Sunday, February 6, 2011

ದೇವಯಾನಿ ಮತ್ತು ಕಚ

                                                    ದೇವಯಾನಿ ಮತ್ತು ಕಚ
ದೇವತೆಗಳು ಅಮೃತವನ್ನು ಕುಡಿದು ಅಮರತ್ವವನ್ನು ಸಿದ್ಧಿಸಿಕೊಂಡಿರುತ್ತಾರೆ.ಆದರೆ ದೇವ-ದಾನವ ಕಾಳಗದಲ್ಲಿ ದೇವತೆಗಳು ವಿಜಯಿಗಳಾದರೂ ದಾನವರು ಮತ್ತೆ ಅಷ್ಟೇ ಸಂಖ್ಯೆಯಲ್ಲಿ ದೇವತೆಗಳ ಜೊತೆ ಯುದ್ಧಕ್ಕೆ ಬರುತ್ತಿರುತ್ತಾರೆ.ಇದಕ್ಕೆ ಕಾರಣ ದಾನವರ ಗುರು ಶುಕ್ರಾಚಾರ್ಯರು ತಮ್ಮ ಸಂಜೀವನೀ ವಿದ್ಯೆಯಿಂದ ಹತರಾದ ದಾನವರನ್ನು ಬದುಕಿಸುತ್ತಿದ್ದದ್ದು.ಇದರಿಂದ ದೇವತೆಗಳಿಗೆ ತಲೆನೋವು ಆರಂಭವಾಯಿತು.
ತಾವೂ ಹೇಗಾದರೂ ಮಾಡಿ ಸಂಜೀವನೀ ವಿದ್ಯೆಯನ್ನು ಪಡೆಯಬೇಕೆಂದು ಪ್ರಯತ್ನಿಸುತ್ತಾರೆ.ಇದನ್ನು ಅರಿತ ದೇವಗುರು ಬ್ರಹಸ್ಪತಿ ಗಳ ಮಗನಾದ ಕಚ ಇದಕ್ಕೆ ತಯಾರಾಗುತ್ತಾನೆ.ಆತನು ಶುಕ್ರಾಚಾರ್ಯರ ಬಳಿಗೆ ಶಿಷ್ಯನಾಗಿ ಹೋಗುತ್ತಾನೆ.ಆತನು ತಮ್ಮ ವೈರಿ ಪಾಳಯದವನು ಎಂದು ಗೊತ್ತಿದ್ದರೂ ಶುಕ್ರಾಚಾರ್ಯರು ಕಚನ ನಡತೆಯಿಂದ ಸಂತಸಗೊಂಡು ಆತನನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸುತ್ತಾರೆ.
ಕಚನು ಶುಕ್ರಾಚಾರ್ಯರ ಬಳಿ ಅಧ್ಯಯನ ಮಾಡುತ್ತಿದ್ದಾಗ ಶುಕ್ರಾಚಾರ್ಯರ ಪುತ್ರಿ ದೇವಯಾನಿ ಆತನಲ್ಲಿ ಮೋಹಗೊಳ್ಳುತ್ತಾಳೆ.ಆದರೆ ದಾನವರಿಗೆ ಕಚನು ತಮ್ಮ ಗುರುಗಳ ಬಳಿ ಬಂದು ವ್ಯಾಸಂಗ ಮಾಡುವುದು ಇಷ್ಟವಾಗುವುದಿಲ್ಲ.ಅವರು ಕಚನನ್ನು ಅಪಹರಿಸಿ ಆತನನ್ನು ಕೊಂದು ಆತನ ಶವದ ಭಸ್ಮವನ್ನು ದ್ರಾಕ್ಷಾರಸದಲ್ಲಿ ಸೇರಿಸಿ ಶುಕ್ರಾಚಾರ್ಯರಿಗೆ ಕುಡಿಸುತ್ತಾರೆ.ಇತ್ತ ದೇವಯಾನಿ ಕಚನನ್ನು ಕಾಣದೆ ತಳಮಳಗೊಳ್ಳುತ್ತಾಳೆ.
ಆಗ ಶುಕ್ರಾಚಾರ್ಯರು ತಮ್ಮ ದಿವ್ಯ ದೃಷ್ಟಿಯಿಂದ ಆದದ್ದನ್ನು ಊಹಿಸಿಕೊಳ್ಳುತ್ತಾರೆ.ಈಗ ಅವರಿಗೆ ಉಭಯ ಸಂಕಟ.ಕಚನು ತಮ್ಮ ಉದರಲ್ಲಿ ಇದ್ದಾನೆ.ಆತನನ್ನು ಬದುಕಿಸಬೇಕಾದರೆ ತಾವು ಸಾಯಬೇಕು.ಆನಂತರ ತಾವು ಬದುಕಬೇಕಾದರೆ ಕಚನಿಗೆ ಸಂಜೀವನೀ ವಿದ್ಯೆಯನ್ನು ಉಪದೇಶಿಸಿ ಆತನ ಹುಟ್ಟಿನ ನಂತರ ತಮ್ಮನ್ನು ಬದುಕಿಸಲು ಕೇಳಿಕೊಳ್ಳಬೇಕಾಗುತ್ತದೆ.ಇದು ಅವರಿಗೆ ಇಷ್ಟವಾಗುವುದಿಲ್ಲ.ಆದರೆ ತಮ್ಮ ಮುದ್ದಿನ ಮಗಳು ದೇವಯಾನಿಯ ಶೋಕವನ್ನು ನೋಡಲಾಗದೆ ಅವರು ತಮ್ಮ ಉದರದಲ್ಲಿದ್ದ ಕಚನಿಗೆ ಸಂಜೀವನೀ ವಿದ್ಯೆಯನ್ನು ಉಪದೇಶಿಸುತ್ತಾರೆ.
ಕಚನು ಮತ್ತೆ ಜೀವಗೊಂಡು ಎದ್ದು ಬಂದು ಸತ್ತು ಬಿದ್ದಿದ್ದ ಶುಕ್ರಾಚಾರ್ಯರನ್ನು ಮತ್ತೆ ಸಂಜೀವನೀ ವಿದ್ಯೆಯಿಂದ ಬದುಕಿಸುತ್ತಾನೆ.ಆಗ ದೇವಯಾನಿ ತನ್ನ ಪ್ರೀತಿಯನ್ನು ಕಚನಲ್ಲಿ ಹೇಳಿಕೊಳ್ಳುತ್ತಾಳೆ.ಆದರೆ ಕಚನು ದೇವಯಾನಿಯು ಗುರುಪುತ್ರಿಯಾದ ಕಾರಣ ಮತ್ತು ಈಗ ತಾನೂ ಶುಕ್ರಾಚಾರ್ಯರ ಮಗನಾದ ಕಾರಣ ಆಕೆಯ ಪ್ರೀತಿಯನ್ನು ತಿರಸ್ಕರಿಸುತ್ತಾನೆ.ಮತ್ತು ದೇವಲೋಕಕ್ಕೆ ಹೊರಟು ಹೋಗುತ್ತಾನೆ.

No comments:

Post a Comment