Tuesday, March 8, 2011

ಆತ್ಮವಿಶ್ವಾಸ

                                                      ಆತ್ಮವಿಶ್ವಾಸ
ಒಂದು ದಾರಿಯಲ್ಲಿ ಒಂದು ಗರಿಕೆ ಹುಲ್ಲು ಬೆಳೆಯುತ್ತಿತ್ತು.ಆದರೆ ಅದನ್ನು ಗಮನಿಸದೆ ಅದನ್ನು ತುಳಿದೇ ಜನರು ಓಡಾಡುತ್ತಿದ್ದರು.ಹುಲ್ಲಿಗೆ ತಲೆ ಎತ್ತಿ ನಿಲ್ಲಲೂ ಆಗುತ್ತಿರಲಿಲ್ಲ.ಈ ಹುಲ್ಲಿನ ಕಷ್ಟವನ್ನು ಅಲ್ಲೇ ಮರದ ಮೇಲಿರುತ್ತಿದ್ದ ಒಂದು ಕಾಗೆ ದಿನವೂ ನೋಡುತ್ತಿತ್ತು.
ಆ ಕಾಗೆಗೆ ಈ ಹುಲ್ಲಿನ ಸ್ಥಿತಿಯು ಬಹಳ ಮೋಜೆನಿಸಿತು.ಅದು ಒಮ್ಮೆ ಹುಲ್ಲಿನ ಬಳಿ ಬಂದು ಅಪಹಾಸ್ಯ ಮಾಡಿ ನಕ್ಕಿತು."ನಿನ್ನಿಂದ ಬದುಕಲು ಸಾಧ್ಯವಿಲ್ಲ.ಪ್ರತಿ ಒಬ್ಬರೂ ನಿನ್ನನ್ನು ತುಳಿದು ಮುಂದೆ ಹೋಗುತ್ತಿದ್ದಾರೆ.ಆದರೂ ನೀನು ಇಲ್ಲೇ ಯಾಕೆ ಇರುವಿ?"ಎಂದು ದಿನವೂ ಅದರ ಸ್ಥಿತಿ ಬಗ್ಗೆ ಹಾಸ್ಯ ಮಾಡುತ್ತಿತ್ತು.ಆದರೆ ಹುಲ್ಲು ಒಂದು ದಿನವೂ ಕಾಗೆಗೆ ಮಾರುತ್ತರ ನೀಡಲಿಲ್ಲ.
ಹೀಗಿರುವಾಗ ಒಮ್ಮೆ ಕಾಗೆಗೆ ಎಲ್ಲೋ ಪ್ರಯಾಣ ಮಾಡಬೇಕಾಗಿ ಬಂತು.ಅದು ಸುಮಾರು ದಿನ ಊರಿನಲ್ಲಿ ಇರಲಿಲ್ಲ.ನಂತರ ಹಿಂದಿರುಗಿದಾಗ ಅದು ಮಾಡಿದ ಮೊದಲ ಕೆಲಸವೇ ಹುಲ್ಲಿನ ಸ್ಥಿತಿ ಏನಾಗಿದೆ ಎಂದು ನೋಡುವುದು.ಆದರೆ ಆಶ್ಚರ್ಯದ ವಿಷಯವೇನೆಂದರೆ ಈಗ ಆ ದಾರಿ ಪೂರ್ತಿ ಹುಲ್ಲಿನಿಂದ ಆವೃತವಾಗಿತ್ತು.
ಇದನ್ನು ಕಂಡ ಕಾಗೆಗೆ ಆಶ್ಚರ್ಯವೋ ಆಶ್ಚರ್ಯ.ಅದು ಹುಲ್ಲುಗಾವಲಿನ ಮೇಲೆ ಅಡ್ಡಾಡುತ್ತಿತ್ತು.ಈಗ ಅಲ್ಲಿ ಚಿಕ್ಕ ಮಕ್ಕಳು ಸಂಭ್ರಮದಿಂದ ಆಡುತ್ತಿದ್ದರು.ಆ ಹುಲ್ಲುಗಳಲ್ಲೇ ವಯಸ್ಸಾದಂತೆ ಕಾಣುತ್ತಿದ್ದ ಒಂದು ಹುಲ್ಲು ಕಾಗೆಯನ್ನು ಗುರುತಿಸಿ ಮಾತಿಗೆಳೆಯಿತು.
"ನೋಡಿದೆಯಾ ಕಾಕಣ್ಣ!ಅಂದು ನಾನು ಬದುಕುವುದೇ ಕಷ್ಟವೆಂದು ಹೇಳುತ್ತಿದ್ದೆ.ಆದರೀಗ ನನ್ನ ಸಂತತಿಯೇ ಎಷ್ಟೊಂದಾಗಿದೆ.ಯಾರನ್ನೂ ಹಾಗೆ ಕೀಳಾಗಿ ನೋಡಬಾರದು.ಅವರಲ್ಲೂ ಒಂದಲ್ಲ ಒಂದು ಶಕ್ತಿಯು ಅಡಗಿರುತ್ತದೆ.ಸಮಯ ಬಂದಾಗ ಅದು ಹೊರಕ್ಕೆ ಬಂದೇ ಬರುತ್ತದೆ"ಎಂದಿತು.
ಆಗ ಹುಲ್ಲಿನ ಆತ್ಮ ವಿಶ್ವಾಸದ ನುಡಿಗಳನ್ನು ಕೇಳಿ ಕಾಗೆ ನಾಚಿ ತಲೆ ತಗ್ಗಿಸಿತು.
ನೀತಿ:ಯಾರೂ ಕೀಳಲ್ಲ.

No comments:

Post a Comment