್ಲ.ಆದ್ದರಿಂದ ಆತ್ಮ ರಕ್ಷಣೆಗಾಗಿ ಭುಸುಗುಟ್ಟಿ ಜನರನ್ನು ಹೆದರಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿ ಹೇಳಿ ಹಾವಿನ ಗಾಯಗಳಿಗೆ ಶ್ರುಶ್ರೂಷೆ ಮಾಡಿ ಕಳುಹಿಸಿದರು.
ನೀತಿ:ಆತ್ಮ ರಕ್ಷಣೆಗಾಗಿ ಏನೂ ಮಾಡಬಹುದು.

No comments:

Post a Comment