Saturday, March 19, 2011

ಮಾನವೀಯತೆ

                                   ಮಾನವೀಯತೆ
ಇದು ಬಾಬು ರಾಜೇಂದ್ರ ಪ್ರಸಾದ್ ಅವರು ನಮ್ಮ ರಾಷ್ಟ್ರದ ರಾಷ್ಟ್ರಪತಿಯಾಗಿದ್ದಾಗ ನಡೆದ ಘಟನೆ.ಅವರು ತುಂಬಾ ಸರಳ ವ್ಯಕ್ತಿತ್ವ ಹೊಂದಿದ್ದರು.ಅವರನ್ನು ನೋಡಿದರೆ ಅವರು ರಾಷ್ಟ್ರಪತಿ ಎಂದು ಹೇಳಲು ಸಾಧ್ಯವಿರಲಿಲ್ಲ.ಹೀಗೆ ಒಂದು ದಿನ ಒಮ್ಮೆ ಅವರಿಗೆ ರೈಲಿನಲ್ಲಿ ತಮ್ಮ ಊರಿಗೆ ಪ್ರಯಾಣಿಸಬೇಕಾಗಿ ಬಂತು.ಅವರು ಸಾಮಾನ್ಯ ದರ್ಜೆಯಲ್ಲೇ ಪ್ರಯಾಣಿಸುತ್ತಿದ್ದರು.ಇಂದಿನ ರಾಜಕಾರಣಿಗಳಂತಲ್ಲ
ಆದರೆ ಆಗ ಬೇಸಗೆ ಕಾಲ.ತುಂಬಾ ಸೆಕೆ.ರೈಲು ಒಂದು ನಿಲ್ದಾಣದಲ್ಲಿ ನಿಂತಾಗ ಜನರು ನೀರಿಗಾಗಿ ಅಂಗಡಿಗೆ ಅಲೆಯುತ್ತಿದ್ದರು.ಆದರೆ ಎಲ್ಲಾ ನೀರಿನ ಸಂಗ್ರಹ ಮುಗಿದಿತ್ತು.ಹೀಗಾಗಿ ಜನರು ತಮ್ಮಲ್ಲೇ ಕಚ್ಚಾಡುತ್ತಿದ್ದರು.ಹೀಗಿರುವಾಗಲೇ ರಾಜೇಂದ್ರ ಪ್ರಸಾದ್ ಅವರ ಪಕ್ಕದಲ್ಲಿ ಕುಳಿತ್ತಿದ್ದ ಮಹಿಳೆಯ ಮಗು ನೀರಿಗಾಗಿ ಅಳಲು ಪ್ರಾರಂಭಿಸಿತು.ಮಹಿಳೆಯ ಬಳಿ ನೀರು ಇರಲಿಲ್ಲ.
ಅವಳಿಗೆ ಏನು ಮಾಡಬೇಕೆಂದೇ ತೋಚಲಿಲ್ಲ.ಆಗ ರಾಜೇಂದ್ರ ಪ್ರಸಾದ್ ಅವರು ತಮ್ಮ ಬಳಿ ಇದ್ದ ನೀರನ್ನು ಆ ಮಹಿಳೆಗೆ
ನೀಡಿದರು.ಅದು ಅವರ ಬಳಿ ಇದ್ದ ಸ್ವಲ್ಪವೇ ನೀರು.ಮಹಿಳೆ  ಮೊದಲು ಹಿಂಜರಿದರೂ ರಾಜೇಂದ್ರ ಪ್ರಸಾದ್ ಅವರ ಆಗ್ರಹಕ್ಕೆ ಮಣಿದು ನೀರನ್ನು ತೆಗೆದುಕೊಂಡು ಮಗುವಿಗೆ ಕುಡಿಸಿದಳು.ಮಗು ಶಾಂತವಾಯಿತು.ಆಗ ರಾಜೇಂದ್ರ ಪ್ರಸಾದ್ ಅವರ ಸಹ ಪ್ರಯಾಣಿಕರಲ್ಲಿ ಒಬ್ಬ ಅವರನ್ನು ಪ್ರಶ್ನಿಸಿದ.
"ನಿಮ್ಮ ಬಳಿ ಇರುವ ಸ್ವಲ್ಪ ನೀರನ್ನೂ ಮಗುವಿಗೆ ಕೊಟ್ಟಿರಿ.ಇನ್ನು ನೀರು ಸಿಗುವುದಿಲ್ಲ.ಏಕೆ ಹೀಗೆ ಮಾಡಿದಿರಿ?"ಎಂದನು.ಆಗ ರಾಜೇಂದ್ರ ಪ್ರಸಾದ್ ಅವರು "ಮಗುವಿಗೆ ಕುಡಿಯಲು ನೀರಿನ ಅವಶ್ಯಕತೆ ತುಂಬಾ ಇತ್ತು.ನಾನು ತಡೆದು ಕೂರಬಲ್ಲೆ.ಆದರೆ ಮಗು?ಮಾನವೀಯತೆಯಿಂದ ನಾನು ನೀರನ್ನು ನೀಡಿದೆ"ಎಂದರು.ಆ ಸಹಪ್ರಯಾಣಿಕನಿಗೆ ಅವರು ಭಾರತದ ರಾಷ್ಟ್ರಪತಿ ಎಂದು ತಿಳಿದು ಅವನ ಬಾಯಿಯಿಂದ ಮಾತೇ ಹೊರಡಲಿಲ್ಲ.

No comments:

Post a Comment