Wednesday, February 16, 2011

ಭಕ್ತಿಯ ಶಕ್ತಿ

                                             ಭಕ್ತಿಯ ಶಕ್ತಿ
ಗೀತಗೋವಿಂದ  ಕಾವ್ಯವನ್ನು ಬರೆದ ಕವಿ ಜಯದೇವ ಬಹಳ ದೊಡ್ಡ ಕೃಷ್ಣ ಭಕ್ತನಾಗಿದ್ದ.ಆತನ ಭಕ್ತಿ ಎಷ್ಟರ ಮಟ್ಟಿನದೆಂದರೆ ಆತ ಗೀತ ಗೋವಿಂದವನ್ನು ಬರೆಯುವಾಗ  ಸಾಕ್ಷಾತ್ ಕೃಷ್ಣನೇ ಬಂದು ಆತನ ಮುಂದೆ ಬಂದು ನರ್ತಿಸುತ್ತಿದ್ದನಂತೆ.ಹೀಗಿರುವಾಗ ಒಮ್ಮೆ ಆತನ ಬಳಿ ಓರ್ವ ಶ್ರೀಮಂತ ಬರುತ್ತಾನೆ.ಆತನ ಬಳಿ ಒಂದು ಕಾಗದವಿರುತ್ತದೆ.ಅದನ್ನು ಜಯದೇವನಿಗೆ ತೋರಿಸಿ ನಿನ್ನ ತಂದೆ ನನ್ನ ಬಳಿ ಸಾಲ ಮಾಡಿದ್ದ.ಈಗ ಅದು ಬಡ್ಡಿಗೆ ಬಡ್ಡಿ ಬೆಳೆದು ತುಂಬಾ ಆಗಿದೆ.ಅದಕ್ಕಾಗಿ ಈಗ ಈ ಮನೆಯನ್ನೇ ಅಡವಿರಿಸಿಕೊಳ್ಳಲು ಯೋಚಿಸಿದ್ದೇನೆ.ಈ ಪತ್ರಕ್ಕೆ ಒಂದು ರುಜು ಹಾಕು ಎಂದನು.ಜಯದೇವನಿಗೋ ಇದರ ಬಗ್ಗೆ ಏನೂ ತಿಳಿದಿಲ್ಲ.ಆದರೂ ಆತ ರುಜು ಹಾಕಲು ತಯಾರಾಗುತ್ತಾನೆ.
ಅವನು ಇನ್ನೇನು ರುಜು ಹಾಕಬೇಕು ಎನ್ನುವಷ್ಟರಲ್ಲಿ ಆ ಶ್ರೀಮಂತನ ಮಗಳು ಓಡಿ ಬಂದು ಮನೆಗೆ ಬೆಂಕಿ ಬಿದ್ದಿರುವುದಾಗಿ ತಿಳಿಸುತ್ತಾಳೆ. ಕೂಡಲೇ ಶ್ರೀಮಂತ ಬಾಯಿ ಬಡಿದುಕೊಂಡು ಅತ್ತ ಓಡುತ್ತಾನೆ.ಆದರೆ ಅಷ್ಟರಲ್ಲಾಗಲೇ ಬೆಂಕಿಯ ಕೆನ್ನಾಲಿಗೆಗಳು ಮನೆಯನ್ನು ಸುತ್ತುವರಿದಿರುತ್ತವೆ.ಶ್ರೀಮಂತನ ಹಿಂದೆಯೇ ಜಯದೇವನೂ ಬಂದಿರುತ್ತಾನೆ.ಶ್ರೀಮಂತನ ಮನೆಗೆ  ವ್ಯಾಪಿಸಿದ ಬೆಂಕಿಯನ್ನು ಕಂಡು ಜಯದೇವನು ಉರಿಯುತ್ತಿರುವ ಮನೆಗೆ ನುಗ್ಗುತ್ತಾನೆ.
ಅದೇನಾಶ್ಚರ್ಯ!ಜಯದೇವನು ಮನೆಗೆ ಹೊಕ್ಕ ತಕ್ಷಣವೇ ಅದೆಲ್ಲಿಂದಲೋ ಕಪ್ಪು ಮೋಡಗಳು ಮನೆಯ ಮೇಲುಗಡೆ ಬಂದು ಮಳೆಯನ್ನು ಸುರಿಸುತ್ತವೆ.ಬೆಂಕಿ ಕೂಡಲೇ ನಂದಿ ಹೋಗುತ್ತದೆ.ಇದನ್ನೆಲ್ಲಾ ಕಣ್ಣಾರೆ ಕಂಡ ಶ್ರೀಮಂತ ಜಯದೇವನ ಬಳಿ ಬಂದು ಆತನಿಗೆ ಧನ್ಯವಾದ ಅರ್ಪಿಸುತ್ತಾನೆ ಮತ್ತು ಆತನ ಮನೆಯನ್ನು ಅವನಿಗೆ ವಾಪಸ್ ಕೊಡುತ್ತಾನೆ.
ನೀತಿ:ನಂಬಿದವರನ್ನು ದೇವರು ಯಾವತ್ತೂ ಕೈಬಿಡುವುದಿಲ್ಲ.

No comments:

Post a Comment