Wednesday, December 29, 2010

ಸತ್ಯ ಎಲ್ಲಿದೆ?

                                                   ಸತ್ಯ ಎಲ್ಲಿದೆ?
ಹಿಂದೆ ಬಿಂದುಸಾರ ಎನ್ನುವ ರಾಜನು ಭಾರತ ದೇಶವನ್ನು ಆಳುತ್ತಿದ್ದ.ಆತ ಒಳ್ಳೆಯ ಆಡಳಿತಗಾರನಾಗಿದ್ದ.ಅವನ ರಾಜ್ಯದಲ್ಲಿ ಎಲ್ಲೆಲ್ಲೂ ಶಾಂತಿ ನೆಲೆಸಿತ್ತು.ಆದರೂ ಬಿಂದುಸಾರನಿಗೆ ತಾನು ಇನ್ನೂ ಉತ್ತಮ ಆಡಳಿತ ನೀಡಬೇಕೆಂದು ಅನಿಸುತ್ತಿತ್ತು.ಹೀಗಿರಲು ಒಮ್ಮೆ ಭಗವಾನ್ ಮಹಾವೀರರು ಆತನ ರಾಜ್ಯಕ್ಕೆ ಬಂದರು.ಅವರ ಉಪದೇಶವನ್ನು ಕೇಳಲು ಜನರು ಅವರ ಬಳಿ ಬರುತ್ತಿದ್ದರು.ಇದು ರಾಜನಿಗೆ ಸೋಜಿಗವನ್ನು ಉಂಟುಮಾಡಿತು.
ಅವನು ತನ್ನ ಮಂತ್ರಿಯ ಬಳಿ ಇದರ ಕಾರಣವನ್ನು ಕೇಳಿದಾಗ ಮಂತ್ರಿಯು ಮಹಾವೀರ ರಿಗೆ ಸತ್ಯದ ದರ್ಶನವಾಗಿದೆ.ಅದನ್ನೇ ಅವರು ತಮ್ಮ ಉಪದೇಶಗಳ ಮೂಲಕ ಜನರಿಗೆ ತಿಳಿಸುತ್ತಿದ್ದಾರೆ ಎಂದನು.ಇದನ್ನು ಕೇಳಿದ ಬಿಂದುಸಾರನಿಗೆ ತನಗೂ ಸತ್ಯದ ದರ್ಶನ ಮಾಡಬೇಕೆಂಬ ಆಸೆ ಉಂಟಾಯಿತು.ಅದರಂತೆ ಆತ ತನ್ನ ದೂತರೊಡನೆ ಒಂದು ಗಾಡಿ ಭರ್ತಿ ಚಿನ್ನದ ನಾಣ್ಯಗಳನ್ನು ಮಹಾವೀರರಿಗೆ ಕಳುಹಿಸಿ ತನಗೂ ಸತ್ಯದ ದರ್ಶನ ಮಾಡಿಸಬೇಕೆಂದು ಕೇಳಿಕೊಂಡ.
ಆದರೆ ಮಹಾವೀರರು ಅದನ್ನೆಲ್ಲ ಹಿಂದಕ್ಕೆ ಕಳುಹಿಸಿದರು.ಇದರಿಂದ ಅಪಮಾನಿತನಾದ ಬಿಂದುಸಾರ ಇನ್ನೂ ಹೆಚ್ಚಿನ ಸಂಪತ್ತನ್ನು ತಾನು ನೀಡಲು ಸಿದ್ಧನೆಂದೂ ತಿಳಿಸಿದ.ಆದರೆ ಇದಕ್ಕೆ ಮಹಾವೀರರ ಮುಗುಳುನಗುವೆ ಉತ್ತರವಾಯಿತು.ಕೊನೆಗೆ ಬಿಂದುಸಾರನೆ ಅವರ ಬಳಿ ಬಂದು ತನಗೂ ಸತ್ಯದ ದರ್ಶನ ಮಾಡಿಸಬೇಕೆಂದು ಕೇಳಿಕೊಂಡ.ಆಗ ಮಹಾವೀರರು ನಿನ್ನ ರಾಜ್ಯದಲ್ಲಿರುವ ಓರ್ವ ಜಾದಮಾಲಿಯೂ(ರಸ್ತೆಯ ಕಸ ಗುಡಿಸುವವನು)ಇದಕ್ಕೆ ಉತ್ತರ ಹೇಳಬಲ್ಲ ಎಂದರು.ಬಿಂದುಸಾರನು ಆಶ್ಚರ್ಯದಿಂದ ಆ ಜಾಡಮಾಲಿಯ ವಿಳಾಸ ಕೇಳಲು ಮಹಾವೀರರು ವಿಳಾಸ ನೀಡಿದರು.
ಕೂಡಲೇ ಬಿಂದುಸಾರ ಜಾಡಮಾಲಿಯ ಬಳಿ ತೆರಳಿ ತನಗೆ ಸತ್ಯದ ದರ್ಶನ ಮಾಡಿಸಬೇಕೆಂದು ಬೇಡಿಕೊಂಡ.ಆಗ ಜಾಡಮಾಲಿ ಅಯ್ಯಾ!ನನಗೆ ಕೆಲಸವೇ ದೇವರು.ನಾನು ನನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿದ್ದೇನೆ.ಅದುವೇ ಸತ್ಯ.ನೀವೂ ನಿಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಆಗ ನಿಮಗೆ ಸತ್ಯದ ದರ್ಶನ ತನ್ನಿಂದ ತಾನೇ ಆಗುತ್ತದೆ ಎಂದ.
ಇದನ್ನು ಕೇಳಿದ ಬಿಂದುಸಾರನಿಗೆ ಜ್ಞಾನೋದಯವಾಗಿ ತಾನು ಸತ್ಯದ ಅನ್ವೇಷಣೆ ಮಾಡುವುದನ್ನು ಬಿಟ್ಟು ನನ್ನ ಕೆಲಸವನ್ನೇ ಪ್ರಾಮಾಣಿಕತೆಯಿಂದ ಮಾಡಬೇಕು ಎಂಬುದರ ಅರಿವಾಯಿತು.

No comments:

Post a Comment