Saturday, December 25, 2010

ಕೃಷ್ಣ ದಾಮೋದರನಾದದ್ದು

                                     ಕೃಷ್ಣ ದಾಮೋದರನಾದದ್ದು
ಬಾಲಕ ಕೃಷ್ಣ ತುಂಬಾ ತುಂಟ.ತಾಯಿ ಯಶೋದೆಯ ಕಣ್ಣು ತಪ್ಪಿಸಿ ಹೊರಗೆ ಹೋಗಿ,ಬೇರೆಯವರ  ಮನೆಯನ್ನು ತನ್ನ ಗೆಳೆಯರ ಜೊತೆ ಪ್ರವೇಶಿಸಿ ಅಲ್ಲಿ ಕಾಪಿಟ್ಟಿದ್ದ ಬೆಣ್ಣೆ,ಮೊಸರು,ಹಾಲು ಎಲ್ಲವನ್ನೂ ಕದ್ದು ತಿನ್ನುತ್ತಿದ್ದ.ಇದಕ್ಕೆ ಅವನ ತುಂಟ ಗೆಳೆಯರ ಕುಮ್ಮಕ್ಕೂ ಇತ್ತು.ಯಶೋದೆಯ ಬಳಿ ಗೋಪಿಯರು ಬಂದು ತಮ್ಮ ಮನೆಯಲ್ಲಿಟ್ಟಿದ್ದ ಹಾಲು,ಮೊಸರು ಮತ್ತು ಬೆಣ್ಣೆಯನ್ನು ಕೃಷ್ಣ ಕಳ್ಳತನದಿಂದ ಮನೆಯೊಳಗೇ ಬಂದು ತಿಂದಿದ್ದಾನೆ ಎಂದು ಪ್ರತಿದಿನಾ ದೂರು ಹೇಳುತ್ತಿದ್ದರು.ಯಶೋದೆಗೋ ಇದನ್ನೆಲ್ಲಾ ಕೇಳಿ ಸಾಕಾಗಿ ಹೋಗಿತ್ತು.ಹೇಗಾದರೂ ಕೃಷ್ಣನನ್ನು ಆ ಥರ ಮಾಡದಂತೆ ಮಾಡುವುದು ಹೇಗೆಂದು ಆಕೆ ಯೋಚಿಸುತ್ತಿದ್ದಳು.ಅದಕ್ಕೂ ಕಾಲ ಕೂಡಿ ಬಂತು.
            ಒಮ್ಮೆ ಯಶೋದೆ ಮನೆಯಲ್ಲೇ ಕುಳಿತು ಬೆಣ್ಣೆ ಕಡೆಯುತ್ತಿದ್ದಳು.ತುಂಟ ಕೃಷ್ಣ ಅಲ್ಲೇ ಆಡುತ್ತಿದ್ದ.ಇನ್ನು ಅವನು ತನ್ನ ಕಣ್ಣು ತಪ್ಪಿಸಿ ಹೊರಗೆ ಹೋಗುತ್ತಾನೆ ಮತ್ತು ಬೇರೆಯವರ ಮನೆ ಪ್ರವೇಶಿಸಿ ಮೊಸರು,ಬೆಣ್ಣೆ ಎಲ್ಲವನ್ನೂ ತಿನ್ನುತ್ತಾನೆ ಎಂದು ಊಹಿಸಿದ ಯಶೋದೆ ಒಂದು ಹಗ್ಗದಿಂದ ಅಲ್ಲೇ ಇದ್ದ ಒಂದು ಒರಳಿಗೆ ಆತನ ಸೊಂಟವನ್ನು ಬಿಗಿದಳು.ಆ ಒರಳು ಯಮ ಭಾರ.ಅದಕ್ಕೆ ಕೃಷ್ಣನನ್ನು ಅದಕ್ಕೆ ಕಟ್ಟಿ ಹಾಕಿದರೆ ಆತ ಎಲ್ಲಿಗೂ ಹೋಗಲು ಸಾಧ್ಯವಿಲ್ಲ ಎನ್ನುವುದು ಅವಳ ಗ್ರಹಿಕೆ.
ಹೀಗೆ ಉಪಾಯ ಮಾಡಿದ ಯಶೋದೆ ಅಲ್ಲೇ ಇದ್ದ ಹಗ್ಗದಿಂದ ಕೃಷ್ಣನನ್ನು ಆ ಒರಳಿಗೆ ಕಟ್ಟಿ ತಾನು ನಿಶ್ಚಿಂತೆಯಿಂದ ಬೆಣ್ಣೆ ಕಡೆಯಲು ಒಳ ಹೋದಳು.ಆದರೆ ಇದನ್ನೆಲ್ಲಾ ನೋಡುತ್ತಿದ್ದ ಕೃಷ್ಣ ತನಗೆ ಕಟ್ಟಿದ್ದ ಹಗ್ಗವನ್ನೂ ಮತ್ತು ಒರಳನ್ನೂ ಒಮ್ಮೆ ನೋಡುತ್ತಾನೆ.ತಾಯಿ ಒಳಹೊಗುವುದನ್ನೇ ಕಾಯುತ್ತಿದ್ದ ಕೃಷ್ಣ ಒರಳು ಸಮೇತ ಹೊರಬರುತ್ತಾನೆ.ಅದು ಭಾರವಾಗಿದ್ದರೂ ಅದನ್ನು ಎಳೆದುಕೊಂಡು ಹೊರಗೆ ಬರುತ್ತಾನೆ.ಹೊರಗೆ ಅಲ್ಲಿ ೨ ಅರ್ಜುನ ವೃಕ್ಷ ಗಳು ಬೆಳೆದಿವೆ.ಕೃಷ್ಣ ಅವುಗಳ ಮಧ್ಯದಿಂದಲೇ ಒರಳನ್ನು ಎಳೆದುಕೊಂಡು ಬರಲು ಯತ್ನಿಸುತ್ತಾನೆ.
ಆಗ ಆ ಎರಡೂ ಅರ್ಜುನ ವೃಕ್ಷಗಳೂ ಮುರಿದು ಬೀಳುತ್ತವೆ.ಅವುಗಳ ಜಾಗದಲ್ಲಿ ಇಬ್ಬರು ಯಕ್ಷರು ಪ್ರತ್ಯಕ್ಷರಾಗಿ ತಮ್ಮ ಶಾಪ ವಿಮೋಚನೆ ಮಾಡಿದ ಕೃಷ್ಣ ನನ್ನು  ಸ್ತುತಿಸಿ ಅಲ್ಲಿಂದ ತಮ್ಮ ಲೋಕಕ್ಕೆ ತೆರಳುತ್ತಾರೆ.ಹೀಗೆ ಹಗ್ಗದಿಂದ(ದಾಮ) ಹೊಟ್ಟೆಯ(ಉದರ)ಭಾಗಕ್ಕೆ ಬಂಧಿಸಲ್ಪಟ್ಟ ಕೃಷ್ಣನಿಗೆ ದಾಮೋದರ ಎನ್ನುವ ಹೆಸರು ಬಂತು.

No comments:

Post a Comment